Site icon Vistara News

World Environment Day | ಇಂದು ವಿಶ್ವ ಪರಿಸರ ದಿನ: ಪ್ರಕೃತಿ ಸಂರಕ್ಷಣೆಗಾಗಿ ಈ ಅಭ್ಯಾಸ ಅನುಸರಿಸಿ

World Environment Day

ನಾವು ತಿನ್ನುವ ಆಹಾರ, ಕುಡಿಯುವ ನೀರಿನಿಂದ ಹಿಡಿದು ನಾವು ಉಸಿರಾಡುವ ಗಾಳಿಯವರೆಗೆ ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಪ್ರಕೃತಿ ಯಾವಾಗಲೂ ನಮಗೆ ಉದಾರ ಕೊಡುಗೆಗಳನ್ನು ನೀಡುತ್ತಿದೆ. ನಮ್ಮ ಬದುಕಿಗೆ ಪ್ರಕೃತಿಯೇ ಆಧಾರ.

ಹಾಗಿದ್ದರೂ, ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮಗಳು ನಮಗೆ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿವೆ. ತಡವಾಗುವ ಮೊದಲು ಎಚ್ಚೆತ್ತುಕೊಂಡು ಪರಿಸರ ರಕ್ಷಣೆಗಾಗಿ ನಾವು ಏನನ್ನಾದರೂ ಮಾಡಲೇಬೇಕಿದೆ. ಮಾನವನ ಚಟುವಟಿಕೆಗಳು ಯಾವ ರೀತಿ ಪರಿಸರದ ವಿನಾಶವನ್ನು ಉಂಟುಮಾಡುತ್ತಿವೆ ಎಂಬುದನ್ನು ಹಲವಾರು ಅಧ್ಯಯನಗಳು ಮತ್ತು ಸಂಶೋಧನಾ ವರದಿಗಳು ಬಹಿರಂಗಪಡಿಸುತ್ತವೆ. ಸುಸ್ಥಿರತೆ ಮತ್ತು ಪರಿಸರ ಸ್ನೇಹಿ ಜೀವನಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುವುದು ಎಲ್ಲಾ ವ್ಯಕ್ತಿಗಳಿಗೆ ಮುಖ್ಯ. ಸುಸ್ಥಿರ ಅಭಿವೃದ್ಧಿಗಾಗಿ ಹಲವು ವರ್ಷಗಳ ವರೆಗೆ ವಿಸ್ತರಿಸುವ ಭಾರೀ ಯೋಜನೆಗಳು ಅಥವಾ ವ್ಯಾಪಕವಾದ ಯೋಜನೆಗಳ ಅಗತ್ಯವಿಲ್ಲ. ವ್ಯಕ್ತಿಯ ದೈನಂದಿನ ಜೀವನದಲ್ಲಿ ಅನುಸರಿಸುವ ಸರಳ ಕ್ರಮಗಳೇ ಪರಿಸರದ ಸಂರಕ್ಷಣೆಯಲ್ಲಿ ಅದ್ಭುತಗಳನ್ನು ಸೃಷ್ಟಿಸಬಹುದು.

ಜೀವನಶೈಲಿ ಬದಲಿಸಿಕೊಳ್ಳೋಣ…

ಪರಿಸರ ಸ್ನೇಹಿ ಜೀವನಕ್ಕಾಗಿ ನಾವೆಲ್ಲರೂ ಕೆಲವು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಮತ್ತು ಪ್ರತಿದಿನ ಕೆಲವು ಸರಳ ಕ್ರಮಗಳನ್ನು ಅನುಸರಿಸಬೇಕು. ಇಂಗಾಲದ ಹೊರ ಸೂಸುವಿಕೆಯನ್ನು ಕಡಿಮೆ ಮಾಡಲು ನಾವು ಪ್ರತಿದಿನ ಅಭ್ಯಾಸ ಮಾಡಬಹುದಾದ ಕೆಲವು ಸಂಗತಿಗಳು ಇಲ್ಲಿವೆ:

1. ನಡೆಯುವ ಅಭ್ಯಾಸ ಇರಲಿ…
ದೈನಂದಿನ ಓಡಾಟಕ್ಕಾಗಿ ನಿಮ್ಮ ವಾಹನವನ್ನು ಬಳಸುವ ಬದಲು ನಡೆದುಕೊಂಡು ಹೋಗುವುದನ್ನು ಅಭ್ಯಾಸ ಮಾಡಿ ಅಥವಾ ಬೈಸಿಕಲ್ ಸವಾರಿ ಮಾಡಲು ಪ್ರಾರಂಭಿಸಿ ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳಿ. ಕೆಲಸಕ್ಕೆ ಅಥವಾ ಮಾರುಕಟ್ಟೆಗೆ ಹೋಗಲು ಸ್ವಂತ ವಾಹನಗಳ ಬಳಕೆಗೆ ಹೋಲಿಸಿದರೆ ಇದು ಹೆಚ್ಚು ಪರಿಸರ ಸ್ನೇಹಿಯಾಗಿದೆ.

2. ರಸ್ತೆಯಲ್ಲಿ ಉಗುಳಬೇಡಿ
ರಸ್ತೆಗಳಲ್ಲಿ ಕಸ ಹಾಕುವುದನ್ನು ಅಥವಾ ಉಗುಳುವುದನ್ನು ತಪ್ಪಿಸಿ. ಸ್ಥಳೀಯ ಸಂಸ್ಥೆಗಳು ನೀಡಿರುವ ಕಸ ವಿಲೇವಾರಿ ಮಾರ್ಗಸೂಚಿಗಳನ್ನು ಅನುಸರಿಸಿ ಮತ್ತು ಸಾಧ್ಯವಾದಾಗಲೆಲ್ಲಾ ನಿಮ್ಮ ಪ್ರದೇಶವನ್ನು ಸ್ವಚ್ಛವಾಗಿಡಲು ಸಮುದಾಯ ಅಭಿಯಾನಗಳಲ್ಲಿ ಭಾಗವಹಿಸಿ.

3. ಪ್ಲಾಸ್ಟಿಕ್ ಬಳಕೆ ತಪ್ಪಿಸಿ…
ಪ್ಲಾಸ್ಟಿಕ್ ಬಾಟಲಿಗಳು ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ ಯಾವುದನ್ನಾದರೂ ಬಳಸುವುದನ್ನು ತಪ್ಪಿಸಿ. ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾದರೆ ಪೂರೈಕೆಯೂ ಆಗುತ್ತದೆ.

4.ಲೈಟ್ ಆಫ್ ಮಾಡಲು ಮರೆಯಬೇಡಿ…
ಕೊಠಡಿಯಿಂದ ಹೊರಡುವ ಮೊದಲು ದೀಪಗಳು, ಫ್ಯಾನ್‌ಗಳನ್ನು ಆಫ್ ಮಾಡಿ ಮತ್ತು ಇಂಧನ ಉಳಿಸಿ. ಚಳಿಗಾಲದಲ್ಲಿ ಹೀಟರ್ ಬಳಸುವುದನ್ನು ತಪ್ಪಿಸಿ. ಅದರ ಬದಲಿಗೆ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಅಲ್ಲದೆ, ಬೇಸಿಗೆಯಲ್ಲಿ ಹವಾ ನಿಯಂತ್ರಣಗಳನ್ನು ಅತಿಯಾಗಿ ಬಳಸದೆ ಮಿತವಾಗಿ ಬಳಸಿ.

5. ಮರುಬಳಕೆ ರೂಢಿಸಿಕೊಳ್ಳಿ…
ಸಾಧ್ಯವಾದಾಗಲೆಲ್ಲಾ ನಿಮ್ಮ ಉತ್ಪನ್ನಗಳನ್ನು ಮರುಬಳಕೆ ಮಾಡಿ ಮತ್ತು ಮರು ಸಂಸ್ಕರಣೆ ಮಾಡಿ. ಜ್ಯೂಸ್ ಬಾಟಲಿಗಳನ್ನು ಎಸೆಯುವ ಬದಲು, ಅವುಗಳನ್ನು ಮನೆಯಲ್ಲಿ ಶೇಖರಣಾ ಪಾತ್ರೆಗಳಾಗಿ ಬಳಸಿ. ನೀವು ಶಾಪಿಂಗ್‌ಗೆ ಹೋಗುವಾಗ ಪ್ರತಿ ಬಾರಿಯೂ ಪೇಪರ್ ಬ್ಯಾಗ್‌ಗಳು ಅಥವಾ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಖರೀದಿಸುವುದಕ್ಕಿಂತ ನಿಮ್ಮ ಸ್ವಂತ ಶಾಪಿಂಗ್ ಬ್ಯಾಗ್ ತೆಗೆದುಕೊಂಡು ಹೋಗಲು ಆರಂಭಿಸಿ.

6. ನಲ್ಲಿ ನಿರ್ಲಕ್ಷ್ಯ ಬೇಡ
ಬಳಕೆಯಲ್ಲಿಲ್ಲದ ಸಮಯದಲ್ಲಿ ನೀರಿನ ನಲ್ಲಿಗಳನ್ನು ತಿರುಗಿಸಿಟ್ಟು ನೀರನ್ನು ಪೋಲು ಮಾಡದೆ, ನಲ್ಲಿಗಳನ್ನು ಬಂದ್ ಮಾಡಿ. ಶವರ್‌ಗಳನ್ನು ಬಳಸುವುದಕ್ಕಿಂತ ಹೆಚ್ಚಾಗಿ ಬಕೆಟ್ ನಲ್ಲಿ ನೀರು ತುಂಬಿಕೊಂಡು ಸ್ನಾನ ಮಾಡಿ.

7. ಗಿಡ ನೆಡಿ, ಮರ ಬೆಳೆಸಿ…
ಹೆಚ್ಚು ಮರಗಳನ್ನು ನೆಡಿ, ಪರಿಸರ ಮತ್ತು ಅದರ ಸಂರಕ್ಷಣೆಗೆ ಸ್ವತಃ ನೀವು ಮುಂದಾಗಿ; ನಂತರ ಇತರರಿಗೂ ಈ ವಿಷಯಗಳನ್ನು ಮನದಟ್ಟು ಮಾಡಿಸಿ.

ಇದನ್ನೂ ಓದಿ: Environment Day: ನಿಮ್ಮದಾಗಲಿ ಇಕೋ ಫ್ರೆಂಡ್ಲಿ ವಾರ್ಡ್ ರೋಬ್

Exit mobile version