Site icon Vistara News

ವಿಟಮಿನ್‌ ಡಿ ಕೊರತೆ ನೀಗಿಸಲು ಹಾಲು, ನೀರು ಪರಿಣಾಮಕಾರಿ; ಅಧ್ಯಯನ ವರದಿ

Vitamin D Diet

ವಿಟಮಿನ್‌ ಡಿ ದೇಹಕ್ಕೆ ತುಂಬ ಮುಖ್ಯ. ನಾವು ಆಹಾರ ಸೇವಿಸಿದಾಗ ಅದರಲ್ಲಿನ ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ, ಫಾಸ್ಪೇಟ್‌ ಮತ್ತಿತರ ಅಂಶಗಳನ್ನು ನಮ್ಮ ದೇಹ ಸರಿಯಾಗಿ ಹೀರಿಕೊಳ್ಳಬೇಕು ಎಂದರೆ ವಿಟಮಿನ್‌ ಡಿ (Vitamin D Diet) ಅಗತ್ಯ ಪ್ರಮಾಣದಲ್ಲಿ ಇರಲೇಬೇಕು. ಅಷ್ಟೇ ಅಲ್ಲ, ರೋಗನಿರೋಧ ಶಕ್ತಿಯನ್ನು ಸುಸ್ಥಿತಿಯಲ್ಲಿಡುವ ಜತೆ, ಎಲುಬು ಮತ್ತು ಹಲ್ಲುಗಳ ಸರಿಯಾದ ಬೆಳವಣಿಗೆ, ಸದೃಢತೆಗೆ ಸಹಕಾರಿ. ವಿಟಮಿನ್‌ ಡಿ ಕೊರತೆ ಇರುವವರಿಗೆ ಸಕ್ಕರೆ ಕಾಯಿಲೆಯ ಬರುವ ಸಂಭವವೂ ಹೆಚ್ಚು. ಈ ವಿಟಮಿನ್‌ ಡಿ ಮೂಲ ಸೂರ್ಯನ ಬೆಳಕು. ಮುಂಜಾನೆಯ ಸೂರ್ಯನ ಕಿರಣಗಳಿಗೆ ನಮ್ಮ ದೇಹವನ್ನು ಒಡ್ಡಿಕೊಂಡಾಗ, ನಮ್ಮ ದೇಹದಲ್ಲಿಯೇ ಡಿ ವಿಟಮಿನ್‌ ಉತ್ಪತ್ತಿಯಾಗುತ್ತದೆ. ಆದರೆ ಈಗೀಗ ನಮ್ಮ ಬದಲಾದ ಲೈಫ್‌ಸ್ಟೈಲ್‌ನಿಂದಾಗಿ ಸೂರ್ಯನ ಬೆಳಕಿಗೆ ಹೋಗುವುದೂ ಕಡಿಮೆಯಾಗಿದೆ. ವಿಟಮಿನ್‌ ಡಿ ಕೊರತೆಯಿಂದ ಬರುವ ರೋಗಗಳ ಪ್ರಮಾಣವೂ ಹೆಚ್ಚಾಗಿದೆ.

ವಿಟಮಿನ್‌ ಡಿ ಕೊರತೆಯಿಂದ ತಲೆನೋವು, ತಲೆಸುತ್ತು, ಸುಸ್ತು, ಮೂಳೆ, ಹಲ್ಲುಗಳಿಗೆ ಸಂಬಂಧಪಟ್ಟ ಕಾಯಿಲೆಗಳು ಬರುತ್ತವೆ. ರೋಗ ನಿರೋಧಕ ಶಕ್ತಿಯೇ ಕಡಿಮೆಯಾಗುವುದರಿಂದ ಸದಾ ಒಂದಲ್ಲ ಒಂದು ಕಾಯಿಲೆ ಕಾಣಿಸಿಕೊಳ್ಳುತ್ತದೆ. ಗಂಭೀರ ಸ್ವರೂಪದ ಕೊರತೆಯಾದಾಗ ಮೂಳೆ ಕ್ಯಾನ್ಸರ್‌ ಕೂಡ ಉಂಟಾಗಬಹುದು. ಹಾಗಾಗಿ ವಿಟಮಿನ್‌ ಡಿ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಡಿ ವಿಟಮಿನ್‌ ಕೊರತೆಯಾಗಬಾರದು ಎಂದರೆ ನಾವು ನಿತ್ಯ ಜೀವನದಲ್ಲಿ ಯಾವೆಲ್ಲ ಆಹಾರಗಳನ್ನು ಸೇವಿಸಬೇಕು ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..

ಇದನ್ನೂ ಓದಿ: World Hypertension Day | ಹೈಪರ್‌ಟೆನ್ಷನ್‌ ಗೆಲ್ಲಲು 5 ಸೂತ್ರಗಳು

ಇಟಲಿಯ ಮಿಲನ್‌ನಲ್ಲಿ ನಡೆದ 24ನೇ ಯುರೋಪಿಯನ್ ಕಾಂಗ್ರೆಸ್ ಆಫ್ ಎಂಡೋಕ್ರೈನಾಲಜಿ ಸಮಾವೇಶದಲ್ಲಿ ಪ್ರಸ್ತುತ ಪಡಿಸಲಾದ ಅಧ್ಯಯನವೊಂದರ ಪ್ರಕಾರ ಹಾಲು ಮತ್ತು ನೀರು, ಡಿ ವಿಟಮಿನ್‌ನ ಪರಿಣಾಮಕಾರಿ ಮೂಲಗಳು. ಡೆನ್ಮಾರ್ಕ್‌ನಲ್ಲಿರುವ ಆರ್ಹಸ್ ವಿಶ್ವವಿದ್ಯಾಲಯದ ಡಾ. ರಾಸ್ಮಸ್ ಎಸ್ಪರ್ಸೆನ್ ಮತ್ತು ಅವರ ಸಹೋದ್ಯೋಗಿಗಳು ಸೇರಿ ಅಧ್ಯಯನ ನಡೆಸಿದ್ದರು. ಋತುಬಂಧಕ್ಕೆ ಒಳಗಾದ (ಮುಟ್ಟು ನಿಂತ), 60-80 ವರ್ಷ ವಯಸ್ಸಿನ, ವಿಟಮಿನ್‌ ಡಿ ಅಂಶ ಕೊರತೆ ಇರುವ ಸುಮಾರು 30 ಮಹಿಳೆಯರ ಮೇಲೆ ಪ್ರಯೋಗ ನಡೆಸಲಾಗಿತ್ತು. ಮಹಿಳೆಯರಿಗೆ ಡಿ3 ಅಂಶ ಇರುವ ಆಹಾರವನ್ನು ಕೊಟ್ಟು, ಅವರ ರಕ್ತಸಾಂದ್ರತೆಯ ಮೂಲಕ ವಿಟಮಿನ್‌‌ ಡಿ ಪ್ರಮಾಣ ಪತ್ತೆ ಹಚ್ಚುವ ಉದ್ದೇಶವನ್ನು ಈ ಸಂಶೋಧನೆ ಹೊಂದಿತ್ತು. ಅದರಂತೆ ಹಾಲು, ನೀರು, ವಿಟಮಿನ್‌ ಡಿ ಅಂಶ ಇರುವ ಜ್ಯೂಸ್‌, ಇಲ್ಲದ ಜ್ಯೂಸ್‌ಗಳನ್ನೆಲ್ಲ ಮಹಿಳೆಯರಿಗೆ ನೀಡಿ ಬಳಿಕ ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಡಿ ವಿಟಮಿನ್‌ ಹೆಚ್ಚಿಸುತ್ತದೆ ಎಂಬುದನ್ನು ಪರೀಕ್ಷೆ ಮಾಡಲಾಗಿದೆ. ಈ ವೇಳೆ ಹಾಲು ಮತ್ತು ನೀರಿನಿಂದ ವಿಟಮಿನ್‌ ಡಿ ಹೆಚ್ಚುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಅಧ್ಯಯನ ವರದಿ ಹೇಳಿದೆ.

ಹಾಲು ಮತ್ತು ನೀರಿನ ಹೊರತಾಗಿಯೂ ಒಂದಷ್ಟು ಆಹಾರಗಳನ್ನು ಕ್ರಮಬದ್ಧವಾಗಿ ಸೇವಿಸುತ್ತ ಬಂದರೆ ದೇಹದಲ್ಲಿ ವಿಟಮಿನ್‌ ಡಿ ಕೊರತೆ ನೀಗಿಸಿಕೊಳ್ಳಬಹುದಾಗಿದ್ದು, ಅವು ಹೀಗಿವೆ..

  1. ಮೊಸರು
    ಯುಎಸ್‌ನ ಕೃಷಿ ಇಲಾಖೆಯ ಅಂಕಿ-ಅಂಶದ ಪ್ರಕಾರ, ಮೊಸರಿನಲ್ಲಿ ಯಥೇಚ್ಛ ಪ್ರಮಾಣದಲ್ಲಿ ಪ್ರೊಟೀನ್‌ ಮತ್ತು ವಿಟಮಿನ್‌ ಡಿ ಅಂಶ ಇರುತ್ತದೆ. ಸುಮಾರು 8 ಔನ್ಸ್‌ (226 ಗ್ರಾಂ) ಗಳಷ್ಟು ಮೊಸರಿನಲ್ಲಿ 5 IU (IU-ಇಂಟರ್‌ನ್ಯಾಷನಲ್‌ ಯೂನಿಟ್ಸ್‌-ಅಂತರಾಷ್ಟ್ರೀಯವಾಗಿ ಸ್ವೀಕರಿಸಲ್ಪಟ್ಟ ಅಳತೆ. ವಿಟಮಿನ್‌ ಪ್ರಮಾಣಗಳನ್ನು ಉಲ್ಲೇಖಿಸುವಾಗ ಇದನ್ನು ಬಳಸುತ್ತಾರೆ.)ಗಳಷ್ಟು ಡಿ ವಿಟಮಿನ್‌ ಅಂಶ ಇರುತ್ತದೆ. ನಿತ್ಯದ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಬಳಕೆ ಮಾಡುವ ಮೂಲಕ ವಿಟಮಿನ್‌ ಡಿ ಕೊರತೆ ನೀಗಿಸಿಕೊಳ್ಳಬಹುದು.
  2. ಮೊಟ್ಟೆಯ ಹಳದಿ
    ಮೊಟ್ಟೆಯನ್ನು ಒಡೆದಾಗ ಅಲ್ಲಿರುವ ಹಳದಿ ಭಾಗವೂ ಕೂಡ ವಿಟಮಿನ್‌ ಡಿಯ ಪ್ರಮುಖ ಮೂಲ. ಅಂದಹಾಗೇ, ಈ ಹಳದಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲರಿ ಮತ್ತು ಕೊಬ್ಬಿನ ಅಂಶವೂ ಇರುತ್ತದೆ. ಪ್ರೋಟೀನ್‌, ಕಾರ್ಬೋಹೈಡ್ರೇಟ್‌ಗಳನ್ನೂ ಹೊಂದಿರುತ್ತದೆ. ಹೀಗಾಗಿ ವಿಟಮಿನ್‌ ಡಿ ಬೇಕೆಂದು, ಮೊಟ್ಟೆಯ ಹಳದಿಯನ್ನು ಅಳತೆ ಮೀರಿ ತಿನ್ನುವಂತೆಯೂ ಇಲ್ಲ.
  3. ಕಿತ್ತಳೆ ಹಣ್ಣಿನ ಜ್ಯೂಸ್‌
    ಬೆಳಗಿನ ಬ್ರೇಕ್‌ಫಾಸ್ಟ್‌ ಜತೆಗೆ ಒಂದು ಗ್ಲಾಸ್‌ ಕಿತ್ತಳೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಅನೇಕ ಉಪಯೋಗಗಳಿವೆ. ಹೀಗೆ ಮಾಡಿದರೆ ವಿಟಮಿನ್‌ ಡಿ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇದಕ್ಕೇನೂ ನೀವು ಕಷ್ಟಪಡಬೇಕಿಲ್ಲ. ಫ್ರೆಶ್‌ ಹಣ್ಣನ್ನು ತಂದು ಇಟ್ಟುಕೊಂಡರೆ, ಮನೆಯಲ್ಲೇ ಜ್ಯೂಸ್‌ ಮಾಡಿಕೊಳ್ಳಬಹುದು. ಬೇಸಿಗೆಯಲ್ಲಂತೂ ಡಿ ಹೈಡ್ರೇಶನ್‌ ಕಡಿಮೆ ಮಾಡಲು ಇದೊಂದು ಅದ್ಭುತ ಜ್ಯೂಸ್‌.
  4. ಓಟ್‌ಮೀಲ್‌
    ಓಟ್‌ಮೀಲ್‌ನಲ್ಲಿ ವಿಟಮಿನ್‌ ಡಿ ಅಂಶ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಇದನ್ನು ಬೆಳಗಿನ ಉಪಾಹಾರದಲ್ಲಿ ಸೇವನೆ ಮಾಡುವುದರಿಂದ ಡಿ ವಿಟಮಿನ್‌ ಹೆಚ್ಚಿಸಿಕೊಳ್ಳಬಹುದು. ಅದರ ಹೊರತಾಗಿ ಖನಿಜಾಂಶಗಳನ್ನು, ಕಾಂಪ್ಲೆಕ್ಸ್‌ ಕಾರ್ಬೋಹೈಡ್ರೇಟ್‌ಗಳನ್ನು ಕೂಡ ಇವು ಒಳಗೊಂಡಿವೆ. ಇವು ನಮ್ಮ ದೇಹ ಫಿಟ್‌ ಆಗಿ ಮತ್ತು ಆರೋಗ್ಯಯುತವಾಗಿ ಇರಲು ಸಹಕಾರಿ.

ಇದನ್ನೂ ಓದಿ: ಚಹಾಕ್ಕೆ ಬೆಲ್ಲ ಬೆರೆಸಿ ಕುಡೀತಿದ್ದೀರಾ?-ಈ ಅಭ್ಯಾಸ ಬೇಡ ಎನ್ನುತ್ತಿದ್ದಾರೆ ಆಯುರ್ವೇದ ತಜ್ಞರು !

Exit mobile version