Site icon Vistara News

Basavaraja Bommai : ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗ್ತಿಲ್ಲ, ಸಚಿವರೂ ಹೆದರುತ್ತಿದ್ದಾರೆ ಎಂದ ಬೊಮ್ಮಾಯಿ

Basavaraja Bommai BS Yediyurappa

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ (Lok sabha Election 2024) ಸೋಲುವ ಭೀತಿಯಿಂದ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು (No Candidates for Congress) ಸಿಗುತ್ತಿಲ್ಲ. ಸಚಿವರನ್ನು ಸ್ಪರ್ಧೆಗೆ ಒತ್ತಡ ಹೇರಲಾಗುತ್ತಿದ್ದು, ಅವರೂ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆದುಕೊಂಡಿರುವ ಬೊಮ್ಮಾಯಿ ಅವರು ಗುರುವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಬಿಜೆಪಿಯಲ್ಲಿ ಟಿಕೆಟ್‌ ಸಿಗದ ಕೆಲವು ಸಂಸದರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದಾರೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಆ ಪರಿಸ್ಥಿತಿ ಇಲ್ಲ. ಸಚಿವರೂ ಸೋಲುವ ಭಯದಲ್ಲಿ ಇದ್ದಾರೆ. ಟಿಕೆಟ್ ಸಿಗದ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನುವುದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಚಾಳಿಯಾಗಿದೆ. ಅವರ ಪಕ್ಷದಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದರು.

ಪಕ್ಷದ ವರಿಷ್ಠರು ನಿಶ್ಚಯ ಮಾಡಿ ಟಿಕೆಟ್‌ ಪ್ರಕಟಣೆ ಮಾಡಿದ್ದಾರೆ. ಸದಾಕಾಲ ರಾಜಕೀಯವಾಗಿ ಆಶೀರ್ವಾದ ಮಾಡುತ್ತಿರುವ ಯಡಿಯೂರಪ್ಪ ಅವರು ನನ್ನನ್ನು ಹರಸಿದ್ದಾರೆ. ಅವರ ಆಶಿರ್ವಾದ ಪಡೆದಿದ್ದೇನೆ. ಪ್ರಚಾರಕ್ಕೂ ಕೂಡ ಬರುತ್ತೇನೆ ಅಂತ ಹೇಳಿದ್ದಾರೆ ಎಂದು ಹೇಳಿದರು.

ಅಭ್ಯರ್ಥಿ ಆಯ್ಕೆ ಮೂಲಕ ಒಳ್ಳೆ ಸಂದೇಶ ನೀಡಿದ ಬಿಜೆಪಿ

ಈ ಬಾರಿ ಅಭ್ಯರ್ಥಿಗಳ ಆಯ್ಕೆ ವಿನೂತನ ರೀತಿಯಾಗಿದೆ. ಡಾ. ಮಂಜುನಾಥ್ ಅವರು ಲಕ್ಷಾಂತರ ಜನರಿಗೆ ಆರೋಗ್ಯ ಕಾಪಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿದವರಿಗೆ ಪಕ್ಷ ಪುರಸ್ಕಾರ ನೀಡುತ್ತದೆ ಅನ್ನುವ ಸಂದೇಶ ನೀಡಿದೆ. ಮತ್ತೆ ಮಹಾರಾಜ ಯದುವೀರ ಒಡೆಯರ್ ಅವರಿಗೆ ಟಿಕೆಟ್ ನೀಡಿರುವುದು ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಸಂದೇಶ ನೀಡಿದಂತಾಗಿದೆ.

ದಕ್ಷಿಣ ಭಾರತದಲ್ಲಿ ಅಭಿವೃದ್ಧಿ ಆಗಿದ್ದರೆ ಅದಕ್ಕೆ ಮೈಸೂರು ಒಡೆಯರ್ ಮನೆತನ ಕಾರಣ. ಅವರು ಹಿಂದುಳಿದ ವರ್ಗದವರ ಅಭಿವೃದ್ಧಿ ಮಾಡಿದ್ದಾರೆ. ಆ ಮನೆತನಕ್ಕೆ ಟಿಕೆಟ್ ನೀಡಿರುವುದು ದಕ್ಷಿಣ ಕರ್ನಾಟಕಕ್ಕೆ ಸಂತಸ ತಂದಿದೆ. ಹಳೆ ಬೇರು, ಹೊಸ ಚಿಗುರಿಗೂ ಅವಕಾಶ ನೀಡಿದೆ. ಈ ರೀತಿ ನಿರ್ಣಯ ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.

ಇದನ್ನೂ ಓದಿ : Lok sabha Election 2024 : ನಾನು ಕಾಂತೇಶ್‌ಗೇ ಟಿಕೆಟ್‌ ಕೊಡಿ ಅಂದಿದ್ದೆ, ಗೆಲ್ತೀನಿ ಅಂತ ನಂಗೇ ಕೊಟ್ರು ಎಂದ ಬೊಮ್ಮಾಯಿ

ನಾನು ಕಾಂತೇಶ್‌ಗೆ ಟಿಕೆಟ್‌ ಕೊಡಿ ಎಂದು ಹೇಳಿದ್ದೆ ಎಂದಿದ್ದ ಬೊಮ್ಮಾಯಿ

ಬಿಜೆಪಿ ಟಿಕೆಟ್‌ ಘೋಷಣೆಯ ಬಳಿಕ ಬುಧವಾರ ಸಂಜೆ ಮಾತನಾಡಿದ್ದ ಬಸವರಾಜ ಬೊಮ್ಮಾಯಿ ಅವರು, ನಾನು ಈಶ್ವರಪ್ಪ ಅವರ ಪುತ್ರ ಕೆ.ಇ ಕಾಂತೇಶ್‌ ಅವರಿಗೆ ಟಿಕೆಟ್‌ ನೀಡುವಂತೆ ಕೇಳಿಕೊಂಡಿದ್ದೆ. ಆದರೆ, ಗೆಲ್ಲುವ ಲೆಕ್ಕಾಚಾರದಲ್ಲಿ ಪಕ್ಷ ನನಗೆ ಟಿಕೆಟ್‌ ಕೊಟ್ಟಿದೆ ಎಂದು ಹೇಳಿದ್ದರು. ಕೆ.ಎಸ್‌. ಈಶ್ವರಪ್ಪ ಅವರು ಕೂಡಾ ತನಗೆ ಬೆಂಬಲ ನೀಡಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Exit mobile version