Site icon Vistara News

Work from home: ದೂರದ ಬೆಟ್ಟ ನುಣ್ಣಗೆ; ವರ್ಕ್‌ ಫ್ರಂ ಹೋಂನಿಂದ ಈ ಸಮಸ್ಯೆಗಳೂ ಎದುರಾಗಬಹುದು!

work from home

ಕೊರೋನಾ ನಂತರ ಬಹಳಷ್ಟು ಸಂಸ್ಥೆಗಳು, ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ (Work from home) ಅವಕಾಶವನ್ನು ನೀಡಿವೆ. ಹಲವು ಸಂಸ್ಥೆಗಳು ಕೊರೋನಾ ಕಾಲದಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದ ನಂತರ ಅದನ್ನು ಬದಲಾಯಿಸಿಯೇ ಇಲ್ಲ. ಇಂದಿಗೂ ಬಹುತೇಕರಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಹಿತಕರವಾಗಿದೆ, ಅಭ್ಯಾಸವೂ ಆಗಿದೆ. ಬಹಳಷ್ಟು ಸಂಸ್ಥೆಗಳಿಗೆ ಇದರಿಂದ ವೆಚ್ಚದಲ್ಲೂ ಉಳಿತಾಯವೆನಿಸಿ, ಅದನ್ನೇ ಮುಂದುವರಿಸಿವೆ. ಇನ್ನೂ ಕೆಲವು ಸಂಸ್ಥೆಗಳು ಹೈಬ್ರಿಡ್‌ ಮಾದರಿಗೆ (Hybrid model) ಮೊರೆ ಹೋಗಿವೆ. ಅಗತ್ಯ ಬಿದ್ದಾಗ ಅಥವಾ ವಾರದಲ್ಲಿ ಒಂದೆರಡು ದಿನ ಕಚೇರಿ, ಉಳಿದ ದಿನಗಳು ಮನೆಯಿಂದಲೇ ಮಾಡುವುದು ಇತ್ಯಾದಿ ವ್ಯವಸ್ಥೆಗಳನ್ನೂ ಮಾಡಿಕೊಂಡಿವೆ. ಇದರಿಂದ ಲಾಭಗಳು ಅನೇಕ ಇದ್ದರೂ, ನಷ್ಟಗಳೂ ಇವೆ. ಬನ್ನಿ ವರ್ಕ್‌ ಫ್ರಂ ಹೋಂ ಪದ್ಧತಿಯಿಂದ ಆಗುವ ಅನನುಕೂಲಗಳ ಬಗ್ಗೆ ತಿಳಿಯೋಣ.

1. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ: ಹೌದು. ಮನೆಯಿಂದಲೇ ಏಕಾಂಗಿಯಾಗಿ ಕೆಲಸ ಮಾಡುವುದರಿಂದ ಸಾಕಷ್ಟು ಮಾನಸಿಕ ಪರಿಣಾಮಗಳನ್ನೂ (mental health) ಎದುರಿಸಬೇಕಾಗುತ್ತದೆ. ಇದು ನೇರವಾಗಿ ತಿಳಿಯದಿದ್ದರೂ, ಗುಂಪಿನಲ್ಲಿ ಕಚೇರಿಯಲ್ಲಿ ಎಲ್ಲರ ಜೊತೆಗೆ ಬೆರೆತು ಕೆಲಸ ಮಾಡುವಾಗ ನೀಡುವ ಮಾನಸಿಕ ನೆಮ್ಮದಿ ನೀಡಲಾರದು. ಮನುಷ್ಯ ಮೂಲತಃ ಸಂಘಜೀವಿ. ಮನೆಯಲ್ಲಿ ಒಬ್ಬರೇ ಕುಳಿತು, ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದದೆ, ಡಿಜಿಟಲ್‌ ಸಾಧನಗಳ (gadgets) ಮೂಲಕ ಜಾಲತಾಣಗಳ ಮೂಲಕ ಹೊಂದುವ ಸಂಪರ್ಕಗಳು ಆತನಿಕೆ ಮಾನಸಿಕ ಆರೋಗ್ಯ (ನೀಡಲು ಸಾಧ್ಯವಿಲ್ಲ. ಇದು, ನಿಧಾನವಾಗಿ ಏಕಾಂಗಿತನ (loneliness) , ಒತ್ತಡ (stress), ಉದ್ವೇಗ, ಖಿನ್ನತೆ (depression) ಇತ್ಯಾದಿ ಸಮಸ್ಯೆಗಳನ್ನೂ ತಂದೊಡ್ಡುವ ಅಪಾಯವಿದೆ.

2. ಏಕತಾನತೆಯನ್ನು ಹೆಚ್ಚಿಸಬಹುದು: ಮನೆಯಿಂದ ಕೆಲಸ ಮಾಡುವುದು ಏಕತಾನತೆಯನ್ನು (monotony) ನೀಡಬಹುದು. ಅಂದರೆ ಇದು ದೈಹಿಕ ಆರೋಗ್ಯದ ಮೇಲೆಯೂ ಉತ್ತಮ ಪರಿಣಾಮ ಬೀರಲಾರದು. ಈ ಬಗೆಯ ಜೀವನಕ್ರಮದಿಂದ ಬೊಜ್ಜು, ಹೃದಯ ಸಂಬಂಧೀ (heart problems) ಕಾಯಿಲೆಗಳು, ಮಧುಮೇಹ (diabetes) ಇತ್ಯಾದಿ ಸಮಸ್ಯೆಗಳೂ ಬರುವ ಸಾಧ್ಯತೆಯಿದೆ.

3. ವಿಟಮಿನ್‌ ಡಿ ಕೊರತೆಯಾಗಬಹುದು: ಮನೆಯಿಂದಲೇ ಕೆಲಸ ಮಾಡುವ ಮಂದಿ ಒಂದೇ ಜಾಗ ಬಿಟ್ಟು ಹೊರ ಬರುವ ಅಗತ್ಯಗಳು ಕಡಿಮೆ. ಮನೆಯಲ್ಲೇ ಗಂಟೆಗಟ್ಟಲೆ ಕೂತಿರುವ, ಮನೆಯೊಳಗೇ ಇರುವ, ವಾರಕ್ಕೊಮ್ಮೆ ಅಗತ್ಯಗಳಿಗಾಗಿ ಮಾತ್ರ ಹೊರಹೋಗುವ, ಹಗಲು ಹೊತ್ತಿನಲ್ಲಿ ಮನೆ ಬಾಗಿಲು ತೆರೆದು ಹೊರಬರದ ಪರಿಸ್ಥಿತಿಗಳೇ ಹೆಚ್ಚು. ಇದರಿಂದ ಸೂರ್ಯನ ಬೆಳಕಿಗೆ ಹೋಗುವ ಅವಕಾಶ ಕಡಿಮೆಯಾದಂತಾಗಿ, ಮನುಷ್ಯನಿಗೆ ಅಗತ್ಯ ಬೇಕಾಗಿರುವ ವಿಟಮಿನ್‌ ಡಿ ಕೊರತೆ ಕಾಡಬಹುದು. ವಿಟಮಿನ್‌ ಡಿ ಕಡಿಮೆಯಾದರೆ, ದೇಹಕ್ಕೆ ಕ್ಯಾಲ್ಶಿಯಂ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಬಹುದು. ದೇಹದಲ್ಲಿ ಮೂಳೆಗಳ ಶಕ್ತಿ ಕುಂದಬಹುದು. ಹಲವು ದೈಹಿಕ ಅನಾರೋಗ್ಯಗಳಿಗೂ ಕಾರಣವಾಗಬಹುದು.

4. ಸ್ಪೂರ್ತಿಯ ವಾತಾವರಣದ ಇಲ್ಲವಾಗಬಹುದು: ಮನೆಯಿಂದಲೇ ಕೆಲಸ ಮಾಡುವುದರಿಂದ ಹಲವರಿಗೆ ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಾಗದೆ ಇರಬಹುದು. ಕಚೇರಿಗೆ ಹೋಗುವುದಿದ್ದರೆ, ದಿನವೂ ಒಂದೇ ಸಮಯಕ್ಕೆ ಬೇಗ ಏಳುವ ಅಭ್ಯಾಸ ರೂಢಿಯಾಗಿರುತ್ತದೆ. ಆದರೆ, ಮನೆಯಿಂದಲೇ ಕೆಲಸ ಮಾಡುವುದು ಎಂದಾದಾಗ, ಕಚೇರಿಗೆ ಹೊರಡುವ ಕೆಲಸ ಇಲ್ಲವಾದ್ದರಿಂದ ತಡವಾಗಿ ಏಳುವುದು, ಎಷ್ಟೆಷ್ಟೋ ಹೊತ್ತಿಗೆ ತಿಂಡಿ, ಊಟ ಮಾಡುವುದು ಇತ್ಯಾದಿ ಅಶಿಸ್ತು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅಷ್ಟೇ ಅಲ್ಲ, ಒಂದು ಶಿಸ್ತಿನಿಂದ ಕೆಲಸ ಸಾಧ್ಯವಾಗದೇ ಇರುವುದರಿಂದ ಕೆಲಸದಲ್ಲಿ ಸ್ಪೂರ್ತಿಯ ವಾತಾವರಣದ ಕೊರತೆಯಾಗಿ ಅದು ಒಟ್ಟಾರೆ ಕೆಲಸದ ಗುಣಮಟ್ಟ್ದ ಮೇಲೆ ಪ್ರಭಾವ ಬೀರಬಹುದು.

5. ಖಾಸಗಿತನವೇ ಮರೆಯಾಗಬಹುದು: ಮನೆಯಿಂದ ಕೆಲಸ ಮಾಡುವುದು ಮೇಲ್ನೋಟಕ್ಕೆ ಒಳ್ಳೆಯದೆಂದು ಅನಿಸಬಹುದು. ಮನೆಯಲ್ಲಿಯೇ ಇರುವುದರಿಂದ ಸ್ವಾತಂತ್ರ್ಯ ಹೆಚ್ಚು ಅನಿಸಬಹುದು. ನಮ್ಮ ಕೆಲವು ಖಾಸಗಿ ಕೆಲಸಗಳಿಗೂ ಸಮಯ ಮಾಡಿಕೊಳ್ಳಬಹುದು ಅನಿಸಬಹುದು. ಆದರೆ, ಖಾಸಗಿ ಜೀವನ (private life) ಹಾಗೂ ವೃತ್ತಿ ಜೀವನ (office life) ಇವೆರಡರ ಮಧ್ಯದ ಗೆರೆ ಮಾಯವಾಗಿ, ಎರಡೂ ಜೀವನಗಳು ಬೆರೆತುಕೊಂಡು ಸರಿಯಾದ ಖಾಸಗಿ ಜೀವನದ ನಿಜವಾದ ಖಾಸಗಿತನವೇ ಕೆಲವೊಮ್ಮೆ ಕಳೆದು ಹೋಗುವ ಅಪಾಯವೂ ಇದೆ.

ಇದನ್ನೂ ಓದಿ: Elon Musk : ವರ್ಕ್‌ ಫ್ರಮ್‌ ಹೋಮ್‌ ನೈತಿಕವಾಗಿ ತಪ್ಪು ಎಂದ ಎಲಾನ್‌ ಮಸ್ಕ್‌, ಕಾರಣವೇನು?

Exit mobile version