Site icon Vistara News

Makar Sankranti: ಮತ್ತೆ ಬಂದಿದೆ ಸುಗ್ಗಿ-ಹುಗ್ಗಿ ತರುವ ಮಕರ ಸಂಕ್ರಮಣ!

Makar Sankranti

ಅಲಕಾ ಕೆ, ಮೈಸೂರು
ನಿಸರ್ಗದಲ್ಲಿ ಆಗುವ ಬದಲಾವಣೆಯನ್ನು ಸೂಚಿಸುವ ಪರ್ವ ಕಾಲವೇ ಸಂಕ್ರಾಂತಿ (Makar Sankranti). ಹೊರಗೆ ಧಾನ್ಯದ ಸುಗ್ಗಿ, ಒಳಗೆ ಬಿಸಿ ಹುಗ್ಗಿಯೊಂದಿಗೆ ಬರುವ ಈ ಹಬ್ಬ ಸಮೃದ್ಧಿ, ಸಾಮರಸ್ಯಗಳ ಸಂದೇಶವನ್ನು ಹೊತ್ತು ತರುತ್ತದೆ. ಹಾಗಾಗಿ ಎಳ್ಳು-ಬೆಲ್ಲದಂತೆ ಬಾಳುವ ಪಣ ತೊಡಲು ಸ್ಫೂರ್ತಿ ನೀಡುತ್ತದೆ.

ʻಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿʼ ಎಂದು ಹಾರೈಸುವ ಮಕರ ಸಂಕ್ರಮಣ ಮತ್ತೆ ಬಂದಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಯತ್ತ ಚಲಿಸುವ ಈ ಸಮಯವು ಹಲವು ಬಗೆಯಲ್ಲಿ ಬದಲಾವಣೆಗಳನ್ನು ಹೊತ್ತು ತರುತ್ತದೆ. ಈ ವರ್ಷದ ಸಂಕ್ರಾಂತಿ ಜನವರಿ 15ರಂದು. ಉತ್ತರಾಯಣ ಆರಂಭದ ಈ ಸಮಯವು ದೇಶದ ಹಲವೆಡೆಯಲ್ಲಿ ಸುಗ್ಗಿಯ ಹಬ್ಬಗಳನ್ನು ಆಚರಿಸುವ ಹೊತ್ತು ಸಹ ಹೌದು.

ಮಾಗಿಯ ಚಳಿ ನಿಧಾನಕ್ಕೆ ಕರಗಿ, ದೀರ್ಘ ರಾತ್ರಿ-ಸಣ್ಣ ಹಗಲಿನ ದಿನಗಳು ಪಲ್ಲಟಿಸುವ ಸಂಕ್ರಮಣದ ಹೊತ್ತಿದು. ಚಂದ್ರನ ಚಲನೆಯನ್ನು ಆಧರಿಸಿ ಆಚರಿಸುವ ಹಬ್ಬಗಳೇ ಹೆಚ್ಚಾಗಿರುವ ನಮ್ಮಲ್ಲಿ, ಅದಕ್ಕೆ ವ್ಯತಿರಿಕ್ತವಾಗಿ ಮಕರ ಸಂಕ್ರಾಂತಿಯು ಸೌರ ಚಲನೆಯನ್ನು ಆಧರಿಸಿ ಆಚರಿಸುವಂಥದ್ದು. ಧನು ಮಾಸದಲ್ಲಿ ಶುಭಕಾರ್ಯಗಳ ಮೇಲೆ ಹೇರಿದ್ದ ನಿಯಂತ್ರಣಗಳು ಸಡಿಲಗೊಂಡು, ಎಲ್ಲಾ ಶುಭಕಾರ್ಯಗಳಿಗೆ ಅನುವು ಮಾಡಿಕೊಡುವ ಪುಣ್ಯಕಾಲ ಉತ್ತರಾಯಣ ಪ್ರಾರಂಭದ ಸಮಯವಿದು.

ಭೂಮಿಯಲ್ಲಿ ಬೆಳೆದು ನಿಂತ ಬೆವರಫಲ ಕೈಗೆಟುಕುವ ಕಾಲವಾದ್ದರಿಂದ ಇದು ಸುಗ್ಗಿಯ ಕಾಲವೂ ಹೌದು. ಆಯಾ ಪ್ರಾಂತ್ಯದಲ್ಲಿ ಇದರ ಹೆಸರು ಬೇರೆಯೇ ಆದರೂ ಆಚರಣೆಯ ಉದ್ದೇಶದಲ್ಲಿ ಭಿನ್ನತೆಯಿಲ್ಲ. ಮನೆಗೆ ಹೊಸ ಫಸಲು ತರುವ, ರಾಸುಗಳನ್ನು ಅಲಂಕರಿಸಿ ಪೂಜಿಸಿ ಕಿಚ್ಚು ಹಾಯಿಸುವ, ಗಾಳಿಪಟ ಹಾರಿಸುವಂಥ ಆಚರಣೆಗಳು ಬಹಳಷ್ಟು ಕಡೆಗಳಲ್ಲಿ ಕಂಡುಬರುತ್ತವೆ. ಅದರಲ್ಲೂ ಎತ್ತುಗಳಿಗೆ ಬಣ್ಣದ ಅಲಂಕಾರ ಮಾಡುವುದು ಮತ್ತು ಬೆಂಕಿಯ ಕೊಂಡಗಳನ್ನು ದಾಟಿಸುವುದು ಬಹಳಷ್ಟು ಪ್ರಾಂತ್ಯಗಳಲ್ಲಿ ಚಾಲ್ತಿಯಲ್ಲಿದೆ.

ಸುಗ್ಗಿ ಹಬ್ಬ

ದೇಶದೆಲ್ಲೆಡೆ ಹಲವಾರು ಪ್ರಾಂತ್ಯಗಳಲ್ಲಿ ಈಗ ಸುಗ್ಗಿಯ ರಂಗು-ಗುಂಗು. ಜನವರಿಯಿಂದ ಸುಮಾರು ಎಪ್ರಿಲ್‌ವರೆಗೂ ನಾನಾ ಕಡೆಗಳಲ್ಲಿ ಸುಗ್ಗಿ ಹಾಡುಗಳು ಕೇಳಿಬರುತ್ತವೆ. ಮಕರ ಸಂಕ್ರಾಂತಿ, ಪೊಂಗಲ್‌, ಲೋಹ್ರಿ, ಬಸಂತ್‌ ಪಂಚಮಿ, ಬೋಗಾಲಿ ಬಿಹು, ದಹಿ ಚುರಾ, ತಿಲ್‌ ಸಂಕ್ರಾಂತ್‌ ಮುಂತಾದ ಹೆಸರಿನ ಸುಗ್ಗಿ ಹಬ್ಬಗಳು ದೇಶದ ಉದ್ದಗಲಕ್ಕೆ ಆಚರಿಸಲ್ಪಡುತ್ತವೆ. ಇದು ಭಾರತದಲ್ಲಿ ಮಾತ್ರವಲ್ಲ, ನೇಪಾಳ, ಥಾಯ್ಲೆಂಡ್‌, ಶ್ರೀಲಂಕಾ, ಮ್ಯಾನ್ಮಾರ್‌, ಕಾಂಬೋಡಿಯ ದೇಶಗಳಲ್ಲೂ ಆಚರಣೆಯಲ್ಲಿದೆ.

ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ, ಕಬ್ಬು, ಸಕ್ಕರೆ ಅಚ್ಚು ತಿನ್ನುವುದರ ಜೊತೆಗೆ ಸಿಹಿ ಮತ್ತು ಖಾರದ ಪೊಂಗಲ್‌, ಹುಗ್ಗಿ-ಬೆಲ್ಲದ ಗೊಜ್ಜು, ಹೆಸರುಬೇಳೆ ಖಿಚಡಿ ಇಲ್ಲವೇ ಪಾಯಸ ಮುಂತಾದವು ವಿಶೇಷವಾಗಿ ಸಿದ್ಧಗೊಳ್ಳುವ ಖಾದ್ಯಗಳು. ಇದಲ್ಲದೆ, ಆಯಾ ಪ್ರಾಂತ್ಯಗಳಲ್ಲಿ ದೊರೆಯುವ ಬೆಳೆಗಳು ಹಬ್ಬರ ವಿಶೇಷಕ್ಕೆ ಬಳಸಲ್ಪಡುತ್ತವೆ. ಉದಾ, ಅವರೆಕಾಯಿ ಬಳಕೆಯಲ್ಲಿರುವ ಪ್ರಾಂತ್ಯಗಳಲ್ಲಿ ಅದನ್ನೇ ಬಳಸಿ ಖಾರ ಎಳ್ಳು ತಯಾರಿಸುವ ಪದ್ಧತಿಯೂ ಇದೆ.

ಊರ ಹಬ್ಬ, ಆಲೆಮನೆ

ಸಾಮಾಜಿಕವಾಗಿಯೂ ಇದು ಚಟುವಟಿಕೆಗಳು ಗರಿಗೆದರುವ ಕಾಲ. ಶುಭ ಕಾರ್ಯಗಳಿಗೆ ಚಾಲನೆ ದೊರೆಯುವ ಸಮಯದ ಜೊತೆಗೆ, ಚಳಿಯಲ್ಲಿ ಮುದುರಿದ್ದ ಮೈ-ಮನಗಳನ್ನು ಕೊಡವಿ ಎದ್ದು, ಊರೆಲ್ಲ ತಿರುಗುತ್ತ ʻಎಳ್ಳು ಬೀರುವʼ ಮೋಜಿನ ಸಮಯವಿದು. ಹಲವು ಪ್ರಾಂತ್ಯಗಳಲ್ಲಿ ಹಾಡು-ಹಸೆ-ನೃತ್ಯಗಳು ಈ ಆಚರಣೆಯ ಅವಿಭಾಜ್ಯ ಅಂಗಗಳೆನಿಸುವೆ. ಕುಸ್ತಿ ಸ್ಪರ್ಧೆಗಳು ಚಳಿಗೆ ಸೆಡ್ಡು ಹೊಡೆಯಲು ಜನರನ್ನು ಪ್ರಚೋದಿಸಿದರೆ, ಗಾಳಿಪಟದ ಉತ್ಸವಗಳು ಬಾನು ನೀಲಿಯಾಗಿರಲಿ, ಮೋಡ ಮುಸುಕಿರಲಿ- ಹೇಗೇ ಇದ್ದರೂ ರಂಗೇರಿಸುತ್ತವೆ. ಸಂಕ್ರಾಂತಿ ಮುಗಿದ ಕೆಲವೇ ದಿನಗಳಲ್ಲಿ ಊರ ಜಾತ್ರೆಗಳು, ಹಬ್ಬಗಳು, ಪರಿಷೆಗಳು, ರಥೋತ್ಸವಗಳು ನಾಡಿನೆಲ್ಲೆಡೆ ಗದ್ದಲ ಮಾಡಲಾರಂಭಿಸುತ್ತವೆ.
ಕಬ್ಬು ಕಟಾಯಿಸುವ ಹೊತ್ತಿದ್ದು. ಇನ್ನೇನು ಕೆಲವೇ ದಿನಗಳಲ್ಲಿ ಆಲೆಮನೆಗಳ ಭರಾಟೆ ಜೋರಾಗುತ್ತದೆ. ಕಬ್ಬು ಹೆರೆಯುವ, ಗಾಣ ಹೂಡುವ, ಕಬ್ಬಿನಹಾಲು ತೆಗೆಯುವ, ಬೆಲ್ಲ ಕಾಯಿಸುವ ಗದ್ದಲ. ತಣ್ಣನೆಯ ಕಬ್ಬಿನಹಾಲಿನ ಜೊತೆಗೆ ಬಿಸಿಯಾದ ಹರಟೆಯೊಂದಿಗೆ ಮಿರ್ಚಿ-ಮಂಡಕ್ಕಿ ಮೆಲ್ಲುವ ತಿಂಡಿಪೋತರು, ಬಿಸಿ ಬೆಲ್ಲ ಸವಿಯುವ ರಸಿಕರಿಗೇನು ಕಡಿಮೆ! ಇದೇ ಹಿನ್ನೆಲೆಯಲ್ಲಿ, ಸಂಕ್ರಾಂತಿಯಲ್ಲಿ ಎಳ್ಳು, ಕಬ್ಬು, ಫಲಗಳ ಜೊತೆಗೆ ಬೆಲ್ಲವನ್ನೂ ಮೆಲ್ಲುವುದು, ಹಂಚುವುದು ಮತ್ತು ವರ್ಷವಿಡೀ ಸಮೃದ್ಧಿ ತುಂಬಿರಲಿ ಎಂದು ಹಾರೈಸುವುದು ಕ್ರಮ. ನಿಸರ್ಗದ ಬದಲಾವಣೆಯನ್ನು ಸವಿಯುತ್ತ, ಪೊರೆಯುವ ಭೂಮಿಗೆ, ರಾಸುಗಳಿಗೆ ಕೃತಜ್ಞತೆ ಸೂಚಿಸುತ್ತಾ, ಸಮೃದ್ಧಿ ಎಲ್ಲೆಡೆ ಹರಡಿ ಎಂದು ಹಾರೈಸುತ್ತ, ಸಾಮರಸ್ಯ ಮೆರೆಯುವ ಸರಳ ಮತ್ತು ಆಪ್ತ ಹಬ್ಬವಿದು.

ಇದನ್ನೂ ಓದಿ: Makar Sankranti: ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ತಿನ್ನುವುದೇಕೆ?

Exit mobile version