ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ನಕಲಿ ವಿಡಿಯೊಗೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಗುರುವಾರ ರಾಜ್ಯ ಕಾಂಗ್ರೆಸ್ ಐಟಿ ಸೆಲ್ (Congress IT Cell)ನ ಐವರು ಸದಸ್ಯರನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ತಂಡವೂ ಈ ತೆಲಂಗಾಣದಲ್ಲಿದೆ. ಈ ಹಿಂದೆ ಅಮಿತ್ ಶಾ ಅವರ ಭಾಷಣದ ನಕಲಿ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ತೆಲಂಗಾಣ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ (Revanth Reddy) ಅವರಿಗೆ ಸಮನ್ಸ್ ನೀಡಿದ್ದರು.
ರೇವಂತ್ ರೆಡ್ಡಿ ಪರ ವಕೀಲರು ಬುಧವಾರ ದೆಹಲಿ ಪೊಲೀಸರ ಮುಂದೆ ಹಾಜರಾಗಿ, ಅಮಿತ್ ಶಾ ಅವರ ಭಾಷಣದ ನಕಲಿ ವಿಡಿಯೊ ರಚಿಸುವಲ್ಲಿ ಅಥವಾ ಪೋಸ್ಟ್ ಮಾಡುವುದರ ಹಿಂದೆ ರೇವಂತ್ ರೆಡ್ಡಿ ಅವರ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದರು. ವಿಡಿಯೊವನ್ನು ಹಂಚಿಕೊಂಡ ಆರೋಪದ ಮೇಲೆ ವಿವಿಧ ವಿರೋಧ ಪಕ್ಷಗಳ ಇನ್ನೂ ಐದು ಮಂದಿಗೂ ನೋಟಿಸ್ ನೀಡಲಾಗಿದೆ.
ರೇವಂತ್ ರೆಡ್ಡಿ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ)ಯ ನಾಲ್ವರು ಸದಸ್ಯರಾದ ಶಿವಕುಮಾರ್ ಅಂಬಾಲಾ, ಅಸ್ಮಾ ತಸ್ಲೀಮ್, ಸತೀಶ್ ಮನ್ನೆ ಮತ್ತು ನವೀನ್ ಪೆಟ್ಟೆಮ್ ಅವರಿಗೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 91 ಮತ್ತು 160ರ ಅಡಿಯಲ್ಲಿ ಸಮನ್ಸ್ ನೀಡಲಾಗಿದೆ. ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಅವರಿಗೂ ದೆಹಲಿ ಪೊಲೀಸರು ಮೇ 2ರಂದು ಸಮನ್ಸ್ ಜಾರಿ ಮಾಡಿದ್ದಾರೆ. “ನನಗೆ ಮಂಗಳವಾರ ದೆಹಲಿ ಪೊಲೀಸರಿಂದ ನೋಟಿಸ್ ಬಂದಿದೆ. ಆದರೆ ಏಕೆ ನೋಟಿಸ್ ನೀಡಲಾಯಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಅರಾಜಕತೆಯಲ್ಲದೆ ಬೇರೇನೂ ಅಲ್ಲ” ಎಂದು ಠಾಕೂರ್ ಹೇಳಿದ್ದಾರೆ.
ಏನಿದು ಪ್ರಕರಣ?
ಮುಸ್ಲಿಮರಿಗೆ ನೀಡಲಾದ ಶೇ. 4ರಷ್ಟು ‘ಅಸಾಂವಿಧಾನಿಕ’ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಅಮಿತ್ ಶಾ ತೆಲಂಗಾಣದಲ್ಲಿ ಮಾತನಾಡುತ್ತಿರುವ ಹಳೆಯ ವಿಡಿಯೊವನ್ನು ಬಳಸಿಕೊಂಡು ಅವರು ಎಸ್ಸಿ ಮತ್ತು ಎಸ್ಟಿ ಮೀಸಲಾತಿ ತೆಗೆಯಬೇಕು ಎಂದು ಹೇಳಿದ್ದಾರೆ ಎನ್ನುವಂತೆ ಬದಲಾಯಿಸಲಾಗಿತ್ತು. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿತ್ತು. ಇದಾದ ಬಳಿಕ ಗೃಹ ಸಚಿವಾಲಯ ಮತ್ತು ಬಿಜೆಪಿ ದೂರು ನೀಡಿತ್ತು.
ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳು ಮತ್ತು ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ವಿಶೇಷ ಸೆಲ್ ಎಫ್ಐಆರ್ ದಾಖಲಿಸಿತ್ತು. ಸಮುದಾಯಗಳ ನಡುವೆ ಜಗಳ ಸೃಷ್ಟಿಸುವ ಉದ್ದೇಶದಿಂದ ಕೆಲವು ನಕಲಿ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದು ಸಾರ್ವಜನಿಕ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ʼʼತೆಲಂಗಾಣ ಕಾಂಗ್ರೆಸ್ ಅಧಿಕೃತ ಎಕ್ಸ್ ಹ್ಯಾಂಡಲ್ ಈ ವೀಡಿಯೊವನ್ನು ಹಂಚಿಕೊಂಡಿದೆ. ತರುವಾಯ, ಪಕ್ಷದ ಹಲವಾರು ನಾಯಕರು ಅದನ್ನು ಮರು ಪೋಸ್ಟ್ ಮಾಡಿದ್ದಾರೆʼʼ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ: Revanth Reddy : ಅಮಿತ್ ಶಾ ತಿರುಚಿದ ವಿಡಿಯೊ ಪ್ರಕರಣ; ತೆಲಂಗಾಣ ಸಿಎಂಗೆ ಡೆಲ್ಲಿ ಪೊಲೀಸರಿಂದ ಸಮನ್ಸ್