ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ (Vistara News) ಗುರುವಾರ (ಮಾ. 14) ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್ ಬೂತ್‌ನಲ್ಲಿ (Vistara news polling booth) ಬಿಜೆಪಿಗೆ ಜನ ಬೆಂಬಲ ವ್ಯಕ್ತವಾಗಿದೆ. ಸಾವಿರಾರು ಕರೆಗಳು ಬಂದಿದ್ದು, ಅವುಗಳಲ್ಲಿ 7396 ಕರೆಗಳನ್ನು ಸ್ವೀಕರಿಸಲಾಯಿತು. ಇವರಲ್ಲಿ ಶೇ. 69ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.
ವಿಸ್ತಾರ ಪೋಲಿಂಗ್ ಬೂತ್‌ನಲ್ಲಿ ಒಟ್ಟು 7396 ಕರೆಗಳ ಸ್ವೀಕಾರ ಮಾಡಲಾಗಿದೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರವೇ ಹೆಚ್ಚಿನ ಒಲವನ್ನು ತೋರಲಾಗಿದೆ. ಶಿವಮೊಗ್ಗದಲ್ಲಿ ಬಿಜೆಪಿಯ ರಾಘವೇಂದ್ರಗೆ 5122 ಮತದಾರರಿಂದ ವೋಟ್ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್‌ಗೆ 2229 ಮತದಾರರು ಜೈ ಎಂದಿದ್ದಾರೆ.
ಪಕ್ಷಗಳು ಪಡೆದ ಶೇಕಡಾವಾರು ಮತಗಳು ಎಷ್ಟು?
- ಬಿಜೆಪಿ -5122 (69%)
- ಕಾಂಗ್ರೆಸ್ – 2229 (30%)
- ಇತರೆ -45 (1%)
ಬಿಜೆಪಿ – ಕಾಂಗ್ರೆಸ್ ನಡುವೆ ಭಾರಿ ಅಂತರ
ವಿಸ್ತಾರ ಪೋಲಿಂಗ್ ಬೂತ್‌ಗೆ ಬಂದ ಕರೆಗಳ ಅನ್ವಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ವಿರುದ್ಧ ಭಾರಿ ಅಂತರವಿದೆ. ಸರಿಸುಮಾರು ಶೇ. 39ರಷ್ಟು ಮತಗಳ ಅಂತರವಿದೆ. ಇನ್ನು ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡುವುದಾದರೆ ಬಿ.ವೈ. ರಾಘವೇಂದ್ರ 2,23,360 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ತೊಡೆ ತಟ್ಟಿದ್ದವು. ಅಂದು ಜೆಡಿಎಸ್‌ನಿಂದ (ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ) ಮಧು ಬಂಗಾರಪ್ಪ ಸ್ಪರ್ಧೆ ಮಾಡಿದ್ದರು. ಬಿ.ವೈ. ರಾಘವೇಂದ್ರ 7,29,872 ಮತಗಳನ್ನು ಪಡೆದಿದ್ದರೆ, ಮಧು ಬಂಗಾರಪ್ಪ 5,06,512 ಮತಗಳನ್ನು ಗಳಿಸಿದ್ದರು. ಈಗ ವಿಸ್ತಾರ ನ್ಯೂಸ್ ನಡೆದ ಪೋಲಿಂಗ್ ಬೂತ್‌ನಲ್ಲಿಯೂ ಇದೇ ರೀತಿಯ ಫಲಿತಾಂಶ ಲಭ್ಯವಾಗಿದೆ. ಅಲ್ಲದೆ, ಈ ಬಾರಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಇರುವುದರಿಂದ ಬಿಜೆಪಿಗೆ ಮತ್ತೊಂದು ಪ್ಲಸ್ ಆಗಿದೆ. ಸಾಂಪ್ರದಾಯಿಕ ಬಿಜೆಪಿ ಮತಗಳ ಸಹಿತ ಜೆಡಿಎಸ್ ಮತಗಳೂ ಬೀಳಲಿವೆ.
ಬಿಜೆಪಿಯ ಭದ್ರಕೋಟೆಯಾಗಿರುವ ಶಿವಮೊಗ್ಗದಲ್ಲಿ ಕಾಂಗ್ರೆಸ್ ಸಹ ಅಷ್ಟೇ ಪ್ರಬಲವಾಗಿದೆ. ಇಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದರೆ ಭಾರಿ ಶ್ರಮ ಹಾಕಬೇಕಿದೆ. ಇನ್ನೂ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅಖಾಡಕ್ಕೆ ಧುಮುಕಿಲ್ಲ. ಅಲ್ಲಿ ಪ್ರಚಾರದ ಭರಾಟೆ ಜೋರಾದ ಮೇಲೆ ಯಾವ ಚಿತ್ರಣ ಬರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಏನಿದು ಪೋಲಿಂಗ್ ಬೂತ್?
ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
ಇದನ್ನೂ ಓದಿ: Vistara news polling booth: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮೇಲುಗೈ; ಪುತ್ತಿಲಗೆ ಜನಬೆಂಬಲ!
ಪೋಲಿಂಗ್ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಈಗಾಗಲೇ ಮಂಡ್ಯ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಸಮೀಕ್ಷೆ ಮುಕ್ತಾಯಗೊಂಡಿವೆ.
ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488