Site icon Vistara News

Winter Morning: ಚಳಿಯಿದ್ದರೇನಂತೆ, ಬೆಳಗ್ಗೆ ಬೇಗನೆ ಏಳುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

early wake up

ಬೇಗ ಬೆಳಗ್ಗೆ ಏಳುವುದು ಅದರಲ್ಲೂ ಚಳಿಗಾಲದಲ್ಲಿ (Winter Morning) ಎಷ್ಟು ಕಷ್ಟ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ನಿತ್ಯವೂ ಒಂದೇ ಸಮಯಕ್ಕೆ ಚೆನ್ನಾಗಿ ಹೊದ್ದು ಮಲಗಿದಲ್ಲಿಂದ ಸೋಮಾರಿತನ (Laziness) ಬಿಟ್ಟೇಳುವುದು ಎಂದರೆ, ಅದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಮಾನಸಿಕ ತಯಾರಿ ಬೇಕು. ಮನಸ್ಸು ಬುದ್ಧಿಯ ಮಾತು ಇಲ್ಲಿ ಕೇಳದು. ಬುದ್ಧಿ ಬೇಗ ಏಳು ಎಂದರೆ, ಮನಸ್ಸು ಮಾತ್ರ ಹಾಸಿಗೆಯಲ್ಲಿ ಬೆಚ್ಚಗೆ ಮುದುಡಿ ಮಲಗುವ ಕನಸು ಕಾಣುತ್ತದೆ. ಬುದ್ಧಿ ಮನಸ್ಸಿನೆದುರು ಸೋಲುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಚೆನ್ನಾಗಿ ತಿಂದುಂಡು ಮಲಗಿ ಎದ್ದು, ಸೋಮಾರಿತನ ಮೈಗೂಡಿಸಿಕೊಂಡು ಆರಾಮವಾಗಿದ್ದುಕೊಂಡು ಮೈತುಂಬಿಸಿಕೊಂಡು ತೂಕ ಹೆಚ್ಚಿಸಿಕೊಳ್ಳುವವರೇ (Weight gain) ಜಾಸ್ತಿ. ಹೀಗಿದ್ದಾಗ ಬೇಗ ಏಳುವ ಬಗ್ಗೆ ಕೊಡುವ ಪ್ರವಚನವನ್ನು ಕೇಳುವವರ್ಯಾರು ಅಲ್ಲವೇ? ಅನಿವಾರ್ಯವಾಗಿ ಆಫೀಸಿಗೆ ಒಂದೇ ಸಮಯಕ್ಕೆ ಬೇಗ ಎದ್ದು ಹೊರಡಬೇಕಾಗುವವರು, ಶಾಲೆಗೆ ಸಮಯಕ್ಕೆ ಸರಿಯಾಗಿ ಮಕ್ಕಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತ ತಾಯಂದಿರು ಹೀಗೆ ಅನೇಕ ಜವಾಬ್ದಾರಿಗಳ ಮಂದಿ ಖಂಡಿತವಾಗಿಯೂ ಕಷ್ಟಪಟ್ಟಾದರೂ ಏಳುವವರೇ. ಯಾಕೆಂದರೆ ಮಾಡದೆ ವಿಧಿಯಿಲ್ಲ. ಆದರೆ, ಇವೆಲ್ಲ ಒತ್ತಡವನ್ನೂ ಮೀರಿ, ಬೆಳಗ್ಗೆ ಬೇಗನೆ ಏಳುವ (Early wake up) ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಅವರ ಶಿಸ್ತುಬದ್ಧ ಜೀವನವನ್ನು ನೋಡಿಯಾದರೂ, ಬೆಳಗ್ಗೆ ಬೇಗನೆ ಏಳುವುದರಿಂದ ಏನೆಲ್ಲ ಲಾಭಗಳಿವೆ ಎಂಬುದನ್ನು ಕಂಡುಕೊಳ್ಳಬೇಕು. ಬನ್ನಿ, ಬೆಳಗ್ಗೆ ಬೇಗನೆ ಏಳುವುದರಿಂದ ಏನೆಲ್ಲ ಲಾಭಗಳಿವೆ (health tips) ಎಂಬುದನ್ನು ನೋಡೋಣ.

1. ಬೆಳಗ್ಗೆ ಬೇಗನೆದ್ದು ವ್ಯಾಯಾಮ ಮಾಡುವುದು ಯಾವಾಗಲೂ ಸಂಜೆಯ ವ್ಯಾಯಾಮಗಳಿಗಿಂತ ಸೂಕ್ತ. ದೇಹಕ್ಕೆ ಎದ್ದ ಕೂಡಲೇ ವ್ಯಾಯಾಮದ ಅಗತ್ಯವಿದೆ. ಆದರೆ, ಸಂಜೆಯ ಹೊತ್ತು ದೇಹವನ್ನು ನಿಧಾನವಾಗಿ ಶಾಂತತೆಗೆ ಕೊಂಡೊಯ್ಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅಂದರೆ, ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸಗಳನ್ನು ಮಾಡಿ, ಕೊನೆಗೆ ನಿಧಾನವಾಗಿ ಕೆಲಸಗಳನ್ನು ಕಡಿಮೆಗೊಳಿಸುತ್ತಾ ನಿದ್ದೆಗೆ ಜಾರುವುದು ಒಳ್ಳೆಯ ಕ್ರಮ. ಎಲ್ಲ ಕೆಲಸಗಳ ನಂತರ ದೇಹವನ್ನು ಮತ್ತೆ ಸಂಜೆಯ ಮೇಲೆ ದಂಡಿಸುವುದು ಹಿತಕರವಲ್ಲ. ಆಯುರ್ವೇದವೂ ಇದನ್ನೇ ಪುಷ್ಠೀಕರಿಸುತ್ತದೆ. ಹೀಗಾಗಿ, ಬೆಳಗ್ಗೆ ಬೇಗನೆ ಎದ್ದರೆ ವ್ಯಾಯಾಮಕ್ಕೆ ಸಮಯ ದೊರೆಯುತ್ತದೆ. ಕನಿಷ್ಟ ಅರ್ಧ ಗಂಟೆಯಾದರೂ ವ್ಯಾಯಾಮಕ್ಕೆ ಸಮಯ ನೀಡುವುದು ಒಳ್ಳೆಯದು.

2. ಬೆಳಗ್ಗೆ ಬೇಗನೆ ಏಳುವುದರಿಂದ ಮಾನಸಿಕವಾಗಿ ಸದೃಢರಾಗುತ್ತೇವೆ. ಬೆಳಗ್ಗೆ ಬೇಗನೆದ್ದು, ಹೊರಗೆ ಪ್ರಕೃತಿಯ ನಡುವೆ ಒಂದು ವಾಕ್‌ ಹೋಗಿ ಬಂದರೆ ಮನಸ್ಸು ಉಲ್ಲಸಿತವಾಗುತ್ತದೆ. ಇದರಿಂದ ವೃತ್ತಿ ಸಂಬಂಧಿತವಾದ ಒತ್ತಡ ಸಮಸ್ಯೆಗಳೂ ಬರದು. ಮಾನಸಿಕವಾಗಿ ಸಾಮರ್ಥ್ಯ ಹೆಚ್ಚಾಗುತ್ತದೆ. ಮನಸ್ಸಿಗೆ ಸುಖ, ನೆಮ್ಮದಿ ಕೂಡಿ ಬರುತ್ತದೆ.

3. ಕೆಲಸ ಕಾರ್ಯಗಳಲ್ಲಿ ಚುರುಕುತನ ಬರುತ್ತದೆ. ಬೇಗನೆದ್ದು ವ್ಯಾಯಾಮ ಮಾಡಿಕೊಂಡು ಕಚೇರಿ ಕೆಲಸಗಳನ್ನು ಒಂದು ಸಮಯಕ್ಕೆ ಸರಿಯಾಗಿ ಆರಂಭಿಸುವಾಗ, ಮನಸ್ಸು, ಬುದ್ಧಿ ಚುರುಕಾಗಿ ಕೆಲಸದ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಕೆಲಸದಲ್ಲಿ ಲವಲವಿಕೆಯೂ ಇರುತ್ತದೆ.

4. ಕೆಲಸ ಕಾರ್ಯಗಳಲ್ಲಿ ಫೋಕಸ್‌ ಹೆಚ್ಚುತ್ತದೆ. ನಿತ್ಯವೂ ತಾನೇನು ಕೆಲಸಗಳನ್ನು ಇಂದು ಮಾಡಿ ಮುಗಿಸಬೇಕು ಎಂಬುದರ ಬಗ್ಗೆ ಪಕ್ವತೆ, ನಿರ್ಧಿಷ್ಟತೆ ಇರುತ್ತದೆ. ಹಾಗೂ ಅಂದುಕೊಂಡ ಹಾಗೆ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ ಕೂಡಾ.

ಇದನ್ನೂ ಓದಿ: Health Tips: ತಡರಾತ್ರಿಯವರೆಗಿನ ಅಧ್ಯಯನ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ?

5. ಬೆಳಗ್ಗಿನ ಸೂರ್ಯನ ಬೆಳಕು ನಿಮ್ಮ ಚರ್ಮವನ್ನು ಸರ್ಶಿಸುವ ಸುಖವನ್ನು ಪಡೆಯುತ್ತೀರಿ. ಇದು ನಿಮ್ಮ ದೈಹಿಕ ಆರೋಗ್ಯಕ್ಕೂ, ಮಾನಸಿಕ ಆರೋಗ್ಯಕ್ಕೂ ಖಂಡಿತ ಒಳ್ಳೆಯದೇ.

6. ಬೆಳಗ್ಗೆ ಬೇಗನೆದ್ದು ವಾಕ್‌ ಅಥವಾ ವ್ಯಾಯಾಮ ಮಾಡುವ ಮೂಲಕ ನಿಮ್ಮ ದಿನವನ್ನು ಆರಂಭಿಸುವುದರಿಂದ ಸಹಜವಾಗಿಯೇ ನೀವು ಬೆಳಗ್ಗೆ ಆರೋಗ್ಯಕರ ಆಹಾರದತ್ತ ಮುಖ ಮಾಡುತ್ತೀರಿ. ದೇಹದ ಪಚನಕ್ರಿಯೆ ಚುರುಕುಗೊಳ್ಳುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

7. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮಲ್ಲಿ ಸಂತೋಷ ತುಂಬಿ ತುಳುಕುತ್ತದೆ. ಇಡೀ ದಿನ ಉಲ್ಲಸಿತರಾಗಿ, ಖುಷಿಯಿಂದ ಇರುತ್ತೀರಿ. ಏನೋ ಒಂದು ಖುಷಿ, ಸಂಪನ್ನತೆ ನಿಮ್ಮಲ್ಲಿ ತುಂಬಿಕೊಳ್ಳುತ್ತದೆ.

ಯೋಚನೆ ಯಾಕೆ, ಚಳಿಯಿದ್ದರೇನಂತೆ, ಮೈಕೊಡವಿ ಹಾಸಿಗೆಯಿಂದ ಎದ್ದು ನಡೆಯಿರಿ! ಖುಷಿಯನ್ನು ಖಂಡಿತವಾಗಿ ನೀವೇ ಕಂಡುಕೊಳ್ಳುವಿರಿ.

ಇದನ್ನೂ ಓದಿ: Lips Health Tips: ನಿಮಗೆ ತಿಳಿದಿರಲಿ, ತುಟಿಯಂಚಲ್ಲಿದೆ ಆರೋಗ್ಯದ ಸೂಚನೆ!

Exit mobile version