ಬೆಂಗಳೂರು: ನೆಮ್ಮದಿಯ ಜೀವನದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಪಟ್ಟಿ ಮಾಡುತ್ತ ಹೋದರೆ ಅದರಲ್ಲಿ ವಾಸ್ತು ಶಾಸ್ತ್ರ ಮುಖ್ಯವಾಗುತ್ತದೆ. ಪ್ರತಿ ಕೋಣೆ, ಮೂಲೆ ಹೀಗೆಯೇ ಇರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ವಿವರಿಸುತ್ತದೆ. ಸೂಕ್ತ ರೀತಿಯಲ್ಲಿ ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಿದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು. ಅದರಲ್ಲೂ ಮನೆಯ ಮುಖ್ಯ ಭಾಗ ಎಂದೇ ಪರಿಗಣಿಸಲ್ಪಡುವ ಅಡುಗೆ ಕೋಣೆಯನ್ನು ವ್ಯವಸ್ಥಿತವಾಗಿ ಜೋಡಿಸುವ ಮೂಲಕ ಅನೇಕ ಸಮಸ್ಯೆಗಳಿಂದ ಪಾರಾಗಬಹುದು (Vastu Tips).
ಅಡುಗೆ ಕೋಣೆಯ ದಿಕ್ಕು
ನಿಮ್ಮ ಮನೆಯ ಆಗ್ನೇಯ ಮೂಲೆಯಲ್ಲಿ ಅಡುಗೆ ಕೋಣೆ ಇರಲಿ. ಅಗ್ನಿಗೆ ಸಂಬಂಧಿಸಿದ ಆಗ್ನೇಯ ದಿಕ್ಕು ಅಡುಗೆ ಕೋಣೆಗೆ ಬಹಳ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಇಲ್ಲಿ ಕಿಚನ್ ನಿರ್ಮಿಸಲು ಅನುಕೂಲ ಇಲ್ಲ ಎಂದಾದರೆ ಚಿಂತಿಸಬೇಡಿ. ವಾಯುವ್ಯ ದಿಕ್ಕನ್ನೂ ಅಡುಗೆ ಕೋಣೆಗಾಗಿ ಪರಿಗಣಿಸಬಹುದು ಎಂದು ತಜ್ಞರು ಪರಿಹಾರ ಸೂಚಿಸುತ್ತಾರೆ.
ಬಾಗಿಲು ಈ ದಿಕ್ಕಿಗಿರಲಿ
ಇನ್ನು ಅಡುಗೆ ಕೋಣೆಯ ಬಾಗಿಲು ಯಾವ ಕಡೆಗೆ ಮುಖ ಮಾಡಿರಬೇಕು ಎನ್ನುವದರ ಬಗ್ಗೆಯೂ ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಅಡುಗೆಮನೆಯ ಪ್ರವೇಶ ದ್ವಾರ ಅಥವಾ ಬಾಗಿಲು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಯಾವುದೇ ಮೂಲೆಯಲ್ಲಿ ಬಾಗಿಲು ನಿಲ್ಲುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.
ಸ್ಟೌ ಎಲ್ಲಿಡಬೇಕು?
ಕಿಚನ್ ಸಿಂಕ್ ಮತ್ತು ಒಲೆಗಳು ಇರಿಸುವ ದಿಕ್ಕು ಕೂಡ ಪ್ರಧಾನವಾಗುತ್ತದೆ. ಅಡುಗೆಮನೆಯ ವಿನ್ಯಾಸವನ್ನು ನಿರ್ಧರಿಸಿದ ನಂತರ ಒಲೆ, ಸ್ಟೌ ಸ್ಥಾನವನ್ನು ಆಯ್ಕೆ ಮಾಡುವುದು ಮುಖ್ಯ. ಮೊದಲೇ ಹೇಳಿದಂತೆ ಬೆಂಕಿಯ ಅಂಶವು ಆಗ್ನೇಯ ದಿಕ್ಕನ್ನು ನಿಯಂತ್ರಿಸುತ್ತದೆ. ಆದ್ದರಿಂದ ಒಲೆ ಯಾವಾಗಲೂ ಆ ದಿಕ್ಕಿನಲ್ಲೇ ಇರಲಿ.
ಸಿಂಕ್ ಇರಬೇಕಾದ ದಿಕ್ಕು
ಸಿಂಕ್‌ಗಳು ಮತ್ತು ನಲ್ಲಿಗಳು ಹರಿಯುವ ನೀರನ್ನು ಪ್ರತಿನಿಧಿಸುತ್ತವೆ. ಆದ್ದರಿಂದ ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಸಿಂಕ್ ಈಶಾನ್ಯ ದಿಕ್ಕಿನಲ್ಲಿರಲಿ. ಜತೆಗೆ ಸಿಂಕ್ ಅನ್ನು ಒಲೆಯ ಬಳಿ ಯಾವುದೇ ಕಾರಣಕ್ಕೂ ಇರಿಸಬೇಡಿ. ನೀರು ಮತ್ತು ಬೆಂಕಿ ವಿರುದ್ಧ ಅಂಶಗಳಾಗಿರುವುದರಿಂದ ಇವನ್ನು ಎಂದಿಗೂ ಸಮೀಪ ಇರಿಸಬಾರದು.
ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ರೀತಿ
ಕಿಟಕಿಗಳು ನಕಾರಾತ್ಮಕತಕ ಶಕ್ತಿಯನ್ನು ಹೊರಹಾಕುವ ಅತ್ಯುತ್ತಮ ಮಾರ್ಗ. ಹೀಗಾಗಿ ಅಡುಗೆಮನೆಯಲ್ಲಿ ಒಂದೆರಡು ಕಿಟಕಿ ಇರಲೇಬೇಕು. ಎಲ್ಲ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಕಿಟಕಿ ಪೂರ್ವದಲ್ಲಿ ಇರಿಸುವುದು ಮುಖ್ಯ. ಅಡುಗೆಮನೆಯ ಸ್ಥಳವನ್ನು ನಿರ್ಧರಿಸುವಾಗ ಈ ಅಂಶ ನಿಮ್ಮ ಗಮನದಲ್ಲಿರಲಿ.
ಗೋಡೆಗಳಿಗೆ ಈ ಬಣ್ಣ ಬಳಿಯಿರಿ
ಅಡುಗೆ ಕೋಣೆಗೆ ಕಪ್ಪು ಬಣ್ಣವನ್ನು ಬಳಿಯುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಹಸುರು, ಕಿತ್ತಳೆ, ಕೆಂಪು ಮುಂತಾದ ಪ್ರಕಾಶಮಾನ ಬಣ್ಣಗಳನ್ನು ಗೋಡೆಗೆ ಬಳಸಿ. ಇದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಜತೆಗೆ ರೆಫ್ರಿಜರೇಟರ್ ಅನ್ನು ನೈಋತ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಇದನ್ನು ಈಶಾನ್ಯ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ. ಮೈಕ್ರೋವೇವ್ ಓವನ್, ಹೀಟರ್, ಮಿಕ್ಸರ್ ಮತ್ತು ಗ್ರೈಂಡರ್‌ಗಳಂತಹ ವಿದ್ಯುತ್ ಉಪಕರಣಗಳನ್ನು ಅಡುಗೆಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಈಶಾನ್ಯ ದಿಕ್ಕಿನಲ್ಲಿ ವಿದ್ಯುತ್ ಉಪಕರಣ ಇಡಬೇಡಿ.
ಈ ತಪ್ಪುಗಳನ್ನು ಮಾಡಲೇಬೇಡಿ
- ಸಿಂಕ್ ಮತ್ತು ಸ್ಟೌ ಸಮೀಪ ಇರಿಸಬೇಡಿ.
- ಅಡುಗೆಮನೆಯನ್ನು ನೇರವಾಗಿ ಮಲಗುವ ಕೋಣೆ, ದೇವರ ಕೋಣೆ ಅಥವಾ ಸ್ನಾನಗೃಹದ ಕೆಳಗೆ ನಿರ್ಮಿಸಬೇಡಿ.
- ಅಡುಗೆ ಕೋಣೆಯ ಬಾಗಿಲನ್ನು ಯಾವುದೇ ಮೂಲೆಯಲ್ಲಿ ಇರಿಸಬೇಡಿ.
ಇದನ್ನೂ ಓದಿ: Vastu Tips: ಅದೃಷ್ಟ, ಸಂಪತ್ತು ಹೊತ್ತು ತರುವ ಬಿದಿರನ್ನು ಹೀಗೆ ಬೆಳೆಸಿ