ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶಿಯರ್ಲಿಂಗ್ ಜಾಕೆಟ್‌ಗಳು ಲಕ್ಷುರಿ ವಿಂಟರ್ ಫ್ಯಾಷನ್ ಲಿಸ್ಟ್‌ಗೆ ಸೇರಿವೆ. ಫರ್‌ನ ಮನಮೋಹಕ ನೆಕ್‌ಲೈನ್‌ನೊಂದಿಗೆ ಹೊಸ ರೂಪದಲ್ಲಿ ಮರಳಿರುವ ಇವು ನಾನಾ ಶೇಡ್‌ನಲ್ಲಿ ಬಿಡುಗಡೆಗೊಂಡಿವೆ. ಯಿಯರ್ ಎಂಡ್ ಸೀಸನ್ ಫ್ಯಾಷನ್ ಲಿಸ್ಟ್‌ನ ಮೊದಲ ಸ್ಥಾನದಲ್ಲಿವೆ.
ಲಕ್ಷುರಿ ಲುಕ್ ನೀಡುವ ಶಿಯರ್ಲಿಂಗ್ ಜಾಕೆಟ್
ಶೀಪ್‌ವೂಲ್ ಅಥವಾ ಫರ್‌ನಂತಹ ಮೆಟೀರಿಯಲ್ ಬಳಸಿ ಸಿದ್ಧಪಡಿಸಲಾಗುವ ಶಿಯರ್ಲಿಂಗ್ ಜಾಕೆಟ್/ಕೋಟ್ಸ್ ಎಂತಹವರಿಗೂ ಸ್ಟೈಲಿಶ್ ಲುಕ್ ನೀಡುತ್ತವೆ. ಒಳಗಿನ ಲೇಯರ್ ಒಂದು ಬಗೆಯದ್ದಾದರೇ ಹೊರಗಡೆ ಮತ್ತೊಂದು ಮೆಟೀರಿಯಲ್‌ನಲ್ಲಿರುತ್ತವೆ. ಇವು ದುಬಾರಿ ಕೂಡ. ಕೆಲವು ಲಾಂಗ್ ಕೋಟ್ ಇಲ್ಲವೇ ಜಾಕೆಟ್‌ನಂತಿರುತ್ತವೆ. ಇವನ್ನು ಚಳಿಗಾಲದ ಲಕ್ಷುರಿ ಶಿಯರ್ಲಿಂಗ್ ಜಾಕೆಟ್ ಎನ್ನಬಹುದು. ಶಿಯರ್ಲಿಂಗ್ ಜಾಕೆಟ್ ಹಾಗೂ ಕೋಟ್‌ಗಳ ಕಾಲರ್‌ಗಳು ನಾರ್ಮಲ್ ಡಿಸೈನ್ಸ್‌ಗಿಂತ ದೊಡ್ಡದಾಗಿರುತ್ತವೆ. ಇದೇ ಶಿಯರ್ಲಿಂಗ್ ಜಾಕೆಟ್ ಹಾಗೂ ಕೋಟ್‌ಗಳ ಹೈಲೈಟ್ ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.
ಆಕರ್ಷಕ ಶಿಯರ್ಲಿಂಗ್ ಜಾಕೆಟ್
ಮೊದಲೆಲ್ಲ ಈ ಬಗೆಯ ಕೋಟ್ ಹಾಗೂ ಲಕ್ಷುರಿ ಶಿಯರ್ಲಿಂಗ್ ಜಾಕೆಟ್‌ಗಳನ್ನು ಕೇವಲ ಪಾಶ್ಚಿಮಾತ್ಯ ರಾಷ್ಟ್ರದವರು ಹೆಚ್ಚಾಗಿ ಧರಿಸುತ್ತಿದ್ದರು. ಆದರೆ, ಇದೀಗ ಕಾಲ ಬದಲಾಗಿದೆ. ಚಳಿಗಾಲದಲ್ಲಿ ಧರಿಸುವ ಡ್ರೆಸ್‌ಕೋಡ್ ಲಿಸ್ಟ್‌ಗೆ ಇದು ಸೇರಿದೆ. ಸದಾ ಸ್ವೆಟ್ಟರ್ಸ್, ಪುಲ್‌ಓವರ್ಸ್‌ನಿಂದ ಬೋರಾದವರು ಶಿಯರ್ಲಿಂಗ್ ಕೋಟ್ ಹಾಗೂ ಜಾಕೆಟ್‌ಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದೀಗ ಶಿಯರ್ಲಿಂಗ್‌ನಲ್ಲೂ ಸಾಕಷ್ಟು ವಿನ್ಯಾಸದ್ದು ಲಭ್ಯ. ಇನ್ನು ಸಾದಾ ಟಾಪ್‌ನ ಮೇಲೆ ಧರಿಸಬಹುದಾದ ಫ್ಯಾಷನೆಬಲ್ ಶಿಯರ್ಲಿಂಗ್ ಜಾಕೆಟ್‌ಗಳನ್ನು ಎಲ್ಲ ವಯಸ್ಸಿನವರು ಕೂಡ ಧರಿಸಬಹುದು.
ಅಂದಹಾಗೆ, ಇತರೇ ಜಾಕೆಟ್ ಹಾಗೂ ಕೋಟ್‌ಗಳಂತೆ ಶಿಯರ್ಲಿಂಗ್ ಜಾಕೆಟ್ಟನ್ನು ಅದಲು ಬದಲು ಮಾಡಿಕೊಂಡು ಧರಿಸಲಾಗದು. ಹುಡುಗಿಯರಿಗೆ ಡಿಫರೆಂಟ್ ಸ್ಟಿಚ್ಚಿಂಗ್ ಲೈನ್‌ಗಳಿರುತ್ತವೆ. ಅವರವರ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತಹ ಕಟ್ಟಿಂಗ್ಸ್ ಹಾಗೂ ಅವರ ಫೀಚರ್‌ಗೆ ಸೂಟ್ ಆಗುವಂತೆ ವಿನ್ಯಾಸಗೊಳಿಸಲಾಗಿರುತ್ತದೆ ಎನ್ನುತ್ತಾರೆ ಡಿಸೈನರ್ ಹರ್ಷ್ .
ಶಿಯರ್ಲಿಂಗ್ ಜಾಕೆಟ್ ಧರಿಸುವವರಿಗಾಗಿ
- ಟ್ರಾವೆಲ್ ಮಾಡುವಾಗ ಇದನ್ನು ಧರಿಸಬಹುದು.
- ಬಿಸಿಲಿನಲ್ಲಿ ಧರಿಸಲಾಗದು ನೆನಪಿರಲಿ.
- ಹೆಚ್ಚು ತಂಪಿರುವ ತಾಣಗಳಿಗೆ ಮಾತ್ರ ಸೂಕ್ತ.
- ನಿಮ್ಮ ವ್ಯಕ್ತಿತ್ವಕ್ಕೆ ಸೂಟ್ ಆಗುವಂತದ್ದನ್ನು ಮಾತ್ರ ಸೆಲೆಕ್ಟ್ ಮಾಡಿ.
- ಆದಷ್ಟೂ ಟ್ರೆಂಡಿಯಾಗಿರುವುದನ್ನು ಆಯ್ದುಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Winter Fashion | ಕ್ರಿಸ್ಮಸ್ ಸೀಸನ್‌ಗೆ ಬಂತು ಬಣ್ಣ ಬಣ್ಣದ ಉಲ್ಲನ್ ಗ್ಲವ್ಸ್