Site icon Vistara News

Tips For Better Energy: ದಿನವಿಡೀ ಎಷ್ಟೇ ಕೆಲಸ ಮಾಡಿದರೂ ಉಲ್ಲಾಸದಿಂದ ಇರುವುದು ಹೇಗೆ?

Tips For Better Energy

ಕೆಲವರು ದಿನವಿಡೀ ಎಷ್ಟೇ (Tips for Better Energy) ಕೆಲಸ ಮಾಡಿದರೂ, ರಾತ್ರಿ ಮಲಗುವವರೆಗೂ ಉಲ್ಲಾಸದಿಂದ ಇರುವುದನ್ನು ನೋಡುತ್ತೇವೆ. ನಮಗಿಂತ ಹೆಚ್ಚು ಕೆಲಸ ಮಾಡಿದರೂ, ಏನೂ ಮಾಡಿಯೇ ಇಲ್ಲವೆಂಬಂತೆ ಎನರ್ಜೆಟಿಕ್‌ ಆಗಿರುವ ಅವರು ಸ್ಫೂರ್ತಿಯ ಚಿಲುಮೆಯಂತೆ ಕಾಣುತ್ತಾರೆ. ಅವರ ಈ ಉಲ್ಲಾಸದ ಹಿಂದಿನ ರಹಸ್ಯವೇನು ಎಂದು ನಮಗೆ ಕುತೂಹಲ ಮೂಡುವುದು ಸಹಜವೇ. ಆದರೆ, ಹೀಗೆ ಉಲ್ಲಾಸದಿಂದಿರುವುದು ನಾವು ಮನಸ್ಸು ಮಾಡಿದರೆ ಕಷ್ಟವೇನಲ್ಲ. ಹೌದು. ದಿನವೊಂದರಲ್ಲಿ ನಾವು ಎಷ್ಟು ಎನರ್ಜೆಟಿಕ್‌ ಆಗಿರುತ್ತೇವೆ ಎಂಬುದು ನಮ್ಮ ಆಹಾರ ಪದ್ಧತಿ, ನಮ್ಮ ನಿದ್ದೆಯ ಗುಣಮಟ್ಟ, ಒತ್ತಡ, ನೆಮ್ಮದಿ, ನಮ್ಮ ದೈಹಿಕ ಚಟುವಟಿಕೆ ಇತ್ಯಾದಿಗಳ ಮೇಲೆ ನಿರ್ಧರಿತವಾಗುತ್ತದೆ. ಇವುಗಳಲ್ಲಿ ಏನೇ ಹೆಚ್ಚು ಕಡಿಮೆಯಾದರೂ ನಮ್ಮ ಶಕ್ತಿ- ಉಲ್ಲಾಸದಲ್ಲಿ ಏರುಪೇರನ್ನು ಕಾಣುತ್ತೇವೆ. ಆದರೂ ಎಲ್ಲಕ್ಕಿಂತ ಬಹುಮುಖ್ಯವಾಗಿ ನಾವು ಏನು ತಿನ್ನುತ್ತೇವೆ ಎಂಬುದರ ಮೇಲೆ ನಮ್ಮ ಶಕ್ತಿಯ ಮಟ್ಟ ಹೊಂದಿಕೊಂಡಿರುತ್ತದೆ. ಹಾಗಂತ ನೀವು ಎಷ್ಟು ತಿನ್ನುತ್ತೀರಿ ಎಂಬುದಕ್ಕಿಂತಲೂ ಏನು ಹೇಗೆ ತಿನ್ನುತ್ತೀರಿ ಎಂಬುದೇ ಮುಖ್ಯ. ಯಾಕೆಂದರೆ ಹೆಚ್ಚು ತಿಂದ ತಕ್ಷಣ ಹೆಚ್ಚು ಶಕ್ತಿ ಬರುವುದಿಲ್ಲ. ಮುಖ್ಯವಾಗಿ ನಮ್ಮ ದೇಹದಲ್ಲಿ ಗ್ಲುಕೋಸ್‌ನ ಮಟ್ಟ ಏರಿಳಿಯದೆ ಸಮತೋಲನವನ್ನು ಕಾಯ್ದುಕೊಳ್ಳುವುದು. ನಮ್ಮ ದೇಹದ ಶಕ್ತಿಯ ಮೂಲಗಳಲ್ಲಿ ಗ್ಲುಕೋಸ್‌ನ ಸ್ಥಾನ ಬಹಳ ಮುಖ್ಯವಾದದ್ದು. ಆದರೆ, ಹೆಚ್ಚು ಗ್ಲುಕೋಸ್‌ ಒಳ್ಳೆಯದಲ್ಲ. ದೇಹಕ್ಕೆ ನೀವು ಹೆಚ್ಚು ಗ್ಲುಕೋಸ್‌ ನೀಡಿದರೆ, ಹೆಚ್ಚು ಶಕ್ತಿ ಉತ್ಪತ್ತಿಯಾಗುವುದಿಲ್ಲ. ಬದಲಾಗಿ ಶಕ್ತಿ ಕಡಿಮೆಯಾಗುತ್ತದೆ. ಸಮತೋಲನ ಎಂಬುದು ಇಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಹಾಗಾಗಿ ನಾವು ದೇಹಕ್ಕೆ ಬಹಳ ಸಮತೋಲನವಾದ ಆಹಾರ ನೀಡುವುದು ಕೂಡಾ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಂಸ್ಕರಿಸದ ನೈಸರ್ಗಿಕ ಕಾರ್ಬೋಹೈಡ್ರೇಟ್‌, ಪ್ರೊಟೀನ್‌, ಒಳ್ಳೆಯ ಕೊಬ್ಬು, ವಿಟಮಿನ್‌ಗಳು ಹಾಗೂ ಖನಿಜಾಂಶಗಳೂ ಸೇರಿದಂತೆ ಎಲ್ಲವೂ ನಮ್ಮ ಆಹಾರದಲ್ಲಿರುವುದು ಬಹಳ ಅಗತ್ಯ. ಯಾವುದರ ಕೊರತೆಯಾದರೂ ಅದು ದೇಹದ ಶಕ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ತರಕಾರಿಗಳನ್ನು ಸೇವಿಸಿ

ಊಟಕ್ಕೆ ಮೊದಲು ತರಕಾರಿಗಳನ್ನು ಸೇವಿಸಿ. ತರಕಾರಿಗಳಲ್ಲಿರುವ ನಾರಿನಂಶವು ಊಟದಲ್ಲಿರುವ ಗ್ಲುಕೋಸ್‌ ಇದ್ದಕ್ಕಿದ್ದಂತೆ ಏರುವುದನ್ನು ತಡೆಯುತ್ತದೆ.

ದೇಸೀ ಆಹಾರಗಳನ್ನೇ ಸೇವಿಸಿ

ಬ್ರೆಡ್‌- ಜ್ಯಾಂ, ಸಿರಿಯಲ್‌ ಮತ್ತಿತರ ಸಂಸ್ಕರಿಸಿದ, ಸಕ್ಕರೆಯಿರುವ ಆಹಾರದ ಬದಲಾಗಿ, ದೇಸೀ ಆಹಾರಗಳನ್ನೇ ಬೆಳಗ್ಗಿನ ಉಹಾರಕ್ಕೆ ತಿನ್ನಿ. ಧಾನ್ಯ, ಬೇಳೆಕಾಳು, ತರಕಾರಿಗಳನ್ನು ಬಳಸಿ ಮಾಡುವ ದೇಸೀ ಉಪಹಾರಗಳಾದ, ಪರಾಠ, ದೋಸೆ, ಇಡ್ಲಿ ಇತ್ಯಾದಿಗಳು ಒಳ್ಳೆಯದು. ಒಣಬೀಜಗಳು, ಮೊಸರು, ಮೊಟ್ಟೆ ಇತ್ಯಾದಿಗಳನ್ನೂ ಸೇವಿಸಬಹುದು.

ಒಂದು ಚಮಚ ವಿನೆಗರ್‌

ಹಸಿ ತರಕಾರಿಗಳು, ಸಲಾಡ್‌ಗಳನ್ನು ಸೇವಿಸುವಾಗ ಅದಕ್ಕೆ ವಿನೆಗರ್‌ ಸೇರಿಸಿ ಸೇವಿಸಬಹುದು. ಅಥವಾ ಊಟಕ್ಕೆ ಮೊದಲು ಒಂದು ಚಮಚ ವಿನೆಗರ್‌ ಅನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿದು ನಂತರ ಊಟ ಮಾಡಬಹುದು. ವಿನೆಗರ್‌ನಲ್ಲಿ ಅಸಿಟಿಕ್‌ ಆಸಿಡ್‌ ಇದ್ದು ಅದು ಆಹಾರವನ್ನು ಗ್ಲುಕೋಸ್‌ ಆಗಿ ಬಹುಬೇಗನೆ ಪರಿವರ್ತಿಸುವ ಕಿಣ್ವಗಳ ಕೆಲಸವನ್ನು ನಿಧಾನ ಮಾಡುವ ಗುಣವನ್ನು ಹೊಂದಿದೆ.

ಇದನ್ನೂ ಓದಿ: Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

ಹಣ್ಣುಗಳನ್ನು ಹಾಗೆಯೇ ತಿನ್ನಿ

ಹಣ್ಣುಗಳನ್ನು ಹಾಗೆಯೇ ತಿನ್ನಿ. ಜ್ಯೂಸ್‌ ಮಾಡಿ ಕುಡಿಯಬೇಡಿ. ಹಣ್ಣಿಸ ಜ್ಯೂಸ್‌ ಅನ್ನು ಸಕ್ಕರೆ ಸೇರಿಸದೆ ಹಾಗೆಯೇ ನೈಸರ್ಗಿಕವಾಗಿಯೇ ಕುಡಿದರೂ, ಹಣ್ಣಿನಲ್ಲಿರುವ ಸಕ್ಕರೆ ಬಹುಬೇಗನೆ ರಕ್ತಕ್ಕೆ ಸೇರುತ್ತದೆ. ಜೊತೆಗೆ ಜ್ಯೂಸ್‌ನಲ್ಲಿ ಹಣ್ಣಿನ ನಾರಿನಂಶವು ಇರುವುದಿಲ್ಲ. ಆದರೆ, ಹಣ್ಣನ್ನು ಹಾಗೆಯೇ ತಿನ್ನುವುದರಿಂದ ನಾರಿನಂಶದ ಜೊತೆಗೆ ಹಣ್ಣಿನಲ್ಲಿರುವ ಸಕ್ಕರೆಯ ಅಂಶ ದೇಹಕ್ಕೆ ಸೇರಿದರೂ, ಬಹುಬೇಗನೆ ಗ್ಲುಕೋಸ್‌ ಆಗಿ ರಕ್ತಕ್ಕೆ ಸೇರದು. ಹಣ್ಣಿನ ನಾರಿನಂಶವು ಹಾಗೆ ಮಾಡಲು ಬಿಡುವುದಿಲ್ಲ.

Sweet CANDAY

ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿ ಬೇಡ

ಸಿಹಿತಿನಿಸನ್ನು ತಿನ್ನಬೇಕು ಎಂಬ ಬಯಕೆಯಾದರೆ ನೀವು ತಿನ್ನಬಹುದು. ಆದರೆ, ತೀವ್ರ ಹಸಿವಿನಲ್ಲಿದ್ದಾಗ, ಬೆಳಗ್ಗೆ, ಅಥವಾ ಮಧ್ಯದಲ್ಲಿ ಸ್ನ್ಯಾಕ್‌ ಆಗಿ ತಿನ್ನಬೇಡಿ. ಬದಲಾಗಿ ಊಟದ ಜೊತೆಗೆ ಅಂತ್ಯದಲ್ಲಿ ತಿನ್ನಿ. ಖಾಲಿ ಹೊಟ್ಟೆಯಲ್ಲಿರುವಾಗ ಸಿಹಿತಿಂಡಿ ತಿಂದರೆ ಗ್ಲುಕೋಸ್‌ ಮಟ್ಟ ಇದ್ದಕ್ಕಿದ್ದಂತೆ ಏರಬಹುದು.

Exit mobile version