ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುಮಗನಿಗೆ ರಾಯಲ್ ಇಮೇಜ್ ನೀಡುವ ಶೆರ್ವಾನಿಗಳು ಈ ವೆಡ್ಡಿಂಗ್ ಸೀಸನ್‌ಗೆ ಎಂಟ್ರಿ ನೀಡಿವೆ.
“ಪ್ರತಿ ಮದುಮಗನು ಮದುವೆಯ ದಿನ ಎಲ್ಲರಿಗಿಂತ ಭಿನ್ನವಾಗಿ ಕಾಣಿಸಬೇಕೆಂದು ಬಯಸುತ್ತಾನೆ. ಇತರರ ಉಡುಪುಗಳಿಗಿಂತ ಆಕರ್ಷಕವಾಗಿ ಕಾಣಬೇಕು ಜತೆಗೆ ಲುಕ್ ರಾಯಲ್ ಇಮೇಜ್‌ನದ್ದಾಗಿರಬೇಕು ಎಂದುಕೊಳ್ಳುತ್ತಾನೆ. ಅದಕ್ಕೆ ಸೂಟ್ ಆಗುವಂತೆ ಇದೀಗ ರಾಯಲ್ ಶೆರ್ವಾನಿಗಳು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ ಎನ್ನುತ್ತಾರೆ ಮಾಡೆಲ್ ಹಾಗೂ ನಟ ಶ್ರೀರಾಮ್.
ಶೆರ್ವಾನಿ ಹಿಸ್ಟರಿ
ಅಂದಹಾಗೆ, ಶೆರ್ವಾನಿ ಮೂಲತಃ ಪರ್ಶಿಯನ್‌ರ ಉಡುಪಾಗಿದೆ. ಸಿಲ್ಕ್, ಟೆರ್ರಿ ವೂಲ್, ಕಾಟನ್ ಫ್ಯಾಬ್ರಿಕ್‌ಮಿಶ್ರದಿಂದ ಸಿದ್ಧಪಡಿಸಲಾಗುವ ಶೆರ್ವಾನಿಯನ್ನು ರಾಜ-ಮಹಾರಾಜರು ಧರಿಸುತ್ತಿದ್ದರು. ಕಾಲಕ್ಕೆ ತಕ್ಕಂತೆ ರೂಪಾಂತರಗೊಂಡು ಇದೀಗ ಮದುವೆಯ ಧಿರಿಸಾಗಿ ಮಾರ್ಪಾಡಾಗಿದೆ. ಎಂಬ್ರಾಯ್ಡರಿ, ಫ್ಯೂಶನ್, ಪ್ರಿಂಟೆಡ್ ಲಾಂಗ್ ಬಂದಗಾಲ, ಜೋಧ್‌ಪುರಿ, ಅನ್ರ್ಗಾಕಾ ಸೇರಿದಂತೆ ನಾನಾ ಹೊಸ ವಿನ್ಯಾಸದ ಶೆರ್ವಾನಿಗಳು ಈ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
ಡಿಫರೆಂಟ್ ಲುಕ್‌ಗಾಗಿ ಶೆರ್ವಾನಿ
ಪಂಚೆ-ಶಲ್ಯ ಮ್ಯಾಚ್ ಆಗುವುದಿಲ್ಲ ಎನ್ನುವ ಹುಡುಗರಿಗೆ, ವಿವಿಧ ರೀತಿಯ ಮತ್ತು ಶೈಲಿಯ ಶೆರ್ವಾನಿಗಳು ಹೊಂದಿಕೆ ಆಗಬಹುದು. ತಮ್ಮ ಪರ್ಸನಾಲಿಟಿಗೆ ಹೊಂದುವಂತಹ ಶೆರ್ವಾನಿಗಳನ್ನು ಆಯ್ಕೆ ಮಾಡಿ ಖರೀದಿಸಬಹುದು. ಇವುಗಳಲ್ಲಿ ಸಿಂಪಲ್ ಆಗಿರುವ ಕ್ಯಾಶುವಲ್ ಶೆರ್ವಾನಿಯಿಂದಿಡಿದು ಗ್ರಾಂಡ್ ಶೆರ್ವಾನಿಗಳು ದೊರೆಯುತ್ತವೆ. ಇದನ್ನು ಧರಿಸಿದಾಗ ಆಫ್ ಶೂ ಧರಿಸಿ, ಒಂದೆರೆಡು ಜುವೆಲರಿ ಹಾಕಿಕೊಂಡಲ್ಲಿ ಥೇಟ್ ಮಹಾರಾಜರ ಲುಕ್ ನಿಮ್ಮದಾಗುವುದು. ಎಲ್ಲರನ್ನು ಸೆಳೆಯಬಹುದು ಎಂದು ಸಲಹೆ ನೀಡುತ್ತಾರೆ ವಿಭಿನ್ನ ಡಿಸೈನರ್ಸ್.
ವೆರೈಟಿ ಶೆರ್ವಾನಿ ವಿನ್ಯಾಸ
ಗ್ರ್ಯಾಂಡ್ ಲುಕ್ ನೀಡುವ ಕಿಂಗ್ ಇಮೇಜ್ ಶೆರ್ವಾನಿಗಳು ಈ ವೆಡ್ಡಿಂಗ್ ಸೀಸನ್‌ನಲ್ಲಿ ಹಂಗಾಮ ಎಬ್ಬಿಸಿದ್ದು, ಸಿಂಪಲ್ ಶೆರ್ವಾನಿಗಳನ್ನು ಮದುವೆಯನ್ನು ಅಟೆಂಡ್ ಮಾಡುವವರೂ ಧರಿಸಬಹುದು. ಇನ್ನು ಕಿಂಗ್ ಲುಕ್ ನೀಡುವ ಭಾರಿ ವಿನ್ಯಾಸದ ಹ್ಯಾಂಡ್‌ವರ್ಕ್ ಇಲ್ಲವೇ ಕಾಲರ್ ನೆಕ್‌ಲೈನ್ ಡಿಸೈನ್ ಇರುವಂತವನ್ನು ಮದುಮಗ ಧರಿಸಬಹುದು. ಇನ್ನು ಡಿಫರೆಂಟ್ ಲುಕ್ ಬೇಕೆಂದಲ್ಲಿ ಶೆರ್ವಾನಿಯ ಎರಡೂ ಕಡೆ ಇರುವ ಬಾರ್ಡರ್ ಸ್ಲಿಟ್ ಇರುವಂತವನ್ನು ಧರಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ರೆಡಿಮೇಡ್ ಶೆರ್ವಾನಿ
ಈ ಹಿಂದೆ ಶೆರ್ವಾನಿಗಳನ್ನು ಹೊಲೆಸಬೇಕಾಗಿತ್ತು. ಇಲ್ಲವೇ ದೊರೆಯುತ್ತಿದ್ದ ಸೆಮಿ ಶೆರ್ವಾನಿಗಳನ್ನು ಬೋಟಿಕ್‌ಗಳಲ್ಲಿ ಸಿದ್ಧಪಡಿಸಲು ಕೊಡಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಆಯಾ ಪುರುಷರಿಗೆ ಹೊಂದುವಂತಹ ರೆಡಿಮೇಡ್ ಶೆರ್ವಾನಿಗಳು ಶೋರೂಂಗಳಲ್ಲಿ ದೊರೆಯುತ್ತಿವೆ. ಫ್ಯಾಬ್ರಿಕ್ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತದೆ. ಡಿಸೈನ್‌ಗಳಿಗೆ ತಕ್ಕಂತೆ ದರ ನಿಗಧಿಪಡಿಸಲಾಗಿರುತ್ತದೆ.
ರೆಡಿಮೇಡ್ ಶೆರ್ವಾನಿಗಳ ಒಂದು ಪ್ಲಸ್ ಪಾಯಿಂಟ್ ಎಂದರೇ ಟ್ರಯಲ್ ನೋಡಿ, ತಮಗೆ ಸೂಟ್ ಆಗುವಂತದ್ದನ್ನು ಕೂಡಲೇ ಖರೀದಿಸಬಹುದು.
ಶೆರ್ವಾನಿ ಧರಿಸುವವರ ಗಮನಕ್ಕಿರಲಿ:
- ಡೆರ್ಬಿ ಶೂಗಳನ್ನು ಧರಿಸುವುದು ಉತ್ತಮ.
- ಡಿಸೈನರ್ ಬಟನ್ಸ್ ಇರುವಂತವನ್ನು ಚೂಸ್ ಮಾಡಿ.
- ಸ್ಲಿಟ್ ಶೆರ್ವಾನಿ ಕೂಡ ಟ್ರೆಂಡ್ನಲ್ಲಿದೆ.
- ಡಾರ್ಕ್ ಶೇಡ್ ಶೆರ್ವಾನಿಗಳು ಆಕರ್ಷಕವಾಗಿ ಕಾಣುತ್ತವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Wedding Fashion: ಮರಳಿದ ಗ್ರ್ಯಾಂಡ್ ಡಿಸೈನರ್ ಬಾರ್ಡರ್ ರೇಷ್ಮೆ ಸೀರೆ