Site icon Vistara News

Vegan Life: ಈ ಬಾಲಿವುಡ್‌ ಹೀರೋಯಿನ್‌ಗಳು ವೇಗನ್‌ ಆಗಿಯೂ ಆರೋಗ್ಯವಾಗಿದ್ದಾರೆ!

bollywood vegans

ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಅನೇಕರು ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಅವುಗಳನ್ನು ಮಾಂಸಕ್ಕಾಗಿ ಕೊಲ್ಲುವುದನ್ನು ಇಷ್ಟಪಡುವುದಿಲ್ಲ. ಇಂಥವರ ಸಂಘಟನೆಗಳೇ ಇವೆ. ಸಸ್ಯಾಹಾರಿಗಳು ಎನಿಸಿಕೊಂಡವರು ಹಾಲು- ತುಪ್ಪ ಸೇವಿಸುತ್ತಾರೆ. ಆದರೆ ವೇಗನ್‌ ಎನಿಸಿಕೊಂಡವರು ಹಾಲು- ತುಪ್ಪ- ಬೆಣ್ಣೆ ಕೂಡ ಸೇವಿಸುವುದಿಲ್ಲ. ಯಾಕೆಂದರೆ ಇವು ಡೈರಿ ಉತ್ಪನ್ನಗಳು. ಇವರು ಸಸ್ಯಮೂಲದಿಂದ ಬಾರದ ಎಲ್ಲ ಆಹಾರವನ್ನೂ ನಿರಾಕರಿಸುತ್ತಾರೆ. ಡೈರಿ ಪ್ರಾಡಕ್ಟ್‌ ಸೇವಿಸುವುದಿಲ್ಲ. ಆದರೆ ಮನುಷ್ಯನ ಬಾಡಿಗೆ ಪ್ರಾಣಿಜನ್ಯವಾದ ಪೋಷಕಾಂಶಗಳೂ ಬೇಕಲ್ಲವೇ? ಅದಿಲ್ಲದೆ ಇರುವುದು ಹೇಗೆ ಸಾಧ್ಯ ಎಂದಿರಾ? ಸಾಧ್ಯವಿದೆ. ಹೀಗೆ ವೇಗನ್‌ಗಳಾಗಿ ಬದಲಾಗಿರುವ (vegan diet) ಅನೇಕ ಬಾಲಿವುಡ್‌ ಹೀರೋಯಿನ್‌ಗಳು ತಮ್ಮ ಆರೋಗ್ಯವನ್ನು ಚೆನ್ನಾಗಿಯೇ ಕಾಪಾಡಿಕೊಂಡಿದ್ದಾರೆ. ಅದು ಹೇಗೆ ಅಂತ ನೋಡೋಣ.

ಕಂಗನಾ ರಣಾವತ್

ಕೆಲವು ವರ್ಷಗಳ ಹಿಂದೆ ಕಂಗನಾ ರಣಾವತ್ (kangana ranaut) ಸಸ್ಯಾಹಾರಿಯಾಗಿ ಬದಲಾದಳು. ಡೈರಿ ಉತ್ಪನ್ನಗಳನ್ನು ಸೇವಿಸುವುದು ಆರೋಗ್ಯಕರವಲ್ಲ ಮತ್ತು ದೇಹದಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಎಂದು ಅರ್ಥ ಮಾಡಿಕೊಂಡಳು. ನಂತರ ವೇಗನ್‌ ಆಗಿ ಬದಲಾದಳು. ಇದು ಆಕೆಯ ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿತು. ಈಗ ಆಕೆ ಪ್ರೊಟೀನ್‌ಗಳನ್ನು ಒಣಹಣ್ಣುಗಳು, ಬೀನ್ಸ್‌, ಸೋಯಾ ಮುಂತಾದವುಗಳಿಂದ ಪಡೆಯುತ್ತಾಳಂತೆ.

ಜಾಕ್ವೆಲಿನ್‌ ಫೆರ್ನಾಂಡಿಸ್‌

“ಮೂಕಪ್ರಾಣಿಗಳನ್ನು ರಕ್ಷಿಸಲು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವೇಗನ್‌ ಆಗುವುದು ನೀವು ಮಾಡಬಹುದಾದ ಅತ್ಯುತ್ತಮ ಕೆಲಸʼʼ ಎಂಬುದು ಜಾಕ್ವೆಲಿನ್‌ ಫೆರ್ನಾಂಡಿಸ್‌ (jacqueline fernandez)‌ ಮಾತು. ನಾನು ವೇಗನ್‌ ಆಗಿರುವುದರಿಂದ ನಂಗೆ ಒಳ್ಳೇದಾಗಿದೆ. ನಾನು ಎಲ್ಲರೊಂದಿಗೆ ಆ ಅದ್ಭುತ ವಿಚಾರ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎನ್ನುತ್ತಾಳೆ ಆಕೆ. 2014ರಲ್ಲಿ ಈಕೆಗೆ ಪೆಟಾದಿಂದ ʼವರ್ಷದ ಮಹಿಳೆ’ ಪ್ರಶಸ್ತಿಯೂ ಬಂದಿತ್ತು. ಸಾರ್ವಜನಿಕವಾಗಿ ಪ್ರಾಣಿಗಳ ಮೇಲಿನ ಪ್ರೀತಿ ವ್ಯಕ್ತಪಡಿಸಿದ ಸೆಲೆಬ್ರಿಟಿಗಳಲ್ಲಿ ಇವಳೂ ಒಬ್ಬಳು. ಈಕೆ ಚರ್ಮದ ಬೆಲ್ಟ್‌, ಚಪ್ಪಲಿ ಇತ್ಯಾದಿಗಳನ್ನೂ ಧರಿಸುವುದಿಲ್ಲವಂತೆ. ಈಕೆ ಬೇಳೆಕಾಳು, ಬೆರ್ರಿಗಳನ್ನು ಹೆಚ್ಚಾಗಿ ಸೇವಿಸುತ್ತಾಳೆ.

ಶ್ರದ್ಧಾ ಕಪೂರ್

2019ರಲ್ಲಿ ಶ್ರದ್ಧಾ ಕಪೂರ್ (Shraddha kapoor) ಸಸ್ಯಾಹಾರಿಯಾದಳು. ಸ್ವಲ್ಪ ಸಮಯದವರೆಗೆ ಸಸ್ಯಾಹಾರಿಯಾಗಿದ್ದಳು, ನಂತರ ವೇಗನ್‌ ಆಹಾರಕ್ಕೆ ಬದಲಾಯಿಸಿಕೊಂಡಳು. ಹಸುವಿನ ಹಾಲು ಸೇವಿಸುತ್ತಿದ್ದಳು; ನಂತರ ಅದನ್ನು ಬಾದಾಮಿ ಹಾಲಿಗೆ ಬದಲಾಯಿಸಿದಳು. ಈಕೆ ಕೆಲವು ಪರಿಸರ, ವನ್ಯ ಸಂರಕ್ಷಣಾ ಎನ್‌ಜಿಒಗಳಲ್ಲಿ ಭಾಗಿಯಾಗಿದ್ದಾಳೆ. ಬೇಳೆಕಾಳುಗಳು, ಓಟ್ಸ್‌, ಹಣ್ಣು- ತರಕಾರಿಗಳು ಈಕೆಯ ಪ್ರಿಯ ಆಹಾರ. ಸಪ್ಲಿಮೆಂಟ್ಸ್‌ ತೆಗೆದುಕೊಳ್ಳುವುದಿಲ್ಲ. ಬೆಳಗಿನ ಆಹಾರವಾಗಿ ಸೆರಿಯಲ್ ಬಳಸುತ್ತಾಳೆ. ಹಾಲು ಹಾಕಿದ ಕಾಫಿ- ಟೀ ಕುಡಿಯುವುದಿಲ್ಲ.

ಸೋನಮ್ ಕಪೂರ್

ವೇಗನ್‌ ಆಗುವ ಮೊದಲು ಈಕೆ ಸುದೀರ್ಘಕಾಲದವರೆಗೆ ಸಸ್ಯಾಹಾರಿಯಾಗಿದ್ದಳು. 2018ರಲ್ಲಿ ಈ ನಟಿ ಪೆಟಾದಿಂದ ʼವರ್ಷದ ವ್ಯಕ್ತಿ’ ಪ್ರಶಸ್ತಿ ಪಡೆದಳು. “ಪ್ರಾಣಿ ಸಹಾನುಭೂತಿಯೇ ನನ್ನ ಜೀವನದ ಸೂತ್ರ. ನಾನು ಈಗ ಸೋಯಾ ಹಾಲಿನ ಕಾಫಿ ಕುಡಿಯುತ್ತಿದ್ದೇನೆ. ನಾನು ಡೈರಿ ಉತ್ಪನ್ನ ಬಳಸುವುದಿಲ್ಲʼʼ ಎಂದಿದ್ದಾಳೆ.

ಇದನ್ನೂ ಓದಿ: World Vegan Day | ಇಂದು ವಿಶ್ವ ವೇಗನ್ ದಿನ, ಏನಿದು ವೇಗನ್, ಯಾಕೆ ಆಚರಣೆ?

ಸೋನಾಕ್ಷಿ ಸಿನ್ಹಾ

ಪ್ರಾಣಿ ಹಿಂಸೆ ಅಂದರೆ ಸೋನಾಕ್ಷಿ ಸಿನ್ಹಾಗೂ ಆಗುವುದಿಲ್ಲ. ಈಕೆ ಕೂಡ ಪೆಟಾ ಸಂಘಟನೆಯ ಪ್ರಿಯೆ. ಸಸ್ಯಾಹಾರಿಯಾಗಿ, ಬಳಿಕ ವೇಗನ್‌ ಆದಳು. ಸಸ್ಯಾಹಾರಿಯಾದ ನಂತರ ತನ್ನ ದೇಹ ಹೆಚ್ಚು ಹಗುರವಾಗಿದೆ, ಜೀರ್ಣಶಕ್ತಿ ಉತ್ತಮವಾಗಿದೆ. ನಾರಿನಂಶ ಜಾಸ್ತಿ ಇರುವ ತರಕಾರಿ ಮತ್ತು ಹಣ್ಣು ಹೆಚ್ಚಾಗಿ ಸೇವಿಸುತ್ತೇನೆ ಎನ್ನುತ್ತಾಳೆ.

ರಿಚಾ ಚಡ್ಡಾ

ರಿಚಾ ಚಡ್ಡಾ ಸಸ್ಯಾಹಾರಿಯಾಗಿದ್ದವಳು. ಮಾರುಕಟ್ಟೆಯಲ್ಲಿ ಬೃಹತ್‌ ಡೈರಿ ಉತ್ಪನ್ನಗಳಿಗಾಗಿ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂಬುದು ಅರಿವಾದಾಗ ವೇಗನ್‌ ಆಗಿ ಮಾರ್ಪಟ್ಟಳು. ಡೈರಿ ಆಹಾರ ಪದಾರ್ಥಗಳನ್ನು ತ್ಯಜಿಸಲು ನಿರ್ಧರಿಸಿದಳು. ಪಾಲಕ್, ಆಲೂಗಡ್ಡೆ, ತೋಫು ಇತ್ಯಾದಿಗಳಿಂದ ನನ್ನ ಪ್ರೋಟೀನ್ ಅಗತ್ಯಗಳನ್ನು ಪೂರೈಸಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಈಕೆ ಒಣ ಹಣ್ಣುಗಳನ್ನು ಹೆಚ್ಚಾಗಿ ತಿನ್ನುತ್ತಾಳೆ. ಗಿಡಮೂಲಿಕೆಗಳು, ಬೇವು, ಅಜ್ವೈನ್, ಪೇರಲ, ಪುದೀನಾ ಇತ್ಯಾದಿ ಸವಿಯುತ್ತಾಳೆ.

ಇದನ್ನೂ ಓದಿ: ಯುವಪೀಳಿಗೆಯಲ್ಲಿ ಟ್ರೆಂಡ್‌ ಆದ Vegan Diet | ತಪ್ಪು ಕಲ್ಪನೆ ನಿವಾರಿಸಿಕೊಳ್ಳಿ

Exit mobile version