ಬೆಂಗಳೂರು: 2020ರಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾದ ಬಳಿಕ ವರ್ಕ್ ಫ್ರಮ್ ಹೋಮ್ ಹೆಚ್ಚಿದೆ. ಅವಕಾಶ ಇರುವ ಕಡೆಗಳಲ್ಲಿ ವರ್ಕ್ ಫ್ರಮ್ ಹೋಮ್ ಒದಗಿಸಲಾಗುತ್ತದೆ. ಹೀಗಾಗಿ ಅನೇಕರು ಮನೆಯನ್ನೇ ಆಫೀಸ್ ಮಾಡಿಕೊಳ್ಳುತ್ತಿದ್ದಾರೆ. ಹೋಮ್ ಆಫೀಸ್ ಎನ್ನುವ ಕಾನ್ಸೆಪ್ಟ್ ಇದೀಗ ಜನಪ್ರಿಯವಾಗುತ್ತದೆ. ಕೆಲವರು ಬೆಡ್ ರೂಮ್, ಲಿವಿಂಗ್ ರೂಮ್‌ನ ಒಂದು ಬದಿಯನ್ನೇ ಇದಕ್ಕಾಗಿ ಆರಿಸಿದರೆ ಇನ್ನು ಕೆಲವರು ಪ್ರತ್ಯೇಕ ಕೋಣೆಯನ್ನು ಸಜ್ಜುಗೊಳಿಸುತ್ತಾರೆ. ಅದೇನೇ ಇರಲಿ ಹೋಮ್ ಆಫೀಸ್ (Home Office) ವಿಚಾರದಲ್ಲಿ ಕೆಲವೊಂದು ವಾಸ್ತು ಸಲಹೆಗಳನ್ನು ಅನುಸರಿಸುವ ಮೂಲಕ ನೆಮ್ಮದಿ ಕಂಡುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಈ ಕುರಿತಾದ ವಿವರ ಇಂದಿನ ವಾಸ್ತು ಟಿಪ್ಸ್ (Vastu Tips)ನಲ್ಲಿದೆ.
ಹೋಮ್ ಆಫೀಸ್‌ನ ದಿಕ್ಕು
ನಿಮ್ಮ ಗೃಹ ಕಚೇರಿಯ ದಿಕ್ಕು ಕೂಡ ಮುಖ್ಯವಾಗುತ್ತದೆ. ನೀವು ನಿರ್ವಹಿಸುತ್ತಿರುವ ಉದ್ಯೋಗದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಕಾನೂನು, ಮಾರಾಟ, ಆಸ್ತಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರೆ ದಕ್ಷಿಣ ದಿಕ್ಕು ನಿಮಗೆ ಸೂಕ್ತ. ಮತ್ತೊಂದೆಡೆ ಪಶ್ಚಿಮ ದಿಕ್ಕು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ವಿನ್ಯಾಸ, ಪತ್ರಿಕೋದ್ಯಮ ಮುಂತಾದ ಕ್ಷೇತ್ರದಲ್ಲಿರುವವರು ಈ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಹಣಕಾಸು, ಬ್ಯಾಂಕಿಂಗ್, ವಿಮೆ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮ ಕಚೇರಿಯನ್ನು ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಸ್ಥಾಪಿಸಬಹುದು. ಸಾಮಾಜಿಕ ಕೆಲಸ, ಆಡಳಿತ ಮತ್ತು ಮಾರ್ಕೆಟಿಂಗ್ ಉದ್ಯೋಗದಲ್ಲಿರುವವರಿಗೆ ಪೂರ್ವ ದಿಕ್ಕು ಉತ್ತಮ ಆಯ್ಕೆ.
ಕೋಣೆಯ ಬಣ್ಣ
ಬಣ್ಣಗಳು ಮೆದುಳಿನ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ನೀವು ಹೋಮ್ ಆಫೀಸ್‌ಗೆ ಕೆನೆ, ಬೀಜ್ ಮತ್ತು ಬಿಳಿಯಂತಹ ಲೈಟ್ ಬಣ್ಣ ಬಳಿಯಿರಿ. ಅಲ್ಲದೆ ನೀಲಿ, ಹಳದಿ ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಹಸುರು ಮತ್ತು ಚಿನ್ನದ ಬಣ್ಣ ಮನಸ್ಸನ್ನು ಸಮತೋಲನದಲ್ಲಿಡಲು ಮತ್ತು ಸಂಪತ್ತನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಕಪ್ಪು ಬಣ್ಣದಂತಹ ಗಾಢ ಬಣ್ಣಗಳನ್ನು ಯಾವುದೇ ಕಾರಣಕ್ಕೂ ಬಳಿಯಬೇಡಿ.
ಮೇಜು ಯಾವ ಕಡೆಗಿರಬೇಕು?
ಎಲ್ಲರಿಗೂ ಕಚೇರಿಯ ಕೆಲಸ ನಿರ್ವಹಿಸಲು ಪ್ರತ್ಯೇಕ ಕೋಣೆಯ ವ್ಯವಸ್ಥೆ ಇರುವುದಿಲ್ಲ. ಅದಕ್ಕಾಗಿ ಬೆಡ್ ರೂಮ್ ಅಥವಾ ಲಿವಿಂಗ್ ರೂಮ್‌ನಲ್ಲಿಯೇ ಟೇಬಲ್ ಮತ್ತು ಕುರ್ಚಿ ಅಳವಡಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ಈಶಾನ್ಯಕ್ಕೆ ಮುಖ ಮಾಡಿ ಕೆಲಸ ನಿರ್ವಹಿಸುವಂತೆ ಡೆಸ್ಕ್ ಅನ್ನು ಅಣಿಗೊಳಿಸಿ. ಇದರಿಂದ ಸೂರ್ಯನ ಬೆಳಕು ಸರಾಗವಾಗಿ ಒಳಗೆ ಹರಿದು ಬಂದು ನಿಮ್ಮನ್ನು ಕ್ರಿಯಾಶೀಲವಾಗಿಡಲಿದೆ. ಅದೇ ರೀತಿ ಅತ್ಯುತ್ತಮ ಗುಣಮಟ್ಟದ ಕುರ್ಚಿಯನ್ನೇ ಬಳಸಿ. ಕದಲಿಸುವಾಗ ಕಿರ್ ಎಂದು ಶಬ್ದ ಹೊರಡಿಸುವ ಚೇರ್ ಬಳಸಬೇಡಿ. ಆರೋಗ್ಯದ ದೃಷ್ಟಿಯಿಂದಲೂ ಗುಣಮಟ್ಟದ ಚೇರ್ ಬಳಸುವುದು ಮುಖ್ಯ. ಬೆನ್ನು, ಸೋಂಟ, ಭುಜದ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳಿ.
ಇವನ್ನೂ ಗಮನಿಸಿ
ಚೇರ್, ಡೆಸ್ಕ್‌ಗಳ ಸ್ಥಾನಗಳ ಜತೆಗೆ ಇನ್ನೂ ಕೆಲವು ಮುಖ್ಯ ವಿಚಾರಗಳನ್ನು ನೀವು ಗಮನಿಸಬೇಕು. ನಿಮ್ಮ ಗೃಹ ಕಚೇರಿ ಯಾವತ್ತೂ ಸ್ವಚ್ಛವಾಗಿರಬೇಕು ಮತ್ತು ಗೊಂದಲ ಮುಕ್ತವಾಗಿರಬೇಕು. ಪ್ರಮುಖ ದಾಖಲೆಗಳನ್ನು ಇಡಲು ಮತ್ತು ಅನಗತ್ಯ ಕಾಗದ, ತ್ಯಾಜ್ಯಗಳನ್ನು ಸಂಗ್ರಹಿಸಲು ಡಸ್ಟ್ ಬಿನ್ ಬಳಸಿ. ಎಲ್ಲ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಸಕಾರಾತ್ಮಕ ಶಕ್ತಿಗಾಗಿ ಈಶಾನ್ಯದಲ್ಲಿ ನೀರಿನ ಜಗ್ ಇರಿಸುವುದು ಅವಶ್ಯ. ಅಂತಾರಾಷ್ಟ್ರೀಯ ಕೆಲಸದ ಅವಕಾಶಗಳಿಗಾಗಿ ನಿಮ್ಮ ಕೆಲಸದ ಮೇಜಿನ ವಾಯುವ್ಯ ಭಾಗದಲ್ಲಿ ಗ್ಲೋಬ್ ಇರಿಸಬಹುದು. ಉತ್ಪಾದಕತೆಯ ಹೆಚ್ಚಳಕ್ಕಾಗಿ ಆಗ್ನೇಯದಲ್ಲಿ ದೀಪ ಇರಿಸಿ.
ಇದನ್ನೂ ಓದಿ: Vastu Tips: ಸುಖ, ಸಮೃದ್ಧಿ ಹೆಚ್ಚಲು ಈ ವಾಸ್ತು ಟಿಪ್ಸ್ ಫಾಲೋ ಮಾಡಿ