ಬೇಸಗೆ ಕಳೆದು ಮಳೆಗಾಲ ಬಂದಿದೆ. ಎಲ್ಲೆಡೆ ಮಳೆಯ ಸಂಭ್ರಮವೋ ಸಂಭ್ರಮ. ಇನ್ನೇನು ಬೇಸಗೆಯಲ್ಲಿ ಮನತಣಿಸುತ್ತಿದ್ದ ಮಾವಿನಹಣ್ಣೂ ಕೂಡಾ ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಮುಗಿಯುವ ಮೊದಲೇ ಒಂದಿಷ್ಟು ರೆಸಿಪಿಗಳನ್ನು ಮಾಡಿ ಮುಗಿಸದಿದ್ದರೆ ಹೇಗೆ ಹೇಳಿ? ಇನ್ನೊಂದು ವರ್ಷಕ್ಕೆ ತಡೆಹಿಡಿವ ನಾಲಗೆಯ ಚಪಲಕ್ಕೆ ಒಂಚೂರಾದರೂ ನ್ಯಾಯ ಸಲ್ಲಿಸಬೇಕಲ್ಲವೇ ಎಂದು ಒದ್ದಾಡುವ ಜೀವಗಳಿಗೆ ಕಲರ್‌ಫುಲ್ ಮಾವಿನಹಣ್ಣಿನ ರೆಸಿಪಿಗಳು ಇಲ್ಲಿವೆ. ಇನ್ನೇನು ಟಾಟಾ ಹೇಳಲಿರುವ ಹಣ್ಣುಗಳ ರಾಜನಿಗೆ ಸಂತೋಷದಿಂದ ರಾಜ ಮರ್ಯಾದೆ ಕೊಟ್ಟು ಕಳಿಸಿ ಮತ್ತೆ ಸಿಗೋಣ ಎನ್ನಬಹುದು!
೧. ಮ್ಯಾಂಗೋ ಚಿಯಾಸೀಡ್ ಪುಡ್ಡಿಂಗ್: ಒಂದು ಗ್ಲಾಸಿನಲ್ಲಿ ಹಾಲು ತೆಗೆದುಕೊಂಡು ಅದಕ್ಕೆ ಎಡರು ಚಮಚ ಚಿಯಾ ಬೀಜಗಳನ್ನು ಹಾಕಿ. ಅದನ್ನು ಚಿನ್ನಾಗಿ ಮಿಕ್ಸ್ ಮಾಡಿ ಫ್ರಿಡ್ಜ್‌ನಲ್ಲಿಡಿ. ರಾತ್ರಿ ಹೀಗೆ ಮಾಡಿಟ್ಟು ಬೆಳಗ್ಗೆ ಹೊರತೆಗೆಯಬಹುದು.
ಚಿಯಾ ಬೀಜಗಳು ಉಬ್ಬಿ ಹಾಲು ಗಟ್ಟಿಯಾಗಿರುತ್ತದೆ. ಮಾವಿನಹಣ್ಣನ್ನು ಚಿಕ್ಕಚಿಕ್ಕ ತುಂಡುಗಳಾಗಿ ಮಾಡಿ ಈ ಹೊರತೆಗೆದ ಹಾಲಿನ ಮಿಶ್ರಣಕ್ಕೆ ಸೇರಿಸಿ. ನಂತರ ಇವಕ್ಕೆ ಓಟ್ಸ್, ಒಣಹಣ್ಣು ಹಾಗೂ ಬೀಜಗಳನ್ನೂ ಸೇರಿಸಿ. ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ, ತಂಪಾಗಿ ಕುಡಿಯಿರಿ, ಅಥವಾ ತಿನ್ನಿ.
೨. ಮ್ಯಾಂಗೋ ಸಾಲ್ಸಾ: ಒಂದು ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ಹೆಚ್ಚಿದ ಈರುಳ್ಳಿ, ಟೊಮೇಟೋ, ಮಾವಿನಹಣ್ಣು, ಹಸಿಮೆಣಸಿನಕಾಯಿ ಕೊತ್ತಂಬರಿಸೊಪ್ಪು ಸೇರಿಸಿ ಚೆನ್ನಾಗಿ ಕಲಸಿ.
ರುಚಿಕೆ ತಕ್ಕಷ್ಟು ಉಪ್ಪು ಸೇರಿಸಿ, ಅರ್ಧ ನಿಂಬೆಹಣ್ಣನ್ನು ಹಿಂಡಿ. ನ್ಯಾಚೋಸ್ ಜೊತೆ ಈ ಸಾಲ್ಸಾ ಸವಿಯಿರಿ. ಮಳೆಗಾಲದ ಸಂಜೆಗೆ ಹೇಳಿ ಮಾಡಿಸಿದಂತ ತಿನಿಸು. ಹಣ್ಣಿನ ಸೀಸನ್ ಮುಗಿವ ಮೊದಲೇ ಮಾಡಿ.
೩. ಆಮ್ ಪನ್ನಾ: ಮಳೆಗಾಲದ ನಡುವಲ್ಲಿ ಬಂದುಹೋಗುವ ಮದ್ಯಾಹ್ನದ ಬಿರುಬಿಸಿಲಿಗೆ ಇಂಥದ್ದೊಂದು ಪೇಯ ಕುಡಿದರೆ ಹೊಟ್ಟೆಯೂ ಮನಸ್ಸೂ ತಂಪು ತಂಪು. ಇದಕ್ಕೆ ನೀವು ಮಾಡಬೇಕಾದ್ದು ಇಷ್ಟೇ. ಒಂದು ಮಾವಿನ ಕಾಯಿ ಯನ್ನು (ಹಣ್ಣಲ್ಲ) ಚೆನ್ನಾಗಿ ಕುಕ್ಕರಿನಲ್ಲಿ ಬೇಯಿಸಿ.
ಚೆನ್ನಾಗಿ ಬೆಂದ ಕಾಯಿಯ ಸಿಪ್ಪೆ ಹಾಗೂ ಬೀಜ ಬೇರೆ ಮಾಡಿ ಪಲ್ಪನ್ನು ಒಂದು ಮಿಕ್ಸಿ ಜಾರಿಗೆ ಹಾಕಿ. ಸ್ವಲ್ಪ ಪುದಿನ ಸೊಪ್ಪು ಹಾಗೂ ಸಕ್ಕರೆಯನ್ನು ಸೇರಿಸಿ ಬ್ಲೆಂಡ್ ಮಾಡಿ. ಸ್ವಲ್ಪ ಬೇಕಿದ್ದರೆ ಒಂದು ಚಮಚ ನೀರು ಸೇರಿಸಬಹುದು. ಮುಚ್ಚಳ ತೆಗೆದು ಈಗ, ಚಿಟಿಕೆ ಏಲಕ್ಕಿ, ಜೀರಿಗೆ ಪುಡಿ, ಕರಿಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಆಮ್ ಪನ್ನಾ ರೆಡಿಯಾಗಿದ್ದು. ಗಾಳಿಯಾಡದ ಡಬ್ಬದಲ್ಲಿ ಇದನ್ನು ವಾರಪೂರ್ತಿ ಫ್ರಿಡ್ಜ್‌ನಲ್ಲಿ ಶೇಖರಿಸಿಡಬಹುದು. ಬೇಕೆನಿಸಿದಾಗ ಫ್ರಿಡ್ಜ್‌ನಿಂದ ತೆಗೆದು ಒಂದೆರಡು ಚಮಚ ಪನ್ನಾಕ್ಕೆ, ಸ್ವಲ್ಪ ನೀರು, ಐಸ್ಕ್ಯೂಬ್, ಸಕ್ಕರೆ ಸೇರಿಸಿ ಜ್ಯೂಸ್ನಂತೆ ಹೀರಬಹುದು.
೪. ಮ್ಯಾಂಗೋ ಶ್ರೀಖಂಡ: ಇದನ್ನು ಖಂಡಿತವಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾಡಿರುತ್ತಾರಾದರೂ, ಸೀಸನ್ ಮುಗಿವ ಮೊದಲು ಮಾಡಲೇಬೇಕಾದ ಒಂದು ರೆಸಿಪಿ. ಮೊದಲು ಒಂದು ಮಸ್ಲಿನ್ ಬಟ್ಟೆಯಲ್ಲಿ ಮೊಸರು ತೆಗೆದುಕೊಂಡು ಅದನ್ನು ಚೆನ್ನಾಗಿ ಹಿಂಡಿ ನೀರು ತೆಗೆಯಿರಿ.
ಸುಮಾರು ೨ ಗಂಟೆಗಳ ಕಾಲ ಇದನ್ನು ಹಾಗೆಯೇ ಬಿಟ್ಟರೆ ಅಳಿದುಳಿದ ನೀರು ಹೋಗಿ ಗಟ್ಟಿಯಾದ ಮೊಸರು ಸಿಗುತ್ತದೆ. ಈ ಗಟ್ಟಿ ಮೊಸರಿಗೆ ಚಿಟಿಕೆ ಏಲಕ್ಕಿ ಹಾಗೂ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಮಾವಿನ ಹಣ್ಣಿನ ಪಲ್ಪ್ ತೆಗೆದು ಅದನ್ನೊಮ್ಮೆ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ ಈ ಮೊಸರಿನ ಮಿಶ್ರಣಕ್ಕೆ ಸೇರಿಸಿ. ಐದಾರು ಕೇಸರಿ ದಳಗಳನ್ನು ಉದುರಿಸಿ ಫ್ರಿಡ್ಜ್‌ನಲ್ಲಿಡಿ. ಕೆಲ ಗಂಟೆಗಳ ನಂತರ ಹೊರತೆಗೆದು ಸವಿಯಿರಿ. ಮಾವಿನ ಹಣ್ಣಿಗೆ ಅಧಿಕೃತವಾಗಿ ಗುಡ್‌ಬೈ ಹೇಳಿ ಮುಂದಿನ ವರ್ಷದವರೆಗೆ ಜಾತಕಪಕ್ಷಿಯಂತೆ ಕಾಯಿರಿ!
ಇದನ್ನೂ ಓದಿ: mango time: ಮಾವುಪ್ರಿಯರಿಗೆ ಹಣ್ಣು ತಿನ್ನಲು 15 ಕಾರಣಗಳು!