ಮನೆಯಲ್ಲಿರುವ ವಾಷಿಂಗ್ ಮೆಷಿನ್ (Washing Machine Cleaning Tips) ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಅದು ಸೂಕ್ಷ್ಮಜೀವಿಗಳಿಂದ (germs) ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹುಮುಖ್ಯ, ಇಲ್ಲವಾದರೆ ಬಟ್ಟೆಯ (cloth) ಮೂಲಕ ಅದು ನಮ್ಮ ದೇಹವನ್ನು ಪ್ರವೇಶಿಸಬಹುದು. ಇದರಿಂದ ಚರ್ಮದ ಕಾಯಿಲೆಗಳು (skin problem) ಕಾಣಿಸಿಕೊಳ್ಳಬಹುದು. ಹೀಗಾಗಿ ವಾಷಿಂಗ್ ಮೆಷಿನ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ.
ವಾಷಿಂಗ್ ಮೆಷಿನ್ ಚೆನ್ನಾಗಿ ಕಾರ್ಯ ನಿರ್ವಹಿಸಲು ಆಗಾಗ್ಗೆ ಸ್ವಚ್ಛಗೊಳಿಸುವುದು ಅತ್ಯಗತ್ಯ. ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ಉತ್ತಮ. ಇದಕ್ಕಾಗಿ ಕೆಲವೊಂದು ಸರಳ ವಿಧಾನಗಳಿವೆ.
ಯಾವುದರಿಂದ ಸ್ವಚ್ಛಗೊಳಿಸಬಹುದು?
ವಾಷಿಂಗ್ ಮೆಷಿನ್ ಅನ್ನು ಸ್ವಚ್ಛಗೊಳಿಸುವ ಮೊದಲು ಯಾವುದರಿಂದ ಸ್ವಚ್ಛ ಮಾಡುವುದು ಎಂಬುದನ್ನು ನೋಡಿಕೊಳ್ಳಿ. ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಬಿಳಿ ವಿನೆಗರ್, ಅಡಿಗೆ ಸೋಡಾ, ಮೈಕ್ರೋಫೈಬರ್ ಬಟ್ಟೆ ಅಥವಾ ಸ್ಪಾಂಜ್, ಹಳೆಯ ಹಲ್ಲುಜ್ಜುವ ಬ್ರಷ್, ಬಿಸಿ ನೀರು, ಸೌಮ್ಯವಾದ ಸಾಬೂನು ಮತ್ತು ಬಕೆಟ್ ಅಗತ್ಯವಾಗಿರುತ್ತದೆ.
ಡ್ರಾಯರ್‌ಗಳನ್ನು ಸ್ವಚ್ಛಗೊಳಿಸಿ
ವಾಷಿಂಗ್ ಮೆಷಿನ್‌ನಲ್ಲಿ ಮೊದಲು ಡ್ರಾಯರ್‌ಗಳನ್ನು ತೆಗೆದು ಸ್ವಚ್ಛಗೊಳಿಸಿ. ಬಿಸಿ ಸಾಬೂನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಯಾವುದೇ ಕಲೆಗಳು ಇದ್ದರೆ ಸ್ಕ್ರಬ್ ಮಾಡಲು ಹಳೆಯ ಟೂತ್ ಬ್ರಷ್ ಅನ್ನು ಬಳಸಿ. ಡ್ರಾಯರ್‌ಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಅವುಗಳನ್ನು ಯಂತ್ರಕ್ಕೆ ಮರುಸೇರಿಸುವ ಮೊದಲು ಒಣಗಲು ಬಿಡಿ.
ವಿನೆಗರ್‌ನೊಂದಿಗೆ ಬಿಸಿ ನೀರು
ಎರಡು ಕಪ್ ಬಿಳಿ ವಿನೆಗರ್ ಅನ್ನು ನೇರವಾಗಿ ವಾಷಿಂಗ್ ಮೆಷಿನ್‌ಗೆ ಹಾಕಿ. ಬಿಸಿ ನೀರು ಹಾಕಿ ತಿರುಗಿಸಿ. ವಿನೆಗರ್ ಮೆಷಿನ್‌ನ ಒಳಗೆ ಇರುವ ಶಿಲೀಂಧ್ರವನ್ನು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಹಿತಕರ ವಾಸನೆಯನ್ನು ತೊಡೆದುಹಾಕುತ್ತದೆ.
ಬಾಗಿಲನ್ನು ಸ್ವಚ್ಛಗೊಳಿಸಿ
ವಾಷಿಂಗ್ ಮೆಷಿನ್‌ನ ಬಾಗಿಲಿನ ಸಂಧುಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ. ಇದಕ್ಕಾಗಿ ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ವಿನೆಗರ್ ಅನ್ನು ಸಮ ಪ್ರಮಾಣದಲ್ಲಿ ಹಾಕಿ ದ್ರಾವಣವನ್ನು ಬಾಗಿಲಿಗೆ ಸಿಂಪಡಿಸಿ. ಬಳಿಕ ಮೈಕ್ರೋಫೈಬರ್ ಬಟ್ಟೆ ಅಥವಾ ಸ್ಪಂಜನ್ನು ಬಳಸಿ ಉಜ್ಜಿ. ಕೊಳಕು ಸಂಗ್ರಹಗೊಳ್ಳುವ ಭಾಗಗಳತ್ತ ವಿಶೇಷ ಗಮನಕೊಡಿ.
ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!
ಫಿಲ್ಟರ್ ತೆಗೆದು ಸ್ವಚ್ಛಗೊಳಿಸಿ
ವಾಷಿಂಗ್ ಮೆಷಿನ್‌ನಲ್ಲಿ ತೆಗೆಯಬಹುದಾದ ಫಿಲ್ಟರ್ ಹೊಂದಿದ್ದರೆ ಅದನ್ನು ಪತ್ತೆ ಮಾಡಿ. ಅದರಲ್ಲಿರುವ ಸಂಗ್ರಹವಾಗಿರುವ ಕೊಳಕು ವಸ್ತುಗಳನ್ನು ತೆಗೆಯಿರಿ. ಫಿಲ್ಟರ್ ಅನ್ನು ಸ್ವಚ್ಛಗೊಳಿಸಲು ಬಿಸಿ ಸಾಬೂನು ನೀರು ಮತ್ತು ಬ್ರಷ್ ಅನ್ನು ಬಳಸಿ. ಅನಂತರ ಅದನ್ನು ಮರುಸ್ಥಾಪಿಸುವ ಮೊದಲು ಅದನ್ನು ಸಂಪೂರ್ಣವಾಗಿ ತೊಳೆಯಿರಿ.
ಬೇಕಿಂಗ್ ಸೋಡಾ ಬಳಸಿ
ವಿನೆಗರ್‌ನಿಂದ ಸ್ವಚ್ಛಗೊಳಿಸಿದ ಬಳಿಕ ಒಂದು ಕಪ್ ಅಡಿಗೆ ಸೋಡಾವನ್ನು ನೇರವಾಗಿ ತೊಳೆಯುವ ಯಂತ್ರಕ್ಕೆ ಹಾಕಿ ಬಿಸಿ ನೀರು ಬೆರೆಸಿ ತಿರುಗಿಸಿ. ಇದು ವಾಷಿಂಗ್ ಮೆಷಿನ್‌ನಲ್ಲಿರುವ ದುರ್ಗಂಧವನ್ನು ದೂರ ಮಾಡುತ್ತದೆ.
ಹೊರಭಾಗ ಸ್ವಚ್ಛತೆ
ವಾಷಿಂಗ್ ಮೆಷಿನ್‌ನ ಮೇಲ್ ಭಾಗವನ್ನು ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಇದರಲ್ಲಿರುವ ಬಟನ್ ಗಳ ಬಗ್ಗೆ ಎಚ್ಚರವಿರಲಿ. ಯಾಕೆಂದರೆ ಈ ಪ್ರದೇಶಗಳು ಕಾಲಾನಂತರದಲ್ಲಿ ಧೂಳು ಮತ್ತು ಕೊಳೆಯನ್ನು ಸಂಗ್ರಹಿಸಬಹುದು.
ಗಾಳಿಯಲ್ಲಿ ಒಣಗಲು ಬಿಡಿ
ವಾಷಿಂಗ್ ಮೆಷಿನ್ ಸ್ವಚ್ಛತೆ ಪೂರ್ಣಗೊಂಡ ಬಳಿಕ ಒಳಭಾಗವನ್ನು ಗಾಳಿಯಲ್ಲಿ ಸಂಪೂರ್ಣವಾಗಿ ಒಣಗಲು ಬಿಡಿ. ಇದಕ್ಕಾಗಿ ಬಾಗಿಲು ತೆರೆದಿಡಿ. ಇದು ಶಿಲೀಂಧ್ರ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
ವಾಷಿಂಗ್ ಮೆಷಿನ್ ಅನ್ನು ತಿಂಗಳಿಗೊಮ್ಮೆಯಾದರೂ ಈ ರೀತಿ ಸ್ವಚ್ಛ ಮಾಡಿದರೆ ಇದು ವಾಷಿಂಗ್ ಮೆಷಿನ್ ಹೆಚ್ಚು ಕಾಲ ಬಾಳಿಕೆ ಬರಲು ಸಹಾಯ ಮಾಡುವುದು.