ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಿಸರ್ಚ್ ಹಾಗೂ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೇಹಾ ಗೋಯಲ್ ಅವರ ಪ್ಯಾಷನ್ ಮಾಡೆಲಿಂಗ್. ಮೂಲತಃ ಕೋಲ್ಕೊತಾದವರಾದ ಇವರು ಇದೀಗ ಬೆಂಗಳೂರಿನಲ್ಲೆ ಸೆಟಲ್ ಆಗಿದ್ದಾರೆ. ಟ್ರಾವೆಲಿಂಗ್ ಎಂದರೆ ಸದಾ ಸೈ ಎನ್ನುವ ಇವರಿಗೆ ಬೆಂಗಳೂರು ಅಂದ್ರೆ ಪ್ರಾಣವಂತೆ. ಫ್ಯಾಷನ್ ಪ್ರಿಯರಿಗೆ ಬೆಂಗಳೂರು ಅವಕಾಶ ಕಲ್ಪಿಸಿರುವುದು ಮಾತ್ರವಲ್ಲ, ಪ್ರೀತಿಸುವಂತೆ ಮಾಡಿದೆ ಎನ್ನುತ್ತಾರೆ. ಈ ಬಾರಿಯ ವಿಸ್ತಾರದ ವೀಕೆಂಡ್ ಫ್ಯಾಷನ್‌ನಲ್ಲಿ ತಮ್ಮ ಫ್ಯಾಷನ್ ಹಾಗೂ ಸ್ಟೈಲ್‌ಸ್ಟೇಟ್‌ಮೆಂಟ್ ಬಗ್ಗೆ ಅವರು ವಿವರ ಹಂಚಿಕೊಂಡಿದ್ದಾರೆ.
ಬೆಂಗಳೂರಿಗೆ ಗೆಸ್ಟ್ ಆಗಿ ಬಂದು ಇಲ್ಲಿಯೇ ಸೆಟಲ್ ಆದ ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಏನು?
ಬೆಂಗಳೂರಿನ ಹವಾಮಾನಕ್ಕೆ ಹಾಗೂ ಕಾಲಕ್ಕೆ ತಕ್ಕಂತೆ ನನ್ನ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಬದಲಾಗುತ್ತದೆ. ಇನ್ನು ಸಮ್ಮರ್‌ನಲ್ಲಿ ಫ್ಲೋರಲ್, ವಿಂಟರ್‌ನಲ್ಲಿ ಲೆಯರ್ ಜಾಕೆಟ್ಸ್, ಹಬ್ಬಗಳಲ್ಲಿ ಟ್ರೆಡಿಷನಲ್ ಹೀಗೆ ಬದಲಾವಣೆ ಮಾಡುತ್ತಿರುತ್ತೇನೆ.
ಸೀಸನ್ ಫ್ಯಾಷನ್ ಬದಲಾಗುವ ಬಗ್ಗೆ ವಿವರಿಸಿ?
ಬೆಂಗಳೂರಿನ ಸೀಸನ್ ಬಗ್ಗೆ ಹೇಳಬೇಕೆಂದಲ್ಲಿ, ಉದ್ಯಾನನಗರಿಯಲ್ಲಿ ಪ್ರತಿಯೊಂದು ಸೀಸನ್ ಫ್ಯಾಷನ್ ಕೂಡ ನನಗೆ ಪ್ರಿಯವಾಗುತ್ತದೆ. ಆಯಾ ಹವಾಮಾನಕ್ಕೆ ತಕ್ಕಂತೆ ಬಿಡುಗಡೆಯಾಗುವ ಫ್ಯಾಷನೆಬಲ್ ಉಡುಪುಗಳು ಟ್ರೆಂಡಿಯಾಗಿರುತ್ತವೆ ಮಾತ್ರವಲ್ಲ, ಪ್ರಪಂಚದ ಯಾವುದೇ ಕಡೆಯಿಂದ ಬಂದವರಿಗೂ ಪ್ರಿಯವಾಗುತ್ತವೆ. ಚಿಕ್ಕ ಬ್ರಾಂಡ್‌ನಿಂದ ಹಿಡಿದು ದೊಡ್ಡ ಬ್ರಾಂಡೆಡ್ ಉಡುಪುಗಳು ಇಲ್ಲಿ ಸೀಸನ್‌ಗೆ ತಕ್ಕಂತೆ ಬಿಡುಗಡೆಯಾಗುತ್ತವೆ.
ಕೆಲಸ ಮಾಡುತ್ತಲೇ ಮಾಡೆಲಿಂಗ್‌ನಲ್ಲೂ ಬಿಜಿಯಾಗಿರುವ ನೀವು ಮುಂಬರುವ ಮಾಡೆಲ್‌ಗಳಿಗೆ ಏನು ಹೇಳುತ್ತೀರಾ?
ಮಾಡೆಲಿಂಗ್ ಎಲ್ಲರಿಗೂ ಒಲಿಯುವುದಿಲ್ಲ. ಅದರಲ್ಲೂ ವರ್ಕ್ ಮಾಡುತ್ತಾ ಮಾಡೆಲಿಂಗ್ ಮಾಡುವುದು ಇದೆಯಲ್ಲ! ಇದಕ್ಕೆ ಸಾಕಷ್ಟು ಆತ್ಮವಿಶ್ವಾಸ ಹಾಗೂ ಉತ್ಸಾಹ ಬೇಕಾಗುತ್ತದೆ. ಅವಕಾಶಗಳು ಸಿಕ್ಕಿದಾಗ ಅದನ್ನು ರಿಜೆಕ್ಟ್ ಮಾಡದೇ ಮುಂದುವರಿಯಬೇಕು. ಈ ಕ್ಷೇತ್ರದಲ್ಲಿ ಅಪ್‌ಡೇಟ್ ಆಗಿರಬೇಕು. ಕ್ರಿಯಾತ್ಮಕವಾಗಿರಬೇಕು.
ನಿಮ್ಮ ಫೇವರೇಟ್ ಡ್ರೆಸ್‌ಕೋಡ್ ಯಾವುದು?
ನನಗಂತೂ ಟ್ರೆಂಡಿಯಾದ ಉಡುಪುಗಳೆಲ್ಲವೂ ಇಷ್ಟ. ಕಂಫರ್ಟಬಲ್‌ವೇರ್‌ಗೆ ನನ್ನ ಮೊದಲ ಆದ್ಯತೆ. ಇದರೊಂದಿಗೆ ಟ್ರೆಡಿಷನಲ್‌ವೇರ್‌ನಲ್ಲಿ ಗ್ರೀನ್ ಸೀರೆ ಅಂದ್ರೆ ಪ್ರಿಯ. ಇನ್ನು ಎಂದಿನಂತೆ ಲೆಹೆಂಗಾ ಹಾಗೂ ಹಾಫ್ ಸೀರೆಗಳು ಧರಿಸುವುದೆಂದರೇ ಯಾವತ್ತೂ ಬೇಸರವಾಗದು.
ಬೆಂಗಳೂರು ಫ್ಯಾಷನ್ ಹಬ್ ಆಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಖುಷಿಯಾಗುತ್ತದೆ. ಮಾಡೆಲ್‌ಗಳಿಗೆ ಮತ್ತಷ್ಟು ಅವಕಾಶ ದೊರೆಯುತ್ತದಲ್ಲ! ಎಂದು ಸಂತಸ ಮೂಡುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)