Site icon Vistara News

Happy life: ಸಾಯೋ ಮೊದಲು ಇವರು ಹೇಳಿದ ಮಾತುಗಳು ನಾವು ನೆನಪಿಡಲೇಬೇಕು!

happy life

ನಾನು ಇನ್ನೊಂಚೂರು ಚೆನ್ನಾಗಿ ಬದುಕಬಹುದಾಗಿತ್ತು. ನಾನು ಇನ್ನೊಂದಷ್ಟು ಮಂದಿಯನ್ನು ಪ್ರೀತಿಸಬಹುದಾಗಿತ್ತು. ನಾನು ಇನ್ನೂ ಹೆಚ್ಚಿನ ಕೆಲಸ ಮಾಡಬಹುದಾಗಿತ್ತು. ನಾನು ಇನ್ನಷ್ಟು ಕಾಸು ಮಾಡಿದ್ದರೆ ಇನ್ನೂ ಚೆನ್ನಾಗಿ ಬದುಕಬಹುದಾಗಿತ್ತು…

ಒಂದು ವಯಸ್ಸಾದ ನಂತರ ಹೀಗೆಲ್ಲ ಅನ್ನಿಸೋದು ಸಹಜವೇ. ಆದರೆ ಮಾರಣಾಂತಿಕ ಕಾಯಿಲೆಗಳಿಂದ ಹಾಸಿಗೆ ಹಿಡಿದು, ಇನ್ನೇನು ಕೆಲವೇ ದಿನ ಅಥವಾ ತಿಂಗಳುಗಳ ಆಯುಸ್ಸು ಮಾತ್ರ ಇದೆ ಅಂತ ಗ್ಯಾರಂಟಿ ಆಗಿಬಿಟ್ಟಿರೋ ವ್ಯಕ್ತಿಗಳನ್ನು ಒಂದು ಸಲ ಮನಸ್ಸು ಬಿಚ್ಚಿ ಮಾತಾಡೋ ಹಾಗೆ ಮಾಡಿದರೆ… ಏನು ಹೇಳ್ತಾರೆ? ತಮ್ಮ ಜೀವನದಲ್ಲಿ ಇನ್ನೇನು ಮಾಡಬಹುದಾಗಿತ್ತು ಅಂತ ವಿಷಾದ ವ್ಯಕ್ತಪಡಿಸ್ತಾರೆ? ಅಥವಾ ಅಯ್ಯೋ ಇದೊಂದನ್ನೂ ಮಾಡದೇ ಬಿಟ್ಟೆನಲ್ಲಾ ಅಂತ ಅಂದುಕೋತಾರಾ?

ಈ ಕುತೂಹಲ ನಮಗೆ ಇದ್ದ ಹಾಗೆ ಅಮೆರಿಕದ ಬ್ರೋನೀ ವೇರ್‌ ಎಂಬ ನರ್ಸ್‌ಗೂ ಇತ್ತು. ಆಕೆ, ಆಸ್ಪತ್ರೆಯಲ್ಲಿ ಮರಣಾಸನ್ನ ರೋಗಿಗಳ ಆರೈಕೆ ನೋಡಿಕೊಳ್ಳುತ್ತಿದ್ದ ಒಬ್ಬ ದಾದಿ. ಹಲವಾರು ವರ್ಷಗಳಿಂದ ಇಂಥ ರೋಗಿಗಳನ್ನೇ ಪದೇ ಪದೇ ನೋಡಿ, ಅವರನ್ನು ಮಾತನಾಡಿಸಿ, ಅವರ ಮನಸ್ಥಿತಿ ಏನು ಎಂಬುದು ಆಕೆಗೆ ಅರ್ಥವಾಗಿಬಿಟ್ಟಿತ್ತು. ಇದನ್ನೆಲ್ಲ ಆಧರಿಸಿ ಅವಳು ʼʼದಿ ಟಾಪ್‌ ಫೈವ್‌ ರಿಗ್ರೆಟ್ಸ್‌ ಆಫ್‌ ದಿ ಡೈಯಿಂಗ್‌ʼʼ ಎಂಬ ಪುಸ್ತಕ ಬರೆದಳು. ಅದು ಬೆಸ್ಟ್‌ ಸೆಲ್ಲರ್‌ ಆಯ್ತು.

ಆಕೆ ಈ ರೋಗಿಗಳನ್ನು ಕೇಳಿದ ಪ್ರಶ್ನೆ ಒಂದೇ ಒಂದು- ನೀವು ಬದುಕಿನಲ್ಲಿ ʼಅಯ್ಯೋ ಇದನ್ನು ಮಾಡಿಬಿಡಬೇಕಾಗಿತ್ತುʼ ಎಂದು ಭಾವಿಸುವ ಯಾವುದಾದರೂ ಸಂಗತಿ ಇದೆಯಾ?

ಇದನ್ನೂ ಓದಿ: 88ರ ಹರೆಯದ Ruskin bond ಬದುಕಿನ ಬಗ್ಗೆ ಹೇಳೋದೇನು?

ಇದಕ್ಕೆ ಬಂದ ಉತ್ತರಗಳು ನೂರಾರೇನಲ್ಲ, ಕೆಲವೇ ಕೆಲವು. ಅಂದರೆ ಕೆಲವೇ ಇಚ್ಛೆಗಳು ಮತ್ತೆ ಮತ್ತೆ ಹೆಚ್ಚಿನವರಲ್ಲಿ ಕಾಣಿಸಿಕೊಂಡಿದ್ದವು. ಇದು ನಮ್ಮ ನಿಮ್ಮ ಇಚ್ಛೆಗಳೂ ಆಗಬಹುದು, ಆಗಿರಬಹುದು. ಅವು ಯಾವುದು ಅಂತ ಕೇಳ್ತೀರಾ? ಇಲ್ಲಿವೆ ನೋಡಿ.

  1. ಇನ್ನೊಬ್ಬರು ಬಯಸಿದಂತೆ ಬದುಕುವ ಬದಲು, ನನ್ನ ಇಷ್ಟದಂತೆ ಬದುಕಬೇಕಿತ್ತು.
    ಇದು ಅತ್ಯಂತ ಹೆಚ್ಚಾಗಿ ಕಾಣಿಸಿಕೊಂಡ ವಿಷಾದವಂತೆ. ತಮ್ಮ ಬದುಕು ಮುಗಿಯಿತು ಎಂದು ಸ್ಪಷ್ಟವಾಗಿ ತಿಳಿದ ಕೆಲವು ರೋಗಿಗಳು, ತಾವು ಅದೆಷ್ಟು ಕನಸುಗಳನ್ನು ಸಾಧಿಸದೆ ಜೀವನವನ್ನು ವ್ಯರ್ಥ ಮಾಡಿಕೊಂಡೆವು ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ತಾವು ಅಂದುಕೊಂಡಿದ್ದರಲ್ಲಿ ಅರ್ಧದಷ್ಟನ್ನಾದರೂ ನಾವು ಸಾಧಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ನಾವು ಆಯ್ಕೆ ಮಾಡಿದ ಅಥವಾ ಮಾಡದ ಅವಕಾಶಗಳೇ ಕಾರಣ. ಒಳ್ಳೆಯ ಆರೋಗ್ಯ ಎಂಬುದು ಅತಿ ದೊಡ್ಡ ಆಸ್ತಿ ಮತ್ತು ಸ್ವಾತಂತ್ರ್ಯ . ಹೆಚ್ಚಿನವರು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ- ಅನ್ನುತ್ತಾರೆ.
  2. ನಾನು ಉದ್ಯೋಗದಲ್ಲೇ ಕಳೆದು ಹೋಗಬಾರದಾಗಿತ್ತು.
    ಇದು ಈ ಕೃತಿ ಬರೆದ ನರ್ಸ್‌ ಮಾತನಾಡಿಸಿದ ಪ್ರತಿಯೊಬ್ಬ ಪುರುಷ ರೋಗಿಯ ವಿಷಾದವಾಗಿತ್ತು. ಅವರು ತಮ್ಮ ಮಕ್ಕಳ ಬಾಲ್ಯ, ತಮ್ಮ ಹೆತ್ತವರ ಸಾಮೀಪ್ಯ, ಸಂಗಾತಿಯ ಸಾಂಗತ್ಯ ಎಲ್ಲವನ್ನೂ ಕೆಲಸದ ಭಾರದಲ್ಲಿ ಕಳೆದುಕೊಂಡವರಾಗಿದ್ದರು. ಮಹಿಳೆಯರೂ ಇದನ್ನು ಹೇಳಿದ್ದುಂಟು- ಆದರೆ ಹೆಚ್ಚಿನವರು ವಯಸ್ಕರು ಆಗಿದ್ದರಿಂದ, ಅವರೆಲ್ಲ ಮನೆ ನೋಡಿಕೊಳ್ಳುತ್ತಿದ್ದ ಗೃಹಿಣೀಯರಾಗಿದ್ದರು. ಕಚೇರಿಯಲ್ಲೇ ಜೀವನವೆಲ್ಲಾ ಮುಗಿಸಿಬಿಟ್ಟೆವು ಎಂಬುದು ಬಹುತೇಕ ಪ್ರತಿಯೊಬ್ಬ ಪುರುಷನ ಅಳಲಾಗಿತ್ತು.
  3. ನನ್ನ ಭಾವನೆಯನ್ನು ಹೇಳಿಕೊಳ್ಳುವ ಧೈರ್ಯ ಇರಬೇಕಿತ್ತು.
    ಬೇರೊಬ್ಬರ ಜೊತೆ ಜಗಳ ಮಾಡುವ ಇಷ್ಟವಿಲ್ಲದೆ, ಅವರೊಡನೆ ಶಾಂತಿ ಕಾಪಾಡಿಕೊಳ್ಳುವುದಕ್ಕಾಗಿ, ತಮ್ಮೊಳಗಿನ ಅಭಿಲಾಷೆಗಳನ್ನು ಬಹುತೇಕ ಮಂದಿ ಹತ್ತಿಕ್ಕಿದ್ದರು. ತಾವೇನು ಆಗಬಹುದಾಗಿತ್ತೋ ಅದನ್ನು ಇಂಥ ಹಿಂಜರಿಕೆ, ಮೀಡಿಯೋಕರ್‌ನೆಸ್‌ಗಳಿಂದಾಗಿ ಕಳೆದುಕೊಂಡಿದ್ದರು. ತಾವು ಮನಸ್ಸಿನಲ್ಲಿ ಕಾಪಾಡಿಕೊಂಡಿದ್ದ ಕಹಿ, ವಿಷಾದ ಇತ್ಯಾದಿಗಳು ಇವರು ಬೆಳೆಸಿಕೊಂಡು ಬಂದ ರೋಗಕ್ಕೂ ತಗುಲಿಕೊಂಡಿದ್ದವು ಎಂದು ಕಾಣುತ್ತದೆ.
  4. ಗೆಳೆಯ/ತಿಯರ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕಾಗಿತ್ತು.
    ತುಂಬಾ ಮಂದಿ ತಮ್ಮ ಬಾಲ್ಯದ, ಯವ್ವನದ ಗೆಳೆಯ ಗೆಳತಿಯರನ್ನು ನೆನಪಿಸಿಕೊಂಡಿದ್ದರು. ತಮ್ಮ ಜೀವನದ ಕೊನೆಯ ಗಳಿಗೆಗಳಲ್ಲಿ ಅವು ಎಷ್ಟು ಅಮೂಲ್ಯವಾಗಿದ್ದವು ಎಂಬುದು ಅವರಿಗೆ ಅರ್ಥವಾಗಿತ್ತು. ಆದರೆ ಆ ಹಂತದಲ್ಲಿ ಅವರನ್ನು ಮರಳಿ ಕಂಡುಹಿಡಿಯುವುದು ಕಷ್ಟವಾಗಿತ್ತು. ಹೆಚ್ಚಿನವರಿಗೆ ತಮ್ಮ ಜೀವನದ ಟ್ರೆಡ್‌ಮಿಲ್‌ ಎಷ್ಟು ವೇಗವಾಗಿ ಓಡುತ್ತಿತ್ತು ಎಂದರೆ, ಚಿನ್ನದಂಥ ಅಮೂಲ್ಯ ಗೆಳೆತನಗಳು ಕಾಲದ ಹುದುಲಿನಲ್ಲಿ ಕಳೆದುಹೋಗಿದ್ದವು. ತಮ್ಮ ಗೆಳೆತನಕ್ಕೆ ಕೊಡಬೇಕಾಗಿದ್ದಷ್ಟು ಸಮಯವನ್ನು ತಾವು ಕೊಡಲಿಲ್ಲ ಎಂಬುದು ಅವರ ವಿಷಾದವಾಗಿತ್ತು.
  5. ನಾನು ಇನ್ನಷ್ಟು ಸಂತೋಷವಾಗಿರಬೇಕಿತ್ತು.
    ಆಶ್ಚರ್ಯದ ಸಂಗತಿ ಎಂದರೆ, ಈ ವಿಷಾದ ಬಹುತೇಕ ಎಲ್ಲರಲ್ಲೂ ಇತ್ತು. ಸಂತೋಷ ಎಂಬುದು ಒಂದು ಮನಸ್ಥಿತಿ ಎಂದೂ, ಅದು ತಾನಾಗಿ ಬರುವಂಥದ್ದಲ್ಲ ಮತ್ತು ಅದನ್ನು ನಾವು ಸ್ವತಃ ಆಯ್ದುಕೊಂಡೇ ಅನುಭವಿಸಬೇಕೆಂದೂ ಅವರಿಗೆ ಅರ್ಥವಾಗಿತ್ತು. ಯಾಕೆಂದರೆ ಅವರೆಲ್ಲ ತಮ್ಮ ಹಳೆಯ ಹ್ಯಾಬಿಟ್‌ಗಳಲ್ಲಿ, ವರ್ತನಾ ವಿನ್ಯಾಸಗಳಲ್ಲಿ ವ್ಯಸ್ತರಾಗಿದ್ದರು. ನಿತ್ಯದ ರೂಢಿಗಳು ಉಂಟುಮಾಡುವ ಒಂದು ಬಗೆಯ ಸುರಕ್ಷಿತತೆಯ ಫೀಲಿಂಗ್‌, ಅವರು ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳದಂತೆ ಮಾಡಿತ್ತು. ಹುಚ್ಚುಚ್ಚಾಗಿ ನಗಬೇಕು ಎನಿಸಿದರೂ, ಸಿಲ್ಲಿಯಾಗಿ ವರ್ತಿಸಬೇಕು ಅನಿಸಿದರೂ, ಹಾಗೆ ಮಾಡದಂತೆ ಅವರು ತಮ್ಮ ಸುತ್ತ ಕಟ್ಟಿಕೊಂಡ ಗಂಭೀರತೆಯ ಆವರಣ ತಡೆಯುತ್ತಿತ್ತು. ಬದಲಾವಣೆಯ ಭಯ ಅವರನ್ನು ಆವರಿಸಿತ್ತು.

ಸರಿ, ಇಲ್ಲಿಯವರೆಗೆ ಬದುಕಿನ ಸಾಮಾನ್ಯ ವಿಷಾದಗಳೇನಾಗಿದ್ದವು ಎಂಬುದನ್ನು ಓದಿದಿರಲ್ಲ? ಹಾಗಿದ್ದರೆ, ಅದನ್ನು ಮೀರುವುದು ಹೇಗೆ ಎಂಬುದನ್ನೂ ನಾವು ಯೋಚಿಸಬಹುದಲ್ಲವೇ?‌

ಇದನ್ನೂ ಓದಿ: ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ

Exit mobile version