Site icon Vistara News

Skin Care: ಋತುಬಂಧದ ನಂತರ ಚರ್ಮದ ಆರೈಕೆ ಹೇಗಿರಬೇಕು?

What should skin care look like after menopause

ಬೆಂಗಳೂರು: ಮಹಿಳೆಯರ ಬದುಕಿನ ಮಹತ್ವದ ಘಟ್ಟಗಳಲ್ಲಿ ಋತುಬಂಧವೂ (ಮುಟ್ಟು ನಿಲ್ಲುವಿಕೆ) ಒಂದು. ದೈಹಿಕವಾಗಿ ಬಹಳಷ್ಟು ಬದಲಾವಣೆಗಳನ್ನು ತರುವ ಈ ಹಂತ, ದೇಹದ ಪ್ರತಿಯೊಂದು ಭಾಗಗಳ ಮೇಲೂ ಪರಿಣಾಮ ಬೀರುತ್ತದೆ- ಚರ್ಮವೂ (Skin Care) ಸೇರಿದ ಹಾಗೆ. ಋತುಬಂಧದ ಸಮಯದಲ್ಲಿ ಮತ್ತು ನಂತರ ಚರ್ಮದ ಆರೈಕೆಗೆ ಮಹಿಳೆಯರು ಅನುಸರಿಬೇಕಾದ ಕ್ರಮಗಳ ಬಗ್ಗೆ ಕೆಲವು ಸಲಹೆಗಳಿವು.

ತ್ವಚೆಯೆಲ್ಲ ಶುಷ್ಕವಾಗಿ, ಕಣ್ಣಿನ ಕೆಳಗೆ, ತುಟಿಯ ಪಕ್ಕದಲ್ಲಿ ಒಂದೊಂದು ನೆರಿಗೆಗಳು ಆರಂಭವಾಗುವ ಸಮಯವಿದು. ಋತುಬಂಧವಾದ ಮುಂದಿನ ನಾಲ್ಕೈದು ವರ್ಷಗಳಲ್ಲಿ ತಾರುಣ್ಯ ಮಾಸಿ, ವಯಸ್ಸಾದ ಕುರುಹುಗಳು ಸ್ಪಷ್ಟ ಕಾಣಲಾರಂಭಿಸುತ್ತವೆ. ಇದೆಲ್ಲದಕ್ಕೂ ಮೂಲ ಕಾರಣ ದೇಹದಲ್ಲಿ ಕ್ಷೀಣಿಸುವ ಈಸ್ಟ್ರೋಜನ್‌ ಚೋದಕದ ಮಟ್ಟ. ಇದರಿಂದಾಗಿ ಕೊಲಾಜಿನ್‌, ಸೆರಮೈಡ್‌ ಮತ್ತು ಹ್ಯಲುರೋನಿಕ್‌ ಆಮ್ಲದ ಮಟ್ಟವೂ ಕಡಿಮೆಯಾಗಿ, ಚರ್ಮದಲ್ಲಿ ವೃದ್ಧಿಯಾಗುವ ಕೋಶಗಳ ಪ್ರಮಾಣವೂ ಕಡಿಮೆಯಾಗುತ್ತದೆ. ಚರ್ಮದಲ್ಲಿನ ಕೊಲಾಜಿನ್‌ ಕಡಿಮೆಯಾದಂತೆ, ನೆರಿಗೆ, ಸುಕ್ಕುಗಳು ಆರಂಭವಾಗುತ್ತವೆ. ಚರ್ಮ ಒಣಗಿದಂತಾಗಿ, ತುರಿಕೆಯೂ ಬರಬಹುದು. ಹಾಗಾಗಿ ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಾಗುತ್ತದೆ.

ತೈಲದಂಶ ಅಗತ್ಯ

ದಿನವೂ ನಿಯಮಿತವಾಗಿ ಮಾಯಿಶ್ಚರೈಸರ್‌ ಚರ್ಮಕ್ಕೆ ಬೇಕೇಬೇಕು. ಇಲ್ಲದಿದ್ದರೆ ಶುಷ್ಕತೆ ಹೋಗದೆ, ಬೇರೆ ಸಮಸ್ಯೆಗಳೂ ಆರಂಭವಾಗಬಹುದು. ಇದನ್ನು ಖರೀದಿಸುವಾಗ ಅಲ್ಕೋಹಾಲ್‌ ಇರುವಂಥ ಅಥವಾ ಫ್ಯಾನ್ಸಿ ಪರಿಮಳಗಳು ಇರುವಂಥ ಕ್ರೀಮ್‌/ಲೋಶನ್‌ಗಳು ಅಗತ್ಯವಿಲ್ಲ ಎಂಬುದನ್ನು ಗಮನಿಸಬೇಕು. ಇಂಥವುಗಳಿಂದ ಚರ್ಮದ ಕಿರಿಕಿರಿ ಹೆಚ್ಚಾಗಬಹುದು. ಚರ್ಮಕ್ಕೆ ಹೊಂದುವಂಥ ಕ್ರೀಮ್‌ಗಳನ್ನು ದಿನಕ್ಕೆರಡು ಬಾರಿ ಬಳಸುವುದು ಒಳ್ಳೆಯದು.

ಇದನ್ನೂ ಓದಿ: Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

Skin Care

ರೆಟಿನೋಲ್‌

ಚರ್ಮದ ತಾರುಣ್ಯ ಮಾಸದಂತೆ ಮಾಡುವ ವಿಟಮಿನ್‌ ಎ ಜೀವಸತ್ವದ ಸಾಂದ್ರಿತ ವಸ್ತು ರೆಟಿನೋಲ್.‌ ಇದು ಕ್ರೀಮ್‌, ಲೋಶನ್‌, ಸೀರಂ ಮುಂತಾದ ಸ್ವರೂಪದಲ್ಲಿ ಮಾತುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಚರ್ಮದ ಮೇಲೆ ಬಳಸುವುದರಿಂದ ಚರ್ಮದ ಕೊಲಾಜಿನ್‌ ವೃದ್ಧಿಯಾಗಿ, ಮೊಡವೆ, ಸುಕ್ಕು, ನೆರಿಗೆಗಳು ಕ್ರಮೇಣ ಕ್ಷೀಣಿಸುತ್ತವೆ. ಆದರೆ ಇಂಥ ಯಾವುದೇ ಉತ್ಪನ್ನಗಳು ನಮ್ಮ ಚರ್ಮಕ್ಕೆ ಸೂಕ್ತವೇ ಎಂಬುದನ್ನು ಪರಿಶೀಲಿಸಿಕೊಂಡೇ ಬಳಸುವುದು ಜಾಣತನ. ಈ ನಿಟ್ಟಿನಲ್ಲಿ ತಜ್ಞರ ನೆರವು ಬೇಕಾಗಬಹುದು.

ನಿದ್ದೆ ಮತ್ತು ಆಹಾರ

ಇವೆರಡೂ ಅತ್ಯಂತ ಮುಖ್ಯವಾದವು. ಸಮತೋಲಿತ ಆಹಾರವಿಲ್ಲದಿದ್ದರೆ ಎಂಥಾ ಕ್ರೀಮುಗಳೂ ಚರ್ಮಕ್ಕೆ ಹೊಳಪು ನೀಡುವುದಿಲ್ಲ. ಹಣ್ಣು, ತರಕಾರಿ, ಇಡೀ ಧಾನ್ಯಗಳು, ಡೈರಿ ಉತ್ಪನ್ನಗಳು, ಸಾಕಷ್ಟು ಪ್ರೊಟೀನ್‌ಭರಿತ ಆಹಾರಗಳು ನಮ್ಮ ದೈನಂದಿನ ಭಾಗವಾಗಿದ್ದರೆ ಋತುಬಂಧದ ಸಮಯದಲ್ಲಿ ಕಾಡುವ ಸಮಸ್ಯೆಗಳನ್ನು ನಿಭಾಯಿಸಲು ದೇಹಕ್ಕೆ ಸಾಧ್ಯ. ದಿನಕ್ಕೆ ಏಳೆಂಟು ತಾಸುಗಳಿಗಿಂತಲೂ ಕಡಿಮೆ ನಿದ್ದೆಯಾದರೆ ಸುಸ್ತು, ಆಯಾಸದ ಜೊತೆಗೆ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಕಾಣಿಸುತ್ತವೆ. ಇದಕ್ಕೆಲ್ಲಾ ಪೌಷ್ಟಿಕ ಅಹಾರ, ವಿಶ್ರಾಂತಿ, ನಿದ್ದೆಯೇ ಮದ್ದು ಹೊರತು ಯಾವ ಮಾಯಾ ಕ್ರೀಮುಗಳೂ ಏನೂ ಮಾಡಲಾಗುವುದಿಲ್ಲ.

Skin Care

ಸ್ವಚ್ಛತೆ

ಚರ್ಮಕ್ಕೆ ಹೆಚ್ಚು ಒಣಗುತ್ತಿದ್ದಂತೆ ತೆಳುವಾದ ಹೊಟ್ಟಿನಂಥ ಪದರ ಚರ್ಮದ ಮೇಲಿರುತ್ತದೆ. ಇದನ್ನು ನಿಯಮಿತವಾಗಿ ಸ್ವಚ್ಛ ಮಾಡದ ಹೊರತು ಚರ್ಮ ಮಾಸಿದಂತೆ ಕಾಣುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿದಿನವೂ ಚರ್ಮವನ್ನು ಬೆಚ್ಚಗಿನ ನೀರಿನಿಂದ, ಹೆಚ್ಚು ಸೋಪಿಲ್ಲದಂಥ ಕ್ಲೆನ್ಸರ್‌ನಿಂದ ತೊಳೆಯುವುದು ಅಗತ್ಯ. ಇದರಿಂದ ಸೂಕ್ಷ್ಮ ರಂಧ್ರಗಳು ಸಹ ತೆರೆದುಕೊಳ್ಳುತ್ತವೆ.

ಇದನ್ನೂ ಓದಿ: Winter skin care: ಚಳಿಗಾಲದ ಒಣ ತ್ವಚೆಯ ಮಂದಿಗೆ ಇಲ್ಲಿವೆ ಸುಲಭ ಪರಿಹಾರ!

ಸನ್‌ಸ್ಕ್ರೀನ್

ಬಿಸಿಲಿಗೆ ಒಡ್ಡಿಕೊಳ್ಳುವಾಗ ಅಥವಾ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಬೇಕಾಗುತ್ತದೆ. ಚರ್ಮಕ್ಕೆ ಹೊಂದಿಕೊಳ್ಳುವಂಥದ್ದು ಯಾವುದಾದರೂ ಸರಿ. ಇದರಿಂದ ಶುಷ್ಕತೆ, ಸುಕ್ಕುಗಳನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ, ಋತುಬಂಧದ ನಂತರ ಕಾಡಬಹುದಾದ ಚರ್ಮದ ಕ್ಯಾನ್ಸರ್‌ನಂಥವುಗಳಿಂದ ರಕ್ಷಣೆಗೆ ಬಿಸಿಲಿನ ಪ್ರಕೋಪ ಅಡ್ಡಿಯಾಗುತ್ತದೆ.

Exit mobile version