Site icon Vistara News

CM Siddaramaiah: ಸಿದ್ದರಾಮಯ್ಯನವರೇ ಇದೋ ನೋಡಿ ನಿಮ್ಮ ವೈಫಲ್ಯಗಳ ಪಟ್ಟಿ ಎಂದ ಬಿ.ವೈ. ವಿಜಯೇಂದ್ರ

BY Vijayendra attack on CM Siddaramaiah regarding Karnataka Drought relief fund

ಬೆಂಗಳೂರು: ಬರ ಪರಿಹಾರಕ್ಕಾಗಿ (Drought Relief) ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ (Supreme Court) ಕದ ತಟ್ಟಿರುವ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿ.ವೈ. ವಿಜಯೇಂದ್ರ, ‘ಕೈಲಾಗದವನು ಮೈಪರಚಿಕೊಂಡ’ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಲ್ಲ ಎಡವಟ್ಟುಗಳಿಗೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವ ಮೂಲಕ ಚುನಾವಣಾ ಸಂದರ್ಭದ ಕುಟಿಲತನ ಪ್ರದರ್ಶಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಬೇಕೆಂದೆ ಸಿಎಂ ಸಿದ್ದರಾಮಯ್ಯ ಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಪೋಸ್ಟ್‌ನಲ್ಲೇನಿದೆ?

ಬರ ನಿರ್ವಹಣೆಯಲ್ಲಿ ತನ್ನ ವೈಫಲ್ಯ ಹಾಗೂ ಬೇಜವಾಬ್ದಾರಿಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಸುಪ್ರೀಂ ಕೋರ್ಟ್ ಅಂಗಳ ಪ್ರವೇಶಿಸಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ರಾಜಕೀಯ ಪ್ರೇರಿತವಾಗಿದ್ದು ಇದು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಅಪಮಾನಿಸುವ ಹಾಗೂ ಕರ್ನಾಟಕದ ಘನತೆಯನ್ನು ಕುಗ್ಗಿಸುವ ತಪ್ಪು ನಿರ್ಧಾರವಾಗಿದೆ.

‘ಕೈಲಾಗದವನು ಮೈಪರಚಿಕೊಂಡ’ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಲ್ಲ ಎಡವಟ್ಟುಗಳಿಗೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವ ಮೂಲಕ ಚುನಾವಣಾ ಸಂದರ್ಭದ ಕುಟಿಲತನ ಪ್ರದರ್ಶಿಸಲು ಹೊರಟಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಬರ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪ ಎದುರಾದಾಗ ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಸಮತೋಲನ ಕಾಯ್ದುಕೊಂಡು ಸಂಕಷ್ಟಿತ ಜನರ ಕಣ್ಣೀರು ಒರೆಸಿ ಪರಿಹಾರ ನೀಡಿತ್ತು. ಆದರೆ ಕಿಂಚಿತ್ತೂ ರೈತ ಕಾಳಜಿ ಇಲ್ಲದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಅಭಿವೃದ್ಧಿ ಶೂನ್ಯ ಜನವಿರೋಧಿ ಆಡಳಿತದ ಕರಾಳ ಮುಖವನ್ನು ಮುಚ್ಚಿಕೊಳ್ಳಲು ಜನರನ್ನು ದಿಕ್ಕು ತಪ್ಪಿಸಲು ಹೊರಟಿದೆ.

ಮಾನ್ಯ ಬಿ.ಎಸ್.‌ ಯಡಿಯೂರಪ್ಪ ಅವರ ಆಡಳಿತದ 2019ರಲ್ಲಿ 9,72,517 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 6,71,314 ಫಲಾನುಭವಿಗಳಿಗೆ 1232.20 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2020ರಲ್ಲಿ 19,68,247 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 12,00,346 ಫಲಾನುಭವಿಗಳಿಗೆ 941.70 ಕೋಟಿ ರೂ. ಪರಿಹಾರ ನೀಡಲಾಗಿತ್ತು.

2021ರಲ್ಲಿ 14,93,811 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 18,56,083 ಫಲಾನುಭವಿಗಳಿಗೆ 2446.10 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2022 ರಲ್ಲಿ 13,09,421, ಹೆಕ್ಟೇರ್‌ ಬೆಳೆಹಾನಿ ಆಗಿತ್ತು. ಆಗ 14,62,841 ಫಲಾನುಭವಿಗಳಿಗೆ 2031.15 ಕೋಟಿ ರೂ. ಪರಿಹಾರ ನೀಡಲಾಗಿತ್ತು.

ಇದು ಕಾಂಗ್ರೆಸ್‌ ನಾಟಕ

ಸಿದ್ದರಾಮಯ್ಯ ಅವರ ನಿದ್ರೆ ಸರ್ಕಾರದ ಈ ನಾಟಕ ಹೊಸದೇನಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ರೈತರಿಗೆ ಬರ ಪರಿಹಾರ ವಿಷಯದಲ್ಲಿ ಇದೇ ರೀತಿ ನಾಟಕವಾಡುತ್ತದೆ. 2013-14ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಜುಲೈ-ಆಗಸ್ಟ್‌ ಅವಧಿಯ ಮುಂಗಾರಿನ ಬರಗಾಲಕ್ಕೆ 2014 ರ ಏಪ್ರಿಲ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಮಾಡಲು ಶುರು ಮಾಡಿತ್ತು. ಅಂದರೆ ಅದಕ್ಕೆ ತೆಗೆದುಕೊಂಡ ಅವಧಿ 9 ತಿಂಗಳು!

2014-15ರ ಸಾಲಿನಲ್ಲಿ ಇದೇ ಸಿದ್ದರಾಮಯ್ಯನವರ ಸರ್ಕಾರ 2014ರ ಜುಲೈ-ಆಗಸ್ಟ್‌ ಅವಧಿಯ ಬರಗಾಲಕ್ಕೆ ಪರಿಹಾರ ನೀಡಲು, 2015 ಮಾರ್ಚ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಶುರು ಮಾಡಿತ್ತು. ಅಂದರೆ ಇದಕ್ಕೆ ತೆಗೆದುಕೊಂಡ ಅವಧಿ 8 ತಿಂಗಳು!

2019-20ನೇ ಸಾಲಿನಲ್ಲಿ ಬಿಜೆಪಿ ಸರ್ಕಾರವಿದ್ದಾಗ, 2019ರ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಪ್ರವಾಹ ವಿಕೋಪ ಉಂಟಾಗಿತ್ತು. ಆಗ 2019ರ ಅಕ್ಟೋಬರ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಶುರು ಮಾಡಲಾಗಿತ್ತು. ಅಂದರೆ ಬರ ಪರಿಹಾರ ನೀಡಲು ಬಿಜೆಪಿ ಸರ್ಕಾರ ತೆಗೆದುಕೊಂಡ ಅವಧಿ ಕೇವಲ 2 ತಿಂಗಳು.

2020-21ರ ಸಾಲಿನಲ್ಲಿ 2020ರ ಆಗಸ್ಟ್‌-ಅಕ್ಟೋಬರ್‌ನಲ್ಲಿ ಪ್ರವಾಹ ಉಂಟಾಗಿತ್ತು. ಆಗ ಅಕ್ಟೋಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಗಿತ್ತು. ಅಂದರೆ ಬಿಜೆಪಿ ಸರ್ಕಾರ ತೆಗೆದುಕೊಂಡ ಅವಧಿ 2 ತಿಂಗಳು.

2021-22 ನೇ ಸಾಲಿನಲ್ಲಿ, 2021ರ ಆಗಸ್ಟ್‌ನಲ್ಲಿ ಪ್ರವಾಹವಾದಾಗ, ಸೆಪ್ಟೆಂಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 2 ತಿಂಗಳು. ಇದೇ ಸಾಲಿನಲ್ಲಿ, ಮತ್ತೊಮ್ಮೆ ಅಕ್ಟೋಬರ್‌-ನವೆಂಬರ್‌ನಲ್ಲಿ ಪ್ರವಾಹ ಉಂಟಾಗಿ, ಆಗ ನವೆಂಬರ್‌ನಿಂದಲೇ ಪರಿಹಾರ ವಿತರಣೆ ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು.

2022-23ನೇ ಸಾಲಿನಲ್ಲಿ, 2022ರ ಮೇ-ಜೂನ್‌-ಜುಲೈ ತಿಂಗಳಲ್ಲಿ ಪ್ರವಾಹವಾದಾಗ ಜುಲೈನಿಂದ ಪರಿಹಾರ ವಿತರಣೆ ಶುರು ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು. ಮತ್ತೆ ಇದೇ ಸಾಲಿನಲ್ಲಿ, 2022ರ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಪ್ರವಾಹ ಉಂಟಾಯಿತು. ಆಗ 2 ತಿಂಗಳಲ್ಲಿ ಪರಿಹಾರ ವಿತರಣೆ ಶುರು ಮಾಡಲಾಯಿತು.

ಅಮಾನವೀಯ ಕುತಂತ್ರ

ಮೇಲಿನ ಈ ಎಲ್ಲ ಅಂಶಗಳನ್ನು ಗಮನಿಸಿದರೆ ಒಂದಂತೂ ಸ್ಪಷ್ಟವಾಗುತ್ತದೆ. ಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರುವುದಕ್ಕಿಂತ ರೈತರ ಕಣ್ಣೀರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೆ ಕಾಂಗ್ರೆಸ್ ಸರ್ಕಾರದ ಅಮಾನವೀಯ ಕುತಂತ್ರ ಅನ್ನಿಸುತ್ತಿದೆ.

ಮಾನ್ಯ ಸಿದ್ದರಾಮಯ್ಯನವರೇ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜತೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ಬರಪೀಡಿತ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ನೋಡಿ ನೀವು ಕಲಿಯಬೇಕಿದೆ.

ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್‌ ನಿಲುವು ತಿಳಿಸಲಿ: ಆರ್‌. ಅಶೋಕ್‌ ಆಗ್ರಹ

ಶೀಘ್ರ ನಿಮಗೆ ಉತ್ತರ ಸಿಗಲಿದೆ

ಇದುವರೆಗೂ ಸುಮ್ಮನಿದ್ದು ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುವ ಈ ಹೊತ್ತಿನಲ್ಲೇ ಸುಪ್ರೀಂ ಕದ ತಟ್ಟುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರದ ಕಾಳಜಿ ‘ಮೊಸಳೆ ಕಣ್ಣೀರಿನದು’ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಕರ್ನಾಟಕದ ಜನತೆ ಪ್ರಬುದ್ಧರಿದ್ದಾರೆ, ಇದಕ್ಕೆ ತಕ್ಕ ಉತ್ತರವನ್ನು ಅತಿ ಶೀಘ್ರದಲ್ಲೇ ನೀವು ಪಡೆಯಲಿದ್ದೀರಿ” ಎಂದು ಬಿ.ವೈ. ವಿಜಯೇಂದ್ರ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version