Site icon Vistara News

Vastu Tips: ಮನೆಯ ವಾಸ್ತು ದೋಷಗಳನ್ನು ಹೀಗೆ ಹೋಗಲಾಡಿಸಿ

home

home

ಬೆಂಗಳೂರು: ನಮ್ಮ ಬದುಕಿನ ಮೇಲೆ ವಾಸ್ತು ಬಹಳ ಗಾಢವಾದ ಪರಿಣಾಮ ಬೀರುತ್ತದೆ. ಅದರಲ್ಲೂ ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸಿದರೆ ಕೆಲವೊಂದು ಸಮಸ್ಯೆಗಳಿಂದ ಮುಕ್ತರಾಗಿ, ನೆಮ್ಮದಿಯ ಜೀವನವನ್ನು ಕಂಡುಕೊಳ್ಳಬಹುದು. ಆದರೆ ಕೆಲವೊಮ್ಮೆ ನಮಗೆ ತಿಳಿದೋ ತಿಳಿಯದೆಯೋ ವಾಸ್ತು ಶಾಸ್ತ್ರದ ಕೆಲವೊಂದು ನಿಯಮವನ್ನು ಮುರಿದಿರುತ್ತೇವೆ. ಇದರ ಪರಿಣಾಮವಾಗಿ ಕೆಲವೊಂದು ಸಮಸ್ಯೆ ನಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತದೆ. ಇಂದಿನ ವಾಸ್ತು ಟಿಪ್ಸ್‌(Vastu Tips)ನಲ್ಲಿ ಇಂತಹ ವಾಸ್ತು ದೋಷಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಎನ್ನುವುದನ್ನು ನೋಡೋಣ.

ಉಪ್ಪನ್ನು ಹೀಗೆ ಬಳಸಿ

ವಾಸ್ತು ಶಾಸ್ತ್ರದಲ್ಲಿ ಸಮುದ್ರದ ಉಪ್ಪಿಗೆ ಪ್ರಮುಖ ಸ್ಥಾನವಿದೆ. ಹೀಗಾಗಿ ಇದನ್ನು ವಾಸ್ತು ದೋಷ ನಿವಾರಣೆಗೆ ಬಳಸಲಾಗುತ್ತದೆ. ಕಲ್ಲುಪ್ಪನ್ನು ಒಂದು ತಟ್ಟೆಯಲ್ಲಿ ಹಾಕಿ ಮನೆಯೊಳಗೆ ಇಟ್ಟು ಬಿಡಿ. ದಿನ ಬಿಟ್ಟು ದಿನ ಈ ಉಪ್ಪನ್ನು ಬದಲಾಯಿಸುವುದನ್ನು ಮರೆಯಬೇಡಿ. ಇದು ಮನೆಯಿಂದ ಎಲ್ಲ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದರ ಜತೆಗೆ ನೀವು ನೆಲವನ್ನು ಸ್ವಚ್ಛಗೊಳಿಸಲು ಬಳಸುವ ನೀರಿನಲ್ಲಿ ಒಂದು ಚಿಟಿಕೆ ಸಮುದ್ರದ ಉಪ್ಪನ್ನು ಸಹ ಬೆರೆಸಬಹುದು.

ಕನ್ನಡಿ ಹೀಗಿರಲಿ

ಸರಿಯಾದ ಸ್ಥಳದಲ್ಲಿ ಕನ್ನಡಿಗಳನ್ನು ಇರಿಸುವುದರಿಂದಲೂ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಗಮನಿಸಿ ಕನ್ನಡಿಯನ್ನು ಎಂದಿಗೂ ಮುಖ್ಯ ಬಾಗಿಲಿನ ಎದುರು ಇಡಬೇಡಿ. ಮಾತ್ರವಲ್ಲ ಮಲಗುವ ಕೋಣೆಯಲ್ಲಿರುವ ಕನ್ನಡಿ ಹಾಸಿಗೆಯನ್ನು ಪ್ರತಿಬಿಂಬಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ ಕನ್ನಡಿಯನ್ನು ಉತ್ತರ ಅಥವಾ ಪೂರ್ವ ಗೋಡೆಗಳ ಮೇಲೆ ಅಳವಡಿಸಿ. ಎಲ್ಲ ಕನ್ನಡಿಗಳು ನೆಲದಿಂದ ಕನಿಷ್ಠ 4ರಿಂದ 5 ಅಡಿ ಎತ್ತರದಲ್ಲಿರುವುದು ಮುಖ್ಯ.

ಕರ್ಪೂರದಿಂದ ದೋಷ ನಿವಾರಣೆ

ದೇವರ ಪೂಜೆಗೆ ಬಳಸುವ ಕರ್ಪೂರವನ್ನು ಮನೆಯ ವಾಸ್ತು ದೋಷ ನಿವಾರಣೆಗೂ ಉಪಯೋಗಿಸಬಹುದು. ನೀವು ಅಂದುಕೊಂಡ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದಾದರೆ ಅದು ಖಂಡಿತವಾಗಿಯೂ ವಾಸ್ತು ದೋಷದ ಪರಿಣಾಮವೇ. ಇದಕ್ಕಾಗಿ ನೀವು ಮನೆಯ ಒಳಗೆ ತೆರೆದ ಸ್ಥಳದಲ್ಲಿ ಎರಡು ಕರ್ಪೂರದ ಹರಳುಗಳನ್ನು ಇರಿಸಿ ಮತ್ತು ಅವು ಕುಗ್ಗಿದಾಗ ಬದಲಿಸಿ.

ಪಿರಮಿಡ್‌ ತಂತ್ರ

ವಾಸ್ತು ದೋಷ ಪರಿಹಾರವಾಗಿ ಪಿರಮಿಡ್ ಯಂತ್ರದ ಬಳಕೆ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿದೆ. ಕಲ್ಲು, ಲೋಹ, ಗಾಜು ಅಥವಾ ಕಾರ್ಡ್ ಬೋರ್ಡ್ ಬಳಸಿ ತಯಾರಿಸಲಾಗುವ ಸಣ್ಣ ಪಿರಮಿಡ್ ಆಕಾರವನ್ನು ಮನೆಯಲ್ಲಿ ಇರಿಸಬಹುದು. ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಪಡೆಯಲು ಈ ಪಿರಮಿಡ್ ಯಂತ್ರವನ್ನು ಮನೆಯ ಪ್ರವೇಶದ್ವಾರದಲ್ಲಿ ಇರಿಸಬೇಕು.

ವಿಂಡ್ ಚೈಮ್ಸ್ ಅಲಂಕಾರಕ್ಕಾಗಿ ಮಾತ್ರವಲ್ಲ…

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ವಿಂಡ್ ಚೈಮ್‌ಗಳನ್ನು ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಇದನ್ನು ಮನೆಯ ಸೌಂದರ್ಯ ಹೆಚ್ಚಿಸಲು ಬಳಸುವ ಜತೆಗೆ ವಾಸ್ತು ದೋಷದಿಂದ ಮುಕ್ತರಾಗಲೂ ಉಪಯೋಗಿಸಬಹುದಾಗಿದೆ. ನೀವು 6 ಅಥವಾ 8 ಟೊಳ್ಳಾದ ರಾಡ್‌ಗಳನ್ನು ಹೊಂದಿರುವ ವಿಂಡ್ ಚೈಮ್‌ಗಳನ್ನು ತೂಗು ಹಾಕಿದರೆ ಮನೆಯೊಳಗೆ ಧನಾತ್ಮಕ ಶಕ್ತ ಹೆಚ್ಚುತ್ತದೆ.

ಹಾರ್ಸ್‌ ಶೂ ಪ್ರಯೋಜನ ಗೊತ್ತೆ?

ವಾಸ್ತು ಶಾಸ್ತ್ರದ ಪ್ರಕಾರ ಹಾರ್ಸ್‌ ಶೂ ಅನ್ನು ಮನೆಯೊಳಗೆ ಅದೃಷ್ಟವನ್ನು ತರಬಲ್ಲ ಅತ್ಯಂತ ಪ್ರಮುಖ ವಸ್ತು ಎಂದು ಪರಿಗಣಿಸಲಾಗುತ್ತದೆ. ಇದು ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ. ನೀವು ಅದರ ತುದಿಗಳನ್ನು ಮೇಲ್ಮುವಾಗಿ ನಿಲ್ಲುವಂತೆ ತೂಗು ಹಾಕಬೇಕು. ಇದರಿಂದ ಹಾದುಹೋಗುವ ಎಲ್ಲ ಉತ್ತಮ ಶಕ್ತಿಗಳನ್ನು ಆಕರ್ಷಿಸಬಹುದಾಗಿದೆ. ಮುಖ್ಯ ದ್ವಾರವು ಇದಕ್ಕೆ ಸೂಕ್ತವಾದ ಸ್ಥಳ. ಹಾರ್ಸ್‌ ಶೂ ಅನ್ನು ತಲೆಕೆಳಗಾಗಿ ನೇತು ಹಾಕಿದರೆ ಅದು ಮನೆಯಿಂದ ಅದೃಷ್ಟವನ್ನು ಹೊರಹಾಕುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಮನೆಯ ಬಣ್ಣ ಗಮನಿಸಿ

ಗೋಡೆಯ ಬಣ್ಣ ಯಾವಾಗಲೂ ಮನೆಯ ಮೇಲೆ, ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಕೆಲವು ಬಣ್ಣಗಳು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತವೆ. ಗುಲಾಬಿ, ನೀಲಿ ಮತ್ತು ಹಸುರು ಬಣ್ಣಗಳು ಲಿವಿಂಗ್ ಮತ್ತು ಮಾಸ್ಟರ್ ಬೆಡ್ ರೂಮ್‌ಗೆ ಸೂಕ್ತವಾಗಿದ್ದರೆ, ಹಳದಿ ಮತ್ತು ಕಿತ್ತಳೆ ಬಣ್ಣಗಳು ಮಕ್ಕಳ ಕೋಣೆಗಳಿಗೆ ಉತ್ತಮ ಆಯ್ಕೆ. ಹೀಗಾಗಿ ಮನೆಗೆ ಪೇಂಟ್ ಬಳಿಯುವ ಮುನ್ನ ಈ ಅಂಶಗಳತ್ತ ಗಮನ ಹರಿಸಿ.

ಕುಟುಂಬಸ್ಥರ ಫೋಟೊದ ಸ್ಥಾನ ಎಲ್ಲಿ?

ವಾಸ್ತು ಶಾಸ್ತ್ರದ ಪ್ರಕಾರ ಲಿವಿಂಗ್ ರೂಮ್‌ನಲ್ಲಿ ನಿಮ್ಮ ಕುಟುಂಬಸ್ಥರ ಫೋಟೋಗಳನ್ನು ಅಳವಡಿಸುವುದು ಬಹಳ ಮುಖ್ಯ. ನಿಮ್ಮ ನೆಚ್ಚಿನ ಕುಟುಂಬ ಫೋಟೊ, ಕೆಲವು ಟ್ರೆಂಡಿ ಫ್ರೇಮ್‌ಗಳೊಂದಿಗೆ ಲಿವಿಂಗ್‌ ರೂಮ್‌ ಅನ್ನು ಅಲಂಕರಿಸಿ.

ಅಕ್ವೇರಿಯಮ್‌ ಎಲ್ಲಿರಬೇಕು?

ವಾಸ್ತು ಪ್ರಕಾರ ಮೀನು ಮತ್ತು ಅಕ್ವೇರಿಯಂಗಳು ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ. ಹೀಗಾಗಿ ವಾಸ್ತು ದೋಷದ ಲಕ್ಷಣ ಕಂಡು ಬಂದರೆ ಮನೆಗೆ ಅಕ್ವೇರಿಯಂ ತನ್ನಿ. ಇದನ್ನು ನಿಮ್ಮ ಲಿವಿಂಗ್ ರೂಮ್‌ನ ಈಶಾನ್ಯ ಭಾಗದಲ್ಲಿ ಇರಿಸಲು ಮರೆಯದಿರಿ.

ಇದನ್ನೂ ಓದಿ: Vastu Tips: ಮನೆಯ ಪ್ರವೇಶದ್ವಾರದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

Exit mobile version