Site icon Vistara News

Back Pain | ವರ್ಕ್‌ ಫ್ರಂ ಹೋಂ ತಂದಿಟ್ಟ ಬೆನ್ನುನೋವಿಗೆ ಪರಿಹಾರಗಳೇನು?

back pain

ಕೋವಿಡ್‌ ಜಗತ್ತಿಗೆ ಕಾಲಿಟ್ಟ ದಿನದಿಂದ ಜಗತ್ತು ಸಂಪೂರ್ಣವಾಗಿ ಬದಲಾಗಿದೆ. ಜಗತ್ತು ಬಹುಪಾಲು ʻವರ್ಕ್‌ ಫ್ರಂ ಹೋಂʼನಿಂದ ನಡೆದಿದೆ. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ಇನ್ನೂ ಬಹಳಷ್ಟು ಸಂಸ್ಥೆಗಳಲ್ಲಿ ವರ್ಕ್‌ ಫ್ರಂ ಹೋಂ ಮುಂದುವರಿದಿದೆ. ಹಲವರು ಈ ಸ್ಥಿತಿಗೆ ಒಗ್ಗಿಕೊಂಡು, ಮನೆಯಿಂದಲೇ ಕೆಲಸ ಮಾಡಿಕೊಳ್ಳುವಲ್ಲೇ ಸಂತೋಷ ಕಂಡುಕೊಳ್ಳುತ್ತಿದ್ದಾರೆ ಕೂಡಾ. ಆದರೆ, ಪರಿಸ್ಥಿತಿ ಏನೇ ಇರಲಿ, ಬದಲಾದ ಜೀವನಕ್ರಮ ಖಂಡಿತವಾಗಿಯೂ ಈಗ ಎಲ್ಲರ ಬದುಕಿನಲ್ಲೂ ಸಾಕಷ್ಟು ಪರಿಣಾಮ ಬೀರುತ್ತಿದೆ.

ಆಫೀಸಿನಲ್ಲಿ ಕೂರಲು ಅನುಗುಣವಾಗಿ ಡೆಸ್ಕ್‌ಗಳು, ಕುರ್ಚಿಗಳು ಇರುವುದರಿಂದ ಕೂತು ಕೂತು ಆರೋಗ್ಯದ ಮೇಲೆ ಪರಿಣಾಮ ಎದುರಿಸಿದವರಿದ್ದರೂ ಈಗ ಆ ಮಟ್ಟ ಇನ್ನೂ ಹೆಚ್ಚಿದೆ. ಕಾರಣ, ಆಫೀಸಿನಲ್ಲಿ ಕೆಲಸಕ್ಕೆ ಯೋಗ್ಯವಾದ ಕುರ್ಚಿ, ಮೇಜುಗಳಿದ್ದವು. ಆದರೆ, ಈಗ ನಿಜವಾದ ಸಮಸ್ಯೆ ಉದ್ಭವಿಸಿರುವುದು ವರ್ಕ್‌ ಫ್ರಂ ಹೋಂನಲ್ಲಿ ಬೇಕಾದ ಹಾಗೆ ಅವರವರ ಅನುಕೂಲಗಳಿಗೆ ತಕ್ಕಂತೆ ಎಲ್ಲರೂ ಹಾಸಿಗೆಯ ಮೇಲೆ, ಸೋಫಾದಲ್ಲಿ, ನೆಲದಲ್ಲಿ ಮಲಗಿಕೊಂಡು ಅಥವಾ ಇನ್ನೇನೋ ಭಂಗಿಗಳಲ್ಲಿ ಗಂಟೆಗಟ್ಟಲೆ ಕೆಲಸ ಮಾಡಿದ ಪರಿಣಾಮ ಇಂದು ಬೆನ್ನುನೋವಿನಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಆರಾಮಕ್ಕಾಗಿ ಅವರವರ ಕಂಫರ್ಟ್‌ಗಳಿಗಾಗಿ ಸುಖಾಸನದಲ್ಲಿ ಕೆಲಸ ಮಾಡುತ್ತಿದ್ದ ಪರಿಣಾಮ ದೇಹಾರೋಗ್ಯದಲ್ಲಿ ವ್ಯತ್ಯಯವಾಗುತ್ತಿದೆ.

ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ೧೮ರಂತಹ ಸಣ್ಣ ವಯಸ್ಸಿನಲ್ಲಿಯೇ ಬೆನ್ನು ನೋವಿನ ಸಮಸ್ಯೆಯನ್ನು ಹೊತ್ತುಕೊಂಡು ವೈದ್ಯರನ್ನು ಎಡತಾಕುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ೧೮ರಿಂದ ೨೯ರ ವಯಸ್ಸಿನೊಳಗಿನ ಯುವಜನತೆಯಲ್ಲೂ ಬೆನ್ನುನೋವಿನ ಸಮಸ್ಯೆ ಹೆಚ್ಚಾಗಿದೆ. ಇವೆಲ್ಲವೂ ಕಳೆದೆಎರಡು ವರ್ಷಗಳಿಂದ ವರ್ಕ್‌ ಫ್ರಂ ಹೋಂ, ಆನ್‌ಲೈನ್‌ ತರಗತಿಗಳ ಪರಿಣಾಮ ಎಂದು ಹೇಳಲಾಗಿದೆ.

ಬಹುತೇಕರಲ್ಲಿ ಈ ಬೆನ್ನುನೋವಿನ ಸಮಸ್ಯೆ, ನಾಲ್ಕರಿಂದ ೧೦ ದಿನಗಳವರೆಗೆ ಇರುತ್ತಿದ್ದು, ಆಮೇಲೆ ನಿಧಾನಕ್ಕೆ ಹತೋಟಿಗೆ ಬರುತ್ತಿದೆ. ಆದರೆ, ಈ ಸಮಸ್ಯೆಗೆ ಕೂಡಲೇ ಚಿಕಿತ್ಸೆ ಮಾಡಿದರೆ ಮಾತ್ರ ಇದು ಉಲ್ಬಣವಾಗುವುದನ್ನು ತಡೆಯಬಹುದಾಗಿದೆ.

ಇದನ್ನೂ ಓದಿ | ಯೋಗ ದಿನ ಅಷ್ಟೇ ಅಲ್ಲ, ದಿನಾ ಯೋಗ ಮಾಡಬೇಕೆನ್ನಲು 11 ಕಾರಣಗಳು!

ಮೈಂಡ್‌ ಯುವರ್‌ ಬ್ಯಾಕ್‌ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಅರ್ಧಕ್ಕರ್ಧ ಮಂದಿಗೆ ಮನೆಯಲ್ಲಿ ಕಚೇರಿಯಂತೆ ಕೂರಲು ಸರಿಯಾದ ವ್ಯವಸ್ಥೆಯಿಲ್ಲ. ಹಾಗಾಗಿ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲರೂ ಕೂತು ಕೆಲಸ ಮಾಡಿದ್ದರು. ಇದಲ್ಲದೆ ಸುಮಾರು ಶೇಕಡಾ ೨೦ರಷ್ಟು ಮಂದಿ ಸೋಫಾದ ಮೇಲೆ ಕೂತು ಅಥವಾ ಬೆಡ್‌ ಮೇಲೆ ಮಲಗಿಕೊಂಡು ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದು ಬೆನ್ನುಮೂಳೆಯ ಮೇಲೆ ಅಡ್ಡ ಪರಿಣಾಮ ಬೀರಿದ್ದು ಬೆನ್ನಿನ ಮೇಲೆ ಹೆಚ್ಚು ಒತ್ತಡವನ್ನು ಹಾಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಧ್ಯಯನಕ್ಕೆ ಒಳಗಾದ ಮಂದಿಯಲ್ಲಿ ಶೇಕಡಾ ೫೬ ಮಂದಿಗೆ ಹೊಸದಾಗಿ ಬೆನ್ನುನೋವಿನ ಸಮಸ್ಯೆ ಆರಂಭವಾಗಿದ್ದು, ಅವರಲ್ಲಿ ಈ ಮೊದಲು ಈ ಸಮಸ್ಯೆಯೇ ಇರಲಿಲ್ಲ. ಇವರಿಗೆ ಬೆನ್ನಿನ ಕೆಳಭಾಗದಲ್ಲಿ ಅಂದರೆ ಸೊಂಟದ ಭಾಗದಲ್ಲಿ ಹೊಸ ನೋವು ಕಾಣಿಸಿಕೊಂಡಿದೆ. ಶೇ ೨೩ ಮಂದಿಗೆ ಕೊರಳಿನ ಭಾಗದಲ್ಲಿ ಹಾಗೂ ಭುಜದಲ್ಲಿ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಮನೆಯಿಂದ ಕೆಲಸ ಮಾಡುವ ಮಂದಿ ತಾವು ಕೆಲಸ ಮಾಡಲು ಕೂರಲು ಆಫೀಸಿನ ಮಾದರಿಯ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಬಿಸಿ ಹಾಗೂ ತಣ್ಣಗಿನ ಸ್ಪ್ರೇ ಅಥವಾ ಒತ್ತಡ ನೀಡುವ ಥೆರಪಿಗಳ ಮೂಲಕ ಸಮಸ್ಯೆಯಿಂದ ಸ್ವಲ್ಪ ಮಟ್ಟಿನ ಪರಿಹಾರ ಸಿಗಬಹುದು.

ಇವಲ್ಲದೆ, ಪ್ರತಿನಿತ್ಯ ಆರೋಗ್ಯಕರ ಲೈಫ್‌ಸ್ಟೈಲ್ ರೂಢಿಸಿಕೊಳ್ಳುವುದೂ ಕೂಡಾ ಮುಖ್ಯವಾಗುತ್ತದೆ. ವಾಕಿಂಗ್‌, ಸೈಕ್ಲಿಂಗ್‌ ಮತ್ತು ಈಜುವುದು ಮತ್ತಿತರ ವ್ಯಾಯಾಮಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಅಲ್ಲದೆ, ಟಿವಿ ನೋಡುವುದು, ಲ್ಯಾಪ್‌ಟಾಪಿನಲ್ಲಿ ಕೆಲಸ ಮಾಡುವ ಸಂದರ್ಭ ಕೂರುವ ಭಂಗಿ ಸರಿಯಾಗಿರಲಿ. ಕಚೇರಿಯಲ್ಲಿರುವ ವಾತಾವರಣವನ್ನು ಆದಷ್ಟೂ ಮನೆಯಲ್ಲಿ ಕೆಲಸ ಮಾಡುವ ಸಂದರ್ಭವೂ ಅನುಸರಿಸಿದರೆ ಈ ಸಮಸ್ಯೆಯಿಂದ ತಕ್ಕಮಟ್ಟಿನ ಮುಕ್ತಿ ಪಡೆಯಬಹುದು.

ಇದನ್ನೂ ಓದಿ | ಹೆರಿಗೆ ನಂತರ ಬೆನ್ನುನೋವು ಕಾಡ್ತಿದೆಯೇ? ಇಲ್ಲಿದೆ ಕಾರಣ ಹಾಗೂ ಪರಿಹಾರೋಪಾಯಗಳು

Exit mobile version