ಬೆಂಗಳೂರು: ನಾವು ಬಿಜೆಪಿಯವರಂತೆ ಕೇವಲ ಭಾವನಾತ್ಮಕವಾಗಿ ಕೆರಳಿಸಿ ನಿಮ್ಮ ಕೈಬಿಡುವುದಿಲ್ಲ. ಬಿಜೆಪಿಯವರಂತೆ ಸುಳ್ಳು ಹೇಳಲ್ಲ. ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನೆ ಮಾಡಿದರು.
ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ (Guarantee Scheme) ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲೆ, ತಾಲೂಕು ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲ ಧರ್ಮ, ಎಲ್ಲ ಜಾತಿ, ಎಲ್ಲ ವರ್ಗದವರಿಗೆ ಸೇರಿವೆ. ಸರ್ವರನ್ನೂ ಸಮಾನವಾಗಿ ಕಾಣುವ ಕಾರ್ಯಕ್ರಮಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ರೂಪಿಸುತ್ತಿದೆ. ಜಾರಿ ಮಾಡುತ್ತಿದೆ. ಇವೆಲ್ಲವನ್ನೂ ನೀವುಗಳು ನಾಡಿನ ಜನರಿಗೆ ಸರಿಯಾಗಿ ಅರ್ಥ ಮಾಡಿಸಿ ಬಿಜೆಪಿಯ ಸುಳ್ಳುಗಳಿಗೆ ತಕ್ಕ ಸತ್ಯದ ದಾಖಲೆಗಳನ್ನು ಮಂಡಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಜನರಿಗೆ ಸತ್ಯ ತಿಳಿಸಿ
ನಮ್ಮ ಸರ್ಕಾರದ ಗ್ಯಾರಂಟಿಗಳನ್ನು, ನಮ್ಮ ಸಾಧನೆಗಳನ್ನು ಬಿಜೆಪಿ ಸಾಧನೆ ಎಂದು ಹಳ್ಳಿ ಹಳ್ಳಿಗಳಲ್ಲಿ ಅವರು ನಿರಂತರವಾಗಿ, ನಿರ್ಲಜ್ಜದಿಂದ ಸುಳ್ಳು ಹೇಳುತ್ತಿದ್ದಾರೆ. ನಾಡಿನ ಜನರ ಜೇಬಿಗೆ, ಮಹಿಳೆಯರ ಖಾತೆಗೆ ಹಣ ಹಾಕುತ್ತಿರುವುದು ನಮ್ಮ ಕಾಂಗ್ರೆಸ್ ಸರ್ಕಾರ. ನಮ್ಮ ನಾಡಿನ ಜನತೆಗೆ, ಮಹಿಳೆಯರಿಗೆ, ಯುವ ಸಮೂಹಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುತ್ತಿರುವುದು ನಮ್ಮ ಕಾಂಗ್ರೆಸ್ ಸರ್ಕಾರ. ಆದರೆ ಬಿಜೆಪಿಯವರು ಮಾಮೂಲಿಯಂತೆ ಸುಳ್ಳು ಹೇಳುತ್ತಾ ನಮ್ಮ ಕಾರ್ಯಕ್ರಮಗಳನ್ನು ಅವರ ಕಾರ್ಯಕ್ರಮ ಎಂದು ಹೇಳಿಕೊಳ್ಳುವ ಅಪಾಯ ಇದೆ. ಈ ಸುಳ್ಳುಗಳನ್ನು ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಸಮರ್ಥವಾಗಿ ಎದುರಿಸಿ ಜನರಿಗೆ ಸತ್ಯ ತಿಳಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಕೇಂದ್ರದಿಂದ ಅನ್ಯಾಯ
ಕರ್ನಾಟಕ ರಾಜ್ಯದಿಂದ ನಾವು 4 ಲಕ್ಷದ 50 ಸಾವಿರ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ಕಟ್ಟುತ್ತೇವೆ. ಆದರೆ, ಕೇಂದ್ರ ಸರ್ಕಾರವು ರಾಜ್ಯಕ್ಕೆ ವಾಪಸ್ ಕೊಡುತ್ತಿರುವುದು ಕೇವಲ 50 ಸಾವಿರ ಕೋಟಿ ರೂಪಾಯಿ. ಈ ಅನ್ಯಾಯವನ್ನೇ ನ್ಯಾಯ ಎಂದು ಬಿಜೆಪಿ-ಜೆಡಿಎಸ್‌ನವರು ಡ್ಯಾನ್ಸ್ ಮಾಡುತ್ತಿದ್ದಾರೆ. ಆದರೆ, ನೀವುಗಳು ಬಿಜೆಪಿ-ಜೆಡಿಎಸ್‌ನವರು ಅನ್ಯಾಯವನ್ನು ಬೆಂಬಲಿಸುತ್ತಿರುವುದನ್ನು ನಮ್ಮ ನಾಡಿನ ಜನರಿಗೆ ಅರ್ಥ ಮಾಡಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಇದನ್ನೂ ಓದಿ: Lok Sabha Election 2024: ಕೋಲಾರ ಸೇರಿ 3 ಕ್ಷೇತ್ರ ಜೆಡಿಎಸ್‌ಗೆ; ಬಿಜೆಪಿ ಅಧಿಕೃತ ಪ್ರಕಟಣೆ
ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ. ಶಿವಕುಮಾರ್, ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷ ಪುಷ್ಪ ಅಮರನಾಥ್, ಸೂರಜ್ ಹೆಗ್ಡೆ, ಮೆಹರೋಜ್ ಖಾನ್, ಬಿಬಿಎಂಪಿ ವ್ಯಾಪ್ತಿಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು.