ಬೆಂಗಳೂರು: ಚಳಿಗಾಲ ಬಂದೊಡನೆ ಮೈಮನಸ್ಸಿಗೆ ಖುಷಿ. ಹಿತವಾಗಿ ಹೊದ್ದುಕೊಂಡು ಮಲಗಲು, ಬಿಸಿಬಿಸಿಯಾಗ ಹೂರಲು, ರುಚಿರುಚಿಯಾಗಿ ಏನಾದರೂ ಮಾಡಿಕೊಂಡು ತಿನ್ನಲು, ಸ್ವೆಟರ್ ಜೇಬಿನೊಳಗೆ ಕೈ ಇಳಿಬಿಟ್ಟು ವಾಕ್ ಹೋಗಲು ಹೀಗೆ ಚಳಿಗಾಲದಲ್ಲಿ ಮುದ ನೀಡುವ ಹಲವು ಸಂಗತಿಗಳಿವೆ. ಬದುಕನ್ನು ನಿಧಾನವಾಗಿಸುವ ಗುಣ ಚಳಿಗಾಲಕ್ಕಿದೆ. ಕೆಲಸ ಮಾಡುವ ಚುರುಕುತನ ಉತ್ಸಾಹ ಕಡಿಮೆಯಾಗುತ್ತದೆ. ಸುಮ್ಮನೆ ಒಂದೆಡೆ ಮುದುರಿ ಕೂರಲು ಮನಸ್ಸು ಬಯಸುತ್ತದೆ. ಇಂಥ ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸುವ ಯಾವೆಲ್ಲ ಆಹಾರಗಳನ್ನು ನಾವು ಸೇವಿಸಲೇಬೇಕು ಎಂಬುದನ್ನು ನೋಡೋಣ (Winter Season Food).
ಮಸಾಲೆಗಳು
ಮಸಾಲೆಗಳಾದ ಶುಂಠಿ, ಏಲಕ್ಕಿ, ಚೆಕ್ಕೆ, ಲವಂಗ ಇವೆಲ್ಲವೂ ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸುವ ಶಕ್ತಿ ಹೊಂದಿವೆ. ಚಳಿಗಾಲದಲ್ಲಿ ಇವುಗಳ ಚಹಾ, ಮಸಾಲೆ ಹಾಕಿದ ಸಹಾ ಅಥವಾ ಶುಂಠಿ ಚಹಾ ಮಾಡಿಕೊಂಡು ಕುಡಿಯುವ ಮೂಲಕವೂ ದೇಹವನ್ನು ಬಿಸಿಯಾಗಿ ಇರಿಸಿಕೊಳ್ಳಬಹುದು.
ಎಳ್ಳು
ಎಳ್ಳಿನಲ್ಲಿ ಉಷ್ಣಕಾರಕ ಅಂಶಗಳಿದ್ದು, ಇದನ್ನು ಬೆಲ್ಲದ ಜೊತೆ ಸೇರಿಸಿ ತಿಂದರಂತೂ ಅದ್ಭುತ ಫಲವನ್ನು ಕಾಣಬಹುದು. ಚಳಿಯಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿಟ್ಟು, ಆರೋಗ್ಯವಾಗಿರಿಸುತ್ತದೆ. ಅದಕ್ಕಾಗಿಯೇ ಎಳ್ಳುಂಡೆ, ಎಳ್ಳಿನ ಚಿಕ್ಕಿ ಚಳಿಗಾಲದಲ್ಲಿ ಬಹಳ ಒಳ್ಳೆಯದು. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಖನಿಜಾಂಶಗಳೂ, ಇತರ ಪೋಷಕಾಂಶಗಳೂ ಇರುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಿ ಚಳಿಗಾಲದಲ್ಲಿ ಆರೋಗ್ಯವಾಗಿರಿಸುತ್ತದೆ.
ಬೆಲ್ಲ
ಬೆಲ್ಲ ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು. ಇದರಲ್ಲಿ ಕಬ್ಬಿಣಾಂಶ ಹೆಚ್ಚಿರುವುದು ಹೌದಾದರೂ, ಚಳಿಗಾಲಕ್ಕೆ ಇದರಲ್ಲಿ ಉಷ್ಣಕ ಗುಣಗಳಿವೆ. ಹೀಗಾಗಿ ಇದು ದೇಹಕ್ಕೆ ಈ ಕಾಲಕ್ಕೆ ಅಗತ್ಯವಿರುವ ಪೋಷಣೆಯನ್ನು ನೀಡಿ ದೇಹವನ್ನು ಬೆಚ್ಚಗಿರಿಸುತ್ತದೆ.
ಧಾನ್ಯಗಳು
ಧಾನ್ಯಗಳೂ ಕೂಡಾ ಚಳಿಗಾಲದಲ್ಲಿ ಸೇವನೆ ಮಾಡುವುದು ಒಳ್ಳೆಯದು. ಗೋಧಿ, ಜೋಳ ಸೇರಿದಂತೆ ಎಲ್ಲ ಬಗೆಯ ಧಾನ್ಯಗಳ ಸೇವನೆ ದೇಹವನ್ನು ಬೆಚ್ಚಗೆ ಇರಿಸುತ್ತದೆ.
ಸೂಪ್‌ಗಳು
ಚಳಿಗಾಲದಲ್ಲಿ ಹೊಟ್ಟೆಗಿಳಿಸಬಹುದಾದ ಬಿಸಿಬಿಸಿ ಪೇಯವೆಂದರೆ ಅದು ಸೂಪ್. ಬಗೆಬಗೆಯ ತರಕಾರಿಗಳ ಸೂಪ್‌ಗಳು ಚಳಿಗಾಲಕ್ಕೆ ಮೈಮನ ಬಿಸಿಯಾಗಿಸುತ್ತದೆ.
ಗಡ್ಡೆಗೆಣಸುಗಳು
ಚಳಿಗಾಲದಲ್ಲಿ ಎಲ್ಲ ಬಗೆಯ ಗಡ್ಡೆಗೆಣಸುಗಳು ಆರೋಗ್ಯಕ್ಕೆಒಳ್ಳೆಯದು. ನೆಲದಡಿಯಲ್ಲಿ ಬೆಳೆಯುವವುಗಳಾದ ಕ್ಯಾರೆಟ್, ಮೂಲಂಗಿ, ಆಲೂಗಡ್ಡೆ, ಸಿಹಿ ಗೆಣಸು, ಬೀಟ್‌ರೂಟ್ ಸೇರಿದಂತೆ ಎಲ್ಲ ಬಗೆಯ ಗಡ್ಡೆಗಳು ಚಳಿಗಾಲದಲ್ಲಿ ಒಳ್ಳೆಯದು.
ಹಸಿರು ಸೊಪ್ಪುಗಳು
ಪಾಲಕ್, ಮೆಂತ್ಯ ಸೊಪ್ಪು, ಸಾಸಿವೆ ಸೊಪ್ಪು, ಹರಿವೆ ಸೊಪ್ಪು, ಕೊತ್ತಂಬರಿ ಸೊಪ್ಪು, ಸಬ್ಬಸ್ಸಿಗೆ ಹೀಗೆ ಹತ್ತು ಹಲವು ಸೊಪ್ಪುಗಳು ಚಳಿಗಾಲದಲ್ಲಿ ತಾಜಾ ಆಗಿ ಬರುತ್ತವೆ. ಚಳಿಗಾಲದಲ್ಲಿ ಇವುಗಳ ಪೋಷಕ ತತ್ವ ಬಹು ಅಗತ್ಯ ಕೂಡಾ.
ಬೀಜಗಳು
ನೆಲಗಡಲೆ, ಬಾದಾಮಿ, ಪಿಸ್ತಾ, ಕುಂಬಳಕಾಯಿ ಬೀಜ, ಸೌತೆಕಾಯಿ ಬೀಜ ಹೀಗೆ ಎಲ್ಲ ಬಗೆಯ ಬೀಜಗಳೂ ಕೂಡಾ ಚಳಿಗಾಲದಲ್ಲಿ ಮಾರುಕಟ್ಟೆಗೆ ತಾಜಾ ಆಗಿ ಲಗ್ಗೆಯಿಡುತ್ತವೆ. ಬೀಜಗಳಲ್ಲಿ ನೈಸರ್ಗಿಕವಾದ ತೈಲದ ಗುಣಗಳಿರುವುದರಿಂದ ಚರ್ಮಕ್ಕೆ ಹಾಗೂ ದೇಹ ಸಮರ್ಪಕವಾಗಿ ಚಳಿಗಾಲದಲ್ಲಿ ಕೆಲಸ ಮಾಡಲು ಈ ಎಣ್ಣೆಯಂಶ ಅಗತ್ಯವಾಗಿ ಬೇಕಿದೆ.
ಇದನ್ನೂ ಓದಿ: Home Remedies For Cough And Cold: ನೆಗಡಿ, ಕೆಮ್ಮೇ? ಬದಲಾಗುತ್ತಿರುವ ವಾತಾವರಣಕ್ಕೆ ಬೇಕಾದ ಮನೆಮದ್ದುಗಳಿವು
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ