Site icon Vistara News

Winter Blue: ವಿಂಟರ್‌ ಬ್ಲೂ; ಚಳಿಗಾಲದಲ್ಲಿ ಕಾಡುವ ಮಾನಸಿಕ ಏರುಪೇರಿಗೆ ಮದ್ದಿಲ್ಲವೇ?!

winter

winter

ಚಳಿಗಾಲ (Winter) ಎಂದರೆ ಹಾಗೆಯೇ. ಜಡತ್ವ. ಈ ಕಾಲದಲ್ಲಿ ಚುರುಕುತನವಿಲ್ಲ. ಪ್ರಕೃತಿಯೇ ಚುಮುಚುಮು ಚಳಿಯಲ್ಲಿ ನಿಧಾನವಾಗಿ ತನ್ನ ಕೆಲಸ ಆರಂಭಿಸಿದರೆ, ಸಹಜವಾಗಿಯೇ ಪ್ರಕೃತಿಯ ಶಿಶುವಾದ ಮಾನವನೂ ಕೂಡಾ ತನ್ನ ಹೊದಿಕೆಯನ್ನು ಸರಿಸಿ ಮೇಲೇಳಲು ತುಸು ಹೆಚ್ಚೇ ಸಮಯ ತೆಗೆದುಕೊಳ್ಳುತ್ತಾನೆ. ಚಳಿಗಾಲದಲ್ಲಿ ಹಾಸಿಗೆ ಬಿಟ್ಟೇಳಲು ಮನೋಬಲವೂ ಬೇಕು. ಬೇರೆಲ್ಲ ಋತುಗಳಂತೆ ಚಳಿಗಾಲದಲ್ಲೂ ಸೂರ್ಯ ಹುಟ್ಟುವಾಗಲೇ ಎದ್ದು ವ್ಯಾಯಾಮ, ನಡಿಗೆ ಮಾಡಬೇಕೆಂದರೆ ಇನ್ನೂ ಹೆಚ್ಚಿನ ಮನೋಬಲವೇ ಬೇಕು. ಆದರೆ, ಕೆಲವು ಮಂದಿಗೆ ಚಳಿಗಾಲ ಬಂದಾಕ್ಷಣ, ಆಲಸ್ಯದ ಜೊತೆಜೊತೆಗೇ ಖಾಲಿತನ, ಮಾನಸಿಕವಾಗಿ ದುರ್ಬಲವೆನಿಸುವುದು, ಒತ್ತಡವೆನಿಸುವುದು ಇತ್ಯಾದಿಗಳ ಅನುಭವವಾಗುತ್ತದೆ. ಯಾವ ಕೆಲಸ ಮಾಡಲೂ ಆಸಕ್ತಿ ಇಲ್ಲದಿರುವುದು, ಹಾಸಿಗೆ ಬಿಟ್ಟೇಳಲು ಮನಸ್ಸಾಗದೆ ಇರುವುದು, ತಡವಾಗಿ ಎದ್ದು ತನ್ನ ನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲೂ ಕೂಡಾ ನಿರಾಸಕ್ತಿ ಹೊಂದುವುದು ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದನ್ನೇ ಸಾಮಾನ್ಯವಾಗಿ ವಿಂಟರ್‌ ಬ್ಲೂ (winter blue) ಎನ್ನುತ್ತಾರೆ. ಇದು ಋತುಮಾನಕ್ಕೆ ಅನುಸಾರವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಅದಕ್ಕೇ ಇದನ್ನು ʻಸೀಸಸನಲ್‌ ಅಫೆಕ್ಟಿವ್‌ ಡಿಸಾರ್ಡರ್‌ʼ (Seasonal effective disorder) ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಎಷ್ಟರಮಟ್ಟಿಗೆ ಕಾಡುತ್ತದೆ ಎಂದರೆ, ವಿಂಟರ್‌ ಬ್ಲೂ ಅನುಭವಿಸುವ ಮಂದಿ, ಚಳಿಗಾಲದಲ್ಲಿ ತನ್ನೆಲ್ಲಾ ಸಾಮಾಜಿಕ ಚಟುವಟಿಕೆಗಳಲ್ಲೂ, ನಿತ್ಯದ ಚಟುವಟಿಕೆಗಳಲ್ಲೂ ಆಸಕ್ತಿಯನ್ನೇ ಕಳೆದುಕೊಂಡು ಒಂಟಿತನ ಅನುಭವಿಸುತ್ತಾರೆ. ಮಾನಸಿಕವಾಗಿ ಏಕಾಂಗಿತನ ಇವರನ್ನು ಗಾಢವಾಗಿ ಅಪ್ಪುತ್ತದೆ.

ಹಾಗಾದರೆ ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂದರೆ, ಅದಕ್ಕೆ ಮಾನಸಿಕ ತಜ್ಞರ ಬಳಿ ಉತ್ತರವಿದೆ. ಋತುಮಾನಕ್ಕೆ ಅನುಸಾರವಾಗಿ, ಆಹಾರ ಹಾಗೂ ಜೀವನಕ್ರಮ ಬದಲಾವಣೆಯಿಂದ ಎಂದಿನ ಲವಲವಿಕೆಗೆ ಮರಳಲು ಸಾಧ್ಯವಿದೆ. ಇದರಿಂದ ಮತ್ತೆ ಜಡತ್ವದಿಂದ ಬಿಡಿಸಿಕೊಂಡು ಸಾಮಾಜಿಕ ಜೀವನಕ್ಕೆ ಮರಳಲು ಸಾಧ್ಯವಿದೆ ಎನ್ನುತ್ತಾರೆ ವೈದ್ಯರು. ಹಾಗಾದರೆ ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ ವಿಂಟರ್‌ ಬ್ಲೂ ಸಮಸ್ಯೆಯೆ (winter blue remedy) ಬರದಂತೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

೧. ಚಳಿಗಾಲವೆಂದರೆ ಸೊಪ್ಪು ತರಕಾರಿಗಳು, ಬಣ್ಣಬಣ್ಣದ ಹಣ್ಣು ತರಕಾರಿಗಳು ಹೇರಳವಾಗಿ ಲಭ್ಯವಾಗುವ ಕಾಲ. ಇದರಲ್ಲಿ ಪೊಟಾಶಿಯಂ, ಮೆಗ್ನೀಶಿಯಂ ಹಾಗೂ ಕ್ಯಾಲ್ಶಿಯಂ ಸಂಪದ್ಭರಿತವಾಗಿದೆ. ಈ ಪೋಷಕಾಂಶಗಳೆಲ್ಲವೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲೂ ಕೂಡಾ ಸೂಕ್ತ. ಅಷ್ಟೇ ಅಲ್ಲ, ಸೊಂಪಾದ ನಿದ್ದೆಯನ್ನೂ ಕರುಣಿಸಿ ತಾಜಾ ಅನುಭೂತಿಯನ್ನು ಇವು ಕೊಡಬಲ್ಲವು. ಹಾಗಾಗಿ ಚಳಿಗಾಲದಲ್ಲಿ ಲಭ್ಯವಾಗುವ ಹಣ್ಣು ತರಕಾರಿಗಳನ್ನೇ ತಿನ್ನಿ.

೨. ಚಳಿಗಾಲ ಎಂದಾಕ್ಷಣ ಹಾಳುಮೂಳು, ತಿನ್ನುವತ್ತ ಮನಸ್ಸು ವಾಲುವುದು ಹೆಚ್ಚು. ಬಿಸಿಬಿಸಿಯಾಗಿ ಏನಾದರೂ ಎಣ್ಣೆತಿಂಡಿಗಳು, ಜಂಕ್‌, ಬೀದಿಬದಿಯ ತಿಂಡಿ, ಪ್ಯಾಕೆಟ್ಟುಗಳಲ್ಲಿ ದೊರೆಯುವ ಕುರುಕಲು ಇತ್ಯಾದಿಗಳ ಸೇವನೆ ಹೆಚ್ಚಾಗುತ್ತದೆ. ಆದಷ್ಟೂ, ಆರೋಗ್ಯಕರ ಸಮತೋಲನ ಆಹಾರದತ್ತ ಗಮನ ಹರಿಸಿ.

೩. ವಿಟಮಿನ್‌ ಡಿ ಹೆಚ್ಚಿರುವ ಆಹಾರಗಳನ್ನು ಸೇವಿಸಿ. ಮುಖ್ಯವಾಗಿ ಸೂರ್ಯನ ಬಿಸಿಲು ಸಿಗುವ ಹೊತ್ತಿನಲ್ಲಿ ಮನೆಯಿಂದ ಹೊರಗೆ ಬನ್ನಿ. ಸೂರ್ಯನ ಬಿಸಿಲಿನ ಮೂಲಕ ವಿಟಮಿನ್‌ ಡಿ ಗಳಿಸಿ. ಮನಸ್ಸು ತಾನೇತಾನಾಗಿ ಉಲ್ಲಸಿತವಾಗಿ ಚುರುಕಾಗುತ್ತೀರಿ.

ಇದನ್ನೂ ಓದಿ: Winter Health Tips: ಬಂದೇ ಬಿಡ್ತು ಚಳಿಗಾಲ! ಇರಲಿ ಆರೋಗ್ಯದ ಕಡೆಗೆ ಎಚ್ಚರ!

೪. ನೀರು ಕುಡಿಯಿರಿ. ಚಳಿಗಾಲವೆಂದು ಇದ್ದಕ್ಕಿದ್ದಂತೆ ನಿಮ್ಮ ನೀರು ಕುಡಿಯುವ ಪದ್ಧತಿಯಲ್ಲಿ ಬದಲಾವಣೆಯಾಗುವುದೂ ಕೂಡಾ ಸಮಸ್ಯೆ ತರುತ್ತದೆ. ಹೀಗಾಗಿ, ಚಳಿಗಾಲವೆಂದು ಕುಡಿಯುವ ನೀರಿನ ಬಗ್ಗೆ ಅಲಕ್ಷ್ಯ ತಾಳಬೇಡಿ. ಆದಷ್ಟೂ ಆಗಾಗ ನೀರು ಕುಡಿಯಲು ಪ್ರಯತ್ನಿಸಿ.

೫. ಕೆಫಿನ್‌ ಇರುವ ಕಾಫಿ, ಚಹಾ ಹೆಚ್ಚು ಕುಡಿಯಬೇಡಿ. ದಿನಕ್ಕೆ ಹೆಚ್ಚೆಂದರೆ ಎರಡು ಬಾರಿ ಸರಿ. ಆದರೆ, ಆಗಾಗ ಚಹಾ, ಕಾಫಿ ಕುಡಿಯುವ ಅಭ್ಯಾಸವಿದ್ದರೆ ಬಿಡಿ.

ಈ ಪಂಚಸೂತ್ರಗಳನ್ನು ಆಹಾರದ ವಿಚಾರದಲ್ಲಿ ಪಾಲಿಸಿದರೆ, ಮನಸ್ಸು, ದೇಹ ಚಳಿಗಾಲದಲ್ಲೂ ಚುರುಕಾಗಿರುತ್ತದೆ. ವಿಂಟರ್‌ ಬ್ಲೂನಂತಹ ಸಮಸ್ಯೆಗಳೂ ಕಾಡದು.

ಇದನ್ನೂ ಓದಿ: Winter Care Tips: ಹೀಗೆ ಮಾಡಿ, ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಿ

Exit mobile version