ಆರೋಗ್ಯ ಹದಗೆಟ್ಟಿದೆ ಎಂದಾಕ್ಷಣ ಆಸ್ಪತ್ರೆಗಳಿಗೆ ಓಡುತ್ತೇವೆ. ವೈದ್ಯರು ಕೊಡುವ ಹತ್ತಾರು ಔಷಧಗಳನ್ನು ತೆಗೆದುಕೊಂಡು ವಾರವೋ, ತಿಂಗಳೋ ವಿಶ್ರಾಂತಿ ಪಡೆದುಕೊಂಡು ಹುಷಾರಾಗುತ್ತೇವೆ. ಆದರೆ ಅದೇ ಅನಾರೋಗ್ಯ ನಮ್ಮ ಕಡೆ ಬಾರದಿರುವಂತೆ ಮಾಡಿಕೊಳ್ಳುವ ಸಾಮರ್ಥ್ಯ ನಮ್ಮ ಬಳಿಯೇ ಇದೆ ಎನ್ನುವುದನ್ನು ಮರೆತುಬಿಡುತ್ತೇವೆ. ನಮ್ಮ ಭಾರತದ ಪಾರಂಪರಿಕ ಯೋಗವೇ (Yoga Day 2023) ನಮ್ಮನ್ನು ಅನಾರೋಗ್ಯದಿಂದ ದೂರ ಇಡಬಲ್ಲದು. ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಒಂದೇ ಒಂದು ಸೂರ್ಯ ನಮಸ್ಕಾರ ನಮ್ಮ ದೇಹಕ್ಕೆ ಎಷ್ಟೆಲ್ಲ ರೀತಿಯಲ್ಲಿ ಪ್ರಯೋಜನಕಾರಿ ಎನ್ನುವುದನ್ನು ತಿಳಿದುಕೊಳ್ಳೋಣ…
ತೂಕ ಇಳಿಸಬಹುದು
ತೂಕ ಇಳಿಸುವುದಕ್ಕೆ ನಾವು ಎಷ್ಟೆಲ್ಲ ಸರ್ಕಸ್ ಮಾಡುತ್ತೇವೆ. ಆದರೆ ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು ಎನ್ನುವುದನ್ನು ಮರೆತುಬಿಡುತ್ತೇವೆ. ಸೂರ್ಯ ನಮಸ್ಕಾರ ಮಾಡುವುದರಿಂದ ಪೂರ್ತಿ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಕ್ರಮೇಣವಾಗಿ ಹೆಚ್ಚು ಹೆಚ್ಚು ಸೂರ್ಯ ನಮಸ್ಕಾರ ಮಾಡುತ್ತ ಹೋಗುವುದರಿಂದ ನಿಮ್ಮ ದೇಹಕ್ಕೆ ವ್ಯಾಯಾಮ ಸಿಕ್ಕಂತಾಗಿ ಪೂರ್ತಿ ದೇಹದ ತೂಕ ಇಳಿಕೆಯಾಗುತ್ತದೆ.
ಮಾನಸಿಕ ಆರೋಗ್ಯ
ಬೆಳಗಿನ ಹೊತ್ತು ಕೆಲವರು ಎದ್ದವರೇ ಮೊಬೈಲ್ ಹಿಡಿದು ಕುಳಿತುಬಿಡುತ್ತಾರೆ. ಮೊಬೈಲ್‌ನಲ್ಲಿ ಯಾವ್ಯಾವುದೋ ವಿಡಿಯೊಗಳನ್ನು ನೋಡಿ ಮನಸ್ಸನ್ನು ಬೇರೇನೇನೋ ಚಿಂತನೆ ಮಾಡುವಂತೆ ಮಾಡಿಕೊಳ್ಳುತ್ತಾರೆ. ಹಾಗೆ ಮಾಡುವ ಬದಲು ಎದ್ದ ತಕ್ಷಣ ಸೂರ್ಯನತ್ತ ನೋಡುತ್ತ ಸೂರ್ಯ ನಮಸ್ಕಾರ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಕ್ಕಂತಾಗುತ್ತದೆ. ದಿನನಿತ್ಯದ ಜಂಜಾಟಕ್ಕೆ ಸಿಲುಕುವುದಕ್ಕೆ ಮೊದಲು ಮಾನಸಿಕವಾಗಿ ನೀವು ಸಿದ್ಧವಾಗುವಂತೆ ಮಾಡುತ್ತದೆ.
ಕೂದಲು ಉದುರುವಿಕೆಗೆ ತಡೆ
ಈಗೀಗ ಕೂದಲು ಉದುರುವುದು ಪ್ರತಿಯೊಬ್ಬರ ಸಮಸ್ಯೆ. ಸೂರ್ಯ ನಮಸ್ಕಾರ ಮಾಡುವುದರಿಂದ ನೆತ್ತಿಯ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ತಲೆಯಲ್ಲಿ ರಕ್ತ ಪರಿಚಲನೆ ಹೆಚ್ಚಾದಾಗ ತಲೆಗೆ ಪೋಷಣೆ ಸಿಕ್ಕಂತಾಗುತ್ತದೆ. ಹಾಗಾಗಿ ಆರೋಗ್ಯಕರ ಕೂದಲು ಬೆಳೆಯುವುದಕ್ಕೂ ಸಹಕಾರಿಯಾಗುತ್ತದೆ. ಇದರಿಂದ ಕೂದಲು ಬಿಳಿಯಾಗುವುದೂ ಕಡಿಮೆಯಾಗುತ್ತದೆ ಎನ್ನುವುದು ಗಮನಾರ್ಹ.
ಚರ್ಮದ ಆರೋಗ್ಯಕ್ಕೂ ಒಳಿತು
ದೇಹದ ಚರ್ಮ ಬೇಗ ಸುಕ್ಕಾಗಬಾರದು ಎಂದುಕೊಳ್ಳುವವರಿಗೂ ಈ ಸೂರ್ಯ ನಮಸ್ಕಾರವೇ ರಾಮಬಾಣ. ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಭಾಗಗಳಿಗೂ ರಕ್ತ ಸಂಚಲನ ಸಲೀಸಾಗುತ್ತದೆ. ಇದರಿಂದ ಚರ್ಮ ಬೇಗ ಸುಕ್ಕುಗಟ್ಟುವುದು ತಪ್ಪುತ್ತದೆ. ಅಷ್ಟೇ ಅಲ್ಲದೆ ಚರ್ಮದ ಕಾಂತಿಯೂ ಹೆಚ್ಚಾಗಿ ಹೊಳಪು ಬರುತ್ತದೆ.
ಸ್ನಾಯು ನೋವಿಗೂ ಪರಿಹಾರ
ಈಗ ಸೊಂಟ ನೋವು, ಕಾಲು ನೋವುಗಳಿಂದ ಬಳಲುವವರ ಸಂಖ್ಯೆ ಹೆಚ್ಚು. ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ವಿವಿಧ ಸ್ನಾಯುಗಳನ್ನು ಹಿಗ್ಗುತ್ತವೆ. ಅದರಿಂದಾಗಿ ಸ್ನಾಯುಗಳ ನೋವನ್ನು ಸಹ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಸಣ್ಣ ಪುಟ್ಟ ನೋವುಗಳಿಗೆ ಈ ಸೂರ್ಯ ನಮಸ್ಕಾರ ಪರಿಹಾರ. ಅಲ್ಲದೆ ನರಗಳ ದೌರ್ಬಲ್ಯ ಇದ್ದವರು ಸೂರ್ಯ ನಮಸ್ಕಾರ ಮಾಡುವುದರಿಂದ ನರಗಳಿಗೆ ಶಕ್ತಿ ತುಂಬಿದಂತಾಗುತ್ತದೆ. ದೇಹದ ಶುದ್ಧೀಕರಣ ಈ ಸೂರ್ಯ ನಮಸ್ಕಾರದಿಂದ ಸಾಧ್ಯ.
ಮುಟ್ಟಿನ ನೋವಿಗೆ ಪರಿಹಾರ
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮುಟ್ಟಾದಾಗ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಆ ರೀತಿ ಸಮಸ್ಯೆ ಇರುವವರು ತಿದಿನ ಸೂರ್ಯ ನಮಸ್ಕಾರ ಮಾಡುವುದು ಒಳ್ಳೆಯದು. ಅದರಿಂದ ಹೊಟ್ಟೆ ನೋವು ಕ್ರಮೇಣ ಕಡಿಮೆಯಾಗುತ್ತದೆ. ಸೂರ್ಯ ನಮಸ್ಕಾರವು ಮನುಷ್ಯನ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಕೂಡ. ಹಾಗೆಯೇ ಮುಟ್ಟು ಸರಿಯಾದ ಸಮಯದಲ್ಲಿ ಆಗುವುದಿಲ್ಲ ಎನ್ನುವಂತಹ ಹೆಣ್ಣು ಮಕ್ಕಳಿಗೂ ಇದೊಂದು ರೀತಿಯ ಔಷಧ. ಹೆರಿಗೆ ಸಮಯದಲ್ಲಿಯೂ ಇದು ಸಹಕಾರಿಯಾಗುತ್ತದೆ.
ಏಕಾಗ್ರತೆ ಹೆಚ್ಚಿಸುತ್ತದೆ
ಮಕ್ಕಳೆಂದ ಮೇಲೆ ಓದು ಬರಹವಿರಬೇಕು. ಆದರೆ ಅನೇಕ ಮಕ್ಕಳು ಓದಿನ ಕಡೆ ಏಕಾಗ್ರತೆ ಕೊಡಲಾಗದೆ ಒದ್ದಾಡುತ್ತಾರೆ. ಅದಕ್ಕೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪೋಷಕರೂ ಇದ್ದಾರೆ. ಆದರೆ ಅದರ ಬದಲಾಗಿ ಅವರಿಗೆ ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡಿಸುವ ಅಭ್ಯಾಸ ಮಾಡಿಸಬೇಕು. ಇದರಿಂದಾಗಿ ಅವರಿಗೆ ಏಕಾಗ್ರತೆ ಹೆಚ್ಚಾಗುತ್ತದೆ. ಪರೀಕ್ಷೆ ಸಮಯದಲ್ಲಿ ಎದುರಾಗುವ ಒತ್ತಡ ನಿಯಂತ್ರಿಸುವುದಕ್ಕೂ ಇದು ಸಹಾಯಕಾರಿ. ಮಕ್ಕಳು ಗೊಂದಲಗಳಿಂದ ತೊಂದರೆಗೊಳಗಾಗುತ್ತಿದ್ದರೆ ಆ ಗೊಂದಲಗಳಿಂದಲೂ ದೂರ ಮಾಡುವುದಕ್ಕೆ ಈ ಸೂರ್ಯ ನಮಸ್ಕಾರ ಸೂಕ್ತ.
ನಿದ್ರಾಹೀನತೆ ನಿವಾರಿಸುತ್ತದೆ
ಈಗಿನ ಯುವ ಸಮುದಾಯದ ಬಹುದೊಡ್ಡ ಸಮಸ್ಯೆ ನಿದ್ರಾಹೀನತೆ. ರಾತ್ರಿ ಒಂದು, ಎರಡು ಗಂಟೆಯಾದರೂ ಮೊಬೈಲ್ ಹಿಡಿದುಕೊಂಡೇ ಇದ್ದುಬಿಡುತ್ತಾರೆ. ಕೇಳಿದರೆ ನಿದ್ರೆ ಬರುತ್ತಿಲ್ಲವೆನ್ನುವ ಸಬೂಬು. ಸೂರ್ಯ ನಮಸ್ಕಾರ ಮಾಡುವುದರಿಂದ ನಿದ್ರಾ ಹೀನತೆ ಕೂಡ ಕಡಿಮೆಯಾಗುತ್ತದೆ. ನಿಯಮಿತವಾಗಿ ನಿದ್ದೆ ಮಾಡಿ ಏಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರವಾಗಿರುತ್ತದೆ.
ಬಿಪಿ, ಶುಗರ್ ನಿಯಂತ್ರಣ ಸಾಧ್ಯ
ಸೂರ್ಯ ನಮಸ್ಕಾರವು ರಕ್ತದೊತ್ತಡಕ್ಕೆ ನೈಸರ್ಗಿಕ ಚಿಕಿತ್ಸೆಯಾಗಿದೆ. ಇದು ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಅನಿಯಮಿತ ಹೃದಯ ಬಡಿತಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಈ ಅಭ್ಯಾಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹಾಗೆಯೇ ಹೃದಯ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತದೆ.
ಸೂರ್ಯ ನಮಸ್ಕಾರ ಮಾಡುವ ಮುನ್ನ…
ಸೂರ್ಯ ನಮಸ್ಕಾರದಿಂದ ಸಾಕಷ್ಟು ಉಪಯೋಗವಿದೆ ಎಂದಾಕ್ಷಣ ಕೆಲವರು ಹೊತ್ತಲ್ಲದ ಹೊತ್ತಿಗೆ ಸೂರ್ಯ ನಮಸ್ಕಾರ ಮಾಡಲು ಮುಂದಾಗುತ್ತಾರೆ. ಆದರೆ ಹಾಗೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಮುಂಜಾನೆ ಎದ್ದಾಗ ಖಾಲಿ ಹೊಟ್ಟೆಯಲ್ಲೇ ಸೂರ್ಯ ನಮಸ್ಕಾರ ಮಾಡಬೇಕು. ಸೂರ್ಯನಿಗೆ ಅಭಿಮುಖವಾಗಿ ಕ್ರಮಬದ್ಧವಾಗಿ ಸೂರ್ಯ ನಮಸ್ಕಾರ ಮಾಡಬೇಕು. ಮೊದ ಮೊದಲು ಒಂದು ಅಥವಾ ಎರಡು ಬಾರಿ ಸೂರ್ಯ ನಮಸ್ಕಾರ ಮಾಡಿದಾಕ್ಷಣ ಸುಸ್ತಾಗಬಹುದು. ಕ್ರಮೇಣ ನಿಮ್ಮ ಸಾಮರ್ಥ್ಯ ಹೆಚ್ಚುತ್ತದೆ. 10-20 ಹೀಗೆ ಎಷ್ಟು ಬಾರಿಯಾದರೂ ಸೂರ್ಯ ನಮಸ್ಕಾರ ಮಾಡಬಲ್ಲ ಸಾಮರ್ಥ್ಯ ನಿಮ್ಮದಾಗುತ್ತದೆ.