Site icon Vistara News

Lok Sabha Election 2024: ಲೋಕಸಭಾ ಚುನಾವಣೆಗಾಗಿ ರಾಜ್ಯಕ್ಕೆ ಬಿ.ಎಲ್. ಸಂತೋಷ್ ಎಂಟ್ರಿ; ಇಂದು ಮಂಗಳೂರಲ್ಲಿ ಸಭೆ?

Lok Sabha Election 2024 BL Santhosh to enter state for Lok Sabha elections

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santhosh) ಎಂಟ್ರಿ ನೀಡಲಿದ್ದಾರೆ. ಇಂದು (ಭಾನುವಾರ – ಏಪ್ರಿಲ್‌ 14) ರಾತ್ರಿ ಮಂಗಳೂರಿನಲ್ಲಿ ಸಂತೋಷ್ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ (PM Narendra Modi) ರೋಡ್ ಶೋ ಮುಗಿದ ಬಳಿಕ ಮಂಗಳೂರಿನಲ್ಲಿ ಸಭೆ ನಡೆಸಲಿರುವ ಬಿ.ಎಲ್. ಸಂತೋಷ್, ತಂತ್ರಗಾರಿಕೆಯಲ್ಲಿ ತೊಡಗಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ (Dakshina Kannada Lok Sabha constituency) ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಸಂಘಟನೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಭಾನುವಾರ ರಾತ್ರಿಯೇ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಇನ್ನೂ ನಿಖರವಾಗಿಲ್ಲ.

ಸೋಮವಾರ (ಏಪ್ರಿಲ್‌ 15) ಉಡುಪಿಯಲ್ಲಿ ಸಭೆ ನಡೆಸಲಿರುವ ಬಿ.ಎಲ್. ಸಂತೋಷ್‌, ಪಕ್ಷ ಸಂಘಟನೆಗೆ ಬಗ್ಗೆ ವಿವರಗಳನ್ನು ಪಡೆಯಲಿದ್ದಾರೆ. ಇದರ ಜತೆಗೆ ಮಂಗಳೂರಿನಲ್ಲಿ ಮತ್ತೊಂದು ಸಂಘಟನಾತ್ಮಕ ಸಭೆಯನ್ನು ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಎಲೆಕ್ಷನ್‌ ಡೇಟ್‌ ಫಿಕ್ಸ್‌ ಬಳಿಕ ಮೊದಲ ಬಾರಿಗೆ ಆಗಮನ

ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದ ಸಂತೋಷ್‌ ಆ ಬಳಿಕ ಬೇರೆ ಬೇರೆ ರಾಜ್ಯಗಳ ಚುನಾವಣಾ ಪ್ರಚಾರ, ಪಕ್ಷ ಸಂಘಟನೆಗಳಲ್ಲಿ ಭಾಗಿಯಾಗಿದ್ದರು.

ಮೋದಿ ಮೈಸೂರು ಪ್ರವಾಸದ ಸಮಯ ಬದಲು; ಭಾನುವಾರ ಸಂಜೆ 1 ಗಂಟೆ ತಡವಾಗಿ ಆಗಮನ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಪ್ರವಾಸದ (Modi In Karnataka) ಸಮಯ ಬದಲಾವಣೆಯಾಗಿದೆ. ಏ.14ರಂದು ಸಂಜೆ ಸುಮಾರು ಒಂದು ಗಂಟೆ ತಡವಾಗಿ ಅವರು ಮೈಸೂರಿಗೆ ಆಗಮಿಸಲಿದ್ದಾರೆ. ಸಂಜೆ 4 ಗಂಟೆ ಬದಲಾಗಿ ಸಂಜೆ‌ 5.15ಕ್ಕೆ ನಗರಕ್ಕೆ ಬರಲಿದ್ದಾರೆ.

ಮಧ್ಯಪ್ರದೇಶದ ಬೋಪಾಲ್ ಏರ್‌ಪೋರ್ಟ್‌ನಿಂದ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮೋದಿ ಬಂದಿಳಿಯಲಿದ್ದಾರೆ. ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಪಯಣಿಸಲಿಸಲಿದ್ದಾರೆ. ಸಂಜೆ 4.15ಕ್ಕೆ ಬದಲಾಗಿ 5.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 7 ಗಂಟೆಗೆ ಕಾರ್ಯಕ್ರಮ ಮುಗಿಸಿ, ರಸ್ತೆ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿಂದ ಮಂಗಳೂರಿಗೆ ವಿಮಾನದ ಮೂಲಕ ತೆರಳಲಿದ್ದಾರೆ ಎಂದು ವಿಸ್ತಾರ ನ್ಯೂಸ್‌ಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

ಮೋದಿ ಮೈಸೂರು ಪ್ರವಾಸ; ಒಂದು ಭೇಟಿ ಅನೇಕ ಲೆಕ್ಕಾಚಾರ

ಸಿದ್ದರಾಮಯ್ಯಗೆ ಟಕ್ಕರ್‌

ಮೈಸೂರು ಹಾಗೂ ಚಾಮರಾಜ ನಗರ ಲೋಕಸಭೆ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಟಕ್ಕರ್‌ ಕೊಡಲಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ 5.30ಕ್ಕೆ ನಡೆಯುವ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭೆ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ಸಮಾವೇಶ ಆಯೋಜಿಸಲಿದ್ದು, ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.

ನಾಲ್ಕೂ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಅವರು ಮತಯಾಚನೆ ಮಾಡಲಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಅವರನ್ನು ಹುರಿದುಂಬಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನರನ್ನು ಕರೆಸುವ ದಿಸೆಯಲ್ಲಿ ದೋಸ್ತಿಗಳು (ಬಿಜೆಪಿ ಹಾಗೂ ಜೆಡಿಎಸ್)‌ ಪ್ಲಾನ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಮಾವೇಶದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: KS Eshwarappa: ಈಶ್ವರಪ್ಪ ಬಂದೂಕಿನ ಗುರಿ ಇಟ್ಟಿರುವುದು ಹೈಕಮಾಂಡ್ ಕಡೆಗೆ: ಬಿ.ವೈ. ರಾಘವೇಂದ್ರ

ರಾಜ್ಯದಲ್ಲಿ ಮೋದಿ ಹವಾ; ಮಂಗಳೂರು ರೋಡ್‌ ಶೋ ಸಮಯ ಬದಲು!

PM Narendra Modi to visit Mysuru, Mangaluru in Karnataka Today For Lok Sabha election campaign

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಳೆದ ತಿಂಗಳು ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಏಪ್ರಿಲ್‌ 14) ಕರ್ನಾಟಕಕ್ಕೆ (Modi In Karnataka) ಭೇಟಿ ನೀಡಲಿದ್ದಾರೆ. ಮೈಸೂರಿನಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೋದಿ, ಸಂಜೆ ಮಂಗಳೂರಿನಲ್ಲಿ ರೋಡ್‌ ಶೋ ಮೂಲಕ ಭರ್ಜರಿಯಾಗಿ ಪ್ರಚಾರ ನಡೆಸಲಿದ್ದಾರೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಕೈಗೊಳ್ಳುವ ರೋಡ್‌ ಶೋ ಸಮಯ ಬದಲಾಗಿದೆ. ಸಂಜೆ 7 ಗಂಟೆಯ ಬದಲಿಗೆ, 7.45 ರೋಡ್‌ ಶೋ ನಡೆಯಲಿದೆ ಎಂದು ತಿಳಿದುಬಂದಿದೆ.

ಮಂಗಳೂರಿನಲ್ಲಿ ರೋಡ್‌ ಶೋ

ಕರಾವಳಿಯಲ್ಲೂ ಭಾನುವಾರ ಮೋದಿ ಅವರು ಪ್ರಚಾರ ನಡೆಸಲಿದ್ದಾರೆ. ಮಂಗಳೂರಿನಲ್ಲಿ ಸಂಜೆ 7.45ಕ್ಕೆ ಸುಮಾರು ಒಂದೂವರೆ ಕಿಲೋಮೀಟರ್‌ ರೋಡ್‌ ಶೋ ನಡೆಸಲಿದ್ದಾರೆ. ಸಂಜೆ 7.30ಕ್ಕೆ ಮೋದಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಅವರು ನಾರಾಯಣ ಗುರು ಸರ್ಕಲ್‌ಗೆ ಆಗಮಿಸಲಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಾರಾಯಣ ಗುರು ಸರ್ಕಲ್‌ನಿಂದ ನವಭಾರತ್‌ ಸರ್ಕಲ್‌ವರೆಗೆ ಮೋದಿ ಅವರು ರೋಡ್‌ ಶೋ ಕೈಗೊಳ್ಳಲಿದ್ದಾರೆ. ಇಲ್ಲೂ ಲಕ್ಷಾಂತರ ಜನ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕರಾವಳಿಯಲ್ಲಿ ಈಗಾಗಲೇ ಬಿಜೆಪಿ ಪರ ಅಲೆ ಇದ್ದು, ಇದನ್ನು ಇಮ್ಮಡಿಗೊಳಿಸುವುದು ಮೋದಿ ಅವರ ರೋಡ್‌ ಶೋ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

Exit mobile version