ಎಲ್ಲದಕ್ಕೂ ಒಂದೊಂದು ದಿನ ಎಂದು ಮೀಸಲಿರುವುದು ಈ ಕಾಲದ ನಿಯಮ. ಅಂಥದ್ದರಲ್ಲಿ ಎಲ್ಲರ ಬಾಯಲ್ಲಿ ನೀರೂರಿಸುವ ಚಾಕೊಲೇಟ್‌ಗೊಂದು ದಿನ ಅಂತ ಬೇಡವೆ? ಈ ಪ್ರಶ್ನೆ ಬಂದಿದ್ದೇಕೆ ಎಂದರೆ ಜುಲೈ ತಿಂಗಳ ಏಳನೇ ದಿನ ಚಾಕೊಲೇಟ್‌ಗಾಗಿಯೇ ಮೀಸಲು. ಅಂದರೆ, ವಿಶ್ವ ಚಾಕೊಲೇಟ್ ದಿನ.
ಇವತ್ತೇ ಏಕೆ?: ಒಳ್ಳೆಯ ಪ್ರಶ್ನೆ! ಏನೂ ಮಾಡುವುದಾದರೂ ಅದಕ್ಕೊಂದು ಕಾರಣ ಎಂಬುದು ಬೇಕಲ್ಲ! ವಿಷಯ ಏನೆಂದರೆ, ಕ್ರಿಸ್ತ ಶಕ 1550ನೇ ಇಸವಿಯ ಇದೇ ದಿನದಂದು ಈ ಸಿಹಿ ಐರೋಪ್ಯ ಖಂಡವನ್ನು ಪ್ರವೇಶಿಸಿತು ಎಂದು ನಂಬಲಾಗಿದೆ. ಜುಲೈ ತಿಂಗಳ 7ನೇ ತಾರೀಖನ್ನು ಈ ಲೆಕ್ಕದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ. ಅಂದಹಾಗೆ ಮೊದಲ ಬಾರಿಗೆ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಿದ್ದು 2009ರಲ್ಲಿ.
ಚಾಕೊಲೇಟ್ ಇಹ-ಪರ
ದಕ್ಷಿಣ ಮತ್ತು ಮಧ್ಯ ಅಮೆರಿಕ ಖಂಡದ ಕೊಕೊ ಮರಗಳ ಹಣ್ಣಿನಿಂದ ತಯಾರಾಗುವ ತಿನಿಸು ಇದು. ಹಣ್ಣುಗಳ ಒಳಗಿರುವ, ಸ್ವಲ್ಪ ಕಹಿ ಎನ್ನಬಹುದಾದ ರುಚಿಯ ಕೊಕೊ ಬೀಜಗಳನ್ನು ಒಣಗಿಸಿ, ಹುದುಗು ಬರಿಸಿ, ಅದರಿಂದ ಪೇಯ ತಯಾರಿಸುತ್ತಿದ್ದ ಮಾಹಿತಿ ಮೆಕ್ಸಿಕೊದ ಅಜ್‌ಟೆಕ್ ನಾಗರಿಕತೆಯ ಕಾಲದಲ್ಲೇ ದೊರೆಯುತ್ತದೆ. ಆದರೆ ಕೊಕೊ ಬಳಸಿದ್ದು ಆ ನಾಗರಿಕತೆಯಲ್ಲೇ ಮೊದಲೇನಲ್ಲ. ಕ್ರಿಸ್ತಪೂರ್ವ 1100ರ ಕಾಲದಲ್ಲೇ ಮಧ್ಯ ಅಮೆರಿಕದಲ್ಲಿ ಕೊಕೊ ಬಳಕೆಯಲ್ಲಿದ್ದ ಮಾಹಿತಿಯಿದೆ. ತೀರಾ ನಂತರದ ಕಾಲದಲ್ಲಿ ಅದು ಯುರೋಪ್ ಖಂಡದ ದಿಕ್ಕಿಗೆ ಪಸರಿಸಿ, ಚಾಕೊಲೇಟ್ ರೂಪದಲ್ಲಿ ಜನಪ್ರಿಯವಾಯಿತು.
ಚಾಕೊಲೇಟ್ ಸಿಪ್ಪೆ ಬಿಚ್ಚುತ್ತಾ ಹೋದಂತೆ…
- ದಕ್ಷಿಣ ಮತ್ತು ಮಧ್ಯ ಅಮೆರಿಕ ಮೂಲದಿಂದ ಇವು ಬಂದಿದ್ದು ಹೌದಾದರೂ, ಇವತ್ತು ಶೇ. 70ರಷ್ಟು ಕೊಕೊ ಬೆಳೆಯುತ್ತಿರುವುದು ಆಫ್ರಿಕಾ ಖಂಡದಲ್ಲಿ.
- ಮೊದಲ ಚಾಕೊಲೇಟ್ ಬಾರ್ ತಯಾರಿಸಿದ್ದು ಫ್ರಾನ್ಸಿಸ್ ಫ್ರೈ ಎಂಬಾತ ಕ್ಯಾಡ್ಬರಿ ಮತ್ತು ಮಾರ್ಸ್ ಎಂಬ ಹೆಸರಿನಲ್ಲಿ. ಮೊದಲ ಬಿಳಿ ಚಾಕಲೇಟ್ ತಯಾರಿಸಿದ್ದು ನೆಸ್ಲೆ, 1930ರಲ್ಲಿ.
- ಒಂದು ಪೌಂಡ್ (ಸುಮಾರು 450 ಗ್ರಾಂ) ಚಾಕೊಲೇಟ್ ಮಾಡುವುದಕ್ಕೆ 400 ಕೊಕೊ ಬೀಜಗಳು ಬೇಕು. ಹಾಗೆಯೇ ಹಾಲಿನ ಚಾಕೊಲೇಟ್ ವಿಧಾನವು ಹದಕ್ಕೆ ಬರಲು ಒಂಬತ್ತು ವರ್ಷಗಳ ಕಾಲ ಬೇಕಾಯಿತಂತೆ.
- ಚಾಕೊಲೇಟ್ಗೂ ಪ್ರೇಮಿಗಳಿಗೂ ಅದೇನು ಅಂಟೊ! ಪ್ರತಿವರ್ಷ ವ್ಯಾಲಂಟೈನ್ ದಿನದಂದು ಸುಮಾರು ಮೂರೂವರೆ ಕೋಟಿ ಹೃದಯಾಕಾರದ ಚಾಕೊಲೇಟ್ ಡಬ್ಬಿಗಳು ಮಾರಾಟವಾಗುತ್ತವಂತೆ.
- ಮೊದಲಿಗೆ ಇದು ಶ್ರೀಮಂತರ ಬಾಯನ್ನು ಮಾತ್ರವೇ ಸಿಹಿ ಮಾಡುತ್ತಿತ್ತಂತೆ. ಕೈಗಾರಿಕಾ ಕ್ರಾಂತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಾಕಲೇಟ್ ತಯಾರಿಕೆ ಆರಂಭವಾದ ನಂತರ ಇದು ಎಲ್ಲರ ಮನ ತಣಿಸುವಂತಾಯ್ತ
- ವಿಶ್ವದ ದುಬಾರಿ ಚಾಕೊಲೇಟ್ ತಯಾರಿಸಿದ್ದು ಫೆಬೆಲೆ ಎಕ್ಸ್ಕ್ವಿಜಿಟ್ ಚಾಕೊಲೇಟ್ಸ್ ಸಂಸ್ಥೆ 2019ರಲ್ಲಿ. ಟ್ರಿನಿಟಿ-ಟ್ರಫಲ್ ಹೆಸರಿನ ಈ ಚಾಕೊಲೇಟ್ನ ಬೆಲೆ ಕೆ.ಜಿ. ಗೆ 4.3 ಲಕ್ಷ ರೂ!
ಇದನ್ನೂ ಓದಿ| National Doctors day | ವೈದ್ಯರ ಮೇಲೆ ಒತ್ತಡ ಹೆಚ್ಚಿಸಿದ ಈಡಿಯಟ್ ಸಿಂಡ್ರೋಮ್: ಡಾ. ಸಿ. ಎನ್. ಮಂಜುನಾಥ್ ಕಳವಳ