Site icon Vistara News

Yoga Day 2023 : ಶುಗರ್‌ ನಿಯಂತ್ರಣಕ್ಕೆ ಯೋಗವೇ ಮದ್ದು! ಈ ಆಸನಗಳನ್ನು ಮಾಡಿ, ಮಧುಮೇಹ ನಿಯಂತ್ರಿಸಿ

yoga for diabetes

#image_title

ಸಕ್ಕರೆ ಕಾಯಿಲೆ, ಬಿಪಿ ಈಗಿನ ಅತಿ ಸಾಮಾನ್ಯ ಕಾಯಿಲೆಗಳಾಗಿಬಿಟ್ಟಿವೆ. 30-40ರ ವಯಸ್ಸಿನವರೂ ಕೂಡ ಈ ಕಾಯಿಲೆಗಳನ್ನು ಮೈಗಂಟಿಸಿಕೊಂಡುಬಿಟ್ಟಿರುತ್ತಾರೆ. ಈ ಕಾಯಿಲೆಗಳು ಬಂದ ಮೇಲೆ ಔಷಧಗಳು ತಪ್ಪಿದ್ದಲ್ಲ. ಆದರೆ ಔಷಧವಿಲ್ಲದೆಯೂ ಈ ಕಾಯಿಲೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಮಾರ್ಗಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಯೋಗಾಭ್ಯಾಸ. ಪ್ರತಿನಿತ್ಯ ಕೆಲವು ಯೋಗ ಭಂಗಿಗಳನ್ನು(Yoga Day 2023) ಮಾಡುವುದರಿಂದ ನಿಮ್ಮ ದೇಹದ ಸಕ್ಕರೆ ಅಂಶವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಅವು ಯಾವವು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಕಪಾಲ್ ಭಾಟಿ

ಕಪಾಲ್ ಭಾಟಿಯ ಭಂಗಿ

ಇದು ಉಸಿರಾಟ ಮೇಲೆ ಕೇಂದ್ರೀಕರಣವಾಗಿರುವ ಆಸನ. ಇದು ನಿಮ್ಮ ನರಮಂಡಲವನ್ನು ಶಕ್ತಿಯುತಗೊಳಿಸಲು ಸಹಾಯ ಮಾಡುತ್ತದೆ. ಹಾಗೆಯೇ ಮೆದುಳಿನ ಕೋಶಗಳನ್ನು ಪುನರುಜ್ಜೀವನಗೊಳಿಸುತ್ತದೆ. ಇದು ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ ಹಾಗಾಗಿ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಇದು ತುಂಬ ಸಹಾಯಕವಾಗಿದೆ. ಈ ಪ್ರಾಣಾಯಾಮವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಮನಸ್ಸನ್ನು ಉತ್ಕೃಷ್ಟಗೊಳಿಸುತ್ತದೆ.

ಸುಪ್ತ ಮತ್ಸ್ಯೇಂದ್ರಾಸನ

ಸುಪ್ತ ಮತ್ಸ್ಯೇಂದ್ರಾಸನದ ಭಂಗಿ

ಈ ಆಸನದಲ್ಲಿ ಒಂದು ಮಗ್ಗಲಿನಲ್ಲಿ ಮಲಗಿರುವ ನೀವು ಕಾಲುಗಳನ್ನು ಹೊರತುಪಡಿಸಿ ಪೂರ್ತಿ ದೇಹವನ್ನು ಅಂಗಾತ ಮಾಡಬೇಕಾಗುತ್ತದೆ. ಇದರಿಂದ ದೇಹದ ಆಂತರಿಕ ಅಂಗಗಳಿಗೆ ಮಸಾಜ್‌ ಮಾಡಿದಂತಾಗುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ. ಈ ಭಂಗಿಯು ಕಿಬ್ಬೊಟ್ಟೆಯ ಅಂಗಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಹಾಗಾಗಿ ಮಧುಮೇಹದಿಂದ ಬಳಲುತ್ತಿರುವವರಿಗೆ ಈ ಯೋಗಾಸನವು ತುಂಬಾ ಸಹಾಯಕವಾಗಿದೆ.

ಇದನ್ನೂ ಓದಿ: Yoga Day 2023: ಸೂರ್ಯ ನಮಸ್ಕಾರ… ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ!

ಧನುರಾಸನ

ಧನುರಾಸನದ ಭಂಗಿ

ಈ ಆಸನದಲ್ಲಿ ನೀವು ನಿಮ್ಮ ದೇಹವನ್ನು ಹಿಂಬದಿಯಿಂದ ಬಾಗಿದ ಬಿಲ್ಲಿನಂತೆ ಮಾಡಬೇಕು. ಇದು ಮೇದೋಜ್ಜೀರಕ ಗ್ರಂಥಿಗಳನ್ನು ನಿಯಂತ್ರಿಸುತ್ತದೆ. ಸಾಮಾನ್ಯವಾಗಿ ಮಧುಮೇಹದಿಂದ ಬಳಲುವವರಿಗೆ ವೈದ್ಯರು ಈ ಆಸನವನ್ನು ಮಾಡುವಂತೆ ಶಿಫಾರಸು ಮಾಡುತ್ತಾರೆ. ಈ ಯೋಗಾಸನವು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಒತ್ತಡ ಮತ್ತು ಆಯಾಸವನ್ನು ನಿವಾರಿಸುತ್ತದೆ.

ಪಶ್ಚಿಮೋತ್ತನಾಸನ

ಪಶ್ಚಿಮೋತ್ತನಾಸನದ ಭಂಗಿ

ಎರಡು ಕಾಲುಗಳನ್ನು ಚಾಚಿ ದೇಹವನ್ನು ಮಡಚಿ ಮೊಣಕಾಲಿಗೆ ಮುಖ ತಾಗಿಸುವುದು ಇದರಲ್ಲಿದೆ. ಇದು ಕಿಬ್ಬೊಟ್ಟೆಯ ಮತ್ತು ಶ್ರೋಣಿಯ ಅಂಗಗಳನ್ನು ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಹಾಗಾಗಿ ಮಧುಮೇಹದಿಂದ ಬಳಲುವವರಿಗೆ ಸಹಕಾರಿ. ಈ ಯೋಗಾಸನವು ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳಲು ಹಾಗೆಯೇ ಶಾಂತವಾಗಿ ಇಟ್ಟುಕೊಳ್ಳುವುದಕ್ಕೂ ಸಹಾಯಕಾರಿ.


ಅರ್ಧ್ಯಾ ಮತ್ಸ್ಯೇಂದ್ರಾಸನ:

ಅರ್ಧ್ಯಾ ಮತ್ಸ್ಯೇಂದ್ರಾಸನದ ಭಂಗಿ

ಕಾಲನ್ನು ತಿರುವಿ ಹಾಕಿಕೊಂಡು ಕುಳಿತು ದೇಹವನ್ನು ಹಿಂಬದಿಗೆ ತಿರುಗಿಸುವುದು ಈ ಆಸನದಲ್ಲಿದೆ. ಇದರಿಂದ ಕಿಬ್ಬೊಟ್ಟೆಗೆ ಮಸಾಜ್‌ ಮಾಡಿದಂತಾಗುತ್ತದೆ. ಶ್ವಾಸಕೋಶಗಳಿಗೆ ಆಮ್ಲಜನಕ ಪೂರೈಕೆ ಹೆಚ್ಚಿಸಲು ಹಾಗೆಯೇ ಬೆನ್ನುಮೂಳೆಯಲ್ಲಿ ರಕ್ತದ ಹರಿವನ್ನು ಹೆಚ್ಚಿಸಲು ಇದು ಸಹಾಯಕಾರಿ. ಮನಸ್ಸನ್ನು ಶಾಂತವಾಗಿಸುವುದಕ್ಕೂ ಈ ಆಸನ ಲಾಭದಾಯಕ.

ಶವಾಸನ:

ಶವಾಸನದ ಭಂಗಿ

ಮೇಲಿನ ಎಲ್ಲ ಯೋಗ ಭಂಗಿಗಳ ನಂತರ ಶವಾಸನ ಮಾಡಿ. ಇದು ವಿಶ್ರಾಂತಿಯ ಯೋಗ ಭಂಗಿಯಾಗಿದೆ. ಇದರಿಂದ ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯಬಹುದು. ಇದರಿಂದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುವ ಜತೆಗೆ ಪುನರ್‌ಯೌವನ ಸಿಕ್ಕಿದಂತಾಗುತ್ತದೆ.

Exit mobile version