Site icon Vistara News

Congress Candidate List: ಅಮೇಥಿ, ರಾಯ್‌ ಬರೇಲಿಯಿಂದ ರಾಹುಲ್‌, ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ಕುತೂಹಲಕ್ಕೆ ಇಂದು ತೆರೆ

Congress Candidate List

Congress Candidate List

ಲಕ್ನೋ: ದೇಶದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಅದರ ಜತೆಗೆ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಕೂಡ ಏರಿಕೆಯಾಗುತ್ತಿದೆ. ಈಗಾಗಲೇ ಎರಡು ಹಂತದ ಮತದಾನ ಯಶಸ್ವಿಯಾಗಿ ಮುಗಿದಿದ್ದು, ಮೂರನೇ ಹಂತ ಮೇ 7ರಂದು ನಡೆಯಲಿದೆ. ಈ ಮಧ್ಯೆ ದೇಶದ ಪ್ರತಿಷ್ಠಿತ ಕಣವಾದ ಉತ್ತರ ಪ್ರದೇಶದ ಅಮೇಥಿ (Amethi) ಮತ್ತು ರಾಯ್‌ಬರೇಲಿ (Raebareli)ಯಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸದ ಕಾಂಗ್ರೆಸ್‌ ಇನ್ನೂ ಗುಟ್ಟು ಕಾಪಾಡಿಕೊಂಡು ಬಂದಿದೆ. ನಾಮಪತ್ರ ಸಲ್ಲಿಕೆಗೆ ನಾಳೆಯೇ (ಮೇ 3) ಕೊನೆಯ ದಿನವಾಗಿದ್ದು ಇಂದು ಕೈಪಡೆ ಅಭ್ಯರ್ಥಿಗಳನ್ನು ಘೋಷಿಸಲಿದೆ (Congress Candidate List). ಅಮೇಥಿ ಕ್ಷೇತ್ರದಿಂದ ರಾಹುಲ್‌ ಗಾಂಧಿ(Rahul Gadhi) ಮತ್ತು ರಾಯ್‌ ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ(Priyanka Gandhi) ಸ್ಪರ್ಧಿಸುತ್ತಾರಾ ಎನ್ನುವ ಕುತೂಹಲಕ್ಕೆ ಇಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೆರೆ ಎಳೆಯಲಿದ್ದಾರೆ.

2019ರಲ್ಲಿ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಅನಿರೀಕ್ಷಿತ ಸೋಲನ್ನು ಅನುಭವಿಸಿದ ರಾಹುಲ್ ಗಾಂಧಿ ಮತ್ತೆ ಅಲ್ಲಿಂದ ಸ್ಪರ್ಧಿಸುವ ನಿರೀಕ್ಷೆಯಿದೆ. ಈಗಾಗಲೇ ಅವರು ಕೇರಳದ ವಯನಾಡ್‌ನಲ್ಲಿ ಸ್ಪರ್ಧಿಸಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಎರಡು ಕಡೆ ಕಣಕ್ಕಿಳಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನುತ್ತಿವೆ ಮೂಲಗಳು.

ಇನ್ನು ರಾಯ್‌ ಬರೇಲಿ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿದೆ. 2004ರಿಂದ ಇದು ಸೋನಿಯಾ ಗಾಂಧಿ ಅವರ ವಶದಲ್ಲಿದೆ. ಈ ಬಾರಿ ಸೋನಿಯಾ ಗಾಂಧಿ ರಾಯ್‌ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹಿಂದೆಯೇ ಘೋಷಿಸಿದ್ದರು. ಈ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದರು. ಹೀಗಾಗಿ ಪ್ರಿಯಾಂಕಾ ಗಾಂಧಿ ರಾಯ್‌ ಬರೇಲಿ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿದೆ. ಇದರ ಜತೆಗೆ ಬಿಜೆಪಿ ಆಗಾಗ ಉಲ್ಲೇಖಿಸುವ ʼವಂಶಪಾರಂಪರ್ಯ ರಾಜಕೀಯʼ ಆರೋಪವನ್ನು ಪರಿಗಣಿಸಿ ಅವರನ್ನು ಕಣಕ್ಕಿಳಿಸುವುದು ಅನುಮಾನ ಎನ್ನುವ ಮಾತೂ ಕೇಳಿ ಬಂದಿದೆ.

ʼʼಅಭ್ಯರ್ಥಿಗಳ ಆಯ್ಕೆ ಬಗ್ಗೆ ಯಾವುದೇ ಗೊಂದಲಗಳಿಲ್ಲ. ನಾವು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆʼʼ ಎಂದು ಹಿರಿಯ ಮುಖಂಡ ಜೈರಾಮ್‌ ರಮೇಶ್‌ ತಿಳಿಸಿದ್ದಾರೆ. ಇದರ ನಡುವೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ಅವರೂ ರಾಜಕೀಯ ಪ್ರವೇಶಿಸುತ್ತಾರೆ ಎನ್ನುವ ಗಾಳಿಸುದ್ದಿಯೂ ಹಬ್ಬಿದೆ.

ಇದನ್ನೂ ಓದಿ: Lok Sabha Election 2024: ಅಮೇಥಿ, ರಾಯ್‌ಬರೇಲಿಗೆ ರಾಹುಲ್‌, ಪ್ರಿಯಾಂಕಾ ಫಿಕ್ಸ್‌? ಖರ್ಗೆ ನಿರ್ಧಾರ ಫೈನಲ್‌

ರಾಯ್‌ ಬರೇಲಿ ಕ್ಷೇತ್ರದ ಇತಿಹಾಸ

ಇಂದಿರಾ ಗಾಂಧಿ ಅವರ ಪತಿ ಮತ್ತು ಕಾಂಗ್ರೆಸ್ ನಾಯಕ ಫಿರೋಜ್ ಗಾಂಧಿ 1952 ಮತ್ತು 1957ರಲ್ಲಿ ರಾಯ್‌ ಬರೇಲಿಯಿಂದ ಎರಡು ಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮೊಮ್ಮಗ ಅರುಣ್ ನೆಹರೂ ಅವರು 1980 ಮತ್ತು 1984ರ ಉಪಚುನಾವಣೆಯಲ್ಲಿ ಇಲ್ಲಿ ಗೆಲುವು ಸಾಧಿಸಿದ್ದರು. ಜವಾಹರಲಾಲ್ ನೆಹರೂ ಅವರ ಅತ್ತಿಗೆ ಶೀಲಾ ಕೌಲ್ 1989 ಮತ್ತು 1991ರಲ್ಲಿ ಗೆಲುವು ಸಾಧಿಸಿದ್ದರು. ನೆಹರೂ-ಗಾಂಧಿ ಕುಟುಂಬದ ಸದಸ್ಯರು 1962 ಮತ್ತು 1999ರಲ್ಲಿ ಮಾತ್ರ ಇಲ್ಲಿಂದ ಸ್ಪರ್ಧಿಸಿರಲಿಲ್ಲ. ಇನ್ನು 2004ರಿಂದ 2024ರ ವರೆಗೆ ಈ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಧಿಸಿದ್ದಾರೆ. ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

Exit mobile version