Site icon Vistara News

Vastu Tips: ವಾಸ್ತು ಪ್ರಕಾರ ಮಕ್ಕಳ ರೂಮ್‌ ವಿನ್ಯಾಸಗೊಳಿಸುವುದು ಹೇಗೆ? ಇಲ್ಲಿದೆ ಟಿಪ್ಸ್‌

kids room

kids room

ಬೆಂಗಳೂರು: ಮನೆಯಲ್ಲಿ ಇತರ ಎಲ್ಲ ರೂಮ್‌ಗಳಿಗಿಂತ ಮಕ್ಕಳ ಕೋಣೆ (Kids Room) ವಿಶೇಷವಾಗಿರಬೇಕು. ಇದು ಅವರಿಗೆ ಪಾಸಿಟಿವ್‌ ಎನರ್ಜಿ ಒದಗಿಸುವಂತಿರಬೇಕು. ಜತೆಗೆ ಅಧ್ಯಯನ ನಡೆಸಲು ಅನುಕೂಲವಾಗುವಂತಿರಬೇಕು. ಹೀಗಾಗಿ ವಾಸ್ತು ಶಾಸ್ತ್ರ ಮಕ್ಕಳ ರೂಮ್‌ ವಿಚಾರದಲ್ಲಿ ಕೆಲವೊಂದು ವಿಶೇಷ ಸೂಚನೆ ನೀಡಿದೆ. ರೂಮ್‌ ಹೀಗೆಯೇ ಇರಬೇಕು ಎಂದು ಹೇಳಿದೆ. ಈ ಕುರಿತಾದ ವಿವರ ಇಲ್ಲಿದೆ (Vastu Tips).

ದಿಕ್ಕು

ವಾಸ್ತು ಶಾಸ್ತ್ರದಲ್ಲಿ ದಿಕ್ಕು ಕೂಡ ಪ್ರಧಾನ ಪಾತ್ರ ವಹಿಸುತ್ತದೆ. ಮಕ್ಕಳ ರೂಮ್‌ ಇದಕ್ಕೆ ಹೊರತಾಗಿಲ್ಲ. ಮಕ್ಕಳ ಕೋಣೆ ಪೂರ್ವ, ಈಶಾನ್ಯ ಅಥವಾ ಉತ್ತರಕ್ಕೆ ಮುಖ ಮಾಡುವಂತಿದ್ದರೆ ಉತ್ತಮ. ಅದರಲ್ಲೂ ಪೂರ್ವ ದಿಕ್ಕಿನತ್ತ ಆದ್ಯತೆ ನೀಡುವುದನ್ನು ಮರೆಯಬೇಡಿ. ಯಾಕೆಂದರೆ ಈ ಕಡೆಗೆ ರೂಮ್‌ ಇದ್ದರೆ ಉದಯಿಸುತ್ತಿರುವ ಸೂರ್ಯನಿಗೆ ಮುಖ ಮಾಡಿದಂತಾಗುತ್ತದೆ. ಸೂರ್ಯನನ್ನು ಸಕಾರಾತ್ಮಕ ಶಕ್ತಿಯ ಶಕ್ತಿಕೇಂದ್ರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಸೂರ್ಯನ ಮೊದಲ ಕಿರಣ ಮಕ್ಕಳು ಬೇಗನೆ ಎದ್ದೇಳುವಂತೆ ಪ್ರೋತ್ಸಾಹಿಸುವುದಲ್ಲದೆ ಕೋಣೆಯಲ್ಲಿ ಸಕಾರಾತ್ಮಕತೆಯನ್ನು ತುಂಬುತ್ತದೆ. ಮಕ್ಕಳ ಕೋಣೆಯು ತೆರೆದ ಸ್ಥಳದಲ್ಲಿರುವುದು ಉತ್ತಮ. ಸೂರ್ಯನ ಬೆಳಕು ನೇರ ಕೋಣೆಯ ಒಳಗೆ ಬರುವಂತಿರಬೇಕು.

ಬೆಳಕು

ಮೊದಲೇ ಹೇಳಿದಂತೆ ಮಕ್ಕಳ ಕೋಣೆಗೆ ಸಾಕಷ್ಟು ಪ್ರಮಾಣದಲ್ಲಿ ನೈಸರ್ಗಿಕ ಬೆಳಕು ಬರುವಂತಿರಬೇಕು. ಇದು ವಾಸ್ತು ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಸೂರ್ಯನ ಬೆಳಕು ಕೀಟಾಣುಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ ಮತ್ತು ವಿಷವನ್ನು ಹೊರಹಾಕುತ್ತದೆ. ಆದಾಗ್ಯೂ ನೈಸರ್ಗಿಕ ಬೆಳಕು ಹೇರಳವಾಗಿ ಲಭ್ಯವಿಲ್ಲದಿದ್ದರೆ ಕೃತಕ ಮೂಲಗಳನ್ನು ಬಳಸಿಕೊಂಡು ನಿಮ್ಮ ಮಗುವಿನ ಕೋಣೆ ಚೆನ್ನಾಗಿ ಬೆಳಗುತ್ತಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಮರೆಯಬೇಡಿ. ಅಧ್ಯಯನ ಮಾಡುವಾಗ ಮಗುವಿನ ನೆರಳು ಪುಸ್ತಕದ ಮೇಲೆ ಬೀಳದ ರೀತಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡಿ.

ಪೀಠೋಪಕರಣ

ಮಕ್ಕಳ ಕೋಣೆಯಲ್ಲಿನ ಪೀಠೋಪಕರಣಗಳ ವಿಚಾರದಲ್ಲಿಯೂ ಕೆಲವೊಂದು ಸೂಚನೆ ಪಾಲಿಸುವುದು ಮುಖ್ಯ. ಉದಾಹರಣೆಗೆ ಹಾಸಿಗೆಯನ್ನು ಬಾತ್‌ರೂಮ್‌ನ ಬಾಗಿಲಿನ ನೇರವಾಗಿ ಇಡಬಾರದು. ಸ್ಟಡಿ ಟೇಬಲ್‌ ಎತ್ತರದ ಕಪಾಟುಗಳನ್ನು ಹೊಂದಿರಬಾರದು. ಪ್ರತ್ಯೇಕ ಪುಸ್ತಕದ ಶೆಲ್ಫ್ ಹೊಂದಿರುವುದು ಅಥವಾ ಮುಚ್ಚಿದ ಪುಸ್ತಕದ ಶೆಲ್ಫ್ ಹೊಂದಿರುವುದು ಉತ್ತಮ. ಇದರಿಂದ ಮಕ್ಕಳ ಮೇಲೆ ಒತ್ತಡ ಬೀರುವುದಿಲ್ಲ. ಅಲ್ಲದೆ ಹೈ-ಬ್ಯಾಕ್ ಚೇರ್‌ ಇದ್ದರೆ ಉತ್ತಮ. ಸಕಾರಾತ್ಮಕ ಶಕ್ತಿಯನ್ನು ಉತ್ಪಾದಿಸಲು ಮೇಜಿನ ಎತ್ತರವು ಮಗುವಿನ ಎತ್ತರಕ್ಕೆ ಅನುಗುಣವಾಗಬೇಕು.

ಗೋಡೆಗಳ ಬಣ್ಣ

ಬಣ್ಣಗಳು ನಮ್ಮ ಮನಸ್ಥಿತಿಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಅವು ಖಂಡಿತವಾಗಿಯೂ ತಮ್ಮದೇ ಆದ ಶಕ್ತಿಯನ್ನು ಹೊಂದಿವೆ. ನಿಮ್ಮ ಮಗುವಿನ ಕೋಣೆಗೆ ಹಸಿರು ಬಣ್ಣ ಉತ್ತಮ. ಯಾಕೆಂದರೆ ಅದು ಪ್ರಕೃತಿಯ ಅನುಗ್ರಹದ ಬಣ್ಣ. ಇದು ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತವೂ ಹೌದು. ಇದಲ್ಲದೆ ಹಸಿರು ನೋಡುವುದು ಕಣ್ಣುಗಳ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ. ಹೈಪರ್ ಆಕ್ಟಿವ್ ಮಕ್ಕಳಿಗೆ ನೀಲಿ ಬಣ್ಣವನ್ನು ಶಿಫಾರಸು ಮಾಡಲಾಗಿದೆ. ಈ ಬಣ್ಣದ ಅಂತರ್ಗತ ಶಾಂತಿಯು ಮಕ್ಕಳನ್ನು ಶಾಂತಗೊಳಿಸಲು ಮತ್ತು ಕೆಟ್ಟ ಪ್ರಚೋದನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಂಪು, ಕಿತ್ತಳೆ, ನೇರಳೆ ಮುಂತಾದ ಬಣ್ಣ ಮಕ್ಕಳ ಕೋಣೆಗೆ ಸೂಕ್ತವಲ್ಲ.

ಆಕಾರ

ಬಣ್ಣ, ಬೆಳಕು, ಪೀಠೋಪಕರಣಗಳ ಜತೆಗೆ ಮಕ್ಕಳ ಕೋಣೆಯ ಆಕಾರದತ್ತಲೂ ಗಮನ ಹರಿಸುವುದು ಅಗತ್ಯ. ಈ ರೂಮ್‌ ಪ್ರಕೃತಿಯ ನಾಲ್ಕು ದಿಕ್ಕುಗಳು ಮತ್ತು ಅಂಶಗಳನ್ನು ಪ್ರತಿನಿಧಿಸಲು ಚೌಕಾಕಾರ ಅಥವಾ ಆಯತದ ಆಕಾರದಲ್ಲಿರಬೇಕು. ಕೋಣೆಯಲ್ಲಿ ಶಕ್ತಿಯ ಹರಿವನ್ನು ಮತ್ತಷ್ಟು ಸುಗಮಗೊಳಿಸಲು ಪೀಠೋಪಕರಣಗಳ ನಡುವೆ ಅಂತರ ಕಾಪಾಡಿಕೊಳ್ಳಬೇಕು. ಕೋಣೆಯಲ್ಲಿ ಸಕಾರಾತ್ಮಕ ಶಕ್ತಿಯ ಚಲನೆಗೆ ಅಡ್ಡಿಯಾಗುವ ಯಾವುದೇ ಚೂಪಾದ ಅಂಚಿನ ಪೀಠೋಪಕರಣ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಖಾಲಿ ಸ್ಥಳಗಳು ಮತ್ತು ಮರದ ಪೀಠೋಪಕರಣಗಳು ಹೊಂದುವುದು ಕೂಡ ಮುಖ್ಯ.

ಸರಸ್ವತಿ ವಿಗ್ರಹವಿರಲಿ

ವಾಸ್ತು ನಿಯಮಗಳ ಪ್ರಕಾರ ಕೆಲವು ವಸ್ತುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಞಾನ ಮತ್ತು ಕಲೆಗಳ ದೇವತೆಯಾದ ಸರಸ್ವತಿಯ ವಿಗ್ರಹವು ಅಂತಹ ಅಂಶಗಳ ಪೈಕಿ ಪ್ರಮುಖವಾದುದು. ಏಕಾಗ್ರತೆಯನ್ನು ಸುಧಾರಿಸಲು ವಿಗ್ರಹವನ್ನು ಓದಿನ ಮೇಜಿನ ಮೇಲೆ ಇರಿಸಬೇಕು ಮತ್ತು ಸರಸ್ವತಿ ವಿಗ್ರಹದ ಪಾದಗಳಲ್ಲಿ ದೀಪವನ್ನು ಬೆಳಗಿಸಬೇಕು. ಪ್ರಶಸ್ತಿಗಳು, ಪ್ರಮಾಣಪತ್ರಗಳು, ಟ್ರೋಫಿಗಳು ಮುಂತಾದ ಮಕ್ಕಳ ಸಾಧನೆಗಳನ್ನು ಅವರ ಕೋಣೆಯಲ್ಲಿ ಜೋಡಿಸಿಡಿ. ಇದು ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಗಿಡಗಳು ಬೆಳವಣಿಗೆ ಮತ್ತು ಪುನರುಜ್ಜೀವನವನ್ನು ಪ್ರತಿನಿಧಿಸುವುದರಿಂದ ಒಳಾಂಗಣ ಸಸ್ಯಗಳನ್ನು ಅಧ್ಯಯನ ಮೇಜಿನ ಮೇಲೆ ಇರಿಸುವುದು ಕೂಡ ಸೂಕ್ತ.

ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ನಿಮ್ಮ ಅಡುಗೆ ಕೋಣೆ ಹೀಗಿರಲಿ…

ಇವನ್ನು ಮಾಡಲೇಬೇಡಿ

ಹಳೆಯ ಪುಸ್ತಕಗಳು, ಖಾಲಿ ಪ್ಯಾಕೆಟ್, ಪೆನ್ಸಿಲ್‌ನ ಅವಶೇಷ ಮತ್ತು ಖಾಲಿ ಪೆನ್ನುಗಳಂತಹ ಕಸವನ್ನು ಆಗಾಗ ಎಸೆಯುತ್ತಿರಬೇಕು. ಮಕ್ಕಳ ಆಟಿಕೆಗಳನ್ನು ಸರಿಯಾದ ಸ್ಥಳಗಳಲ್ಲಿ ಇಡಬೇಕು. ಮುರಿದ ಹಳೆಯ ಆಟಿಕೆಗಳನ್ನು ರಾಶಿ ಹಾಕುವ ಬದಲು ಅವುಗಳನ್ನು ಎಸೆಯುವುದು ಸೂಕ್ತ. ಮಕ್ಕಳ ರೂಮ್‌ನಲ್ಲಿ ಗ್ಯಾಜೆಟ್ ಇಡದಿರುವುದು ಉತ್ತಮ. ಕಂಪ್ಯೂಟರ್ ಅನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಟಿವಿಯನ್ನು ಯಾವ ಕಾರಣಕ್ಕೂ ಮಕ್ಕಳ ಕೋಣೆಯಲ್ಲಿ ಇಡಬೇಡಿ. ಅಲ್ಲದೆ ಮಕ್ಕಳು ತಮ್ಮ ಹಾಸಿಗೆಯ ಮೇಲೆ ಕುಳಿತು ತಿಂಡಿ ಸೇವಿಸದಂತೆ, ಊಟ ಮಾಡದಂತೆ ನೋಡಿಕೊಳ್ಳಿ. ಹಾಸಿಗೆ ಮೇಲೆ ಕುಳಿತು ಆಹಾರ ಸೇವಿಸುವುದು ದುಃಸ್ವಪ್ನಗಳಿಗೆ ಕಾರಣವಾಗಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version