Site icon Vistara News

BJP Candidates List: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟ್‌ ನಕಾರ!

bjp list

bjp list

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election)ಗೆ ಸಜ್ಜಾಗಿರುವ ಬಿಜೆಪಿ ಮೊದಲ ಹಂತದಲ್ಲಿ  195 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಶನಿವಾರ (ಮಾರ್ಚ್‌ 2) ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಹಲವು ವಿಶೇಷತೆಗಳಿವೆ. ಅಚ್ಚರಿ ಎಂದರೆ 33 ಹಾಲಿ ಸಂಸದರಿಗೆ ಟಿಕೆಟ್‌ ಸಿಕ್ಕಿಲ್ಲ (BJP Candidates List).

ಅಸ್ಸಾಂನಲ್ಲಿ ಆರು ಸಂಸದರಿಗಷ್ಟೆ ಟಿಕೆಟ್‌

ಅಸ್ಸಾಂನ 11 ಲೋಕಸಭಾ ಸ್ಥಾನಗಳ ಹೆಸರು ಈ ಪಟ್ಟಿಯಲ್ಲಿದ್ದು, ಆ ಪೈಕಿ ಆರು ಅಭ್ಯರ್ಥಿಗಳು ಹಾಲಿ ಸಂಸದರಾಗಿದ್ದರೆ ಉಳಿದ ಐವರು ಹೊಸ ಮುಖಗಳು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜದೀಪ್ ರಾಯ್ ಅವರು ಗೆದ್ದ ಸಿಲ್ಚಾರ್ ಲೋಕಸಭಾ ಕ್ಷೇತ್ರದಿಂದ ಪರಿಮಲ್ ಸುಕ್ಲಬೈಧ್ಯ ಅವರನ್ನು ಪಕ್ಷವು ಕಣಕ್ಕಿಳಿಸಿದೆ. ಸಂಸದ ಹೋರೆನ್ ಸಿಂಗ್ ಬೇ ಅವರ ಸ್ವಾಯತ್ತ ಜಿಲ್ಲೆ (ಎಸ್‌ಟಿ)ಯಿಂದ ಅಮರ್ ಸಿಂಗ್ ಟಿಸ್ಸೊ ಕಣಕ್ಕಿಳಿಯಲಿದ್ದಾರೆ. ರಾಣಿ ಓಜಾ ಅವರ ಗೌಹಾಟಿ ಲೋಕಸಭಾ ಕ್ಷೇತ್ರದಿಂದ ಸ್ಪಬಿಜುಲಿ ಕಲಿತಾ ಮೇಧಿ ಅವರಿಗೆ ಟಿಕಟ್‌ ನೀಡಲಾಗಿದೆ. 2019ರಲ್ಲಿ ಪಲ್ಲಬ್ ಲೋಚನ್ ದಾಸ್ ಗೆದ್ದಿದ್ದ ತೇಜ್‌ಪುರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ರಂಜಿತ್ ದತ್ತಾ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಇನ್ನು ದಿಬ್ರುಗಢ ಕ್ಷೇತ್ರದಿಂದ ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ಹಾಲಿ ಸಂಸದ ರಾಮೇಶ್ವರ್ ತೇಲಿ ಅವರನ್ನು ಕೈಬಿಟ್ಟಿದೆ.

ಛತ್ತೀಸ್‌ಗಢದಲ್ಲಿ ನಾಲ್ವರು ಹೊಸಬರು

ಛತ್ತೀಸ್‌ಗಢದ 11 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಈ ಪೈಕಿ ನಾಲ್ವರು ಹೊಸಬರು. ಜಾಂಜ್‌ಗೀರ್ ಚಂಪಾ (ಎಸ್‌ಸಿ) ಕ್ಷೇತ್ರದಿಂದ ಹಾಲಿ ಸಂಸದ ಗುಹರಾಮ್ ಅಜ್ಗಲ್ಲಿ ಬದಲಿಗೆ ಕಮಲೇಶ್ ಜಂಗ್ಡೆ, ರಾಯ್‌ಪುರದಿಂದ ಬಿಜೆಪಿಯ ಹಿರಿಯ ನಾಯಕ ಬ್ರಿಜ್‌ಮೋಹನ್ ಅಗರವಾಲ್ ಕಣಕ್ಕೆ ಇಳಿಯಲಿದ್ದಾರೆ. ಇಲ್ಲಿ 2019ರಲ್ಲಿ ಸುನಿಲ್ ಕುಮಾರ್ ಸೋನಿ ಗೆದ್ದಿದ್ದರು. ಮಹಾಸಮುಂಡ್ ಕ್ಷೇತ್ರದಿಂದ ಹಾಲಿ ಸಂಸದ ಚುನ್ನಿ ಲಾಲ್ ಸಾಹು ಬದಲಿಗೆ ರೂಪ್ ಕುಮಾರಿ ಚೌಧರಿ ಸ್ಪರ್ಧಿಸಲಿದ್ದಾರೆ. ಕಂಕೇರ್ (ಎಸ್‌ಟಿ) ಸ್ಥಾನಕ್ಕೆ ಹಾಲಿ ಸಂಸದ ಮೋಹನ್ ಮಾಂಡವಿ ಬದಲಿಗೆ ಭೋಜರಾಜ್ ನಾಗ್ ಅವರನ್ನು ಹೆಸರಿಸಲಾಗಿದೆ.

ದೆಹಲಿಯಲ್ಲಿ ನಾಲ್ವರು ಸಂಸದರಿಗಿಲ್ಲ ಟಿಕೆಟ್‌

ದೆಹಲಿಯ ಐದು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ನಾಲ್ವರು ಹಾಲಿ ಸಂಸದರಿಗೆ ಟಿಕೆಟ್‌ ಸಿಕ್ಕಿಲ್ಲ. ಎರಡು ಅವಧಿಯ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಹರ್ಷವರ್ಧನ್ ಅವರನ್ನು ಕೈಬಿಟ್ಟು ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಪ್ರವೀಣ್ ಖಂಡೇಲ್ವಾಲ್ ಅವರನ್ನು ಪಕ್ಷ ನಿಲ್ಲಿಸಿದೆ. ಪಶ್ಚಿಮ ದೆಹಲಿ ಕ್ಷೇತ್ರದಲ್ಲಿ ಎರಡು ಅವಧಿಯ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಬದಲಿಗೆ ಕಮಲಜೀತ್ ಸೆಹ್ರಾವತ್ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಬಿಜೆಪಿಯ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರ ದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ದಕ್ಷಿಣ ದೆಹಲಿಯಿಂದ ರಮೇಶ್ ಬಿಧುರಿ ಅವರನ್ನು ಕೈಬಿಟ್ಟು ರಾಮವೀರ್ ಸಿಂಗ್ ಬಿಧುರಿ ಅವರ ಕೈ ಹಿಡಿಯಲಾಗಿದೆ.

ಗುಜರಾತ್‌ನ ಐವರು ಸಂಸದರ ಹೆಸರಿಲ್ಲ

ಗುಜರಾತ್‌ನ 15 ಲೋಕಸಭಾ ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಈ ಪೈಕಿ ಐದು ಹಾಲಿ ಸಂಸದರನ್ನು ಕೈ ಬಿಟ್ಟಿದೆ. ಬನಸ್ಕಾಂತ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಭಾತಭಾಯ್ ಸಾವಭಾಯಿ ಪಟೇಲ್ ಬದಲಿಗೆ ರೇಖಾಬೆನ್ ಹಿತೇಶ್‌ಭಾಯಿ ಚೌಧರಿ, ಅಹಮದಾಬಾದ್ ಪಶ್ಚಿಮ (ಎಸ್‌ಸಿ)ದಿಂದ ಮೂರು ಅವಧಿಯ ಸಂಸದ ಕಿರಿತ್ ಸೋಲಂಕಿ ಅವರ ಬದಲು ದಿನೇಶ್ಭಾಯ್ ಕಿದರ್ಭಾಯಿ ಮಕ್ವಾನಾ ಕಣಕ್ಕಿಳಿಯಲಿದ್ದಾರೆ. ರಾಜ್‌ಕೋಟ್ ಕ್ಷೇತ್ರಕ್ಕೆ ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದ್ದು, ಹಾಲಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಹೆಸರನ್ನು ಕೈ ಬಿಡಲಾಗಿದೆ. ಸಂಸದ ರಮೇಶ್‌ಭಾಯ್ ಲಾವ್‌ಜಿಭಾಯಿ ಧದುಕ್ ಅವರ ಫೋರ್‌ಬಂದರ್ ಕ್ಷೇತ್ರದಲ್ಲಿ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಸ್ಪರ್ಧಿಸಲಿದ್ದಾರೆ. ಪಂಚಮಹಲ್ ಕ್ಷೇತ್ರದಿಂದ ಹಾಲಿ ಸಂಸದ ರತನ್‌ಸಿನ್ಹ ಮಗನ್‌ಸಿನ್ಹ್ ರಾಥೋಡ್ ಬದಲಿಗೆ ರಾಜಪಾಲ್‌ಸಿನ್ಹ್ ಮಹೇಂದ್ರಸಿಂಗ್ ಜಾಧವ್ ಕಣಕ್ಕಿಳಿಯುವುದು ಖಚಿತ.

ಜಾರ್ಖಂಡ್‌ನಲ್ಲಿ ಏನಾಗಿದೆ?

ಜಾರ್ಖಂಡ್‌ನಲ್ಲಿ ಮನೀಶ್ ಜೈಸ್ವಾಲ್ ಅವರನ್ನು ಹಜಾರಿಬಾಗ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದ್ದು, ಪ್ರಸ್ತುತ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ ಇಲ್ಲಿ ಸಂಸದರಾಗಿದ್ದಾರೆ. ಲೋಹರ್ದಗಾ (ಎಸ್‌ಟಿ) ಕ್ಷೇತ್ರದಿಂದ ಮೂರು ಬಾರಿ ಸಂಸದ ಸುದರ್ಶನ್ ಭಗತ್ ಬದಲಿಗೆ ಸಮೀರ್ ಓರಾನ್ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪಟ್ಟಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗೆ ಆದ್ಯತೆ; ಹೀಗಿದೆ ಮೋದಿ-ಶಾ ಜಾತಿ ಲೆಕ್ಕಾಚಾರ

ಮಧ್ಯಪ್ರದೇಶದಲ್ಲಿ ಏಳು ಹೊಸ ಮುಖ

ಮಧ್ಯಪ್ರದೇಶದಲ್ಲಿ ಬಿಜೆಪಿ ಏಳು ಹಾಲಿ ಸಂಸದರನ್ನು ಬದಲಾಯಿಸಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಗ್ವಾಲಿಯರ್‌ನಲ್ಲಿ ಹಾಲಿ ಸಂಸದ ವಿವೇಕ್ ನಾರಾಯಣ್ ಶೆಜ್ವಾಲ್ಕರ್ ಬದಲಿಗೆ ಭರತ್ ಸಿಂಗ್ ಕುಶ್ವಾಹ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಗುಣಾದ ಟಿಕೆಟ್‌ ನೀಡಿ ಹಾಲಿ ಸಂಸದ ಕೃಷ್ಣಪಾಲ್ ಸಿಂಗ್ ಯಾದವ್ ಅವರನ್ನು ಕೈಬಿಡಲಾಗಿದೆ. ಸಾಗರ್ ಕ್ಷೇತ್ರದಿಂದ ರಾಜ್‌ಬಹದ್ದೂರ್ ಸಿಂಗ್ ಬದಲು ಲತಾ ವಾಂಖೆಡೆ, ಟಿಕಮ್‌ಗಢ (ಎಸ್‌ಸಿ) ಕ್ಷೇತ್ರದಿಂದ ವೀರೇಂದ್ರ ಖಾಟಿಕ್ ಸ್ಪರ್ಧಿಸಲಿದ್ದಾರೆ. ವಿದಿಶಾ ಸಂಸದ ರಮಾಕಾಂತ್ ಭಾರ್ಗವ ಅವರನ್ನು ಕೈಬಿಟ್ಟು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಹೆಸರಿಸಲಾಗಿದೆ. ಪ್ರಸ್ತುತ ಸಾಧ್ವಿ ಪ್ರಜ್ಞಾ ಸಿಂಗ್ ಹೊಂದಿರುವ ಭೋಪಾಲ್ ಕ್ಷೇತ್ರದಿಂದ ಅಲೋಕ್ ಶರ್ಮಾ ಅಖಾಡಕ್ಕೆ ಧುಮುಕಿದ್ದಾರೆ. ಹಾಲಿ ಸಂಸದ ಗುಮಾನ್ ಸಿಂಗ್ ದಾಮೋರ್ ಹೊಂದಿರುವ ರತ್ಲಾಮ್ (ಎಸ್‌ಟಿ) ಕ್ಷೇತ್ರದಿಂದ ಅನಿತಾ ನಗರ್ ಸಿಂಗ್ ಚೌಹಾಣ್ ಸ್ಪರ್ಧಿಸಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version