Site icon Vistara News

World Diabetes Day | ಮಧುಮೇಹ ನಿಯಂತ್ರಣಕ್ಕೆ ಇಲ್ಲಿವೆ ಸರಳ ಉಪಾಯಗಳು

World Diabetes Day

ಇಂದು ವಿಶ್ವ ಮಧುಮೇಹ ದಿನ. ರಾತ್ರಿ ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ಬರುವ ರೋಗವಲ್ಲ ಮಧುಮೇಹ. ಇದಕ್ಕೆ ಸಿದ್ಧತೆ ದೀರ್ಘಕಾಲದಿಂದಲೇ ದೇಹದಲ್ಲಿ ನಡೆದಿರುತ್ತದೆ. ಈ ರೋಗ ಕಾಣಿಸಿಕೊಂಡ ಎಲ್ಲರಿಗೂ ವಂಶವಾಹಿಯಿಂದ ಬಂದಿರಲೇ ಬೇಕೆಂದೂ ಇಲ್ಲ. ಹೆಚ್ಚಿನ ಬಾರಿ ಇದು ಅಂಟುವುದೇ ಜೀವನಶೈಲಿಯಿಂದ. ತಪ್ಪಾದ ಆಹಾರ ಪದ್ಧತಿ, ವ್ಯಾಯಾಮವಿಲ್ಲದ ಜೀವನ, ಒತ್ತಡದ ಬದುಕು, ನಿದ್ದೆಗೆಡುವಂಥ ಕೆಲಸ, ಅವಿಶ್ರಾಂತ ದುಡಿಮೆ- ಇಂಥವೆಲ್ಲ ಮಧುಮೇಹವನ್ನು ಬಳುವಳಿಯಾಗಿ ನೀಡುತ್ತವೆ. ಹಾಗಾದರೆ ಬದುಕಿನಲ್ಲಿ ತಪ್ಪಿರುವ ಶ್ರುತಿಯನ್ನು ಸರಿಮಾಡಿಕೊಂಡರೆ ಮಧುಮೇಹವನ್ನು ಸಂಪೂರ್ಣ ಹೋಗಲಾಡಿಸಬಹುದೇ ಎಂದರೆ- ಬಹುಶಃ ಇಲ್ಲ! ಆದರೆ ಅದನ್ನು ಸಂಪೂರ್ಣ ಹತೋಟಿಯಲ್ಲಿ ಇರಿಸಿಕೊಂಡು ಎಲ್ಲರಂತೆ ಆರೋಗ್ಯಕರ ಜೀವನ ನಡೆಸಲು ಖಂಡಿತ ಸಾಧ್ಯವಿದೆ. ಸೂಕ್ತವಾದ ಆಹಾರಪದ್ಧತಿ, ಸರಿಯಾದ ವ್ಯಾಯಾಮ, ಕಣ್ತುಂಬ ನಿದ್ದೆ, ಒತ್ತಡ ನಿಯಂತ್ರಣದಂಥವು ಉತ್ತಮ ಫಲ ನೀಡುತ್ತವೆ. ಜೊತೆಗೆ, ಕೆಲವು ಸರಳ ಉಪಾಯಗಳು ಸಹ ಇಲ್ಲಿವೆ.

ಚಿಯಾ ಬೀಜಗಳು: ಎರಡು ಚಮಚದಷ್ಟು ಚಿಯಾ ಅಥವಾ ಬೆಸಿಲ್‌ ಬೀಜಗಳನ್ನು ರಾತ್ರಿ ನೆನೆಸಿಡಿ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನೀರು ಮತ್ತು ಬೀಜವನ್ನು ಸೇವಿಸಬೇಕು. ಚಿಯಾ ಬೀಜಗಳಲ್ಲಿ ಉತ್ತಮ ಪ್ರಮಾಣದಲ್ಲಿ ಕರಗಬಲ್ಲ ನಾರಿನಂಶವಿದೆ. ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ ಇರುವ ಇದು ಶರೀರದಲ್ಲಿ ಆಗುವ ಇನ್ಸುಲಿನ್‌ ಏರಿಳಿತವನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲ ಮೆಗ್ನೀಶಿಯಂ, ಒಮೇಗಾ ೩ ಫ್ಯಾಟಿ ಆಮ್ಲ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವ ಈ ಬೀಜಗಳಿಂದ ಟೈಪ್‌ ೨ ಮಧುಮೇಹವನ್ನು ಹತೋಟಿಗೆ ತರಬಹುದು. ಸುಮಾರು ೨೮ ಗ್ರಾಂ ಚಿಯಾ ಬೀಜಗಳಿಂದ ೧೦ ಗ್ರಾಂನಷ್ಟು ನಾರು ನಮ್ಮ ದೇಹಕ್ಕೆ ದೊರೆಯುತ್ತದೆ. ದಿನಕ್ಕೆ ಕನಿಷ್ಠ ೩೪ ಗ್ರಾಂಗಳಷ್ಟು ನಾರಿನ ಆಹಾರವನ್ನು ತಜ್ಞರು ಶಿಫಾರಸು ಮಾಡುತ್ತಾರೆ.

World Diabetes Day

ನೆಲ್ಲಿಕಾಯಿ: ೨-೩ ನೆಲ್ಲಿಕಾಯಿಗಳನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ವಿಟಮಿನ್‌ ಸಿ ಹೇರಳವಾಗಿರುವ ಈ ಕಾಯಿಗಳು ವಿರೇಚಕಗಳಂತೆಯೂ ಕೆಲಸ ಮಾಡುತ್ತವೆ. ದೇಹದಲ್ಲಿ ಶೇಖರವಾಗಿರುವ ಬೇಡದ ವಸ್ತುಗಳನ್ನು ಹೊರದೂಡುವುದರಿಂದ ಪಚನ ಕ್ರಿಯೆಯೂ ಸರಾಗವಾಗಿ ಜರುಗಿ, ಗ್ಲೂಕೋಸ್‌ ನಿಯಂತ್ರಣಕ್ಕೆ ನೆರವಾಗುತ್ತದೆ.

World Diabetes Day

ಸಿರಿಧಾನ್ಯಗಳು: ನಾನಾ ರೀತಿಯ ಸಿರಿಧಾನ್ಯಗಳು ಮತ್ತು ಹೆಚ್ಚು ನಾರಿನ ತರಕಾರಿಗಳು ಈ ನಿಟ್ಟಿನಲ್ಲಿ ಉತ್ತಮ ಫಲಿತಾಂಶ ನೀಡಬಲ್ಲವು. ದಿನಕ್ಕೆ ಮೂರು ಲೀಟರ್‌ ನೀರು ಅಗತ್ಯ ಎಂಬುದನ್ನು ಮರೆಯಬಾರದು.

ಹಣ್ಣುಗಳು: ಬಾಳೆ ಅಥವಾ ಮಾವಿನಂಥ ಸಿಹಿಯಾದ ಹಣ್ಣುಗಳ ಬದಲಿಗೆ ಕಿತ್ತಳೆಯಂಥ ಸ್ವಲ್ಪ ಹುಳಿ ಹಣ್ಣುಗಳನ್ನು ತಿನ್ನಬಹುದು. ಚನ್ನಾಗಿ ಮಾಗಿದ ಪೇರಳೆಯ ಬದಲಿಗೆ, ಪೇರಳೆಕಾಯಿ ಸೇವನೆ ಸೂಕ್ತ. ಮುಖ್ಯವಾಗಿ ಹಲವು ಬಣ್ಣದ ಹಣ್ಣುಗಳು ಆಹಾರದಲ್ಲಿರುವುದು ಅಗತ್ಯ. ಇದನ್ನು ರೇನ್‌ಬೋ ಡಯೆಟ್‌ ಎಂದು ಕರೆಯಲಾಗುತ್ತದೆ. ಅಂದರೆ ಕಾಮನಬಿಲ್ಲಿನಲ್ಲಿರುವಂಥ ಬಣ್ಣಗಳು ನಮ್ಮ ಊಟದ ತಟ್ಟೆಯಲ್ಲೂ ಇರಬೇಕು. ಇದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾದ ಫೈಟೋಕೆಮಿಕಲ್ಸ್‌ ಲಭ್ಯವಾಗುತ್ತವೆ.

ವ್ಯಾಯಾಮ: ದಿನಾ ದೇವರ ತಲೆಗೆ ಹೂವೇರಿಸಿದಷ್ಟೇ ನಿಯತ್ತಾಗಿ ವ್ಯಾಯಾಮ ಮಾಡಲೇಬೇಕು. ಹೊಟ್ಟೆಯಲ್ಲಿನ ಕೊಬ್ಬು ಕರಗಿಸುವುದು ಬಹಳ ಮುಖ್ಯ. ಕೆಲವು ಯೋಗಾಸನ ಅಥವಾ ಹೊಟ್ಟೆಯ ಭಾಗಕ್ಕಿರುವ ವ್ಯಾಯಾಮಗಳಿಂದ ಈ ಭಾಗದಲ್ಲಿ ಶೇಖರವಾಗುವ ಕೊಬ್ಬು ಕರಗಿಸಬಹುದು. ಪ್ರತಿದಿನ ಸೂರ್ಯನ ಬಿಸಿಲಿನಲ್ಲಿ ಕೆಲಹೊತ್ತು ಇರುವುದರಿಂದ ದೇಹಕ್ಕೆ ಅಗತ್ಯವಾದ ಡಿ ಜೀವಸತ್ವ ದೊರೆಯುತ್ತದೆ.

ಇದನ್ನೂ ಓದಿ| ಮಧುಮೇಹ, ಬೊಜ್ಜು ಸೈಲೆಂಟ್‌ ಕಿಲ್ಲರ್ಸ್‌: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Exit mobile version