ಏನೇ ಮಾಡಿದರೂ ಹೊಟ್ಟೆ ಮಾತ್ರ ಕರಗುತ್ತಿಲ್ಲ ಎಂಬುದು ಕೆಲವರ ಅಳಲು. ದಿನವೂ ನಿಂಬೆರಸ ಜೇನುತುಪ್ಪ ಹಾಕಿದ ಬಿಸಿನೀರು ಬೆಳಗ್ಗೆದ್ದ ಕೂಡಲೇ ಹೀರಿದ್ದಾಯಿತು. ಇನ್ನೇನೋ ಜ್ಯೂಸುಗಳನ್ನು ಮಾಡಿ ಕುಡಿದಿದ್ದಾಯಿತು. ವ್ಯಾಯಾಮ, ನಡಿಗೆ ಎಲ್ಲವೂ ಮಾಡಲಾಗುತ್ತಿದೆ. ಆದರೂ ಹೊಟ್ಟೆ ಮಾತ್ರ ಹಾಗೆಯೇ ಇದೆ. ಒಂದಿಂಚೂ ಅಲುಗಾಡಿಲ್ಲ (weight loss guide) ಎಂಬುದು ಬಹುತೇಕರ ಗೋಳು. ನೈಸರ್ಗಿಕವಾಗಿರಬೇಕು, ಸುಲಭವೂ ಆಗಿರಬೇಕು (weight loss tips), ಆದರೆ, ಹೊಟ್ಟೆ ಮಾತ್ರ ಕರಗಿಸಬೇಕು ಎಂದುಕೊಳ್ಳುವ ಮಂದಿಗೆ ಇಲ್ಲೊಂದು ಮನೆಮದ್ದಿದೆ. ಅದು ಬೆಳ್ಳುಳ್ಳಿ! ಬೆಳ್ಳುಳ್ಳಿಯ ವಾಸನೆ ಎಂದು ಮಾರು ದೂರ ಓಡುವ ಮಂದಿಗೆ ಇದು ಕಷ್ಟಸಾಧ್ಯವಾದರೂ, ನಾವು ಮನಸ್ಸು ಮಾಡಿದರೆ ಬೆಳ್ಳುಳ್ಳಿಯ ಏಕೈಕ ಪರಿಶ್ರಮದಿಂದ (garlic benefits, garlic uses) ಇದು ಸಾಧ್ಯವಾಗುತ್ತದೆ. ಆದರೆ, ಹಸಿ ಬೆಳ್ಳುಳ್ಳಿ ತಿನ್ನುವ ಪರಿಶ್ರಮ ಮಾತ್ರ ನಾವು ತೆಗೆದುಕೊಳ್ಳಬೇಕು ಅಷ್ಟೇ.
ಸಂಶೋಧನೆಗಳ ಪ್ರಕಾರ, ಬೆಳ್ಳುಳ್ಳಿಯಲ್ಲಿ ಸಲ್ಫರ್ ಅಂಶವು ಹೇರಳವಾಗಿದ್ದು ಇದು ದೇಹದಲ್ಲಿರುವ ವಿಷಕಾರಕಗಳನ್ನು ಹೊರಹಾಕಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಇದರಲ್ಲಿ ಕೊಬ್ಬು ಕರಗಿಸುವ ಗುಣವೂ (garlic for weight loss) ಇರುವುದರಿಂದ ಬಹಳ ಸುಲಭವಾಗಿ ಹಾಗೂ ಬೇಗನೆ ಕೊಬ್ಬನ್ನು ಕರಗಿಸಿ ದೇಹವನ್ನು ಚುರುಕಾಗಿಡುತ್ತದೆ. ಹಾಗಾದರೆ ಹಸಿ ಬೆಳ್ಳುಳ್ಳಿಯನ್ನು ತಿನ್ನುವುದು ಹೇಗೆ ಎಂಬ ಪ್ರಶ್ನೆಯೇ. ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ಎಲ್ಲ ವಿಧಾನಗಳ ಮೂಲಕ ಹಸಿ ಬೆಳ್ಳುಳ್ಳಿಯನ್ನು ನಿಮ್ಮ ಹೊಟ್ಟೆ ಸೇರುವಂತೆ ಮಾಡಬಹುದು.
1. ಬಿಸಿನೀರು ಹಾಗೂ ಬೆಳ್ಳುಳ್ಳಿ: ದಿನದ ಆರಂಭವನ್ನು ಬೆಳ್ಳುಳ್ಳಿಯ ಜೊತೆಗೆ ಆರಂಬಿಸಲು ಇದು ಒಳ್ಳೆಯದು. ಬೆಳಗ್ಗೆ ಎದ್ದ ಮೇಲೆ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಬಿಸಿ ನೀರಿನಲ್ಲಿ ಹಾಕಿಡಿ. ಅದರ ರಸ ನೀರಿನ ಜೊತೆ ಹೊಂದಿಕೊಳ್ಳಲು ೧೦ -೧೫ ನಿಮಿಷಗಳು ಬಿಡಿ. ನಂತರ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಈ ಬೆಳ್ಳುಳ್ಳಿ ನೀರು ಮ್ಯಾಜಿಕ್‌ನಂತೆ ಕಾರ್ಯ ನಿರ್ವಹಿಸುವುದಲ್ಲದೆ, ಹೊಟ್ಟೆಯ ಕೊಬ್ಬನ್ನು ಕರಗುವಂತೆ ಮಾಡಿ, ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.
2 ನಿಂಬೆರಸ ಮತ್ತು ಬೆಳ್ಳುಳ್ಳಿ: ಕೆಲವರಿಗೆ ಬೆಳ್ಳುಳ್ಳಿಯ ವಾಸನೆ ಹೊಂದಿಕೆಯಾಗದು. ಬಹುತೇಕರಿಗೆ ಹಸಿ ಬೆಳ್ಳುಳ್ಳಿ ತಿನ್ನಲು ಸಾಧ್ಯವೇ ಆಗದು. ಆದರೂ ಪ್ರಯತ್ನ ಪಡಲು ಮನಸ್ಸಿರುವ ಮಂದಿ ನಿಂಬೆಹಣ್ಣಿನ ರಸದ ಜೊತೆಗೆ ಪ್ರಯತ್ನಿಸಬಹುದು. ಬೆಳ್ಳುಳ್ಳಿಯನ್ನು ಜಜ್ಜಿ ಬಿಸಿನೀರಿನ ಜೊತೆ ಸೇರಿಸಿ, ಕೆಲ ನಿಮಿಷಗಳ ಕಾಲ ಸೆಟ್ ಆಗಲು ಬಿಟ್ಟು, ಈ ನೀರಿಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ, ಕುಡಿಯಿರಿ. ಇದರಲ್ಲಿ ಹೊಟ್ಟೆ ಕರಗಿಸುವ ಡಬಲ್ ಪವರ್ ಇದ್ದು, ನಿಂಬೆಹಣ್ಣಿನ ವಿಟಮಿನ್ ಸಿ ಒಳ್ಳೆಯದನ್ನೇ ಮಾಡುತ್ತದೆ.
3. ಬೆಳ್ಳುಳ್ಳಿ ಹಾಗೂ ಜೇನುತುಪ್ಪ: ಹಸಿಬೆಳ್ಳುಳ್ಳಿಯ ವಾಸಗೆ ಹಾಗೂ ರುಚಿ ಎರಡೂ ಆಗದ ಮಂದಿ ಬೆಳ್ಳುಳ್ಳಿ ಜಜ್ಜಿ ರಸ ತೆಗೆದು ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಬಿಸಿನೀರಿನಲ್ಲಿ ಹಾಕಿ ಕುಡಿಯಬಹುದು. ಬೆಳ್ಳುಳ್ಳಿಯ ವಾಸನೆ ಹಾಗೂ ರುಚಿ, ಜೇನುತುಪ್ಪ ಸೇರಿಸಿರುವುದರಿಂದ ಅರಿವಿಗೆ ಬಾರದು. ಜೊತೆಗೆ ಇದರ ಅತ್ಯುತ್ತಮ ಆರೋಗ್ಯ ಲಾಭಗಳನ್ನೂ ಪಡೆಯಬಹುದು.
4. ಬೆಳ್ಳುಳ್ಳಿ ಹಾಗೂ ಗ್ರೀನ್ ಟೀ: ಗ್ರೀನ್ ಟೀ ಹೇಳಿ ಕೇಳಿ ತೂಕ ಇಳಿಸಿಕೊಳ್ಳಲು ಬಳಸುವ ಪೇಯ. ಇದರ ಜೊತೆಗೆ ಬೆಳ್ಳುಳ್ಳಿಯನ್ನೂ ಸೇರಿಸಿದರೆ ಡಬ್ಬಲ್ ಧಮಾಕ ಗ್ಯಾರೆಂಟಿ. ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳೂ ಕೂಡಾ ಬೆಳ್ಳುಳ್ಳಿ ಜೊತೆಗೆ ಸೇರಿ ಹೊಟ್ಟೆಯಲ್ಲಿರುವ ಬೊಜ್ಜು ಕರಗಿಸಲು ನೆರವಾಗುತ್ತದೆ.
5. ಬೆಳ್ಳುಳ್ಳಿ ಹಾಗೂ ಉಪ್ಪು: ಹಸಿ ಬೆಳ್ಳುಳ್ಳಿಯನ್ನು ಹಾಗೆಯೇ ಗರಗರನೆ ಅಗಿದು ರಸ ಹೀರಲು ಬಹಳ ಮಂದಿಗೆ ಸಾಧ್ಯವಾಗುವುದಿಲ್ಲವಾದ್ದರಿಂದ, ಅದರ ಉಪಯೋಗವನ್ನು ಉಪ್ಪು ಸೇರಿಸುವ ಮೂಲಕವೂ ಪಡೆಯಬಹುದು. ಚಿಟಿಕೆ ಉಪ್ಪನ್ನು ಸೇರಿಸಿದ ಬೆಳ್ಳುಳ್ಳಿಯನ್ನು ತಿನ್ನುವ ಮೂಲಕ ದೇಹದ ಚಯಾಪಚಯ ಕ್ರಿಯೆಯನ್ನು ಚುರುಕಾಗಿಸಿ ಬೆಳ್ಳುಳ್ಳಿಯ ಉಪಯೋಗ ಪಡೆದುಕೊಳ್ಳಬಹುದು.
ಇದನ್ನೂ ಓದಿ: Weight Loss Drink: ತೂಕ ಇಳಿಸಬೇಕೆ? ಈ 8 ಪಾನೀಯಗಳು ಸಹಾಯಮಾಡುತ್ತವೆ