Site icon Vistara News

Vastu Tips: ಅದೃಷ್ಟದ ಬಾಗಿಲು ತೆರೆಯಲು ಈ ಟಿಪ್ಸ್‌ ಫಾಲೋ ಮಾಡುವುದನ್ನು ಮರೆಯಬೇಡಿ

vastu home new 111

vastu home new 111

ಬೆಂಗಳೂರು: ನಮ್ಮ ಜೀವನದ ಮೇಲೆ ಸುತ್ತಮುತ್ತಲಿನ ಪರಿಸರ ಪ್ರಭಾವ ಬೀರುತ್ತದೆ. ಹೀಗಾಗಿ ನಾವು ಹೆಚ್ಚಿನ ಸಮಯ ಕಳೆಯುವ ಮನೆಯಲ್ಲಿನ ವಾತಾವರಣ ನೆಮ್ಮದಿ ಒದಗಿಸುವಂತಿರಬೇಕು. ಮನೆಯ ಮೇಲೆ ಹೆಚ್ಚು ಪ್ರಭಾವ ಬೀರುವ ಅಂಶಗಳ ಪೈಕಿ ವಾಸ್ತು ಕೂಡ ಒಂದು. ವಾಸ್ತುಶಾಸ್ತ್ರ ಸುಮಾರು 5,000 ವರ್ಷಗಳಷ್ಟು ಹಳೆಯದಾದ ಇತಿಹಾಸ ಹೊಂದಿದೆ. ʼವಾಸ್ತುʼ ಎಂಬ ಪದವು ಮನೆಯ ಸ್ಥಳ ಅಥವಾ ಅಡಿಪಾಯವನ್ನು ಸೂಚಿಸಿದರೆ, ʼಶಾಸ್ತ್ರʼ ಎಂದರೆ ವಿಜ್ಞಾನ. ಮನೆಗೆ ಅದೃಷ್ಟ ತರಬಲ್ಲ ಅಂಶಗಳ ವಿವರ ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿದೆ.

ಮನೆ ಯಾವ ಕಡೆ ಮುಖ ಮಾಡಬೇಕು?

ಮನೆಗಳು ಉತ್ತರ, ಪೂರ್ವ ಅಥವಾ ಈಶಾನ್ಯಕ್ಕೆ ಮುಖ ಮಾಡಬೇಕು ಎಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ. ನಾವು ಹಿಂದಿನಿಂದಲೂ ಸೂರ್ಯನ ದಿಕ್ಕನ್ನೇ ಅನುಸರಿಸುತ್ತೇವೆ. ಇದು ನಮ್ಮ ಜೀವನದಲ್ಲಿ ಬೆಳಕು ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

ಅಡುಗೆ ಕೋಣೆ ಹೇಗಿರಬೇಕು?

ಒಲೆ ಮತ್ತು ಸಿಂಕ್ ಎಂದಿಗೂ ಪರಸ್ಪರ ಪಕ್ಕದಲ್ಲಿರಬಾರದು. ಬೆಂಕಿ ಮತ್ತು ಹರಿಯುವ ನೀರು ವಿರುದ್ಧ ಗುಣಗಳನ್ನು ಹೊಂದಿವೆ. ಹೀಗಾಗಿ ಅವುಗಳನ್ನು ಎಂದಿಗೂ ಒಟ್ಟಿಗೆ ಇರಿಸಬೇಡಿ. ಅಲ್ಲದೆ ಅಡುಗೆಮನೆಗೆ ನೀಲಿ ಬಣ್ಣ ಕೊಡಬೇಡಿ. ಅದರ ಬದಲು ವಾಸ್ತು-ಅನುಮೋದಿತ ಕಿತ್ತಳೆ, ಬಿಳಿ, ಹಸುರು, ಕೆಂಪು, ಹಳದಿ, ಪಿಂಕ್‌, ಬ್ರೌನ್‌, ಪೀಚ್‌ ಬಣ್ಣಗಳನ್ನು ಬಳಿಯಬಹುದು.

ದೇವರ ಕೋಣೆ ಹೀಗಿರಲಿ

ನಿಮ್ಮ ದೇವರ ಕೋಣೆ ಮನೆಯ ಈಶಾನ್ಯ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಲಿ. ಮನೆಯ ದಿಕ್ಕಿನಂತೆಯೇ ಈ ದಿಕ್ಕನ್ನು ಆಯ್ಕೆ ಮಾಡುವ ಹಿಂದಿನ ಕಾರಣವೂ ಸೂರ್ಯನ ಶಕ್ತಿಯನ್ನು ಸಲೀಸಾಗಿ ಬಳಸಿಕೊಳ್ಳುವುದರಲ್ಲಿದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಬೆಡ್‌ರೂಮ್‌ ಗೋಡೆ ಬಣ್ಣ

ದಿನವಿಡೀ ಕೆಲಸ ಮಾಡಿ ಸುಸ್ತಾದ ನಿಮಗೆ ವಿಶ್ರಾಂತಿ ಪಡೆಯಲಿರುವ ಉತ್ತಮ ಸ್ಥಳ ಬೆಡ್‌ ರೂಮ್‌. ವಾಸ್ತು ಶಾಸ್ತ್ರದ ಪ್ರಕಾರ ನೀವು ಬೆಡ್‌ ರೂಮ್‌ಗೆ ಮೃದುವಾದ, ಲೈಟ್‌ ಬಣ್ಣದ ಪೈಂಟ್‌ ಬಳಿಯಬೇಕು. ಯುದ್ಧ ಅಥವಾ ಕಲಹದ ಚಿತ್ರಗಳನ್ನು ಕಟ್ಟುನಿಟ್ಟಾಗಿ ಇಡಲೇಬಾರದು. ಇದು ನಿಮ್ಮ ಸುಪ್ತಪ್ರಜ್ಞೆಯಲ್ಲಿ ಅಹಿತಕರ ಭಾವನೆಗಳು ಉಳಿಯಲು ಕಾರಣವಾಗಬಹುದು ಎನ್ನಲಾಗುತ್ತಿದೆ.

ಬಾಲ್ಕನಿ ಮುಖ ಯಾವ ಕಡೆಗೆ ಇರಬೇಕು?

ನಿಮ್ಮ ಮನೆಯ ಬಾಲ್ಕನಿ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಮುಖ ಮಾಡಬೇಕೆಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಅಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೂರ್ಯನ ಬೆಳಕನ್ನು ಪಡೆಯಬಹುದು ಎನ್ನುವುದು ಇದಕ್ಕಿರುವ ಮುಖ್ಯ ಕಾರಣ.

ಬಾಗಿಲು, ಕಿಟಕಿಯನ್ನೂ ಕಡೆಗಣಿಸದಿರಿ

ವಾಸ್ತು ಶಾಸ್ತ್ರ ಮನೆಯೊಳಗೆ ಶಕ್ತಿಯನ್ನು ಪುನರುತ್ಪಾದಿಸುವ ಮತ್ತು ಉಳಿಸಿಕೊಳ್ಳುವತ್ತ ಗಮನ ಹರಿಸುತ್ತದೆ. ಆದ್ದರಿಂದ ನೀವು ಬಾಗಿಲು ಮತ್ತು ಕಿಟಕಿಗಳ ಸ್ಥಾನ ಮತ್ತು ಗಾತ್ರವನ್ನು ಸಹ ಪರಿಗಣಿಸಬೇಕು. ಉದಾಹರಣೆಗೆ ಎಂದಿಗೂ ಮುಖ್ಯ ಬಾಗಿಲಿಗೆ ಎದುರಾಗಿ ಕನ್ನಡಿಯನ್ನು ಇರಿಸಬಾರದು. ಅದು ಬಾಗಿಲಿನ ಮೂಲಕ ಪ್ರವೇಶಿಸುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎನ್ನುವುದು ಇದಕ್ಕೆ ಕಾರಣ.

ಇದನ್ನೂ ಓದಿ: Vastu Tips: ಸಂಪತ್ತು, ಆರೋಗ್ಯ ವೃದ್ಧಿಗೆ ಇಲ್ಲಿದೆ ಸರಳ ಮಾರ್ಗ

ಲೈಟ್‌ಗಳು

ಪ್ರತಿ ಕೋಣೆಯಲ್ಲಿನ ಲೈಟಿನ ಪ್ರಖರತೆ ಒಂದೇ ರೀತಿ ಇರಬಾರದು. ಅದು ಬದಲಾಗಬೇಕು ಎಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ. ಉದಾಹರಣೆಗೆ ಲಿವಿಂಗ್ ರೂಮ್ ಒಟ್ಟಾರೆಯಾಗಿ ಪ್ರಕಾಶಮಾನವಾಗಿರಬೇಕು. ಆದರೆ ಮಲಗುವ ಕೋಣೆಯ ಲೈಟ್‌ಗಳು ಮಂದವಾಗಿರಬೇಕು. ಜತೆಗೆ ಮುಖ್ಯ ಬಾಗಿಲಿನ ಪರಿಸರ ಚೆನ್ನಾಗಿ ಬೆಳಗಬೇಕು. ಹೀಗೆ ಒಂದೊಂದು ಕಡೆ ಬೇರೆ ಬೇರೆ ರೀತಿಯ ಲೈಟ್‌ಗಳನ್ನು ಅಳವಡಿಸಿ.

ಕನ್ನಡಿ

ವಾಸ್ತು ಶಾಸ್ತ್ರದಲ್ಲಿ ಕನ್ನಡಿಗೆ ಬಹಳ ಪ್ರಾಮುಖ್ಯತೆ ಇದೆ. ಕನ್ನಡಿ ಧನಾತ್ಮಕ ಶಕ್ತಿಯನ್ನು ಪ್ರತಿಫಲಿಸಿದರೆ ಅದು ದುಪ್ಪಟ್ಟಾಗುತ್ತದೆ. ಅದೇ ರೀತಿ ನಕರಾತ್ಮಕ ಶಕ್ತಿಯೂ. ಹೀಗಾಗಿ ಕನ್ನಡಿಯನ್ನು ಸೂಕ್ತವಾದ ಜಾಗದಲ್ಲಿ ಇರಿಸಿ ನಿಮ್ಮ ಅದೃಷ್ಟವನ್ನು ಇಮ್ಮಡಿಗೊಳಿಸಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version