Site icon Vistara News

ಆರ್‌ಬಿಐ ಮೇಲೆ ಯುಪಿಎ ಸರ್ಕಾರದ ಒತ್ತಡ; ಕಾಂಗ್ರೆಸ್‌ ವಿರುದ್ಧದ ಬಿಜೆಪಿ ಅಟ್ಯಾಕ್‌ಗೆ ಬಲ ತುಂಬಿದ ಮಾಜಿ ಗವರ್ನರ್ ಹೇಳಿಕೆ

Duvvuri Subbarao

Duvvuri Subbarao

ನವದೆಹಲಿ: ಯುಪಿಎ ಆಡಳಿತದಲ್ಲಿ ಪ್ರಣಬ್ ಮುಖರ್ಜಿ ಮತ್ತು ಪಿ.ಚಿದಂಬರಂ ನೇತೃತ್ವದ ಹಣಕಾಸು ಸಚಿವಾಲಯವು ಆರ್‌ಬಿಐ (RBI) ಮೇಲೆ ಒತ್ತಡ ಹೇರುತ್ತಿತ್ತು ಎಂಬ ಆರ್‌ಬಿಐ ಮಾಜಿ ಗವರ್ನರ್ ದುವ್ವೂರಿ ಸುಬ್ಬರಾವ್ (Duvvuri Subbarao) ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ (BJP)ಯು ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದೆ. ಮುಖರ್ಜಿ ಮತ್ತು ಚಿದಂಬರಂ ನೇತೃತ್ವದ ಹಣಕಾಸು ಸಚಿವಾಲಯವು ಆರ್‌ಬಿಐ ಮೇಲೆ ಒತ್ತಡ ಹೇರುತ್ತಿತ್ತು ಎಂದು ಸುಬ್ಬರಾವ್ ತಮ್ಮ ಇತ್ತೀಚಿನ ಪುಸ್ತಕ ‘Just A Mercenary?: Notes from My Life and Career’ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ʼʼಇದು ರಾಷ್ಟ್ರೀಯ ಹಿತಾಸಕ್ತಿಗಿಂತ ಕಾಂಗ್ರೆಸ್‌ನ ಮೋಸದ ಪ್ರವೃತ್ತಿಯನ್ನು ಒತ್ತಿ ಹೇಳುತ್ತದೆʼʼ ಎಂದು ಹೇಳಿದ್ದಾರೆ. ʼʼಭಾರತೀಯರನ್ನು ಮೋಸಗೊಳಿಸಲು ರಿಸರ್ವ್ ಬ್ಯಾಂಕ್ ಅನ್ನು ಸರ್ಕಾರದ ಚಿಯರ್ ಲೀಡರ್ ಆಗಿ ಕಾಂಗ್ರೆಸ್ ಪರಿಗಣಿಸಿತ್ತು” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

“ಆರ್‌ಬಿಐಯ ಮಾಜಿ ಗವರ್ನರ್ ಸುಬ್ಬರಾವ್ ಅವರ ಆತ್ಮಚರಿತ್ರೆಯಿಂದ ಬಹಿರಂಗಗೊಂಡ ಸಂಗತಿಗಳು ಕಾಂಗ್ರೆಸ್ ನಡೆಸಿದ ಸಾಂಸ್ಥಿಕ ದುರುಪಯೋಗದ ಸ್ಪಷ್ಟ ಉದಾಹರಣೆಯಾಗಿದೆ. ಈ ದುರ್ನಡತೆಯು ರಾಷ್ಟ್ರೀಯ ಹಿತಾಸಕ್ತಿಗಿಂತ ಮೋಸ ಮಾಡುವ ಕಾಂಗ್ರೆಸ್‌ನ ಪ್ರವೃತ್ತಿಯನ್ನು ಒತ್ತಿ ಹೇಳುತ್ತದೆʼʼ ಎಂದು ಸ್ಮೃತಿ ಇರಾನಿ ಆರೋಪಿಸಿದ್ದಾರೆ. ʼʼದೃಢವಾದ ಆರ್ಥಿಕತೆಯನ್ನು ಬೆಳೆಸುವ ಬದಲು ಕಾಂಗ್ರೆಸ್‌ ಭಾರತೀಯರ ದಾರಿ ತಪ್ಪಿಸುವ ಪ್ರಯತ್ನ ನಡೆಸಿತು. ಸಮೃದ್ಧ ದೇಶದ ಆಕಾಂಕ್ಷೆಗಳಿಗೆ ದ್ರೋಹ ಬಗೆಯಿತುʼʼ ಎಂದು ಟೀಕಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಹೇಳಿದ್ದೇನು?

ಆರ್‌ಬಿಐ ಮಾಜಿ ಗವರ್ನರ್ ದುವ್ವೂರಿ ಸುಬ್ಬರಾವ್ ಅವರ ಹೇಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಪಿಎ ಆಡಳಿತಾವಧಿಯಲ್ಲಿನ ಆರ್ಥಿಕ ಸ್ಥಿತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. “ಯುಪಿಎ ಅವಧಿಯಲ್ಲಿ ಆರ್‌ಬಿಐ ಮೇಲೆ ಒತ್ತಡ ಹೇರಲಾಗಿತ್ತು. ಅವರ ಅವಧಿಯಲ್ಲಿ ಆರ್ಥಿಕತೆಯು ಆಶಾದಾಯಕವಾಗಿತ್ತು ಎಂದು ಹೇಳಿದ್ದರು. ಅಲ್ಲದೆ ಸಂಸ್ಥೆಗಳನ್ನು ಗೌರವಿಸುವ ಬಗ್ಗೆ ಇತರರಿಗೆ ಉಪನ್ಯಾಸ ನೀಡುತ್ತಾರೆ. ಆದರೆ ಅವರು ಅನುಸರಿಸುವುದಿಲ್ಲ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು “ಕಾಂಗ್ರೆಸ್ ಹಲವು ವಿಚಾರದಲ್ಲಿ ಸುಳ್ಳು ಮಾಹಿತಿಯನ್ನೇ ನೀಡುತ್ತಿದೆ. ಅವರು ಈ ದೇಶದ ಪ್ರತಿಯೊಂದು ಸಂಸ್ಥೆಯನ್ನು ನಾಶಪಡಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಪುಸ್ತಕದಲ್ಲಿ ಏನಿದೆ?

ಆರ್‌ಬಿಐಯ ಮಾಜಿ ಗವರ್ನರ್ ದುವ್ವೂರಿ ಸುಬ್ಬರಾವ್ ತಮ್ಮ ಪುಸ್ತಕದಲ್ಲಿ ಆರ್‌ಬಿಐಯ ಸ್ವಾಯತ್ತತೆಯ ಪ್ರಾಮುಖ್ಯತೆಯ ಬಗ್ಗೆ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ‘ಕಡಿಮೆ ತಿಳುವಳಿಕೆ ಮತ್ತು ಸೂಕ್ಷ್ಮತೆ’ ಇತ್ತು ಎಂದು ಬರೆದಿದ್ದಾರೆ.

ಇದನ್ನೂ ಓದಿ: Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

2008ರಂದು ಆರ್‌ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಸುಬ್ಬರಾವ್ ಹಣಕಾಸು ಕಾರ್ಯದರ್ಶಿಯಾಗಿದ್ದರು (2007-08). ‘Reserve Bank as the Government’s Cheerleader?’ ಎಂಬ ಅಧ್ಯಾಯದಲ್ಲಿ ಹಿಂದಿನ ಯುಪಿಎ ಸರ್ಕಾರದ ಒತ್ತಡವು ರಿಸರ್ವ್ ಬ್ಯಾಂಕಿನ ಬಡ್ಡಿದರ ನಿಲುವಿಗೆ ಸೀಮಿತವಾಗಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ.

Exit mobile version