Site icon Vistara News

PM Narendra Modi: ಈಶ್ವರಪ್ಪ ವಿರುದ್ಧ ಕ್ರಮವಹಿಸದ ನೀವು ‘ವೀಕ್ ಪಿಎಂ’; ಮೋದಿಗೆ ಸಿದ್ದರಾಮಯ್ಯ ಹಲವು ಪ್ರಶ್ನೆ!

CM Siddaramaiah questions PM Narendra Modi

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕ ವಾಕ್ಸಮರ ತೀವ್ರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿವಮೊಗ್ಗದ ಸಮಾರಂಭದಲ್ಲಿ ಕಾಂಗ್ರೆಸ್‌ ಬಗ್ಗೆ ಟೀಕೆ ಮಾಡಿದ್ದರು. ಅಲ್ಲದೆ, ಸೂಪರ್‌ ಸಿಎಂ, ಶ್ಯಾಡೋ ಸಿಎಂ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈಗ ಇದಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ (KS Eshwarappa) ವಿರುದ್ಧ ಕ್ರಮವಹಿಸದ ನೀವು ‘ವೀಕ್ ಪಿಎಂ’ ಎಂದು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಪ್ರಧಾನಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಮೋದಿಗೆ ಸಿದ್ದರಾಮಯ್ಯ ಪ್ರಶ್ನೆಗಳು

“ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರೇ, ಕಾಂಗ್ರೆಸ್ ಪಕ್ಷದಲ್ಲಿ ಸೂಪರ್ ಸಿಎಂ (Super CM), ಶ್ಯಾಡೋ ಸಿಎಂಗಳಿದ್ದಾರೆ (Shadow CM) ಎಂದು ಶಿವಮೊಗ್ಗದ ನಿಮ್ಮ ಪಕ್ಷದ ಸಭೆಯಲ್ಲಿ ನೀವು ಗೇಲಿ ಮಾಡಿದ್ದೀರಿ! ನಮ್ಮಲ್ಲಿ ಸೂಪರ್ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ ಅದು ‘‘ಸ್ಟ್ರಾಂಗ್ ಸಿಎಂ’’, ನಿಮ್ಮ ಹಾಗೆ ನಾನು ‘‘ವೀಕ್ ಪಿಎಂ’’ ಅಲ್ಲ.

ಮೋದಿಯವರೇ ನಿಮ್ಮನ್ನು ನೀವು 56 ಇಂಚಿನ ಎದೆಯುಳ್ಳವನು ಎಂದು ಬಣ್ಣಿಸಿಕೊಳ್ಳುತ್ತೀರಿ, ನಿಮ್ಮ ಅಭಿಮಾನಿಗಳು ನಿಮ್ಮನ್ನು ವಿಶ್ವಗುರು ಎಂದು ಕೊಂಡಾಡುತ್ತಾರೆ. ಆದರೆ ನೀವೊಬ್ಬ ‘‘ವೀಕ್ ಪಿಎಂ’’ ಎಂದು ಮತ್ತೆ ಮತ್ತೆ ತೋರಿಸಿಕೊಡುತ್ತಿದ್ದೀರಿ.‌

ಬಿ.ಎಸ್. ಯಡಿಯೂರಪ್ಪನವರು (BS Yediyurappa) ಒಂದು ಕಾಲದಲ್ಲಿ ನಿಮ್ಮ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದವರು, ನಿಮ್ಮನ್ನು ಹೀನಾಯವಾಗಿ ನಿಂದಿಸಿದವರು. ಅಂತಹವರ ಕಾಲಿಗೆ ಬಿದ್ದು ಮತ್ತೆ ಪಕ್ಷಕ್ಕೆ ಕರೆತಂದು ಮೆರವಣಿಗೆ ಮಾಡುವ ಮೂಲಕ ನೀವೊಬ್ಬ ‘‘ವೀಕ್ ಪಿಎಂ’’ ಎಂದು ನೀವೇ ತೋರಿಸಿಕೊಟ್ಟಂತಾಗಲಿಲ್ಲವೇ?

ಕರ್ನಾಟಕದಲ್ಲಿ ನಿಮ್ಮ ನಾಯಕತ್ವದ ವಿರುದ್ಧ ಅರ್ಧ ಡಜನ್ ನಾಯಕರು ಬಂಡೆದಿದ್ದಾರೆ. ಟಿಕೆಟ್ ಪಡೆಯಲು ಅಸಮರ್ಥರಾದ ನಿಮ್ಮ ಪಕ್ಷದ ನಾಯಕರು ಹಾದಿ ಬೀದೀಲಿ ಹೊಡೆದಾಡಿಕೊಳ್ಳುತ್ತಿದ್ದಾರೆ, ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ನಿಮ್ಮ ಯಾವ ಮನವಿಗೂ ಅವರು ಕಿವಿಕೊಟ್ಟಿಲ್ಲ. ಇವರಲ್ಲಿ ಕೆಲವರು ನಮ್ಮನ್ನೂ ಸಂಪರ್ಕಿಸುತ್ತಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಇದೆಂತಹ ಅಶಿಸ್ತಿನ ತಾಂಡವ. ಇದಕ್ಕೆಲ್ಲ ಕಾರಣ ನೀವೊಬ್ಬ ‘‘ವೀಕ್ ಪಿಎಂ’’ ಆಗಿರುವುದಲ್ಲವೇ?

ಶಿವಮೊಗ್ಗದಲ್ಲಿ ನೀವು ಪಕ್ಷದ ಪ್ರಚಾರ ಸಭೆ ನಡೆಸುತ್ತಿದ್ದಾಗ ಬಂಡುಕೋರ ನಾಯಕ ಈಶ್ವರಪ್ಪನವರು ಕೂಗಳತೆ ದೂರದ ತಮ್ಮ ಮನೆಯಲ್ಲಿದ್ದರೂ ಕ್ಯಾರೇ ಅನ್ನದೆ ಸಭೆಗೆ ಗೈರು ಹಾಜರಾಗಿದ್ದರು. ಇಷ್ಟು ಮಾತ್ರವಲ್ಲ ನಿರಂತರವಾಗಿ ಬಿಜೆಪಿ ನಾಯಕತ್ವದ ವಿರುದ್ಧ ಕಿಡಿಕಾರುತ್ತಿದ್ದರು. ಅವರ ವಿರುದ್ಧ ಕ್ರಮಕೈಗೊಳ್ಳಲಾಗದ ನೀವು ‘‘ವೀಕ್ ಪಿಎಂ’’ ಅಲ್ಲದೆ ಮತ್ತೇನು?

ಇದನ್ನೂ ಓದಿ: Lok Sabha Election 2024: ಮಂಡ್ಯದಿಂದ ಎಚ್‌ಡಿಕೆ ಕಣಕ್ಕೆ? ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಬದಲು?

ಅಂತಹ ನಾಯಕರೇ ಇಲ್ವಾ?

ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ, ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾದವರು ಹಲವು ಮಂದಿ ಇದ್ದಾರೆ. ನಿಮ್ಮ ಪಕ್ಷದ ಕತೆ ಏನು? ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿರುವ ನಿಮ್ಮ ಪಕ್ಷದಲ್ಲಿ ಪಿಎಂ ಆಗುವ ಅರ್ಹತೆ ಇರುವ ಒಬ್ಬ ನಾಯಕನೂ ಇಲ್ಲವಲ್ಲಾ? ಅಂತಹ ನಾಯಕರೇ ಇಲ್ವಾ? ಕುರ್ಚಿ ಕಳೆದುಕೊಳ್ಳುವ ಭಯದಿಂದ ಅಂತಹ ನಾಯಕರನ್ನು ಬೆಳೆಯಲು ನೀವೇ ಬಿಡುತ್ತಿಲ್ವಾ?” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಿಎಂ ಸಿದ್ದರಾಮಯ್ಯ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Exit mobile version