ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನ ಮುಕ್ತಾಯವಾಗಿ 5ನೇ ಹಂತಕ್ಕೆ ರಾಜಕೀಯ ಪಕ್ಷಗಳು ಸಿದ್ಧವಾಗುತ್ತಿವೆ. ಇತ್ತ ಟ್ರಬಲ್ ಶೂಟರ್ ಖ್ಯಾತಿಯ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅಂತಾರಾಜ್ಯಗಳಲ್ಲಿ ಪ್ರಚಾರಕ್ಕೆ ಜೈ ಎಂದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಆಂಧ್ರಪ್ರದೇಶದ ಕಡಪ ಪ್ರಚಾರಕ್ಕೆ ಹೋಗಿದ್ದ ಡಿಕೆಶಿ ಈಗ ಉತ್ತರ ಪ್ರದೇಶ ತಲುಪಿದ್ದಾರೆ. ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ಪ್ರಚಾರಕ್ಕೆ ಮುಂದಾಗಿದ್ದು, ತಂತ್ರಗಾರಿಕೆಯಲ್ಲಿ ತೊಡಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆನ್ನಿಗೆ ಡಿ.ಕೆ. ಶಿವಕುಮಾರ್ ನಿಂತಿದ್ದಾರೆ. ಕಳೆದ ಬಾರಿ ಅಮೇಥಿಯಲ್ಲಾದ ಸೋಲಿನ ಕಹಿಯನ್ನು ಮರೆಸಲು ಪಣ ತೊಟ್ಟಿರುವ ಡಿಕೆಶಿ ಈಗ ಆ ನಿಟ್ಟಿನಲ್ಲಿ ಪ್ರಚಾರಕ್ಕೆ ಮುನ್ನಡಿ ಬರೆಯಲು ಹೊರಟಿದ್ದಾರೆ. ಅಲ್ಲಿ ಯಾವ ರೀತಿ ತಂತ್ರಗಾರಿಕೆ ಮಾಡಲಿದ್ದಾರೆ? ಅದು ಮತದಾರರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದು ಫಲಿತಾಂಶ ಬಂದ ಮೇಲಷ್ಟೆ ತಿಳಿಯಬಹುದಾಗಿದೆ.
ಕಾಂಗ್ರೆಸ್‌ಗೆ ಅಮೇಥಿ ಮತ್ತು ರಾಯ್ ಬರೇಲಿ ಏಕೆ ಮುಖ್ಯ?
ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್ ಬರೇಲಿ ಕ್ಷೇತ್ರವು ಭಾರಿ ಮುಖ್ಯವಾಗಿದೆ. ಏಕೆಂದರೆ, ರಾಯ್ ಬರೇಲಿಯು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸ್ಪರ್ಧಿಸಿ ಗೆಲ್ಲುತ್ತಾ ಬಂದಿರುವ ಕ್ಷೇತ್ರವಾಗಿದೆ. ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಆದರೆ, ಈ ಬಾರಿ ಸೋನಿಯಾ ಗಾಂಧಿ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದು, ರಾಜ್ಯಸಭೆ ಮೂಲಕ ರಾಜಕೀಯದಲ್ಲಿದ್ದಾರೆ. ಹೀಗಾಗಿ ಈ ಕ್ಷೇತ್ರವನ್ನು ತಮ್ಮ ಪುತ್ರ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟಿದ್ದಾರೆ. ಕಳೆದ ಇಷ್ಟು ವರ್ಷಗಳಿಂದ ಗೆಲ್ಲುತ್ತಾ ಬಂದಿರುವ ಈ ಕ್ಷೇತ್ರದಲ್ಲಿ ಈ ಬಾರಿ ರಾಹುಲ್‌ಗೆ ಅಗ್ನಿ ಪರೀಕ್ಷೆಯಾಗಿದೆ. ಶತಾಯಗತಾಯ ಗೆಲ್ಲಲೇ ಬೇಕಿರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲದಿದ್ದರೆ ಅವರ ನಾಯಕತ್ವದ ಮೇಲೆ ಮತ್ತೊಮ್ಮೆ ಪ್ರಶ್ನೆಗಳು ಏಳುತ್ತವೆ. ಹೀಗಾಗಿ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಹೆಚ್ಚಿನ ಒತ್ತನ್ನು ನೀಡಿದೆ. ಇದಕ್ಕಾಗಿಯೇ ಡಿ.ಕೆ. ಶಿವಕುಮಾರ್ ಅಲ್ಲಿ ತಮ್ಮ ದೃಷ್ಟಿಯನ್ನು ನೆಟ್ಟಿದ್ದಾರೆ ಎನ್ನಲಾಗಿದೆ.
ಅಮೇಥಿ ವಾಪಸ್‌ಗೆ ತಂತ್ರ
ಇನ್ನು ಅಮೇಥಿ ಲೋಕಸಭಾ ಕ್ಷೇತ್ರ ಸಹ ಕಾಂಗ್ರೆಸ್ ಕಪಿಮುಷ್ಟಿಯಲ್ಲಿತ್ತು. 1980ರಲ್ಲಿ ಸಂಜಯ್ ಗಾಂಧಿ ಮೊದಲ ಬಾರಿಗೆ ಇಲ್ಲಿಂದ ಸ್ಪರ್ಧಿಸಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಪರ್ಧೆ ಮಾಡಿದ್ದರು. ಅವರು 1981 ರಿಂದ 1991ರವರೆಗೆ 4 ಬಾರಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ 1998ರಲ್ಲಿ ಸೋನಿಯಾ ಗಾಂಧಿ, 2004ರಿಂದ 2014ರ ವರೆಗೆ ರಾಹುಲ್ ಗಾಂಧಿ ಇಲ್ಲಿಂದಲೇ ಚುನಾಯಿತರಾಗುತ್ತಾ ಬರುತ್ತಿದ್ದರು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಮೃತಿ ಇರಾನಿ ಸ್ಪರ್ಧಿಸಿ ಬರೋಬ್ಬರಿ 55,120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇಲ್ಲಿ ರಾಹುಲ್ ಗಾಂಧಿಗೆ ಮುಖಭಂಗವಾಗಿತ್ತು. ಆದರೆ, ರಾಹುಲ್ ಕೇರಳದ ವಯನಾಡಿನಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಒಂದರಲ್ಲಿ ಹೋದ ಮಾನ, ಇನ್ನೊಂದರಲ್ಲಿ ಬಂತು ಎಂಬಂತೆ ಆಗಿತ್ತು. ಈ ಬಾರಿಯೂ ರಾಹುಲ್ ವಯನಾಡು ಹಾಗೂ ರಾಯ್ ಬರೇಲಿಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಇನ್ನು ಅಮೇಥಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಮೃತಿ ಇರಾನಿ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಎದುರಾಳಿಯಾಗಿ ಕಿಶೋರ್ ಲಾಲ್ ಶರ್ಮಾ ಸ್ಪರ್ಧೆ ಮಾಡಿದ್ದಾರೆ.
ಇದನ್ನೂ ಓದಿ: HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ರೇವಣ್ಣಗೆ ಮಧ್ಯಂತರ ಜಾಮೀನು; ಆದರೂ ಮುಗಿದಿಲ್ಲ ಟೆನ್ಶನ್!
ಗಾಂಧಿ ಕುಟುಂಬದ ಅತ್ಯಾಪ್ತನಿಗೆ ಟಿಕೆಟ್
ಕಿಶೋರ್ ಲಾಲ್ ಶರ್ಮಾ ಅವರು ರಾಯ್‌ಬರೇಲಿ ಹಾಗೂ ಅಮೇಥಿ ಕ್ಷೇತ್ರಗಳಿಗೆ ಅಘೋಷಿತ ಉಸ್ತುವಾರಿಯಂತೆ ಇದ್ದರು. ಇಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರತಿನಿಧಿಸುವಾಗ ಹೆಚ್ಚಿನ ಹೊಣೆ ಇವರ ಮೇಲೆಯೇ ಇತ್ತು. ಹೀಗಾಗಿ ಇಲ್ಲಿ ಪಕ್ಷದ ಚಟುವಟಿಕೆಯಲ್ಲಿ ನಿರತರಾಗುತ್ತಿದ್ದರಿಂದ ಅವರಿಗೆ ಕ್ಷೇತ್ರ ಪರಿಚಯದ ಜತೆಗೆ ಸ್ಥಳೀಯ ನಾಯಕರ ಒಡನಾಟವೂ ಇದೆ. ಜತೆಗೆ ಗಾಂಧಿ ಕುಟುಂಬ ಅತ್ಯಾಪ್ತರೂ ಆಗಿದ್ದರಿಂದ ಅವರಿಗೆ ಈ ಬಾರಿ ಅಮೇಥಿಯಿಂದ ಟಿಕೆಟ್ ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಅಮೇಥಿಯನ್ನು ಗೆದ್ದು ಬೀಗುವ ಮೂಲಕ ಜಿದ್ದು ಸಾಧಿಸುವ ತವಕದಲ್ಲಿ ಕಾಂಗ್ರೆಸ್ ಇದೆ. ಹೀಗಾಗಿ ಡಿ.ಕೆ. ಶಿವಕುಮಾರ್ ಈ ಎರಡೂ ಕ್ಷೇತ್ರಗಳ ಮೇಲೆ ಫೋಕಸ್ ಮಾಡಿದ್ದಾರೆ ಎನ್ನಲಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕೆಲವು ದಿನ ವಾಸ್ತವ್ಯ ಹೂಡಿ ತಂತ್ರಗಾರಿಕೆ ಹೆಣೆಯಲಿದ್ದಾರೆ.