ಕಾಸರಗೋಡು: ಲೋಕಸಭೆ ಚುನಾವಣೆ (Lok Sabha Election)ಗೆ ಸಜ್ಜಾಗಿರುವ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ (BJP Candidate List). ಅಳೆದೂ ತೂಗಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಕೇರಳದ 20 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪೈಕಿ ಗಡಿನಾಡು, ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಬಾರಿ ಶಿಕ್ಷಕಿಯಾಗಿದ್ದ, ಕನ್ನಡತಿ ಎಂ.ಎಲ್.ಅಶ್ವಿನಿ (M.L.Ashwini) ಅವರಿಗೆ ಟಿಕೆಟ್ ಲಭಿಸಿದೆ.
ಮೂಲತಃ ಕರ್ನಾಟಕದವರು
ಸದ್ಯ ತಾಲೂಕು ಪಂಚಾಯತ್ ಸದಸ್ಯೆಯಾಗಿರುವ ಅಶ್ವಿನಿ ಮಂಜೇಶ್ವರ ತಾಲೂಕಿನ ಕೊಡ್ಲಮೊಗರು ಪಜ್ವ ನಿವಾಸಿ. ಇವರಿಗೆ ಕರ್ನಾಟಕದ ನಂಟೂ ಇದೆ. ಇವರು ಹುಟ್ಟಿದ್ದು, ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಮಂಜೇಶ್ವರದ ವ್ಯಕ್ತಿಯನ್ನು ವಿವಾಹವಾಗಿ ಅವರು ಗಡುನಾಡಿಗೆ ಕಾಲಿಟ್ಟರು. ಆರಂಭದಲ್ಲಿ ವರ್ಕಾಡಿಯ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಜತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಬಳಿಕ ಬಿಜೆಪಿಯ ಸದಸ್ಯತ್ವ ಪಡೆದು ರಾಜಕೀಯಕ್ಕೆ ಪ್ರವೇಶಿಸಿದರು.
Congratulations and best wishes to Mahila Morcha national executive member and block Panchayat member from Manjeshwara Smt. Ashwini ML on being selected as the BJP – NDA Loksabha candidate for Kasaragod constituency.
— Ravish Thantri Kuntar (@RavishThantri) March 2, 2024
Wishing her all the success.@AshwiniML2 pic.twitter.com/bClkP23gBp
ಮಂಜೇಶ್ವರ ತಾಲೂಕು ಪಂಚಾಯತ್ ಕಡಂಬಾರ್ ಡಿವಿಷನ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಮೊದಲ ಪ್ರಯತ್ನದಲ್ಲೇ ಜಯಗಳಿಸಿದರು. ಜತೆಗೆ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆಯಾಗಿಯೂ ಛಾಪು ಮೂಡಿಸಿದರು. ಇದೀಗ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ತಿಯಾಗುವ ಮೂಲಕ ಮತ್ತೊಂದು ಸುತ್ತಿನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಅನಿರೀಕ್ಷಿತ ಆಯ್ಕೆ
ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾಸರಗೋಡು ಲೋಕಸಭಾ ಕ್ಷೇತ್ರದತ್ತ ಸಹಜವಾಗಿ ಕುತೂಹಲ ಮೂಡಿದೆ. ಕರ್ನಾಟಕದವರೂ ಇಲ್ಲಿನ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಹೀಗಾಗಿ ಬಿಜೆಪಿ ಭಾರೀ ಕಸರತ್ತು ನಡೆಸಿ ಅಭ್ಯರ್ಥಿಯ ಆಯ್ಕೆ ನಡೆಸಿದೆ. ರಾಜ್ಯ ಬಿಜೆಪಿ ಪದಾಧಿಕಾರಿ ಪಿ.ಕೆ.ಕೃಷ್ಣದಾಸ್ ಮತ್ತು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪ್ರಮೀಳಾ ಸಿ. ನಾಯಕ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಪಕ್ಷದ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಅವರು ತಾನು ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಮೊದಲೇ ಹೇಳಿದ್ದರು. ಹೀಗಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಅಂತಿಮವಾಗಿ ಅಶ್ವಿನಿ ಹೆಸರನ್ನು ಪಕ್ಷ ಘೋಷಿಸಿದೆ. ಸಮರ್ಥ ನಾಯಕತ್ವವೇ ಅವರ ಆಯ್ಕೆಗೆ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Madhavi Lata: ಓವೈಸಿ ವಿರುದ್ಧ ಹಿಂದು ಸಿಂಹಿಣಿಗೆ ಟಿಕೆಟ್ ಕೊಟ್ಟ ಬಿಜೆಪಿ; ಯಾರಿವರು ಮಾಧವಿ?
ʼಕಮಲʼದ ಕೈ ಹಿಡಿಯುತ್ತಾರಾ ಮತದಾರರು?
ಈ ಬಾರಿ ಕೇರಳದಲ್ಲಿ ಕೇಸರಿಯ ವಿಜಯ ಪತಾಕೆ ಹಾರಿಸಲೇಬೇಕೆಂಬ ಹಠ ಬಿಜೆಪಿಯಲ್ಲಿದೆ. ಹೀಗಾಗಿ ಗೆಲುವಿನ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ತಿರುವನಂತಪುರ ಕ್ಷೇತ್ರದಿಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಪಾಲಕ್ಕಾಡ್‌ನಿಂದ ಸಿ.ಕೃಷ್ಣ ಕುಮಾರ್, ಕಣ್ಣೂರಿನಿಂದ ಸಿ. ರಘುನಾಥ್, ತ್ರಿಶ್ಯೂರ್‌ನಿಂದ ಚಲನಚಿತ್ರ ನಟ, ಮಾಜಿ ಸಂಸದ ಸುರೇಶ್ ಗೋಪಿ, ಆಲಪ್ಪುಳದಿಂದ ಶೋಭಾ ಸುರೇಂದ್ರನ್, ಪತ್ತನಂತಿಟ್ಟದಿಂದ ಅನಿಲ್ ಆ್ಯಂಟನಿ, ವಡಕರದಿಂದ ಪ್ರಫುಲ್ ಕೃಷ್ಣನ್, ಅಟ್ಟಿಂಗಲ್‌ನಿಂದ ಕೇಂದ್ರ ಸಚಿವ ವಿ.ಮುರಳೀಧರನ್, ಕೋಝಿಕ್ಕೋಡ್‌ನಿಂದ ಎಂ.ಟಿ.ರಮೇಶ್, ಮಲಪ್ಪುರದಿಂದ ಡಾ.ಅಬ್ದುಲ್ ಸಲಾಂ ಹಾಗೂ ಪೊನ್ನಾನಿಯಿಂದ ನಿವೇದಿತಾ ಸುಬ್ರಮಣ್ಯಂ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ