ಕಣ್ಣ ಸುತ್ತಲಿನ ಕಪ್ಪು ವರ್ತುಲ ಎಂಬ ಸಮಸ್ಯೆ ಹಲವರನ್ನು ಕಾಡುವ ತೊಂದರೆ. ಈ ಸಮಸ್ಯೆಯಿಂದ ಮುಕ್ತಿ ಕಾಣಲು ಅನೇಕರು ಥರಹೇವಾರಿ ಕ್ರೀಮುಗಳು, ದುಬಾರಿ ಬೆಲೆಯ ಜೆಲ್, ಸೀರಮ್‌ಗಳನ್ನು ಹಚ್ಚಿ ತಮ್ಮ ಸಮಸ್ಯೆ ಈ ಬಾರಿ ಪರಿಹಾರವಾದಂತೆಯೇ ಎಂಬ ನಿರೀಕ್ಷೆಯಲ್ಲಿ ಕಾಯುತ್ತಾರೆ. ಕೆಲವೊಮ್ಮೆ ತಾತ್ಕಾಲಿಕ ಮುಕ್ತಿ ಸಿಕ್ಕರೂ, ಸಮಸ್ಯೆ ಯಾವಾಗಲೂ ಇದ್ದೇ ಇರುತ್ತದೆ. ಆದರೆ, ಈ ಸಮಸ್ಯೆಯ ಮೂಲ ಹುಡುಕಿ, ಅದಕ್ಕೆ ಬೇರಿನಿಂದಲೇ ಸರಳ ಪರಿಹಾರಗಳನ್ನು ನಾವು ನೀಡುವುದಿಲ್ಲ. ಹೀಗಾಗಿ ಇದು ಶಾಶ್ವತ ತೊಂದರೆಯಾಗಿ ಕೆಲವರನ್ನು ಕಾಡುತ್ತದೆ. ಕಣ್ಣುಗಳು ಆಳಕ್ಕಿಳಿದು ನಿಸ್ತೇಜ ಮುಖ ಹಲವರನ್ನು ಅಧೀರರನ್ನಾಗಿ ಮಾಡುತ್ತದೆ. ಆರೋಗ್ಯವಂತ ಫ್ರೆಶ್ ಲುಕ್ ಇದರಿಂದ ಸಾಧ್ಯವಾಗದೆ, ಎಷ್ಟೇ ಮೇಕಪ್ ಮಾಡಿದರೂ, ಮೂಲ ಸಮಸ್ಯೆ ಹೋಗುವುದಿಲ್ಲ. ಅದಕ್ಕಾಗಿ ಈ ಸಮಸ್ಯೆಯ ಮೂಲಕ್ಕೆ ಆದ್ಯತೆ ನೀಡುವುದು ಮುಖ್ಯವಾಗುತ್ತದೆ.
೧. ಚೆನ್ನಾಗಿ ನಿದ್ದೆ ಮಾಡಿ. ಕಣ್ಣ ಸುತ್ತಲ ಕಪ್ಪು ವರ್ತುಲದ ಮುಖ್ಯ ಕಾರಣ ನಿದ್ದೆಗೆಟ್ಟಿರುವುದೇ ಆಗಿರುತ್ತದೆ. ಪ್ರತಿನಿತ್ಯ ನೀವು ೭-೮ ಗಂಟೆಯಾದರೂ ನಿದ್ದೆ ಮಾಡದಿದ್ದರೆ ಕಣ್ಣ ಸುತ್ತಲಿನ ರಕ್ತನಾಳಗಳು ಕಪ್ಪಗೆ ಎದ್ದು ಕಾಣತೊಡಗುತ್ತವೆ. ಅತಿಯಾದ ಒತ್ತಡ, ಕೆಲಸ, ರಾತ್ರಿ ಮಾಡುವ ಹೆಚ್ಚು ಕೆಲಸಗಳು ಕಣ್ಣಿಗೆ ಹೆಚ್ಚು ಒತ್ತಡ ಉಂಟು ಮಾಡುತ್ತದೆ. ಅದಕ್ಕಾಗಿ, ನಿಮ್ಮ ದೇಹಕ್ಕೆ ಅಗತ್ಯವಿರುವ ನಿದ್ದೆಯನ್ನು ತಪ್ಪಿಸಬೇಡಿ. ಎಷ್ಟೇ ಕಷ್ಟವಾದರೂ ಒತ್ತಡ ಇದ್ದರೂ ಪ್ರತಿನಿತ್ಯದ ನಿದ್ದೆ ತಪ್ಪಿಸಬೇಡಿ. ಜೊತೆಗೆ ಹೊತ್ತಲ್ಲದ ಹೊತ್ತಿನಲ್ಲಿ ನಿದ್ದೆ ಮಾಡಿ, ರಾತ್ರಿ ಎಚ್ಚರವಾಗಿರುವ ಅಭ್ಯಾಸ ಮಾಡಿಕೊಳ್ಳಬೇಡಿ. ರಾತ್ರಿಯ ನಿದ್ದೆ ಆರೋಗ್ಯವಂತ ದೇಹಕ್ಕೆ ಅತೀ ಅಗತ್ಯ. ಆರೋಗ್ಯವಂತ ಕಳೆಕಳೆಯಾದ ಚರ್ಮ ನಿಮ್ಮ ನಿದ್ದೆಯ ಚರಿತ್ರೆಯನ್ನು ಹೇಳುತ್ತದೆ.
೨. ನೀವೇನು ತಿನ್ನುತ್ತಿದ್ದೀರೆಂಬುದರ ಮೇಲೆ ಗಮನವಿರಲಿ. ವಿಟಮಿನ್ ಕೆಯಿಂದ ಸಂಪದ್ಭರಿತವಾಗಿರುವ ಆಹಾರಗಳು ಈ ಸಮಸ್ಯೆಗೆ ಉತ್ತಮ ಪರಿಹಾರ. ಹೂಕೋಸು, ದಾಳಿಂಬೆ, ಟೊಮೆಟೋ, ಕಲ್ಲಂಗಡಿ ಹಣ್ಣು, ಹಸಿರು ಬಣ್ಣವಿರುವ ತರಕಾರಿಗಳು, ಬೀಟ್ರೂಟ್ ಮತ್ತಿತರ ಹಣ್ಣು ತರಕಾರಿಗಳು ಚರ್ಮದ ಆರೋಗ್ಯಕ್ಕೆ ಉತ್ತಮ. ಕರಿದ ತಿಂಡಿಗಳು, ಊಟ ಮಾಡದೇ ಇರುವುದು ಇವೆಲ್ಲವೂ ಮುಖದ ಚರ್ಮದ ಆರೋಗ್ಯವನ್ನು ನಿರ್ಧರಿಸುತ್ತದೆ. ಅದಕ್ಕಾಗಿ, ಊಟದ ಮೇಲೆ ಗಮನವಿರಲಿ.
೩. ಶೀತಲ ಒತ್ತಡ ನೀಡುವುದು ಈ ಸಮಸ್ಯೆಗೆ ಸ್ವಲ್ಪ ಮಟ್ಟಿಗಿನ ಪರಿಹಾರ ನೀಡಬಹುದು. ಐಸ್ ತುಂಡನ್ನು ಬಟ್ಟೆಯಲ್ಲಿ ಸುತ್ತಿ ಕಣ್ಣಿನ ಸುತ್ತ ಒತ್ತಡ ನೀಡುತ್ತಾ ಬಂದಲ್ಲಿ ರಕ್ತನಾಳಗಳಲ್ಲಿ ಚೆನ್ನಾಗಿ ರಕ್ತಸಂಚಾರವಾಗಿ ಈ ಭಾಗದ ಕಪ್ಪು ವರ್ತುಲ ತಿಳಿಯಾಗಬಹುದು. ಕೋಲ್ಡ್ ಗ್ರೀನ್ ಟೀ, ಚಾಮೋಮೈಲ್ ಟೀಗಳ ಬ್ಯಾಗ್‌ಗಳನ್ನು ಇಡುವುದರಿಂದಲೂ ಪರಿಹಾರ ಸಿಗುತ್ತದೆ. ಬಳಸಿದ ಟೀ ಬ್ಯಾಗ್‌ಗಳನ್ನು ಎಸೆಯದೆ ಹಾಗೇ ಫ್ರಿಡ್ಜ್‌ನಲ್ಲಿಟ್ಟರೆ, ಕೆಲಸ ಮುಗಿಸಿ ಬಂದು ಒಂದು ಹತ್ತು ನಿಮಿಷ ನಿರಾಳವಾಗಿ ಕಣ್ಣು ಮುಚ್ಚಿ ಕಣ್ಣ ಮೇಲೆ ಈ ಕೋಲ್ಡ್ ಟೀ ಬ್ಯಾಗ್‌ಗಳನ್ನು ಇಟ್ಟುಕೊಳ್ಳುವುದು ರಿಲ್ಯಾಕ್ಸಿಂಗ್ ಅನುಭವವನ್ನು ನೀಡುತ್ತದೆ.
೪.ಯೋಗ ಹಾಗೂ ಧ್ಯಾನ ಮಾಡುವುದರಿಂದಲೂ ಮಾನಸಿಕ ಒತ್ತಡ ಹಗುರಾದಂತಾಗಿ ಅತಿಯಾದ ಒತ್ತಡದ ಬದುಕಿನ ಜಂಜಡಗಳಿಂದ ಪರಿಹಾರ ಸಿಗುತ್ತದೆ.
೫. ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಕಣ್ಣ ಮೇಲಿರಿಸಿ ಸ್ವಲ್ಪ ಹೊತ್ತು ಮಲಗುವುದರಿಂದ ಕಣ್ಣಿಗೆ ಉತ್ತಮ ಆರೈಕೆ ದೊರೆಯುತ್ತದೆ. ಕೆಂಪಗಾದ ಕಣ್ಣುಗಳು, ಕಣ್ಣಿನ ಊತ ಮತ್ತಿತರ ತೊಂದರೆಗಳಿಗೂ ಇದು ಒಳ್ಳೆಯ ಆಯ್ಕೆ. ಒಂದು ಹತ್ತಿಯನ್ನು ರೋಸ್ ವಾಟರ್‌ನಲ್ಲಿ ಅದ್ದಿ, ಕಣ್ಣ ಸುತ್ತಲ ಕಲೆಗಳಿಗೆ ಹಚ್ಚುವುದರಿಂದ ಕಲೆಗಳು ನಿಧಾನವಾಗಿ ತಿಳಿಯಾಗುತ್ತದೆ. ಆಲೂಗಡ್ಡೆಯನ್ನು ವೃತ್ತಾಕಾರವಾಗಿ ಕತ್ತರಿಸಿ, ಅದರ ರಸವನ್ನು ಮುಖದ ಚರ್ಮದ ಮೇಲೆ ಹಚ್ಚಬಹುದು.
ಇದನ್ನೂ ಓದಿ: Beauty Care: ಸೌಂದರ್ಯ ವರ್ಧಕ ರೋಸ್ ವಾಟರ್