ಬೆಂಗಳೂರು: ಬಾತ್‌ರೂಮ್-ಮನೆಯ ಬಹು ಮುಖ್ಯ ಭಾಗಗಳಲ್ಲಿ ಒಂದು. ದಿನವಿಡೀ ಹೊರಗಿದ್ದು ದಣಿದು ಬರುವವರು ಬಾತ್‌ರೂಮ್‌ಗೆ ತೆರಳಿ ಷವರ್ ಕೆಳಗೆ ನಿಂತರೆ ಅಥವಾ ಮೈಗೆ ನೀರು ಸುರಿದುಕೊಂಡರೆ ಸಾಕು ನೆಮ್ಮದಿಯ ಅನುಭವವಾಗುತ್ತದೆ. ಅದುವರೆಗಿನ ಸುಸ್ತು ಮೈಗೆ ಬಿದ್ದ ನೀರಿನಂತೆ ಹೊರಟು ಹೋಗುತ್ತದೆ. ಹೀಗಾಗಿಯೇ ನಮ್ಮ ಹಿರಿಯರು ಮನೆಯ ಜತೆಗೆ ಬಾತ್‌ರೂಮ್‌ಗೂ ಪ್ರಧಾನ್ಯತೆ ನೀಡಿದ್ದರು. ಇಂದಿನ ವಾಸ್ತು ಟಿಪ್ಸ್ (Vastu Tips)ನಲ್ಲಿ ನೀವು ಬಾತ್‌ರೂಮ್ ವಿಚಾರದಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ವಿವರಿಸುತ್ತೇವೆ.
ನೆಮ್ಮದಿಯ ಭಾವ ಮೂಡಿಸುವ ಬಾತ್‌ರೂಮ್ ವಿಚಾರದಲ್ಲಿ ನಾವು ಸಾಕಷ್ಟು ಮುನ್ನೆಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ. ಇದು ನಕಾರಾತ್ಮಕತೆಯನ್ನೂ ಸೃಷ್ಟಿಸುವುದರಿಂದ ವಾಸ್ತು ಪ್ರಕಾರ ಕೆಲವೊಂದು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಶೌಚಾಲಯ ಮತ್ತು ಸ್ನಾನಗೃಹಗಳ ವಿಚಾರದಲ್ಲಿ ನಾವು ಇಡುವ ಕೆಲವೊಂದು ತಪ್ಪು ಹೆಜ್ಜೆಗಳು ಆತಂಕ, ಅಪಘಾತ, ಆರೋಗ್ಯ ಸಮಸ್ಯೆ ತಂದಿಡಬಹುದು. ಅಲ್ಲದೆ ಸಂಪತ್ತು ಮತ್ತು ಅಭಿವೃದ್ಧಿಗೆ ಅಡೆ ತಡೆ ಎದುರಾಗುವ ಸಾಧ್ಯತೆಯೂ ಇದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ದಿಕ್ಕು: ಸ್ನಾನಗೃಹವು ಮನೆಯ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ದಕ್ಷಿಣ, ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡುವುದು ವಾಸ್ತು ಪ್ರಕಾರ ಸರಿಯಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಲ್ಲದೆ ವಾಸ್ತು ಪ್ರಕಾರ ಬಾತ್‌ರೂಮ್ ಎಂದಿಗೂ ಅಡುಗೆಮನೆಯ ಎದುರು ಅಥವಾ ಅದರ ಪಕ್ಕದಲ್ಲಿರಬಾರದು. ಟಾಯ್ಲೆಟ್ ಸೀಟ್ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು.
ಬಕೆಟ್: ಬಕೆಟ್ ಅಥವಾ ಟಬ್ ಯಾವಾಗಲೂ ನೀರಿನಿಂದ ತುಂಬಿರಬೇಕು. ಒಂದು ವೇಳೆ ಬಕೆಟ್ ಖಾಲಿಯಾಗಿದ್ದರೆ ಅದನ್ನು ಯಾವಾಗಲೂ ತಲೆಕೆಳಗಾಗಿ ಇರಿಸಿ. ಇದು ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬಣ್ಣ: ಬಚ್ಚಲು ಮನೆಯಲ್ಲಿ ನೀಲಿ ಬಣ್ಣಕ್ಕೆ ಮಹತ್ವವಿದೆ. ನೀಲಿ ಬಣ್ಣವು ಸಂತೋಷವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಬಾತ್‌ರೂಮ್‌ನಲ್ಲಿ ನೀಲಿ ಬಣ್ಣದ ಬಕೆಟ್ ಮತ್ತು ಮಗ್ ಇಡುವುದು ಉತ್ತಮ. ಗೋಡೆಗಳಿಗೆ ತಿಳಿ ಬಣ್ಣವನ್ನೇ ಬಳಿಯಿರಿ.
ಕನ್ನಡಿ: ಬಾತ್‌ರೂಮ್‌ನ ಬಾಗಿಲಿನ ಮುಂದೆ ಕನ್ನಡಿ ಇರಿಸಬೇಡಿ. ಇಲ್ಲಿ ಕನ್ನಡಿ ಇರಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತದೆ. ಸ್ನಾನಗೃಹದ ಒಳಗೆ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿಯನ್ನು ಇರಿಸಿ ಮತ್ತು ಅದು ಚೌಕಾಕಾರ ಅಥವಾ ಆಯತಾಕಾರದಲ್ಲೇ ಇರಬೇಕು. ವಾಸ್ತು ಪ್ರಕಾರ ವೃತ್ತಾಕಾರದ ಕನ್ನಡಿ ಸೂಕ್ತವಲ್ಲ.
ಬಾಗಿಲು: ಬಚ್ಚಲು ಮನೆಯ ಬಾಗಿಲುಗಳನ್ನು ಯಾವಾಗಲೂ ಮುಚ್ಚಿರಬೇಕು. ತೆರೆದಿಟ್ಟರೆ ಅದು ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಮತ್ತು ಅದು ನಿಮ್ಮ ವೃತ್ತಿ ಜೀವನಕ್ಕೆ ಅಡೆತಡೆಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಜತೆಗೆ ಬಾತ್‌ರೂಮ್‌ಗೆ ಆದಷ್ಟು ಮರದ ಬಾಗಿಲನ್ನೇ ಬಳಸಿ.
ನಳ್ಳಿ: ಸ್ನಾನಗೃಹದ ನಳ್ಳಿ ಒಡೆದಿರಬಾರದು. ನಳ್ಳಿ ಸೋರಿಕೆಯಾಗುತ್ತಿದ್ದರೆ ಅದು ಹಣದ ನಷ್ಟಕ್ಕೆ ಕಾರಣವಾಗಬಹುದು. ಸ್ನಾನಗೃಹವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಆರೋಗ್ಯವೂ ಉತ್ತಮವಾಗಿರಿಸುತ್ತದೆ.
ಎಲೆಕ್ಟ್ರಿಕ್ ಉಪಕರಣ: ಸ್ವಿಚ್ ಬೋರ್ಡ್, ಗೀಸರ್, ಫ್ಯಾನ್ ಮುಂತಾದ ಎಲೆಕ್ಟ್ರಿಕ್ ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿ ಅಳವಡಿಸಬೇಕು.
ಕಿಟಕಿ: ಬಾತ್‌ರೂಮ್‌ನಲ್ಲಿ ಕಿಟಕಿ ಇರಿಸುವುದು ಮುಖ್ಯ. ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಕಿಟಕಿಯು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಉತ್ತಮ.
ದೋಷಕ್ಕೇನು ಪರಿಹಾರ?
ವಾಸ್ತು ಪ್ರಕಾರ ಬೆಡ್‌ರೂಮ್ ಹೊಂದಿಕೊಂಡೇ ಇರುವ ಅಂದರೆ ಅಟ್ಯಾಚ್ ಬಾತ್‌ರೂಮ್ ಉತ್ತಮವಲ್ಲ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಪರಿಹಾರವೂ ಇದೆ. ಗ್ಲಾಸ್ ಬಾಟಲಿಯಲ್ಲಿ ಸೈಂದಾ ಲವಣವನ್ನು ತುಂಬಬೇಕು. ಇದನ್ನು ಬಾತ್‌ರೂಮ್ ಒಳಗಡೆ ಇಡಬೇಕು. ಒಂದು ವಾರದವರೆಗೂ ಆ ಉಪ್ಪು ಹಾಗೇ ಇರುವಂತೆ ನೋಡಿಕೊಳ್ಳಬೇಕು. ಒಂದು ವಾರದ ನಂತರ ಆ ಬಾಟಲಿಯಲ್ಲಿರುವ ಉಪ್ಪನ್ನು ಚೆಲ್ಲಬೇಕು. ಮತ್ತೆ ಅದೇ ರೀತಿ ಬಾಟಲಿಯಲ್ಲಿ ಸೈಂದಾ ಉಪ್ಪನ್ನು ತುಂಬಿಡಬೇಕು. ಇದರಿಂದ ಬಾತ್‌ರೂಮ್‌ನಿಂದ ಉಂಟಾಗುವ ವಾಸ್ತು ದೋಷ ನಿವಾರಣೆಯಾಗುತ್ತದೆ.
ಇದನ್ನೂ ಓದಿ: Vastu Tips: ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದೀರಾ? ಈ ವಾಸ್ತು ಸಲಹೆ ಫಾಲೋ ಮಾಡಿ