ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೂ, ವಯಸ್ಸಾಗುವ ಮುನ್ನವೇ ಕೂದಲು ನೆರೆಯತೊಡಗುತ್ತದೆ. ೩೦ ದಾಟುವಾಗಲೇ ಒಂದೊಂದೇ ಕರಿಗೂದಲು ಬೆಳ್ಳಿಯಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಈಗಿರುವ ಅತಿಯಾದ ಕೆಲಸದ ಒತ್ತಡ, ಸ್ಥಳ ಬದಲಾವಣೆ, ನಗರ ಪ್ರದೇಶದ ನೀರು, ತಲೆಗೆ ಹೆಚ್ಚು ರಾಸಾಯನಿಕಯುಕ್ತ ಕ್ರೀಮು ಹಾಗೂ ಸ್ಟೈಲಿಂಗ್ ಪ್ರಾಡಕ್ಟ್‌ಗಳ ಬಳಕೆ ಹೀಗೆ ಸಣ್ಣ ವಯಸ್ಸಿಗೆ ಕೂದಲು ನೆರೆಯಲು ಕಾರಣ ಹಲವು. ಬಹಳಷ್ಟು ಮಂದಿ ಬಣ್ಣಗಳ ಮೊರೆ ಹೋಗಿ ಬಣ್ಣ, ಮೆಹೆಂದಿ ಹೀಗೆ ನಾನಾ ಪ್ರಯೋಗಗಳನ್ನು ಮಾಡಿದರೆ, ಇನ್ನೂ ಕೆಲವರು ತಮ್ಮ ನೈಸರ್ಗಿಕ ನೆರೆಗೂದಲನ್ನು ಹಾಗೆಯೇ ಇರಲು ಬಿಡುವವರೂ ಇದ್ದಾರೆ. ಇತ್ತೀಚೆಗೆ, ಕಪ್ಪು ಬಿಳುಪಿನ ಮಿಶ್ರಣವಾದ ಸಾಲ್ಟ್ ಅಂಡ್ ಪೆಪ್ಪರ್ ಸ್ಟೈಲ್ ಹಾಗೂ ಬೆಳ್ಳಿ ಕೂದಲನ್ನು ಹಾಗೆಯೇ ಇರಗೊಳಿಸುವ ಟ್ರೆಂಡ್ ಕೂಡಾ ಈಗ ಚಾಲ್ತಿಯಲ್ಲಿದೆ!
ಕೆಂಚುಕೂದಲು, ಬಣ್ಣದ ಕೂದಲು, ಹೊಂಬಣ್ಣದ ಕೂದಲು, ಬಣ್ಣ ಹಾಕಿದ ಕೂದಲು, ಕಡುಗಪ್ಪು ಕೂದಲು ಹೀಗೆ ಬಹುತೇಕ ಎಲ್ಲ ಬಣ್ಣಗಳನ್ನು ಹೇಗೆ ಸೌಂದರ್ಯದ ಪ್ರತೀಕ ಎಂದು ಭಾವಿಸುತ್ತಾರೋ, ಹಾಗೆಯೇ ಬಿಳಿಗೂದಲನ್ನೂ ಸೌಂದರ್ಯದ ಭಾಗವಾಗಿ ಏಕೆ ಪರಿಗಣಿಸುವುದಿಲ್ಲ ಎಂಬುದು ಬಿಳಿಗೂದಲ ಮಂದಿಯ ನೇರ ಪ್ರಶ್ನೆ. ಬಿಳಿಕೂದಲಲ್ಲೂ ಸೌಂದರ್ಯವಿದೆ, ಬಣ್ಣ ಯಾಕೆ ಹಾಕಬೇಕು, ಹಾಗೆಯೇ ಇರಬಿಟ್ಟರೆ ಚಂದ ಕಾಣಿಸುತ್ತದೆಯಲ್ಲವೇ ಎಂಬ ವಾದ ಅವರದ್ದು.
ಬಹಳಷ್ಟು ಮಂದಿ, ʻಬಣ್ಣ ಹಾಕುವುದನ್ನು ನಾವು ಬಿಟ್ಟಿದ್ದೇವೆ. ಇನ್ನು ಏನಿದ್ದರೂ, ನಾವಿರೋದೇ ಹೀಗೆ, ಹೀಗೆಯೇ ನಾವು ಚಂದವಿದ್ದೇವೆʼ ಎಂದು ಧೈರ್ಯದಿಂದ ಬಿಳಿಕೂದಲ ಸ್ಮಾರ್ಟ್ ಲುಕ್ಕನ್ನು ಜಗತ್ತಿನ ಮುಂದಿಡುತ್ತಿದ್ದಾರೆ.
ಕೂದಲು ಬೆಳ್ಳಗಾಗುವುದೆಂದರೆ, ನೈಸರ್ಗಿಕವಾಗಿ ನಮಗೆ ವಯಸ್ಸಾಗುತ್ತಿದೆ, ಹಾಗೂ ನಾವು ಈ ಪ್ರಕ್ರಿಯೆಯನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇವೆ ಎಂದು ಇಂದು ಜಗತ್ತಿಗೆ ಧೈರ್ಯವಾಗಿ ಹೇಳಬಯಸುವ ಮಂದಿ ಹೆಚ್ಚಾಗುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ಕೂದಲನ್ನು ಕಪ್ಪಾಗಿಸಿಕೊಂಡು ಬಣ್ಣ ಹಚ್ಚಿಕೊಂಡು ಹೊರಗೆ ಕಾಲಿಡುತ್ತಿದ್ದ ಮಂದಿ, ನಾನಿರುವುದೇ ಹೀಗೆ ಎಂದು ಮಿರಮಿರ ಮಿಂಚುವ ಬಿಳಿ ಕೂದಲಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಿಳಿಕೂದಲನ್ನು ಹಾಗೆಯೇ ಬಿಡುವುದರಿಂದ ಸಾಕಷ್ಟು ಪ್ರಯೋಜನಗಳೂ ಇವೆ. ಕೂದಲಿಗೆ ಬಣ್ಣ ಹಾಕುವ ಪ್ರಕ್ರಿಯೆಯಲ್ಲಿ ನಿಮ್ಮ ಕೂದಲ ಬೇರಿಗೆ ರಾಸಾನಿಕಯುಕ್ತ ಬಣ್ಣ ಹಾಕಬೇಕಾಯಿತು ಎಂಬ ಕೊರಗು ಇರುವುದಿಲ್ಲ. ಬಿಳಿ ಕೂದಲು ಎಂದರೆ ಧೈರ್ಯ, ಆತ್ಮವಿಶ್ವಾಸ. ತನ್ನ ಕೂದಲು ಬೆಳ್ಳಗಾಗಿದೆ ಹಾಗೂ ಅದರ ಬಗ್ಗೆ ನನಗಾವ ಚಿಂತೆಯೂ ಇಲ್ಲ, ಬದಲಾಗಿ ಹೆಮ್ಮೆಯಿದೆ ಎನ್ನುವ ಆತ್ಮವಿಶ್ವಾಸದ ಖದರ್ರೇ ಬೇರೆ! ಬಣ್ಣದ ಲೋಕದಿಂದ ಹೊರಬಂದು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಇದು ಮೊದಲ ಮೆಟ್ಟಿಲು ಕೂಡಾ.
ಇದನ್ನೂ ಓದಿ | Weekend Style| ಟ್ರೆಂಡ್‌ಗೆ ತಕ್ಕಂತೆ ಫ್ಯಾಷನ್ ಪಾಲಿಸುವ ದೀಪ್ತಿ ಮೋಹನ್
ನಿಜವಾಗಿ ನೋಡಿದರೆ, ಕೂದಲಿಗೆ ಬಣ್ಣ ನೀಡುವ ಮೆಲನಿನ್ ಪಿಗ್ಮೆಂಟ್ ನಿಧಾನವಾಗಿ ಮಾಯವಾಗಿ, ಕೂದಲು ಪಾರದರ್ಶಕವಾಗಿ ಬಿಡುತ್ತದೆ. ಹೀಗೆ ಪಾರದರ್ಶಕವಾದ ಕೂದಲೇ ಬಿಳಿಗೂದಲು. ಮೆಲನಿನ್ ತನ್ನ ಉತ್ಪಾದನೆಯನ್ನು ನಿಲ್ಲಿಸಿಬಿಟ್ಟಾಗ ಕೂದಲು ಬಿಳಿಯಾಗುತ್ತದೆ. ಈ ಮೆಲನಿನ್ ಕೂದಲಿಗೆ ಬಣ್ಣ ನೀಡುತ್ತದೆ. ಸಾಮಾನ್ಯವಾಗಿ ವಯಸ್ಸಾದಾಗ ಇದು ನಡೆಯುತ್ತದೆ. ಆದರೆ ಇದಕ್ಕೆ ವಂಶವಾಹಿನಿಗಳು, ಒತ್ತಡ, ಹಾರ್ಮೋನು ಕೂಡಾ ಈ ಮೆಲನಿನ್ ಉತ್ಪಾದನೆಯ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಈ ಬಗ್ಗೆ ಕೆಲವು ತಪ್ಪು ನಂಬಿಕೆಗಳೂ ಇವೆ. ಕಪ್ಪಾಗಿ ದಟ್ಟವಾಗಿ ಇರುವ ಕೂದಲು ಬೇಗ ಬಿಳಿಯಾಗುತ್ತದೆ ಎಂದು ಆಡುಮಾತಿನಲ್ಲಿ ಜನರ ಬಾಯಿಂದ ಬಾಯಿಗೆ ಹರಿದು ಬಂದ ಪ್ರಾಚೀನ ನಂಬಿಕೆ. ಆದರೆ, ಇದು ಹಾಗಲ್ಲ. ದಟ್ಟ ಕಪ್ಪು ಕೂದಲಿನೆಡೆಯಲ್ಲಿ ಎರಡು ಕೂದಲು ಬೆಳ್ಳಗಾದರೂ ಎದ್ದು ಕಾಣುವ ಕಾರಣ ಬೇಗ ಬಿಳಿಯಾದಂತೆ ಅನಿಸುತ್ತದೆಯೇ ಹೊರತು, ಈ ನಂಬಿಕೆಯಲ್ಲಿ ಹುರುಳಿಲ್ಲ.
ಹಾಗಂತ ಕೂದಲು ಬೆಳ್ಳಗಾಗಿದೆ, ಇನ್ನು ಹೆಚ್ಚು ಕಾಳಜಿಯ ಅಗತ್ಯವಿಲ್ಲ ಎಂದು ಅಂದುಕೊಳ್ಳುವುದು ತಪ್ಪು. ಬಿಳಿಕೂದಲಿಗೂ ಕಪ್ಪು ಕೂದಲ ಹಾಗೆಯೇ ಕಾಳಜಿ ಮಾಡಬೇಕಾಗುತ್ತದೆ. ಉತ್ತಮವಾದ ಹಾನಿಕಾರಕ ರಾಸಾಯನಿಕ ರಹಿತ ಶಾಂಪೂವಿಂದ ತೊಳೆದುಕೊಂಡು ಕಂಡೀಶನ್ ಕೂಡಾ ಮಾಡಬೇಕು. ಧೂಳು, ಮಾಲಿನ್ಯಕ್ಕೆ ಪದೇ ಪದೇ ಒಡ್ಡುವ ಬಿಳಿ ಕೂದಲು ಬೇಗ ಹಳದಿ ಬಣ್ಣಕ್ಕೆ ತಿರುಗುವ ಸಮಸ್ಯೆಯೂ ಕಾಣಬಹುದು. ಹಾಗಾಗಿ ಕಾಳಜಿ ಅತೀ ಅಗತ್ಯ.
ಬಿಳಿಕೂದಲ ಜೊತೆಗೆ ಟ್ರೆಂಡೀ ಆಗಿರುವುದೂ ಬಹಳ ಮುಖ್ಯ. ಕೂದಲು ಬೆಳ್ಳಗಾಯಿತಲ್ಲ, ಇನ್ನೇನು ಸ್ಟೈಲ್ ಮಾಡಿದರೂ ಏನು ಪ್ರಯೋಜನ ಎಂಬ ನಿರಾಶಾವಾದಿತನ ಖಂಡಿತ ನಿಮ್ಮನ್ನು ಆಕರ್ಷಕ ವ್ಯಕ್ತಿಯಾಗಿ ಸಮಾಜಕ್ಕೆ ತೋರಿಸಲಾರದು. ಟ್ರೆಂಡೀ ಲುಕ್, ಚಂದದ ಹೇರ್‌ಕಟ್ ಬಿಳಿಕೂದಲಿಗೆ ಚೆನ್ನಾಗಿ ಒಪ್ಪುತ್ತದೆ. ಚಿಕ್ಕದಾಗಿ ಚೊಕ್ಕವಾಗಿ ಕತ್ತಿರಿಸಕೊಂಡ ಬಿಳಿಕೂದಲು ಆತ್ಮವಿಶ್ವಾಸಿ ಮಹಿಳೆಯಾಗಿ ಸ್ಮಾರ್ಟ್ ಆಗಿ ಕಾಣಿಸುವಂತೆ ಮಾಡುತ್ತದೆ. ಮಹಿಳೆಯರಿಗಾದರೆ, ಕ್ಲಾಸಿಕ್ ಬಾಬ್, ಚಾಪ್ಪೀ ಪಿಕ್ಸೀ, ಕರ್ಲೀ ಶಾರ್ಟ್ ಕಟ್, ಈಸೀ ಲೋಬ್ ಮತ್ತಿತರ ಕಟ್‌ಗಳು ಸುಂದರಬಾಗಿ ಕಾಣಿಸುತ್ತದೆ. ಪುರುಷರಿಗೂ ಆಕರ್ಷಕವಾಗಿ ಕಾಣುವ, ಸಾಲ್ಟ್ ಎಂಡ್ ಪೆಪ್ಪರ್ ಲುಕ್ ಹಾಗೂ ಕಂಪ್ಲೀಟ್ ಗ್ರೇ ಲುಕ್ ಅವರವರ ವ್ಯಕ್ತಿತ್ವಕ್ಕೆ ಅನುಗುಣವಾಗಿ, ಗಡ್ಡ ಹಾಗೂ ಮೀಸೆಯ ಲುಕ್‌ಗೆ ಅನುಗುಣವಾಗಿ ಸ್ಟೈಲ್ ಮಾಡಿಕೊಳ್ಳಬಹುದು.
ಇದನ್ನೂ ಓದಿ | ಮಿಸೆಸ್ ಇಂಡಿಯಾ ಕರ್ನಾಟಕ 2022 ಫ್ಯಾಷನ್ ಶೋ: ಏಜ್ ಇಸ್ ಜಸ್ಟ್ ನಂಬರ್!