ಭಾರತೀಯರ ಆಹಾರದಲ್ಲಿ ಎಳನೀರು ಪ್ರಮುಖವಾದದ್ದು. ಬೇಸಗೆ ಬಂತೆಂದರೆ ನಿಸರ್ಗದತ್ತವಾದ ಎಳನೀರಿನ ಮೊರೆ ಹೋಗಿ ದೇಹ ತಂಪಾಗಿಸಿಕೊಳ್ಳುವುದು ಸಹಜ. ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಬಳಕೆ ವ್ಯಾಪಕವಾಗಿರುವಂತೆಯೇ ಸಹಜವಾಗಿ ಎಳನೀರಿನ ಬಳಕೆಯೂ ಹೆಚ್ಚೇ. ಎಳನೀರಿನಿಂದ ಸಾಕಷ್ಟು ಬಗೆಯ ಸಿಹಿತಿಂಡಿಗಳೂ, ತಿನಿಸುಗಳೂ ಸೇರಿದಂತೆ ಹಲವು ಅಡುಗೆ ಪ್ರಯೋಗಗಳನ್ನೂ ಮಾಡಲಾಗಿದೆ. ಎಳನೀರಿನ ಐಸ್‌ಕ್ರೀಂ ಕೂಡಾ ಇಂದು ಮಾರುಕಟ್ಟೆಯಲ್ಲಿದೆ.
ತೂಕ ಇಳಿಸಿಕೊಳ್ಳುವುದು, ರಕ್ತದೊತ್ತಡ ಕಡಿಮೆ ಮಾಡುವುದು, ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು, ದೇಹವನ್ನು ತಂಪಾಗಿರಿಸುವುದು, ಕಿಡ್ನಿಯನ್ನು ಆರೋಗ್ಯವಾಗಿಟ್ಟಿರುವುದೂ ಸೇರಿದಂತೆ ಎಳನೀರು ಎಂಬ ಅಮೃತ ಮಾಡುವ ಉಪಕಾರ ಒಂದೆರಡಲ್ಲ. ಮುಖ್ಯವಾಗಿ ಬೇಸಗೆಯಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಎಳನೀರಿನಿಂದ ಯಾವೆಲ್ಲ ಬಗೆಯ ಪಾನೀಯಗಳನ್ನು ತಯಾರಿಸಿ ಕುಡಿಯಬಹುದು ಎಂಬುದನ್ನು ನೋಡೋಣ.
1. ತೆಂಗಿನ ಹಾಲು: ಎಳನೀರು ಕೊಂಚ ಬೆಳೆದು ತೆಂಗಿನಕಾಯಿಯಾದಾಗ ಅದರ ಹಾಲನ್ನೂ ಪಾನೀಯವಾಗಿ ಬಳಸಬಹುದು. ತೆಂಗಿನ ಹಾಲು ರೋಗನಿರೋಧಕತೆ ಹೆಚ್ಚು ಮಾಡುವ ಅದ್ಭುತ ಪಾನೀಯ. ತೆಂಗಿನಕಾಯಿಯನ್ನು ತುರಿದು ಮಿಕ್ಸಿಯಲ್ಲಿ ರುಬ್ಬಿ ಅದರಿಂದ ಹಿಂಡಿದ ಕಾಯಿಹಾಲಿಗೆ, ಜೇನು ಹಾಗೂ ಕೊಂಚ ಕರಿಮೆಣಸಿನ ಪುಡಿ ಸೇರಿಸಿ ತಣ್ಣಗೆ ಕುಡಿದರೆ ಅದ್ಭುತ ಪಾನೀಯ.
2.ಸೋಲ್ ಕಡಿ: ಇದು ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಾಡುವ ಪಾನೀಯ. ಎಳನೀರಿಗೆ ಕೋಕಂ, ಅಥವಾ ಪುನರ್ಪುಳಿ ಎಂಬ ಇನ್ನೊಂದು ಹಣ್ಣಿನ ರಸವನ್ನು ಹಾಕಿ ಮಾಡುವ ಪಾನೀಯ. ಬೇಸಿಗೆಗೆ ದೇಹದಲ್ಲಿರುವ ಪಿತ್ತದ ಅಂಶಗಳನ್ನು ಕಳೆಯಲು ಹಾಗೂ ಬೇಸಿಗೆಯಲ್ಲಿ ದೇಹ ತಂಪಾಗಲು ಖನಿಜಾಂಶ ಹಾಗೂ ಪೋಷಕಾಂಶಯುಕ್ತ ಪಾನೀಯವಿದು. ಇದು ಜೀರ್ಣಕ್ರಿಯೆಯಲ್ಲೂ ಸಹಾಯ ಮಾಡುತ್ತದೆ. ಕೊಂಕಣ ಪ್ರಾಂತ್ಯದ ಮಂದಿ ಈ ಪಾನೀಯವನ್ನು ಮಾಡುತ್ತಾರೆ.
ಇದನ್ನೂ ಓದಿ: Food Tips: ತೂಕ ಇಳಿಕೆಯ ಸಂಗಾತಿ ಓಟ್ಸ್‌ನಲ್ಲೂ ರುಚಿಕರ ಆಯ್ಕೆಗಳು!
3. ಸೌತೆಕಾಯಿ ಹಾಗೂ ಎಳನೀರಿನ ಗಾಝ್ಪಾಚೋ: ಹೆಸರೇ ಬೇಸಿಗೆಗೆ ಹೇಳಿ ಮಾಡಿಸಿದಂಥದ್ದು. ಸೌತೆಕಾಯಿ ಹಾಗೂ ಎಳನೀರಿನ ಗಾಝ್‌ಪಾಚೋ ದಿನವಿಡೀ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳುವುದಲ್ಲದೆ ದೇಹವನ್ನು ತಂಪು ಮಾಡುವ ಗುಣವನ್ನೂ ಹೊಂದಿದೆ. ಸೌತೆಕಾಯಿ ರಸ, ಎಳನೀರು, ಕಾಯಿಹಾಲು ಹಾಗೂ ಪುದಿನವನ್ನು ಹಾಕಿ ಮಾಡುವ ರುಚಿಯಾದ ಕೂಲ್‌ಡ್ರಿಂಕ್ ಇದು.
4. ಎಳನೀರು ಮಾವಿನಹಣ್ಣಿನ ಸ್ಮೂದಿ: ಇದು ಹೊಟ್ಟೆ ತುಂಬಿಸಬಲ್ಲ ಸ್ಮೂದಿ. ಓಟ್ಸ್, ನಿಂಬೆರಸ, ತೆಂಗಿನ ಹಾಲು, ಎಳನೀರು, ಮಾವಿನಹಣ್ಣು, ಕೊಂಚ ಮೊಸರು, ಸ್ವಲ್ಪ ಜೇನುತುಪ್ಪ ಹಾಗೂ ಸೂರ್ಯಕಾಂತಿ ಬೀಜಗಳು ಇತ್ಯಾದಿಗಳೆಲ್ಲವನ್ನು ಮಿಕ್ಸಿಗೆ ಹಾಕಿ ತೆಗೆದಾಗ ಆಗುವುದೇ ಈ ಸ್ಮೂದಿ! ಹೆಚ್ಚು ಹೊತ್ತು ಬೇಕಾಗದ, ಸುಲಭವಾಗಿ ಮಾಡಬಹುದಾದ ಹಾಗೂ ಹೊಟ್ಟೆ ತುಂಬಿಸುವ ತಾಕತ್ತಿರುವ ಡ್ರಿಂಕ್ ಇದು. ಚೆನ್ನಾಗಿ ಹಸಿವಾದಾಗ ಪೋಷಕಾಂಶಯುಕ್ತ ಆದರೆ, ಹೆಚ್ಚು ತಿಂದಂತೆ ಫೀಲ್ ಆಗದ, ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತಿಡುವ ಆದರೆ ಹಗುವಾಗಿರಿಸುವ ಆಯ್ಕೆಯಿದು.
5. ಎಳನೀರಿನ ಜ್ಯೂಸ್: ಸಿಕ್ಕಾಪಟ್ಟೆ ಸೆಖೆಯಾದಾಗ, ಎಲ್ಲೋ ಓಡಾಡಿ ಬಂದು ಸುಸ್ತಾದಾಗ, ಬಿಸಿಲಲ್ಲಿ ತಿರುಗಾಡಿ ಶಕ್ತಿಯೆಲ್ಲ ಬಸಿದು ಹೋಗಿದೆ ಅನಿಸಿದಾಗ ಕುಡಿಯಬೇಕಾದ ಪೇಯ ಎಂದರೆ ಎಳನೀರು ಜ್ಯೂಸ್. ಇದನ್ನು ಮಾಡುವುದು ಸುಲಭ. ಎಳನೀರಿಗೆ ಕೊಂಚ ಪುದಿನ ಎಲೆಗಳನ್ನು ಹಾಕಿ, ನಿಂಬೆರಸ ಹಿಂಡಿದರೆ ಈ ರಿಫ್ರೆಶಿಂಗ್ ಪಾನೀಯ ರೆಡಿ!
ಇದನ್ನೂ ಓದಿ: Food Tips: ಇಡ್ಲಿ ಎಂಬ ಆರಾಧ್ಯ ದೈವ: ಇಲ್ಲಿದೆ ಹಬೆಯಾಡುವ ಬಗೆಬಗೆಯ ಇಡ್ಲಿಗಳು!