ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯ ಸಂಭ್ರಮ ಹೆಚ್ಚಿಸಲು ಇದೀಗ ನಾನಾ ವಿನ್ಯಾಸದ ಜಡೆ ಬಿಲ್ಲೆ ಅಥವಾ ಜಡೆ ಜುವೆಲರಿಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿದ್ದು, ಟ್ರೆಂಡಿಯಾಗಿವೆ.
ಮದುವೆಯಾಗುವ ಹೆಣ್ಣು ಮಾತ್ರವಲ್ಲ, ಭಾಗವಹಿಸುವ ಇತರೆ ಹೆಣ್ಣು ಮಕ್ಕಳು ಧರಿಸಬಹುದಾದ ಈ ಜಡೆ ಜುವೆಲರಿಗಳು ನಾನಾ ವಿನ್ಯಾಸಗಳಲ್ಲಿ ಲಭ್ಯ. ನೋಡಲು ಆಕರ್ಷಕವಾಗಿ ಕಾಣುವ ಇವು ಸಾಂಪ್ರದಾಯಿಕ ಶೈಲಿಗೆ ಹೊಂದುವಂತಹ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.
ಆಕರ್ಷಕ ಜಡೆ ಸಿಂಗಾರಕ್ಕೆ ಸಾಥ್
ಹೂ-ಬಳ್ಳಿಯ ಕುಸುರಿ ಹೊಂದಿರುವಂತವು, ನವಿಲು, ಗಂಡುಭೇರುಂಡ, ಜಿಂಕೆ, ನಾಗರ ಹೀಗೆ ಪ್ರಾಣಿ-ಪಕ್ಷಿಗಳ ಎಂಬೋಸಿಂಗ್ ಹೊಂದಿದಂತವು, ಕೃಷ್ಣ-ರಾಧೆ, ಗೋಪಾಲ ಹೀಗೆ ನಾನಾ ಅವತಾರಗಳ ಪೆಂಡೆಂಟ್ ರೀತಿಯ ಜಡೆ ಬಿಲ್ಲೆಗಳನ್ನೊಳಗೊಂಡ ಜುವೆಲ್‌ಗಳು ಇಂದು ಚಾಲ್ತಿಯಲ್ಲಿವೆ. ಜಡೆ ಬಂಗಾರ, ಟೆಂಪಲ್ ಡಿಸೈನ್, ಜಡೆ ಆಕ್ಸೆಸರೀಸ್, ಮುತ್ತಿನ ಜಡೆ, ನಾಗರ ಜಡೆ, ಮ್ಯಾಂಗೋ, ಪೀಕಾಕ್, ಗೋಲ್ಡನ್ ಜಡೆ ಹೀಗೆ ನಾನಾ ಹೆಸರಿನಲ್ಲಿ ಟ್ರೆಂಡಿಗೆ ತಕ್ಕಂತೆ ಬಿಡುಗಡೆಗೊಂಡು ಹೆಣ್ಣು ಮಕ್ಕಳ ಪ್ರೀತಿಗೆ ಇವು ಪಾತ್ರವಾಗಿವೆ.
ಧರಿಸುವವರು ಉದ್ದನೆಯ ಜಡೆ ಹೆಣೆದುಕೊಂಡರೆ ಸಾಕು, ಅದಕ್ಕೆ ಫಿಟ್ ಆಗುವ ರೀತಿಯಲ್ಲಿ ರೆಡಿ ಇರುವ ಈ ಜಡೆ ಬಿಲ್ಲೆ ಜುವೆಲ್‌ಗಳನ್ನು ಇರಿಸಿ, ಕಟ್ಟಿದಲ್ಲಿ ಜಡೆ ಸಿಂಗಾರ ಕಂಪ್ಲೀಟ್. ಧರಿಸುವುದು ಇಲ್ಲವೇ ಹಾಕಿಕೊಳ್ಳುವುದು ಸುಲಭ ಎನ್ನುತ್ತಾರೆ ಮಾಡೆಲ್ ಪೃಥ್ವಿ ಶೇಖರ್.
ಅವರ ಪ್ರಕಾರ, ಜಡೆಯ ಸಿಂಗಾರವೆಂದರೇ ಮೊದಲೆಲ್ಲಾ ಗಂಟೆಗಟ್ಟಲೇ ಸಮಯ ಹಿಡಿಯುತ್ತಿತ್ತು. ಇದೀಗ ಈ ರೆಡಿಮೇಡ್ ಜಡೆ ಜುವೆಲ್‌ಗಳಿಂದ ಜಡೆಯ ಸಿಂಗಾರ ಮಾಡುವುದು ಸುಲಭವಾಗಿದೆಯಂತೆ.
ರಾಯಲ್ ಲುಕ್‌ಗೆ ಜಡೆ ಸಿಂಗಾರ
ಜಡೆ ಬಿಲ್ಲೆಗೆ ಪುರಾಣ ಕಾಲದಿಂದಲೂ ಸ್ಥಾನವಿದೆ. ರಾಜ ಮನೆತನದ ಹೆಣ್ಣು ಮಕ್ಕಳು ವಜ್ರ-ವೈಡೂರ್ಯ ಖಚಿತ ಹಾಗೂ ಬಂಗಾರದ ಜಡೆ ಬಿಲ್ಲೆಗಳನ್ನು ಧರಿಸುತ್ತಿದ್ದರು ಎಂಬ ಉಲ್ಲೇಖವಿದೆ. ಇನ್ನು ಕಾಲ ಸರಿದಂತೆ ಸಾಮಾನ್ಯ ಹೆಣ್ಣು ಮಕ್ಕಳು ಕೊಳ್ಳಬಹುದಾದ ಬೆಲೆಯಲ್ಲಿ ವನ್ ಗ್ರಾಮ್ ಗೋಲ್ಡ್ ಹಾಗೂ ಗೋಲ್ಡ್ ಕವರಿಂಗ್‌ನಲ್ಲಿ ಇವು ದೊರೆಯಲಾರಂಭಿಸಿದವು. ಹಾಗಾಗಿ ಮದುವೆಗಳಲ್ಲಿ ಜಡೆ ಸಿಂಗಾರಕ್ಕೆ ಇವನ್ನು ಬಳಸುವುದು ಹೆಚ್ಚಾಯಿತು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಜಡೆ ಸಿಂಗಾರ ಮಾಡುವವರಿಗೆ ಗೊತ್ತಿರಲಿ:
- ಸೀರೆ, ದಾವಣಿ-ಲಂಗ ಹಾಗೂ ಲೆಹೆಂಗಾಗಳಿಗೂ ಜಡೆ ಬಿಲ್ಲೆ ಸಿಂಗಾರ ಸೂಟ್ ಆಗುತ್ತದೆ.
- ಕೂದಲಿನ ಲೆಂತ್ಗೆ ಅನುಗುಣವಾಗಿ ಸೂಕ್ತವಾಗಿರುವುದನ್ನು ಬಳಸಿ.
- ಜಡೆ ತೆಳುವಾಗಿದ್ದಲ್ಲಿ ಲೈಟ್ವೇಟ್ ಆಕ್ಸೆಸರೀಸ್ ಆಯ್ಕೆ ಮಾಡಿ.
- ಹಬ್ಬ-ಮದುವೆ ಸಮಾರಂಭಗಳಿಗೆ ಆಕರ್ಷಕವಾಗಿ ಕಾಣುವುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Wedding Mens Fashion | ಮದುಮಗನಿಗೆ ರಾಯಲ್ ಲುಕ್ ನೀಡುವ ಶೆರ್ವಾನಿ