ಸಾಮಾನ್ಯವಾಗಿ ಹೆಚ್ಚೇನೂ ಯೋಚನೆ ಮಾಡದೇ ನಮ್ಮ ಫೇಸ್‌ಬುಕ್ ಅಕೌಂಟ್‌ಗಳಲ್ಲಿ ಸೆಲ್ಫೀ ಹಾಕುತ್ತೇವೆ, ಯಾರದೋ ಇನ್‌ಸ್ಟಾ ಫೋಟೋದ ಲಿಂಕ್ ಅಂಟಿಸುತ್ತೇವೆ, ಇದ್ದಕ್ಕಿದ್ದಂತೆ ನಮ್ಮ ಫ್ಯಾಮಿಲಿ ಫೋಟೋ- ಕಾರಿನ ಫೋಟೋ ಹಾಕುತ್ತೇವೆ. ಇವೆಲ್ಲವೂ ನಮ್ಮ ಪರ್ಸನಾಲಿಟಿಯ ಭಾಗಗಳೇ ಆಗಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪ್ರತಿಯೊಂದು ಕ್ರಿಯೆಯೂ ನಮ್ಮ ವ್ಯಕ್ತಿತ್ವವನ್ನು ಇಷ್ಟಿಷ್ಟೇ ಬಹಿರಂಗಪಡಿಸುತ್ತದೆ.
ಒಂದು- ಎಷ್ಟೊಂದು ಸೆಲ್ಫೀ!
ಸೆಲ್ಫಿಯಿಂದಲೇ ಶುರುಮಾಡೋಣ. ಕೆಲವೊಮ್ಮೆ ನಾವು ಕ್ಯೂಟ್/ಹ್ಯಾಂಡ್‌ಸಮ್ ಆಗಿದ್ದೇವೆ ಅಂತ ನಮಗೇ ಅನಿಸಿದಾಗ, ಇವತ್ತು ನನ್ನ ಹೇರ್‌ಕಟ್ ಅದ್ಭುತವಾಗಿದೆ ಅನ್ನಿಸಿದಾಗ, ಕಳೆದ ವಾರ ಭೇಟಿ ಕೊಟ್ಟ ಫಾಲ್ಸ್ ಬಳಿ ನನ್ನ ಫೋಟೋ ಚೆಂದವಾಗಿ ಬಂದಿದೆ ಅನ್ನಿಸಿದಾಗ- ಸೆಲ್ಫಿ ತೆಗೆಯೋದು ಓಕೆ. ಅದನ್ನು ನಿಮ್ಮ ಗೆಳೆಯ ಗೆಳತಿಯರು, ಫ್ಯಾಮಿಲಿ ನೋಡಲಿ ಅನ್ನಿಸಿ ಫೇಸ್‌ಬುಕ್‌ಗೆ ಹಾಕೋದೂ ಓಕೆ. ಆದ್ರೆ ಒಂದುಸಲ ನಿಮ್ಮ ಟೈಮ್‌ಲೈನ್ ನೋಡಿಕೊಳ್ಳಿ. ಬೇರೇನೂ ಇಲ್ಲದೆ ಬರಿಯ ಸೆಲ್ಫೀಗಳೇ ಅಲ್ಲಿ ರಾರಾಜಿಸುತ್ತಾ ಇದ್ದರೆ, ಅದು ಸಮಸ್ಯಾತ್ಮಕ. ಇದರಿಂದ ನಿಮ್ಮ ಫಾಲೋವರ್ಸ್‌ಗೆ ನಿಮ್ಮ ಬಗ್ಗೆ ಕಿರಿಕಿರಿಯಾಗಬಹುದು, ನಿಮ್ಮ ಗೆಳೆಯ/ಗೆಳತಿ ಜೊತೆ ಸಂಬಂಧ ಕಷ್ಟಕ್ಕೀಡಾಗಬಹುದು- ಎಂದು ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಒಂದು ಸಂಶೋಧನೆ ಹೇಳಿದೆ.
ಯಾವಾಗಲೂ ಸೆಲ್ಫಿಗಳನ್ನು ಹಾಕುವ ಹದಿಹರೆಯದ ಹುಡುಗಿಯ ಮೇಲೆ ಒಂದು ಸಮೀಕ್ಷೆ ನಡೆಯಿತು. ಅದರಲ್ಲಿ ಗೊತ್ತಾಗಿದ್ದು ಏನೆಂದರೆ, ಈ ಹುಡುಗಿಯರು ತಮ್ಮ ಶರೀರದ ಆಕಾರ, ಗಾತ್ರ, ತೂಕ ಇತ್ಯಾದಿಗಳ ಬಗ್ಗೆ ಅತೃಪ್ತಿ ಹೊಂದಿದ್ದರು. ತೆಳ್ಳಗಾಗುವ ಹಂಬಲ, ತಮ್ಮ ದೇಹದ ಬಗ್ಗೆ ಅಸಹ್ಯ ಹೊಂದಿದ್ದರಂತೆ.
ಎರಡು- ಫಿಲ್ಟರ್‌ಗಳು
ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಫೋಟೋಗಳನ್ನು ಹಾಕುವ ಮುನ್ನ ಅದನ್ನು ಹೆಚ್ಚಾಗಿ ಫಿಲ್ಟರ್ ಮಾಡುತ್ತೀರಾ? ಸ್ವಲ್ಪ ಮಟ್ಟಿಗೆ ಫೋಟೋ ಚೆನ್ನಾಗಿ ಬರುವಂತೆ ನೋಡಿಕೊಳ್ಳೋದು ಓಕೆ. ಆದರೆ ತುಂಬಾ ಫಿಲ್ಟರ್‌ಗಳನ್ನು ಬಳಸೋದು ನಿಮ್ಮ ದೇಹದ ಬಗ್ಗೆ ನಿಮಗೇ ಆತ್ಮವಿಶ್ವಾಸ ಇಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದಲೇ ಫಿಲ್ಟರ್ ಮೂಲಕ ಚಂದಗೊಳಿಸಲು ಯತ್ನಿಸುತ್ತಿರುತ್ತೀರಿ. ಹಾಗೇ ನಿಮ್ಮ ಡಯಟ್ ಬಗ್ಗೆ ಕೂಡ ನಿಮಗೆ ತೃಪ್ತಿಯಿಲ್ಲ ಎಂದು ಸೂಚಿಸುತ್ತದೆ. ಹೀಗೆ ಫಿಲ್ಟರ್ ಬಳಸುವ ಪುರುಷರು ತುಂಬಾ ನಾರ್ಸಿಸಿಸಂ (ಆತ್ಮರತಿ) ಹೊಂದಿರುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತಿವೆ.
ಮೂರು- ವರ್ಕೌಟ್
ನೀವು ಜಿಮ್‌ಗೆ ಹೋಗುವುದು, ವರ್ಕೌಟ್ ಮಾಡುವುದು, ನಿತ್ಯ ಯೋಗಾಭ್ಯಾಸ ಮಾಡುವುದು ಆರೋಗ್ಯಕಾರಿ ಅಭ್ಯಾಸ ಎಂಬುದರಲ್ಲಿ ಸಂಶಯವಿಲ್ಲ. ನಿತ್ಯ ಇದಕ್ಕಾಗಿ ಬೆವರು ಚೆಲ್ಲುವುದು ಒಳ್ಳೆಯದೇ. ಆದರೆ ನಿಮ್ಮ ವರ್ಕೌಟ್ ರೊಟೀನ್‌ಗಳು ಇತರರಿಗೆ ತಿಳಿಯಲಿ ಎಂದು ಹಾಕುವುದು ಪದೇ ಪದೇ ಬೈಸೆಪ್ಸ್ ಪ್ರದರ್ಶಿಸುವುದು, ಇದೆಲ್ಲ ನಿಮ್ಮ ನಾರ್ಸಿಸಿಸಂ ಅನ್ನಷ್ಟೇ ತೋರಿಸುತ್ತದೆ ಹೊರತು ಬೇರೇನಲ್ಲ. ನಿಮ್ಮದು ಅದೇ ಬ್ಯುಸಿನೆಸ್ ಆಗಿದ್ದರೆ ಓಕೆ.
ನಾಲ್ಕು- ರೊಮ್ಯಾನ್ಸ್
ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ಜೊತೆಗೆ ಸಮಯ ಕಳೆಯೋದು, ಔಟಿಂಗ್ ಒಳ್ಳೆಯದು. ಇದು ನಿಮ್ಮ ಬಾಂಧವ್ಯವನ್ನು ಗಾಢವಾಗಿಸಬಹುದು. ಆದರೆ ಅವರ ಫೋಟೋಗಳನ್ನು ಹೆಚ್ಚಾಗಿ ಹಾಕುವುದು, ಅವರ ಬಗ್ಗೆ ಮಿತಿ ಮೀರಿ ಬರೆಯುವುದು- ಇವೆಲ್ಲ ಸಂಗಾತಿಯಲ್ಲಿ ರೇಜಿಗೆ ಮೂಡಿಸಬಹುದು. ಇದು ಸಂಗಾತಿಯ ಬಗ್ಗೆ ನಿಮ್ಮ ಕಾಳಜಿಯನ್ನು ತಿಳಿಸುತ್ತದೆ ಎಂದು ಅರ್ಥಯಿಸಿಕೊಳ್ಳಬೇಕಿಲ್ಲ. ಬದಲಾಗಿ, ನನಗೆ ಎಷ್ಟೊಂದು ಒಳ್ಳೆಯ/ ಚಂದದ ಸಂಗಾತಿ ಸಿಕ್ಕಿದ್ದಾನೆ/ಳೆ ಎಂಬ ನಿಮ್ಮ ಆತ್ಮಪ್ರಶಂಸೆಯ ಹುಚ್ಚನ್ನು ತೋರಿಸುತ್ತದಲ್ಲದೇ ಬೇರೇನಲ್ಲ.
ಐದು- ಫುಡ್ ಪೋರ್ನ್
ನೀವು ಪದೇ ಪದೇ ನೀವು ಸೇವಿಸುವ ಆಹಾರದ ಫೋಟೋಗಳನ್ನು ಹಾಕುತ್ತಿದ್ದರೆ ಹಲವು ಸಾಧ್ಯತೆಗಳಿವೆ- ನೀವು ಸೇವಿಸುವ ಆಹಾರ ಎಷ್ಟು ಚೆನ್ನಾಗಿದೆ ಎಂದು ಇತರರು ತಿಳಿಯಲಿ ಎಂಬ ಹಿಡನ್ ಅಜೆಂಡಾ ಅದರ ಹಿಂದಿರುತ್ತದೆ. ಅಥವಾ, ನಿಮಗೆ ಅಪರೂಪದ ಫುಡ್ ದೊರೆತಿದೆ. ಅಥವಾ, ನೀವು ಆ ಫುಡ್ ಸೇವಿಸುವುದನ್ನು ಬಿಟ್ಟು ಬಿಡುತ್ತಿರಲೂ ಬಹುದು. ಸಾಮಾನ್ಯವಾಗಿ, ಫುಡ್ ಫೋಟೋ ಹಾಕುವವರು ದೇಹತೂಕ ಹೆಚ್ಚಿಸಿಕೊಳ್ಳುತ್ತಿರಬಹುದು ಎಂದು ನೀವು ಭಾವಿಸುತ್ತಿರಬಹುದು. ಆದರೆ ವಾಸ್ತವ ಉಲ್ಟಾ. ಹಾಗಿರುವವರು ದೇಹತೂಕ ಕಳೆದುಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ
ಆರು- ಡಿಪ್ರೆಶನ್
ನೀವು ಹೆಚ್ಚು ಹೆಚ್ಚಾಗಿ ತುಂಡಾ ಡಾರ್ಕ್ ಆದ, ಗ್ರೇ ಆಗಿರುವ, ನೀಲಿ ಬಣ್ಣದ ಫೋಟೋ ಅಥವಾ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಡಿಪ್ರೆಶನ್‌ಗೆ ಸಂಬಂಧಿಸಿದ ಸಮಸ್ಯೆಗಳು ಇರಬಹುದು. ಚಂದದ, ಮನಸ್ಸು ಉಲ್ಲಾಸಗೊಳಿಸುವ ಆಹ್ಲಾದಕರ ಚಿತ್ರಗಳಿಗಿಂತಲೂ ಇಂಥ ಕರಾಳ ಚಿತ್ರಗಳೇ ನಿಮ್ಮನ್ನು ಸೆಳೆಯುತ್ತದೆ ಎಂದಾದರೆ ಮಾನಸಿಕ ಸಮಸ್ಯೆ ಇದೆ ಎಂದೇ ಅರ್ಥ. ಇಂಥ ಸಮಸ್ಯೆಗಳಿರುವವರು ಫಿಲ್ಟರ್‌ಗಳನ್ನು ಬಳಕೆ ಮಾಡುವುದಿಲ್ಲ ಅಂತಲೂ ಅಧ್ಯಯನಗಳು ಹೇಳ್ತವೆ.
ಏಳು- ಫೋಟೋ ಡಿಲೀಟ್
ನಾವೇನು ಅಪ್‌ಲೋಡ್ ಮಾಡ್ತೇವೆ ಎಂಬುದು ಮಾತ್ರವಲ್ಲ, ನಾವು ಅಲ್ಲಿಂದ ಏನು ಡಿಲೀಟ್ ಮಾಡ್ತೇವೆ ಅನ್ನುವುದೂ ಗಮನಕ್ಕೆ ತೆಗೆದುಕೊಳ್ಳಬೇಕು. ತಮಗೆ ಸಾಕಷ್ಟು ಲೈಕ್, ಕಮೆಂಟ್ ಅಥವಾ ಶೇರ್ ಬಂದಿಲ್ಲ ಎನಿಸಿದರೆ ಅಂಥ ಪೋಸ್ಟ್‌ಗಳನ್ನು ಡಿಲೀಟ್ ಮಾಡುವವರಲ್ಲಿ ಹದಿಹರೆಯವದರು ಹೆಚ್ಚು ಎಂದು ಅಧ್ಯಯನ ಕಂಡುಕೊಂಡಿದೆ. ಇದು ಜನಪ್ರಿಯತೆಯ ಹಂಬಲವನ್ನೂ ಅದರ ಜೊತೆಗೆ ಆತ್ಮವಿಶ್ವಾಸದ ಕೊರತೆಯನ್ನೂ ಸೂಚಿಸುತ್ತದೆ.
ಎಂಟು- ಅಪರಿಚಿತರನ್ನು ಹಿಂಬಾಲಿಸುವುದು
ಕೆಲವು ಜನಪ್ರಿಯ ವ್ಯಕ್ತಿಗಳನ್ನು, ಸೆಲೆಬ್ರಿಟಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದು ಅಗತ್ಯವಾದೀತು. ಆದರೆ ತುಂಬಾ ಮಂದಿ ಅಪರಿಚಿತರನ್ನು ಹಿಂಬಾಳಿಸುವುದು ನಿಮ್ಮನ್ನು ಡಿಪ್ರೆಶನ್‌ಗೆ ದೂಡಬಹುದು. ನಿಮ್ಮ ಲುಕ್, ಸ್ಥಾನಮಾನ ಇತ್ಯಾದಿಗಳನ್ನು ಅವರ ಜೊತೆ ಅನಗತ್ಯವಾಗಿ ಹೋಲಿಸಿಕೊಂಡು ನೋಡಿ ಕೊರಗಲು ಕಾರಣ ಆಗಬಹುದು.
ಒಂಬತ್ತು- ಅಸೂಯೆ
ನಿಮ್ಮ ಫೇಸ್‌ಬುಕ್ ಫ್ರೆಂಡ್‌ಗಳು ಹಾಕುವ ಸ್ವಂತ ಸ್ವತ್ತು, ಸುತ್ತಾಟ, ಫ್ಯಾಮಿಲಿ ಟೈಮ್ ಇತ್ಯಾದಿಗಳ ಫೋಟೋಗಳನ್ನು ಹೆಚ್ಚು ಹೆಚ್ಚಾಗಿ ಹುಡುಕಿಕೊಂಡು ಹೋಗಿ ನೋಡುತ್ತೀರಾ? ನಿಮ್ಮದರೊಂದಿಗೆ ಕಂಪೇರ್ ಮಾಡುತ್ತೀರಾ? ಹಾಗಿದ್ದರೆ ನಿಮ್ಮಲ್ಲಿ ಅವರ ಬಗ್ಗೆ ಸಣ್ಣದೊಂದು ಅಸೂಯೆ ಮೂಡಿದೆ ಎಂದರ್ಥ. ಈ ಅಭ್ಯಾಸ ಬದಲಿಸಿಕೊಳ್ಳದಿದ್ದರೆ ಮುಂದೆ ನೀವೇ ಅವರ ಟ್ರೋಲ್‌ಗಳಾಗಿ ಮಾರ್ಪಡುತ್ತೀರಿ.
ಇದನ್ನೂ ಓದಿ: Bridal Lehenga | ಲೆಹೆಂಗ ಪರ್ಚೇಸ್ ಮಾಡುವ ಮುನ್ನ ಇಲ್ಲಿದೆ 7 ಟಿಪ್ಸ್