Site icon Vistara News

World Suicide Prevention Day | ಮನವ ತಿನ್ನುವ ಚಿಂತೆ ಬದುಕು ಮುಗಿಸದಿರಲು ಹೀಗೆ ಮಾಡಿ

World Suicide Prevention Day

ಜಾಗತಿಕ ಆತ್ಮಹತ್ಯೆ ತಡೆ ದಿನ (ಸೆಪ್ಟೆಂಬರ್‌ ೧೦) ಮೊದಲಿಗೆ ಆರಂಭವಾಗಿದ್ದು ೨೦೦೩ರಲ್ಲಿ. ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಆತ್ಮಹತ್ಯೆ ತಡೆಗೆ ಇರುವ ಅಂತಾರಾಷ್ಟ್ರೀಯ ಸಂಸ್ಥೆ ಈ ದಿನದ ಆಚರಣೆಯನ್ನು ಆರಂಭಿಸಿದ್ದು, ಆತ್ಮಹತ್ಯೆ ತಡೆಯುವ ಮತ್ತು ಅಂಥ ಮನಸ್ಥಿತಿ ಇರುವವರಿಗೆ ಚಿಕಿತ್ಸೆ ನೀಡುವ ಬಗ್ಗೆ ವಿಶ್ವದೆಲ್ಲೆಡೆ ಅರಿವು ಮೂಡಿಸುವುದು ಇದರ ಉದ್ದೇಶ.

ಹುಟ್ಟಿದ ಪ್ರತಿಯೊಬ್ಬರಿಗೂ ಮಗ, ಮಗಳು, ಸೋದರ, ಸೋದರಿ, ಅಪ್ಪ, ಅಮ್ಮ, ಸ್ನೇಹಿತ, ಗೆಳತಿ…ಹೀಗೆ ಒಂದಿಲ್ಲೊಂದು ನಂಟು ಇರಲೇಬೇಕು. ಯಾರಾದರೊಬ್ಬರು ಆತ್ಮಹತ್ಯೆ ಮಾಡಿಕೊಂಡರೆಂದರೆ, ಅವರ ಸುತ್ತಲಿನ ಹಲವರನ್ನು ನೋವಿನ ಮಡುವಿಗೆ ತಳ್ಳಿದಂತಾಗುತ್ತದೆ. ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಅಗತ್ಯವಿರುವವರಿಗೆ ಮಾನಸಿಕ ನೆರವು, ಸಾಂತ್ವನ ಒದಗಿಸಿ, ಎಲ್ಲರ ಬದುಕಿಗಾಗಿ ಸ್ವಸ್ಥ ಸಮಾಜವನ್ನು ನಿರ್ಮಿಸುವ ಮಹತ್ವದ ಉದ್ದೇಶ ಈ ಆಚರಣೆಯ ಹಿಂದಿದೆ. ʻಕೃತಿಯ ಮೂಲಕ ಭರವಸೆʼ ಹುಟ್ಟಿಸಬೇಕೆಂಬುದು ಈ ವರ್ಷದ ಆತ್ಮಹತ್ಯೆ ತಡೆ ದಿನದ ಧ್ಯೇಯ.

ಇದನ್ನೂ ಓದಿ | Sunday Read | ಸಾನಿಚರ್‌ ಮೌಗ್ಲಿಯಾದನೇ? ಇದು ʼಜಂಗಲ್‌ ಬುಕ್‌ʼ ಹಿಂದಿನ ಸ್ಫೂರ್ತಿ ಕಥೆ!

World Suicide Prevention Day

ಕಾರಣವೇನು?
ಹೆಚ್ಚಿನ ಆತ್ಮಹತ್ಯೆಗಳು ನಡೆಯುವುದು ಖಿನ್ನತೆ, ಒತ್ತಡ, ಮಾದಕ ದ್ರವ್ಯ ಬಳಕೆ ಇನ್ನಿತರ ಮಾನಸಿಕ ಕಾರಣಗಳಿಗಾಗಿ. ಒಂದಿಷ್ಟು ಒತ್ತಡ, ದುಗುಡಗಳು ಎಲ್ಲರ ಬದುಕಿನಲ್ಲೂ ಇರುವಂಥದ್ದೇ. ಆದರೆ ಅದನ್ನೂ ಮೀರಿ ಸಮಸ್ಯೆಗಳಿದ್ದರೆ ಅಥವಾ ಇರುವಂಥ ಸಮಸ್ಯೆಗಳನ್ನು ವ್ಯಕ್ತಿಗೆ ನಿಭಾಯಿಸಲಾಗದೆ (ಉದಾ, ನಿತ್ಯದ ಶಾಲೆಯ ಅಥವಾ ಕಚೇರಿಯ ಕೆಲಸಗಳನ್ನು ಸೂಕ್ತವಾಗಿ ನಿಭಾಯಿಸಲಾಗದಷ್ಟು ಸಮಸ್ಯೆಗಳು) ಇದ್ದರೆ, ಅಂಥವರಿಗೆ ಮಾನಸಿಕ ತಜ್ಞರ ನೆರವು ಅಗತ್ಯ.

ಏನು ಮಾಡಬಹುದು?
ಸಂವಹನ: ಇದು ಅಗತ್ಯವಾಗಿ ಬೇಕೇಬೇಕು. ನಂಬಿಕೆ ಇರುವಂಥ ಯಾವುದಾದರೂ ಒಂದು ವ್ಯಕ್ತಿ (ಗೆಳೆಯ, ಶಿಕ್ಷಕ, ಕುಟುಂಬದ ಯಾರಾದರೂ, ವೈದ್ಯರು…) ಜೊತೆಗೆ ಮಾನಸಿಕ ತುಮುಲದ ವಿಷಯವನ್ನು ಹಂಚಿಕೊಳ್ಳುವುದು ಅಗತ್ಯ. ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಂಡು ಬೆಟ್ಟದಂತೆ ಭಾರ ಮಾಡಿಕೊಳ್ಳುವುದು ಸರಿಯಲ್ಲ.

ಸಮಯ ಕೊಡಿ: ಅತೀವ ಬೇಸರ, ಖಿನ್ನತೆಯಂಥ ಲಕ್ಷಣಗಳಿದ್ದರೆ ನಮ್ಮ ಅಗತ್ಯಗಳಿಗೆ ಮೊದಲು ಆದ್ಯತೆ ನೀಡಬೇಕು. ನಮಗೇನಿಷ್ಟ? ಪ್ರವಾಸ ಹೋಗುವುದು, ಸಂಗೀತ ಕೇಳುವುದು, ಪುಸ್ತಕ ಓದುವುದು, ಮಿತ್ರರೊಂದಿಗೆ ಹರಟೆ, ಸಿನೆಮಾ ನೋಡುವುದು… ಹೀಗೆ ನಮಗೆ ನೆಮ್ಮದಿ ನೀಡುವ ಹವ್ಯಾಸ ಯಾವುದೋ ಅದಕ್ಕೆ ಒತ್ತು ನೀಡುವುದು ಮುಖ್ಯ.

World Suicide Prevention Day

ಚಟುವಟಿಕೆ ಬೇಕು: ಕೆಲಸಕ್ಕೆ ಬಾರದ ಯೋಚನೆಗಳಿಗೆ ಶಕ್ತಿ ವ್ಯಯಿಸುವುದಲ್ಲ. ಬದಲಿಗೆ, ಸೂಕ್ತ ದಿಕ್ಕಿನಲ್ಲಿ ಶಕ್ತಿಯನ್ನು ತೊಡಗಿಸುವುದು ಮುಖ್ಯ. ದಿನಕ್ಕೆ ಒಂದಿಷ್ಟು ಹೊತ್ತನ್ನು ವಾಕಿಂಗ್‌, ಸೈಕಲ್‌ ಹೊಡೆಯುವುದು, ನೃತ್ಯ, ವ್ಯಾಯಾಮ, ಯೋಗ, ಧ್ಯಾನದಂಥ ಇಷ್ಟದ ಚಟುವಟಿಕೆಗಳಿಗೆ ಮೀಸಲಿಡುವುದು ಸರಿ. ಅಂತೂ ದೇಹ ಮತ್ತು ಮನಸ್ಸಿಗೆ ಶಿಸ್ತುಬದ್ಧ ಚಟುವಟಿಕೆ ಬೇಕು.

ಆಹಾರ ಸರಿಯಿರಲಿ: ಸಮತೋಲಿತ ಆಹಾರದಿಂದ ಶರೀರ ಮಾತ್ರವಲ್ಲ, ಮನಸ್ಸೂ ಉಲ್ಲಾಸದಿಂದ ಇರುತ್ತದೆ. ಜಂಕ್‌ಗಳನ್ನು ಹೊಟ್ಟೆಗೆ ದೂಡುತ್ತಿದ್ದರೆ, ಮನಸ್ಸಿನಲ್ಲೂ ಬೇಡದ ಗುಜರಿ ಆಲೋಚನೆಗಳೇ ಬರಬಹುದು. ಸೌಂಡ್‌ ಮೈಂಡ್‌ ಇನ್‌ ಎ ಸೌಂಡ್‌ ಬಾಡಿ… ನೆನಪಿರಲಿ.

ನೆರವು ಪಡೆಯಿರಿ: ಇಷ್ಟೆಲ್ಲಾ ಪ್ರಯತ್ನಗಳೆಲ್ಲಾ ಮಾಡಿಯೂ ಮನಸ್ಸಿಗೆ ನೆಮ್ಮದಿಯಿಲ್ಲವೇ? ಬೇಡದ ಆಲೋಚನೆಗಳು ಬರುತ್ತಿವೆಯೇ? ಮಾನಸಿಕ ತಜ್ಞರ ನೆರವು ಬೇಕೇಬೇಕು. ಮಾನಸಿಕ ಚಿಕಿತ್ಸಕರನ್ನು ನೋಡಲು ಯಾವುದೇ ಹಿಂಜರಿಕೆಯ ಅಗತ್ಯವಿಲ್ಲ. ದೇಹದ ಇತರೆಲ್ಲಾ ಭಾಗಗಳಿಗೆ ಚಿಕಿತ್ಸೆ ಪಡೆಯುವಂತೆ, ಕೆಲವೊಮ್ಮೆ ಮನಸ್ಸಿಗೂ ಪಡೆಯಬೇಕಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.

ಇದನ್ನೂ ಓದಿ | Brand story | ಅಂದು ರಿಕ್ಷಾ ಚಾಲಕ, ಇಂದು ಬಿಸಿನೆಸ್‌ 500 ಕೋಟಿ ವಾರ್ಷಿಕ, ಅವರೇ ಬಿಂದು ಜೀರಾ ಮಾಲೀಕ!

Exit mobile version