ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯ ಅರಿಶಿನ ಶಾಸ್ತ್ರದಲ್ಲಿ ಮದುಮಗಳು ಕಲರ್‌ಫುಲ್ ಫ್ಲೋರಲ್ ಜ್ಯುವೆಲರಿ ಧರಿಸುವ ಟ್ರೆಂಡ್ ಇದೀಗ ಪಾಪ್ಯುಲರ್ ಆಗಿದೆ. ಇದಕ್ಕೆ ಪೂರಕ ಎಂಬಂತೆ ಮಾರುಕಟ್ಟೆಯಲ್ಲಿ ನಾನಾ ಬಗೆಯ ಬಣ್ಣ ಬಣ್ಣದ ಫ್ಲೋರಲ್ ಜ್ಯುವೆಲರಿಗಳು ಎಂಟ್ರಿ ನೀಡಿವೆ.
ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ!
ಮಾನೋಕ್ರೋಮ್ ವರ್ಣದವು, ಮಿಕ್ಸ್ ಮ್ಯಾಚ್ ಬಣ್ಣದವು, ಪರ್ಲ್ ಹಾಗೂ ಬೀಡ್ಸ್ ಮಿಕ್ಸ್ ಇರುವಂತಹ ಹೂವಿನವು, ನ್ಯಾಚುರಲ್ ಹೂವಿನಿಂದ ಮಾಡಿದಂತವು ಹಾಗೂ ಕೃತಕ ಹೂವುಗಳಿಂದ ಮಾಡಿರುವಂತವು ಇಂದು ಮಾರುಕಟ್ಟೆಯಲ್ಲಿ ಎಂಟ್ರಿ ನೀಡಿದ್ದು, ಇವುಗಳಲ್ಲಿ ಬಿಗ್ ಗ್ರ್ಯಾಂಡ್ ಮದುವೆಗಳಲ್ಲಿ ನ್ಯಾಚುರಲ್ ಹೂವಿನಿಂದ ಮಾಡಿದ ಫ್ಲೋರಲ್ ಜ್ಯುವೆಲರಿಗಳು ಪಾಪುಲರ್ ಆಗಿವೆ. ಇನ್ನು ಸಾಮಾನ್ಯ ಮದುವೆಗಳಲ್ಲಿ ಮರು ಬಳಕೆ ಮಾಡಬಹುದಾದ ಕೃತಕ ಹೂವಿನ ಫ್ಲೋರಲ್ ಜ್ಯುವಲರಿಗಳು ಟ್ರೆಂಡಿಯಾಗಿವೆ.
ನ್ಯಾಚುರಲ್ ಹೂವಿನ ಜ್ಯುವೆಲರಿಗಳು
ದುಂಡು ಮಲ್ಲಿಗೆ ಮೊಗ್ಗು, ಸೇವಂತಿಗೆ ಸೇರಿದಂತೆ ನಾನಾ ಬಗೆಯ ಪುಟ್ಟ ಪುಟ್ಟ ಹೂಗಳಿಂದ ಮಾಡಿದ ಫ್ಲೋರಲ್ ಆಭರಣಗಳಿವು. ನೋಡಲು ಆಕರ್ಷಕವಾಗಿ ಕಾಣುತ್ತವೆ. ಆದರೆ, ಹೆಚ್ಚು ಹೊತ್ತು ಬಾಳಿಕೆ ಬರುವುದಿಲ್ಲ. ಬದಲಿಗೆ ಅತಿ ಬೇಗ ಬಾಡುತ್ತವೆ. ಹಾಗಾಗಿ ಇವನ್ನು ಹೆಚ್ಚು ಕಾಲ ಧರಿಸಲು ಸಾಧ್ಯವಾಗುವುದಿಲ್ಲ. ಇನ್ನು ಇವುಗಳನ್ನು ಸಂರಕ್ಷಿಸಲು ಫ್ರಿಜ್‌ನಲ್ಲಿರಿಸಿ ನಂತರ ಕಾರ್ಯಕ್ರಮದ ವೇಳೆ ಧರಿಸಬೇಕಾಗುತ್ತದೆ. ಇದೀಗ ನ್ಯಾಚುರಲ್ ಫ್ಲೋರಲ್ ಜ್ಯುವೆಲರಿಗಳನ್ನು ಬ್ಯೂಟಿ ಪಾರ್ಲರ್ ನವರೇ ಆರ್ಡರ್ ತೆಗೆದುಕೊಂಡು ಮಾಡಿಕೊಡುತ್ತಾರೆ. ಆನ್‌ಲೈನ್‌ನಲ್ಲೂ ಇವು ಆರ್ಡರ್ ಮೇರೆಗೆ ಲಭ್ಯ.
ಕೃತಕ ಫ್ಲೋರಲ್ ಜ್ಯುವೆಲರಿಗಳು
ಇವು ನೈಜ ಹೂವುಗಳಲ್ಲ! ಬದಲಿಗೆ ಕೃತಕ ಹೂವುಗಳು. ಆಯಾ ವಧುವಿನ ಡಿಸೈನರ್‌ವೇರ್ ಡಿಸೈನ್ ಆಧಾರದ ಮೇಲೆ ಧರಿಸುವಂತೆ ದೊರೆಯುತ್ತವೆ. ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಲಭ್ಯ. ಬೈತಲೆ ಬೊಟ್ಟು, ಕಿವಿಯ ಇಯರಿಂಗ್‌ಗಳು, ಕೈಗೆ ಬ್ರೇಸ್‌ಲೇಟ್ ಕಾಲುಗೆಜ್ಜೆ ಸೇರಿದಂತೆ ನಾನಾ ಆಭರಣಗಳು ಇವುಗಳಲ್ಲಿ ಲಭ್ಯ. ಎಲ್ಲಾ ಫ್ಯಾನ್ಸಿ ಶಾಪ್‌ಗಳಲ್ಲೂ ಇವು ದೊರೆಯುತ್ತವೆ. ಆನ್‌ಲೈನ್‌ನಲ್ಲಂತೂ ಲೆಕ್ಕವಿಲ್ಲದಷ್ಟು ಶೈಲಿಯಲ್ಲಿ ದೊರೆಯುತ್ತವೆ ಎನ್ನುತ್ತಾರೆ ಸೌಂದರ್ಯ ತಜ್ಞರು.
ಅಂದಹಾಗೆ, ಈ ಆಭರಣವನ್ನು ಅರಿಶಿನ ಶಾಸ್ತ್ರಕ್ಕೆ ಬಳಸುವುದರಿಂದ ಹೆಚ್ಚಾಗಿ ಸನ್ ಕಲರ್ ಫ್ಲೋರಲ್ ಜ್ಯುವೆಲರಿಗಳನ್ನೇ ಬಳಸಲಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಫ್ಲೋರಲ್ ಆಭರಣ ಪ್ರಿಯರಿಗಾಗಿ ಒಂದಿಷ್ಟು ಸಲಹೆಗಳು
· ಮದುವೆಯ ಅರಿಶಿನ ಶಾಸ್ತ್ರದ ಡಿಸೈನರ್‌ವೇರ್‌ಗೆ ಮ್ಯಾಚ್ ಮಾಡಿ.
· ಕೃತಕ ಆಭರಣಗಳಾದಲ್ಲಿ ಮರುಬಳಕೆ ಮಾಡಬಹುದು.
· ನೈಜ ಹೂವುಗಳ ಆಭರಣಗಳು ಬಿಸಿಲಿಗೆ ಬಾಡುವ ಸಾಧ್ಯತೆ ಹೆಚ್ಚು.
· ನೈಜ ಫ್ಲೋರಲ್ ಜ್ಯುವೆಲರಿಗಳನ್ನು ಧರಿಸುವ ಮೊದಲು ನೀರನ್ನು ಚಿಮುಕಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)