ಬೆಂಗಳೂರು: ನೆಮ್ಮದಿಯ ಜೀವನಕ್ಕೆ ವಾಸ್ತು ಶಾಸ್ತ್ರ ಬಹಳ ಮುಖ್ಯ. ಅದರಲ್ಲೂ ನಾವು ಬಹುಪಾಲು ಸಮಯ ಕಳೆಯುವ ಮನೆಯಲ್ಲಿ ವಾಸ್ತು ಶಾಸ್ತ್ರವನ್ನು ಸರಿಯಾಗಿ ಅನುಸರಿಸಿದರೆ ಬಹಳಷ್ಟು ಸಮಸ್ಯೆಗಳಿಂದ ಪಾರಾಗಬಹುದು. ಅಲ್ಲದೆ ಮನೆ ಸಮೃದ್ಧಿಯಿಂದಲೂ ಕೂಡಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಅಂಶವೂ ಹೀಗೆ ಇರಬೇಕು ಎಂದು ಹೇಳಲಾಗಿದೆ. ಅದರಲ್ಲೂ ಪ್ರವೇಶದ್ವಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಬಹುತೇಕ ಎಲ್ಲ ಶಕ್ತಿಗಳು ನಿಮ್ಮ ಮನೆಯ ಪ್ರವೇಶದ್ವಾರ ಅಥವಾ ಮುಖ್ಯದ್ವಾರದ ಮೂಲಕ ಬರುತ್ತವೆ. ಹೀಗಾಗಿ ವಾಸ್ತು ಶಾಸ್ತ್ರವನ್ನು ಬಳಸುವ ಮೂಲಕ ನೀವು ಈ ಪರಿಸರದಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಮನೆಯ ಮುಂಭಾಗ ಹೇಗಿರಬೇಕು? ಪ್ರವೇಶದ್ವಾರ ವಿಚಾರದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಏನು? ಎನ್ನುವ ವಿವರ ಇಲ್ಲಿದೆ (Vastu Tips).
ಪ್ರವೇಶದ್ವಾರ ಈ ಭಾಗಕ್ಕೆ ಮುಖ ಮಾಡಿರಲಿ
ಈಶಾನ್ಯ: ನಿಮ್ಮ ಮನೆಯ ಪ್ರವೇಶದ್ವಾರವನ್ನು ಇರಿಸಲು ಈಶಾನ್ಯ ಉತ್ತಮ ದಿಕ್ಕು. ಈಶಾನ್ಯ ಮೂಲೆಯು ಬೆಳಗಿನ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಉತ್ತರ: ವಾಸ್ತು ಪ್ರಕಾರ ನಿಮ್ಮ ಮನೆಯ ಪ್ರವೇಶ ದ್ವಾರಕ್ಕೆ ಉತ್ತರ ದಿಕ್ಕು ಎರಡನೇ ಅತ್ಯುತ್ತಮ ಸ್ಥಳ. ಇಲ್ಲಿ ಶಕ್ತಿಯ ಮಟ್ಟವು ಹೆಚ್ಚಾಗಿದ್ದರೂ ಈ ದಿಕ್ಕು ಮನೆಯ ನಿವಾಸಿಗಳಿಗೆ ಅದೃಷ್ಟವನ್ನು ತರುತ್ತದೆ.
ಪೂರ್ವ: ನೀವು ಶಕ್ತಿ ಮತ್ತು ಅದೃಷ್ಟವನ್ನು ಹುಡುಕುತ್ತಿದ್ದರೆ ಪೂರ್ವವು ಸೂಕ್ತ ದಿಕ್ಕು.
ಆಗ್ನೇಯ: ಮನೆಯ ಪ್ರವೇಶಕ್ಕೆ ದಕ್ಷಿಣ ದಿಕ್ಕನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ತಪ್ಪಿಸಬೇಕು. ನಿಮ್ಮ ಆಯ್ಕೆಗಳು ಸೀಮಿತವಾಗಿದ್ದರೆ ಆಗ್ನೇಯ ಪ್ರವೇಶ ದಿಕ್ಕನ್ನು ಪ್ರವೇಶದ್ವಾರಕ್ಕಾಗಿ ಬಳಸಿಕೊಳ್ಳಬಹುದು.
ವಾಯವ್ಯ: ವಾಯವ್ಯ ದಿಕ್ಕಿನ ಪ್ರವೇಶದ್ವಾರಗಳು ಸಂಜೆಯ ಸೂರ್ಯನ ಬೆಳಕು ಮತ್ತು ಸಂಪತ್ತನ್ನು ಸಾಕಷ್ಟು ಪ್ರಮಾಣದಲ್ಲಿ ಹೊತ್ತು ತರುತ್ತವೆ.
ಹೀಗೆ ಮಾಡಿ
- ಮನೆ ನೆಲ ಮಟ್ಟದಲ್ಲಿ ಇಲ್ಲ ಎನ್ನುವುದನ್ನು ಖಚಿತಪಡಿಸಿ. ಮುಂಭಾಗದಲ್ಲಿ ಒಂದೆರಡು ಮೆಟ್ಟಿಲನ್ನಾದರೂ ಅಳವಡಿಸಿ
- ಪ್ರವೇಶದ್ವಾರದ ಬಾಗಿಲಿಗೆ ಉತ್ತಮ ಗುಣಮಟ್ಟದ ಮರವನ್ನೇ ಬಳಸಿ
- ಸರಳ ಮತ್ತು ಸ್ವಚ್ಛ ನೇಮ್ ಪ್ಲೇಟ್ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ
- ಪ್ರವೇಶದ್ವಾರದ ಬಾಗಿಲಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಿ. ಜತೆಗೆ ಯಾವುದೇ ಕಲೆಯೂ ಇರಬಾರದು.
ಇದನ್ನು ತಪ್ಪಿಸಿ
- ಇನ್ನೊಂದು ಮನೆಯ ಪ್ರವೇಶ ದ್ವಾರಕ್ಕೆ ಎದುರಾಗಿ ನಿಮ್ಮ ಮನೆ ಮುಖ ಮಾಡುವುದನ್ನು ತಪ್ಪಿಸಿ. ಒಂದು ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಾದರೆ ಮನೆಯ ಮುಖ್ಯದ್ವಾರ ಬಾಗಿಲಿಗೆ ಕುಂಕುಮದಿಂದ ಸ್ವಸ್ತಿಕ ಚಿಹ್ನೆ ಎಳೆಯಿರಿ
- ಮುಂಭಾಹದಲ್ಲಿ ಪೀಠೋಪಕರಣಗಳು ಮತ್ತು ಇತರ ಅಲಂಕಾರಗಳನ್ನಿ ಇರಿಸಬೇಡಿ
- ಮನೆಯ ಮುಂಭಾಗ ಸೆಪ್ಟಿಕ್ ಟ್ಯಾಂಕ್ ಇರಿಸಬೇಡಿ
- ಮನೆಯ ಮುಂಭಾಗ ಶೂ ರ್ಯಾಕ್, ಶೂ ಇರಿಸಬೇಡಿ
- ವೃತ್ತಾಕಾರದ ಅಥವಾ ಸ್ಲೈಡಿಂಗ್ ಪ್ರವೇಶ ದ್ವಾರವನ್ನು ಆಯ್ಕೆ ಮಾಡಬೇಡಿ
- ದಕ್ಷಿಣಾಭಿಮುಖ ದಿಕ್ಕುಗಳು ನಿಮ್ಮ ಮನೆಗೆ ಸೂಕ್ತವಲ್ಲ. ಆದ್ದರಿಂದ ಪ್ರವೇಶದ್ವಾರವನ್ನು ದಕ್ಷಿಣ, ಆಗ್ನೇಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ
ಹೊಸ್ತಿಲು
ಪ್ರತಿ ಮನೆಯ ಮುಖ್ಯದ್ವಾರದ ಬಾಗಿಲು ಹೊಸ್ತಿಲನ್ನು ಹೊಂದಿರಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ವಾಸ್ತು ಪ್ರಕಾರ ಹೊಸ್ತಿಲು ನಕಾರಾತ್ಮಕ ಶಕ್ತಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ.
ಗಿಡಗಳನ್ನು ಇಡಿ
ಮುಖ್ಯ ಬಾಗಿಲಿನ ಒಳಗೆ ಮತ್ತು ಹೊರಗೆ ಸಸ್ಯಗಳನ್ನು ಇರಿಸಬೇಕು. ಇದು ಮನೆಯ ಸೌಂದರ್ಯ ವೃದ್ಧಿಸುವುದಷ್ಟೇ ಅಲ್ಲದೆ ಆರೋಗ್ಯಕ್ಕೂ ಪೂರಕ. ನೆನಪಿಡಿ ಮುಳ್ಳಿನ ಸಸ್ಯಗಳನ್ನು ಇರಿಸಬೇಡಿ. ಇವು ಶುಭ ಸೂಚಕವಲ್ಲ. ಅಲ್ಲದೆ ಪ್ರವೇಶದ್ವಾರದಲ್ಲಿ ಕಸದ ಬುಟ್ಟಿಯನ್ನು ಇಡುವುದನ್ನು ತಪ್ಪಿಸಿ. ಯಾಕೆಂದರೆ ಅದು ದುರಾದೃಷ್ಟವನ್ನು ಆಕರ್ಷಿಸಬಹುದು. ನಿಮ್ಮ ಮನೆ ಮತ್ತು ಪ್ರವೇಶದ್ವಾರದ ಉತ್ತಮ ವಾಸ್ತುವನ್ನು ಉತ್ತೇಜಿಸಲು ಸ್ವಚ್ಛತೆಯನ್ನು ಕಾಪಾಡಿ.
ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಈ ಗಿಡಗಳನ್ನು ಮನೆಯೊಳಗೆ ಇಡಲೇಬಾರದು!