ಹಬ್ಬಗಳ ಸಡಗರ ಎಲ್ಲ ಮುಗೀತು, ಇನ್ನು ತಿನ್ನೋದು ಕಡಿಮೆ ಮಾಡಬೇಕು ಅಂತ ಯೋಚ್ನೆ ಮಾಡಿದ್ರೂ ತಿನ್ನೋದು ಬಿಡೋದಕ್ಕೆ ಆಗ್ತಾ ಇಲ್ವಾ? ಇತ್ತೀಚೆಗಂತೂ ಸಿಕ್ಕಾಪಟ್ಟೆ ತಿನ್ನೋದಕ್ಕೆ ಶುರು ಮಾಡ್ಬಿಟ್ಟಿದೀನಿ ಅಂತ ನಿಮಗೇ ಅನ್ನಿಸೋಕೆ ಶುರು ಆಗಿದೆಯಾ? ತಿನ್ನೋದು ಕಡಿಮೆ ಮಾಡಬೇಕು ಎಂದು ಪ್ರತಿದಿನ ಅಂದ್ಕೊಂಡ್ರೂ, ರಾತ್ರಿಯಾಗುವಷ್ಟರಲ್ಲಿ ನಾವೇ ಮಾಡಿಕೊಂಡ ನಿಯಮಗಳನ್ನು ಗಾಳಿಗೆ ತೂರಿ ಏನೇನು ತಿನ್ಬೇಕು ಅನಿಸುತ್ತೋ ಅಷ್ಟನ್ನೂ ಒಂದು ಮಟ್ಟಿಗೆ ತಿಂದು ಮುಗಿಸಿಯಾಗಿಬಿಟ್ಟಿರುತ್ತದೆ. ಹೌದೂ, ನಾನ್ಯಾಕೆ ಅಷ್ಟು ತಿಂದೆ ಅಂತ ಆಮೇಲೆ ಅನಿಸಬಹುದು. ಅಥವಾ ಇತ್ತೀಚೆಗೆ ಯಾಕೆ ಕಂಟ್ರೋಲ್ ಮಾಡೋದಕ್ಕೆ ಕಷ್ಟವಾಗ್ತಿದೆ ಅನಿಸಬಹುದು. ಅಥವಾ ಈಗೆಲ್ಲಾ ನಾನು ಯಾವಾಗಲೂ ಉಣ್ಣೋದಕ್ಕಿಂತ ಡಬಲ್ ಉಣ್ಣುತ್ತಿದ್ದೇನಲ್ಲಾ ಅನಿಸಿರಲೂಬಹುದು. ಒಮ್ಮೆ ಕೂತು ಈ ಬಗ್ಗೆ ಯೋಚಿಸಲು ಹೊರಟರೆ, ನಿಮಗೇ ಅನಿಸುವ ಹಾಗೆ ಸಮಸ್ಯೆಯ ಮೂಲ, ಹಸಿವೂ ಹೆಚ್ಚಾಗಿರುವುದರಲ್ಲಿ ಅಡಗಿದೆಯಲ್ಲಾ ಅಂತ ಜ್ಞಾನೋದಯವಾಗಲೂಬಹುದು.
ಒಂದು ನೆಮ್ಮದಿ ಎಂದರೆ, ಬಕಾಸುರನ ಹಾಗೆ ಮುಕ್ಕಬೇಕು ಎಂದು ಅನಿಸುತ್ತಿರುವುದು ಕೇವಲ ನಿಮಗೆ ಮಾತ್ರ ಅಲ್ಲ. ಎಲ್ಲರಿಗೂ ಈಗ ಹಸಿವು ಹೆಚ್ಚೇ. ಕಾರಣ ಸರಳ. ಯಾಕೆಂದರೆ ಇದು ಚಳಿಕಾಲದ ಮಹಿಮೆ. ಚಳಿಗಾಲ ಬರುತ್ತಿದೆ ಎಂದರೆ ಎಲ್ಲರ ಹೊಟ್ಟೆಯೂ ಹೆಚ್ಚು ಕಬಳಿಸಲು ಹಪಹಪಿಸುತ್ತಿರುತ್ತದೆ. ಹಾಗಾದರೆ, ಚಳಿಗಾಲದಲ್ಲಿ ಯಾಕೆ ನಮಗೆ ಹೆಚ್ಚು ತಿನ್ನಬೇಕು ಅನಿಸುತ್ತದೆ ಎಂಬುದಕ್ಕೆ ಕಾರಣ ಇಲ್ಲಿದೆ.
ಚಳಿಗಾಲದಲ್ಲಿ ನಮ್ಮ ದೇಹದ ಉಷ್ಣತೆ ಕಡಿಮೆಯಾಗಲು ಶುರುವಾಗುತ್ತದೆ. ಇಂಥ ಚಳಿಯ ಸಮಯದಲ್ಲಿ ಸಹಜವಾಗಿಯೇ ನಮ್ಮ ಚಟುವಟಿಕೆಗಳು ಕಡಿಮೆಯಾಗುತ್ತದ. ಬೆಳಗ್ಗೆ ಬೇಗ ಏಳಲು ಕಷ್ಟವಾಗುತ್ತದೆ. ಬೆಚ್ಚನೆಯ ಬ್ಲಾಂಕೆಟ್ ಒಳಗೆ ಮುದುಡಿ ಇನ್ನೂ ಹೆಚ್ಚು ಹೊತ್ತು ಮಲಗಿರುವ ಅನಿಸುತ್ತದೆ. ಸೂರ್ಯನ ಬಿಸಿಲು ಮೈಯ ಸೋಕದಿದ್ದರೆ, ಒಂಥರಾ ಆಲಸ್ಯ. ಅಯ್ಯೋ, ಇಂದು ಈ ಚಳಿಯಲ್ಲಿ ಹೊರಗೆ ಕಾಲಿಡಬೇಕಾ, ಇವತ್ತು ವಾಕಿಂಗ್ ಬೇಡ ಅನಿಸಿಬಿಡುತ್ತದೆ. ಬೆಚ್ಚನೆ ಹೊದ್ದು ಮಲಗಿ ಹೊತ್ತು ಗೊತ್ತಾಗದೆ, ಕೆಲಸಗಳು ಅಲ್ಲಲ್ಲೇ ಉಳಿದುಬಿಡುತ್ತವೆ. ಹೀಗೆ ನಮ್ಮ ಚಟುವಟಿಕೆಗಳು ಕಡಿಮೆಯಾಗುತ್ತಿದ್ದಂತೆ ನಮ್ಮಲ್ಲಿರುವ ಎನರ್ಜಿಯ ಮಟ್ಟವೂ ಕುಸಿಯುತ್ತದೆ. ಆಗ ದೇಹವನ್ನು ಬೆಚ್ಚಗೆ ಇಡುವುದಕ್ಕೆ ಪೋಷಕಾಂಶಗಳ ಕೊರತೆ ಇದೆ ಎಂಬುದು ದೇಹಕ್ಕೆ ಅನಿಸತೊಡಗುತ್ತದೆ. ಇದರ ಪರಿಣಾಮ ದೇಹ ಮತ್ತಷ್ಟು ಆಹಾರವನ್ನು ಬಯಸುತ್ತದೆ.
ಇದನ್ನೂ ಓದಿ | Winter tour | ಚಳಿಗಾಲದಲ್ಲಿ ಈ ಜಾಗಗಳಿಗೆ ಹೋದರೆ ಸ್ವರ್ಗವೇ ಕೈಗೆ ಎಟುಕಿದಂತೆ!
ಇಷ್ಟೇ ಅಲ್ಲದೆ, ಚಳಿಗಾಲದಲ್ಲಿ ಆಹಾರವು ದೇಹದಲ್ಲಿ ಪಚನಗೊಂಡು ಅದು ಶಕ್ತಿಯಾಗಿ ಪರಿವರ್ತನೆಯಾಗುಗ ಕ್ರಿಯೆಯು ನಿಧಾನವಾಗಿರುತ್ತದೆ. ಇದರಿಂದಾಗಿ ನಮ್ಮ ದೇಹ ಸಹಜವಾಗಿಯೇ ಹೆಚ್ಚು ಆಹಾರವನ್ನು ಅದರಲ್ಲೂ ಹೆಚ್ಚು ಕ್ಯಾಲರಿಯುಕ್ತ ತುಪ್ಪ, ಎಣ್ಣೆಯುಕ್ತ ಹಾಗೂ ಸಕ್ಕರೆಯಂಶ ಹೆಚ್ಚಿರುವ ಆಹಾರವನ್ನು ಬಯಸುತ್ತದೆ. ಇದು ದೇಹವೇ ಬಯಸುವ ಕ್ರಿಯೆ. ದೇಹ ಹೆಚ್ಚು ಹೆಚ್ಚು ಕ್ಯಾಲರಿಯನ್ನು ಉತ್ಪಾದಿಸಿಕೊಂಡು ಹೆಚ್ಚು ಶಕ್ತಿಯಾಗಿ ಪರಿವರ್ತಿಸಲು ಶ್ರಮ ವಹಿಸುವ ಕಾಲವಿದು. ಹೀಗೆ ಪರಿವರ್ತನೆಗೊಂಡ ಶಕ್ತಿಯಿಂದಾಗಿ ನಾವು ಚಳಿಗಾಲದಲ್ಲಿ ಬೆಚ್ಚಗಿರುತ್ತೇವೆ. ಇದಕ್ಕಾಗಿಯೇ ಇನ್ನಷ್ಟು ಮತ್ತಷ್ಟು ತಿನ್ನಬೇಕು ಅನಿಸುವ ಚಪಲವೂ ಚಳಿಗಾಲದಲ್ಲಿ ಜಾಸ್ತಿಯಾಗುತ್ತದೆ.
ಹಾಗಾದರೆ ಪ್ರಶ್ನೆ ಇರುವುದು ಈ ಚಪಲತೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ? ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತೇವೆ ಎಂದು ಅನಿಸುವಾಗ ಇದಕ್ಕೆ ಬ್ರೇಕ್ ಹಾಕುವುದು ಹೇಗೆ ಎಂಬುದು.
ನಾವು ಚಳಿಗಾಲದಲ್ಲೂ ಸಹ ನಮ್ಮ ಆಹಾರವನ್ನು ಜಾಣತನದಿಂದ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾಕೆಂದರೆ, ಈಂಥ ಸಂದರ್ಭದಲ್ಲಿಯೇ ನಾವು ನಮ್ಮ ಮನಸ್ಸಿನ ಮಾತು ಕೇಳಿ ದಿನವಿಡೀ, ಕೇಕು, ಕುಕ್ಕೀಸ್, ಬಿಸ್ಕತ್ತುಗಳು, ಸಂಜೆಯಾದರೆ, ಬಿಸಿ ಬಿಸಿ ಪಾವ್ ಬಾಜಿ, ರಸ್ತೆಬದಿ ಚಾಟ್‌ಗಳು, ಬಿಸಿ ಬಿಸಿ ಜಿಲೇಬಿಗಳು, ಪಿಜ್ಜಾ ಹೀಗೆ ಗರಿಗರಿ ಬಿಸಿ ಬಿಸಿ ತಿನಿಸುಗಳತ್ತ ಮೋಹಗೊಂಡು ಬುದ್ಧಿಯ ಮಾತು ಕೇಳುವಲ್ಲಿ ಎಡವಿಬಿಡುತ್ತೇವೆ. ಇದರಿಂದ ಚಳಿಗಾಲದಲ್ಲಿ ಬಹುಬೇಗನೆ ತೂಕವೂ ಏರಿಬಿಡುತ್ತದೆ. ಹಾಗಾದರೆ, ಇಂತಹ ತೂಕ ಹೆಚ್ಚಿಸಿಬಿಡುವಲ್ಲಿ ಮುಖ್ಯಪಾತ್ರ ವಹಿಸುವ ಅತಿಯಾದ ಕ್ಯಾಲರಿಯುಕ್ತ ಆಹಾರಗಳಿಂದ ದೂರವಿರುವುದು ಸವಾಲೇ ಆದರೂ, ಇಂಥ ಸಮಯದಲ್ಲಿ ಜಾಣತನದಿಂದ ಆರೋಗ್ಯಕರ ಆಯ್ಕೆಗಳನ್ನು ಮಾಡುವುದು ಬಹಳ ಮುಖ್ಯ ಎಂಬುದನ್ನು ನೆನಪಿಟ್ಟುಕೊಂಡರೆ, ಚಳಿಗಾಲ ರಸಸಮಯ!
ಇದನ್ನೂ ಓದಿ | Hair care | ತಲೆ ಕೆಡಿಸಿಕೊಳ್ಳಬೇಡಿ, ಚಳಿಗಾಲದಲ್ಲಿ ತಲೆಕೂದಲ ಆರೈಕೆ ಹೀಗೆ ಮಾಡಿ