Site icon Vistara News

Winter Precautions: ಚಳಿಗಾಲದಲ್ಲಿ ಒಡೆವ ಹಿಮ್ಮಡಿಯ ಸಮಸ್ಯೆಯೇ? ಪರಿಹಾರ ಇಲ್ಲಿದೆ!

foot

foot

ಬೆಂಗಳೂರು: ಚಳಿಗಾಲ ಬರುತ್ತಿದ್ದ (Winter Precautions) ಹಾಗೆಯೇ ಬಹುತೇಕರ ಸಮಸ್ಯೆ ಎಂದರೆ ಪಾದದ ಹಿಮ್ಮಡಿ ಒಡೆಯುವುದು. ಈ ಸಮಸ್ಯೆ ಸಣ್ಣದೆಂದು ಸಾಮಾನ್ಯರಿಗೆ ಅನಿಸಬಹುದು. ಆದರೆ ನಿಜವಾಗಿಯೂ ಈ ಸಮಸ್ಯೆ ಅನುಭವಿಸಿದವರಿಗಷ್ಟೇ ಅದರ ಗಂಭೀರತೆ ಅರ್ಥವಾಗುವುದು. ಯಾಕೆಂದರೆ, ಹಿಮ್ಮಡಿ ಒಡೆಯಲು ಒಮ್ಮೆ ಶುರುವಾದರೆ, ಚಳಿಗಾಲದ ತೀವ್ರತೆ ಹೆಚ್ಚಾಗುತ್ತಾ ಹೋದಂತೆಲ್ಲ, ಇದೂ ಕೂಡಾ ತೀವ್ರವಾಗುತ್ತಲೇ ಹೋಗುತ್ತದೆ. ಪಾದಕ್ಕೆ ಸೂಕ್ತ ಕಾಳಜಿ ತೆಗೆದುಕೊಳ್ಳದೆ ಇದ್ದರೆ, ಹಿಮ್ಮಡಿ ಒಡೆದು ಒಡೆದು ಕೊನೆಗೆ ಪಾದದಿಂದ ರಕ್ತ ಜಿನುಗಲು ಆರಂಭವಾಗುತ್ತದೆ. ಆಗ ಕಾಲು ನೆಲದಲ್ಲಿ ಊರಲೂ ಸಾಧ್ಯವಾಗದಷ್ಟು ನೋವು. ಹಾಗಾಗಿ, ಚಳಿಗಾಲ ಬರುತ್ತಿದ್ದಂತೆ, ಈ ಸಮಸ್ಯೆ ಪ್ರತಿಬಾರಿ ಎದುರಿಸುವ ಮಂದಿ ಖಂಡಿತವಾಗಿಯೂ ತಮ್ಮ ಪಾದದ ಕುರಿತು ಗಂಭೀರವಾಗಿ ಕಾಳಜಿ ತೆಗೆದುಕೊಳ್ಳಲೇಬೇಕು. ಇಲ್ಲಿ ನಿರ್ಲಕ್ಷ್ಯ ಸಲ್ಲ. ಹಾಗಾದರೆ ಬನ್ನಿ, ಚಳಿಗಾಲದಲ್ಲಿ ಪಾದಗಳ ಕಾಳಜಿ ಹೇಗೆ ಮಾಡಬೇಕು ಎಂಬುದನ್ನು ನೋಡೋಣ.

ಪಾದ ಸ್ವಚ್ಛವಾಗಿರಲಿ

ನಿತ್ಯವೂ ಪಾದಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ. ಒದ್ದೆ ಪಾದಗಳನ್ನು ಮೆದುವಾದ ಟವೆಲ್‌ನಿಂದ ಮೆತ್ತಗೆ ಒರೆಸಿಕೊಂಡು, ಗಾಳಿಯಾಡಲು ಬಿಡಿ. ಮಲಗುವ ಮುನ್ನ, ಒಡೆದ, ಬಿರುಕು ಬಿಟ್ಟ ಹಿಮ್ಮಡಿಗೆ ದಪ್ಪ ಕ್ರೀಮನ್ನು ಹಚ್ಚಿ. ಸಾಮಾನ್ಯ ಮಾಯ್‌ಶ್ಚರೈಸರ್‌ ಹಚ್ಚಿದರೆ, ಸಮಸ್ಯೆ ಬಗೆಹರಿಯದು. ನಿಮ್ಮ ಒಡೆದ ಪಾದಗಳಿಗೆಂದೇ ಮೆಡಿಕಲ್‌ ಶಾಫ್‌ನಲ್ಲಿ ಸಿಗುವ ಔಷಧಿಯುಕ್ತ ಮುಲಾಮನ್ನೋ, ಅಥವಾ ದಪ್ಪ ಕ್ರೀಮನ್ನೋ ಹಚ್ಚಿಕೊಂಡು ಸಾಕ್ಸ್‌ ಧರಿಸಿ ಮಲಗಿ. ಪೆಟ್ರೋಲಿಯಂ ಜೆಲ್ಲಿ ಅಥವಾ ಶಿಯಾ ಬಟರ್‌ ಇರುವ ಕ್ರೀಂ ಒಡೆದ ಹಿಮ್ಮಡಿಗೆ ಒಳ್ಳೆಯದು.

ಬೆಚ್ಚಗಿನ ನೀರಿನಲ್ಲಿ ಕಾಲು ಮುಳುಗಿಸಿಡಿ

ಪಾದವನ್ನು ಬೆಚ್ಚಗಿನ ನೀರಿನಲ್ಲಿ ಹದಿನೈದು ನಿಮಿಷಗಳ ಕಾಲ ಮುಳುಗಿಸಿಡಬೇಕು. ಆಗ ಸತ್ತ ಚರ್ಮವನ್ನು ತೆಗೆಯಲು ಸುಲಭವಾಗುತ್ತದೆ. ಫ್ಯೂಮಿಸ್‌ ಕಲ್ಲಿನಿಂದ ಪಾದವನ್ನು ಉಜ್ಜಿ ಉಜ್ಜಿ ಸತ್ತ ಚರ್ಮವನ್ನು ತೆಗೆಯಿರಿ. ಅತಿಯಾಗಿ ನೋವಾಗುವವರೆಗೆ ಉಜ್ಜಬೇಡಿ. ಹಾಗೂ ಪದೇ ಪದೇ ಇದನ್ನು ಮಾಡಬೇಡಿ. ಇದಕ್ಕಾಗಿ ಪಾದಕ್ಕೆ ಸ್ಕ್ರಬ್ಬಿಂಗ್‌ ಕ್ರೀಮನ್ನು ಅಥವಾ ಸಕ್ಕರೆಯನ್ನು ಬಳಸಬಹುದು. ಹೀಗೆ ಸ್ಕ್ರಬ್‌ ಮಾಡಿದ ಮೇಲೆ ಪಾದವನ್ನು ಟವೆಲ್‌ನಲ್ಲಿ ಒರೆಸಿ ನಂತರ ಕ್ರೀಂ ಹಚ್ಚಿ ಆರೈಕೆ ಮಾಡಿ.

ಸಾಕಷ್ಟು ನೀರು ಕುಡಿಯಿರಿ

ನಿಮ್ಮ ಪಾದದ ಈ ಸಮಸ್ಯೆಗೆ ಕೇವಲ ಹೊರಗಿನ ಕಾರಣಗಳು ಮಾತ್ರವಲ್ಲ, ಒಳಗಿನ ಕಾರಣಗಳೂ ಇರುತ್ತವೆ. ಯಾಕೆಂದರೆ, ದೇಹ ಸರಿಯಾಗಿ ನೀರಿನಂಶ ಪಡೆಯದೆ ಇದ್ದರೆ, ಚರ್ಮ ಒಣಗುತ್ತದೆ. ಹಾಗಾಗಿ ಚಳಿಗಾಲದಲ್ಲೂ ಸಾಕಷ್ಟು ನೀರು ಕುಡಿಯಲೇಬೇಕು.

ಹಿಮ್ಮಡಿ ಮುಚ್ಚುವ ಶೂ ಬಳಸಿ

ಚಳಿಗಾಲದಲ್ಲಾದರೂ ಆದಷ್ಟು ಹಿಮ್ಮಡಿ ಮುಚ್ಚುವ ಶೂಗಳನ್ನು ಬಳಸಿ. ಶೂಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇರಲಿ. ಬಹಳ ಟೈಟಾದ ಅಥವಾ ಬಹಳ ಲೂಸಾದ ಶೂಗಳನ್ನು ಧರಿಸಬೇಡಿ. ಶೂಗಳೊಳಗೆ ಸಾಕ್ಸ್‌ ಧರಿಸಿ.

ಒಣಗಿದ ಸಾಕ್ಸ್‌ ಧರಿಸಿ

ತೇವಾಂಶವನ್ನು ಹೀರಿಕೊಳ್ಳುವಂಥ ಸಾಕ್ಸ್‌ಗಳನ್ನು ಬಳಸಿ. ಸಾಕ್ಸ್‌ ಸರಿಯಾಗಿ ಒಣಗಿರಲಿ. ಸಾಕ್ಸ್‌ ಧರಿಸುವ ಮುನ್ನ ಪಾದವೂ ಸರಿಯಾಗಿ ಒಣಗಿರಲಿ. ಪಾದದ ಕ್ರೀಂ ಹಚ್ಚಿಕೊಂಡೇ ಸಾಕ್ಸ್‌ ಧರಿಸುವುದು ಒಳ್ಳೆಯದು.

ನೈಸರ್ಗಿಕ ವಿಧಾನ

ಒಡೆದ ಹಿಮ್ಮಡಿ ನೋಯುತ್ತಿದ್ದರೆ, ನೈಸರ್ಗಿಕ ವಿಧಾನಗಳನ್ನು ಅನುಸರಿಸುವವರು ನೀವಾಗಿದ್ದರೆ, ಜೇನುಮೇಣ ಒಳ್ಳೆಯ ಮನೆಮದ್ದು. ಜೇನುತುಪ್ಪ ಹಿಂಡುವ ಮೊದಲು ಅದರ ಗೂಡಿನ ವ್ಯಾಕ್ಸ್‌ನಿಂದ ಮಾಡಿದ ಮೇಣವನ್ನು ಒಡೆದ ಹಿಮ್ಮಡಿಗೆ ಹಚ್ಚಿಕೊಂಡರೆ ಬೇಗ ಪರಿಹಾರ ಕಾಣಬಹುದು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಅನುಸರಿಸುತ್ತಿದ್ದ ಪದ್ಧತಿಯಿದು. ಮದರಂಗಿ ಅಥವಾ ಮೆಹೆಂದಿಯ ಎಲೆಗಳನ್ನು ಹಾಕಿ ಮಾಡಿದ ಎಣ್ಣೆಯನ್ನು ಹಚ್ಚುವುದರಿಂದ ಅಥವಾ ಮೆಹೆಂದಿ ಸೊಪ್ಪನ್ನು (ಮಾರುಕಟ್ಟೆಯ ಪುಡಿ ಅಲ್ಲ, ಗಿಡದಿಂದ ಕೊಯ್ದ ತಾಜಾ ಸೊಪ್ಪ) ರುಬ್ಬಿಕೊಂಡು ಆ ಪೇಸ್ಟನ್ನು ಹಿಮ್ಮಡಿಗೆ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ. ಆದರೆ ಬಣ್ಣವೂ ಬರುತ್ತದೆ.

ಪೋಷಕಾಂಶಯುಕ್ತ ಆಹಾರ ಸೇವಿಸಿ

ಯಾವಾಗಲೂ ಪೋಷಕಾಂಶಯುಕ್ತ ಆಹಾರ ಸೇವಿಸಿ. ಮುಖ್ಯವಾಗಿ ಒಮೆಗಾ 3 ಫ್ಯಾಟಿ ಆಸಿಡ್‌ ಹಾಗೂ ವಿಟಮಿನ್‌ ಇ ಇರುವ ಆಹಾರ ಚರ್ಮದ ರಕ್ಷಣೆಗೆ ಒಳ್ಳೆಯದು.

ಇದನ್ನೂ ಓದಿ: Winter Vegetables: ಈ ಎಲ್ಲ ಸೊಪ್ಪು ತರಕಾರಿಗಳನ್ನು ಚಳಿಗಾಲದಲ್ಲಿ ಮರೆಯದೆ ತಿನ್ನಿ! ಏಕೆ ಅಂತೀರಾ?

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version